Ekka OTT: ಓಟಿಟಿಗೆ ಯುವರಾಜ್‌ಕುಮಾರ್ 'ಎಕ್ಕ'; ಈಗ್ಲೇ ನೋಡಿ ಎಂಜಾಯ್ ಮಾಡಿ
ರೋಹಿತ್ ಪದಕಿ ನಿರ್ದೇಶನದ 'ಎಕ್ಕ' ಸಿನಿಮಾ ಚಿತ್ರಮಂದಿರಗಳಲ್ಲಿ ಸದ್ದು ಮಾಡಿತ್ತು. ಬಳಿಕ ಓಟಿಟಿಗೆ ಮಾತ್ರ ಬರಲು ತಡವಾಗಿತ್ತು. ಇದೀಗ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಸಿನಿಮಾ ನೋಡಿದವರು ಮೆಚ್ಚಿಕೊಳ್ಳುತ್ತಿದ್ದಾರೆ.
ಯುವರಾಜ್‌ಕುಮಾರ್ ನಟನೆಯ 2ನೇ ಸಿನಿಮಾ ಇದು. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಫಸ್ಟ್ ಹಾಫ್ ಚೆನ್ನಾಗಿದೆ, ಸೆಕೆಂಡ್ ಹಾಫ್ ಪರವಾಗಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು.

ಮಿಶ್ರಪ್ರತಿಕ್ರಿಯೆ ಸಿಕ್ಕರೂ 'ಎಕ್ಕ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಮರುವಾರವೇ ಬಂದ 'ಸು ಫ್ರಮ್ ಸೋ' ಆರ್ಭಟದ ಮುಂದೆ 'ಎಕ್ಕ' ನೆಲ ಕಚ್ಚಿತ್ತು. ಬಳಿಕ ಓಟಿಟಿಗೆ ಡೀಲ್ ವಿಚಾರದಲ್ಲಿ ತಡವಾಗುತ್ತಾ ಬಂದಿತ್ತು. ಅಂತೂ ಇಂತೂ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದೀಗ ಓಟಿಟಿ, ಸ್ಯಾಟಲೈಟ್ ರೈಟ್ಸ್ ಡೀಲ್ ಕುದುರಿಸಿಕೊಂಡಿದೆ.
ಯುವರಾಜ್‌ಕುಮಾರ್ ಜೋಡಿಯಾಗಿ ಚಿತ್ರದಲ್ಲಿ ಸಂಜನಾ ಆನಂದ್ ನಟಿಸಿದ್ದಾರೆ. ಸಂಪದಾ ಮತ್ತೊಂದು ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಅತುಲ್ ಕುಲಕರ್ಣಿ, ಆದಿತ್ಯಾ, ಶ್ರುತಿ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು ಚಿತ್ರದ ತಾರಾಗಣದಲ್ಲಿದ್ದಾರೆ. ಪಾರ್ವತಿಪುರದ ಮುತ್ತು ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿರುತ್ತಾನೆ. ಆದರೆ ಆಕಸ್ಮಿಕವಾಗಿ ಭೂಗತ ಲೋಕ ಅವನನ್ನು ಸೆಳೆದುಕೊಳ್ಳುತ್ತಾರೆ. ಬಳಿಕ ಆತನ ಜೀವನ ಯಾವ ದಿಕ್ಕಿಗೆ ಸಾಗುತ್ತದೆ ಎನ್ನುವುದು ಇನ್ನುಳಿದ ಕಥೆ.
ಸತ್ಯ ಹೆಗಡೆ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. 'ಬ್ಯಾಂಗಲ್ ಬಂಗಾರಿ' ಸಾಂಗ್ ಹಿಟ್ ಆಗಿ ಚಿತ್ರಕ್ಕೆ ಪ್ಲಸ್ ಆಗಿತ್ತು. ಕಳೆದ ವರ್ಷ ರಾಜ್ಯೋತ್ಸವ ಸಂಭ್ರಮದಲ್ಲಿ ಸಿನಿಮಾ ಶುರುವಾಗಿತ್ತು. ಈ ವರ್ಷ ಜುಲೈ 18ಕ್ಕೆ ತೆರೆಗೆ ಬಂದಿತ್ತು.
'ಮ್ಯಾಕ್ಸ್' ಹಾಗೂ 'ಯುಐ' ಆರ್ಭಟದ ಬಳಿಕ ಕನ್ನಡ ಚಿತ್ರಗಳು ಪ್ರೇಕ್ಷಕರ ಬರ ಎದುರಿಸುತ್ತಿತ್ತು. 'ಎಕ್ಕ' ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಕಂಡಿತ್ತು. ಸಿನಿಮಾ ಕೆಲವೆಡೆ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಆದರೆ ಅದು ಬಹಳ ದಿನ ಉಳಿಯಲಿಲ್ಲ.
ಈ ಹಿಂದೆ ಜೀ-5ಗೆ 'ಎಕ್ಕ' ಓಟಿಟಿ ರೈಟ್ಸ್ ಮಾರಾಟವಾಗಿದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆದಿತ್ತು. ಬಳಿಕ ಅದೆಲ್ಲಾ ಸುಳ್ಳು ಎಂದು ನಿರ್ಮಾಪಕ ಜಯಣ್ಣ ಸ್ಪಷ್ಟಪಡಿಸಿದ್ದರು. ನವೆಂಬರ್ 7ಕ್ಕೆ 'ಎಕ್ಕ' ಸಿನಿಮಾ ಓಟಿಟಿಗೆ ಬರಬೇಕಿತ್ತು. ಆದರೆ ಡಿಜಿಟಲ್ ಸ್ಟ್ರೀಮಿಂಗ್ ವಿಚಾರದಲ್ಲಿ ಸಣ್ಣ ಬದಲಾವಣೆ ಆಗಿ ನವೆಂಬರ್ 13ರಂದು ಸಿನಿಮಾ ಬಿಡುಗಡೆ ಆಗಿದೆ.
ಮಿಶ್ರ ಪ್ರತಿಕ್ರಿಯೆ ಸಿಗುತ್ತಿದ್ದಂತೆ ಕೆಲವರು ಓಟಿಟಿಯಲ್ಲಿ 'ಎಕ್ಕ' ಸಿನಿಮಾ ನೋಡೋಣ ಎಂದು ಸುಮ್ಮನಾಗಿದ್ದರು. ಇದೀಗ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. 'ಎಕ್ಕ' ಬಳಿಕ ಸೂರಿ ಕಾಂಬಿನೇಷನ್‌ನಲ್ಲಿ ಯುವರಾಜ್‌ಕುಮಾರ್ ಸಿನಿಮಾ ಘೋಷಣೆ ಆಗಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ತಡವಾಗುತ್ತಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಪುತ್ರಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಪಿಆರ್‌ಕೆ, ಕೆಆರ್‌ಜಿ ಹಾಗೂ ಜಯಣ್ಣ ಫಿಲ್ಮ್ಸ್ ಬ್ಯಾನರ್‌ಗಳು ಈ ಚಿತ್ರಕ್ಕಾಗಿ ಮತ್ತೆ ಒಟ್ಟಾಗಿವೆ.


Click it and Unblock the Notifications











