Ekka OTT: ಕೊನೆಗೂ ಓಟಿಟಿಗೆ ಯುವರಾಜ್‌ಕುಮಾರ್ 'ಎಕ್ಕ'; ಮನೆಯಲ್ಲೇ ನೋಡಿ
ಕನ್ನಡದಲ್ಲಿ ಎಷ್ಟೇ ಸಿನಿಮಾಗಳು ಸದ್ದು ಮಾಡಿದರೂ ಓಟಿಟಿ ಸಂಸ್ಥೆಗಳ ಮಲತಾಯಿ ಧೋರಣೆ ಮುಂದುವರೆದಿದೆ. ದೊಡ್ಡ ಸಿನಿಮಾಗಳ ರೈಟ್ಸ್ ಖರೀದಿಸುತ್ತೇವೆ. ಚಿಕ್ಕ ಸಿನಿಮಾಗಳು ಅಂದ್ರೆ ತಾತ್ಸಾರ, ನಾವು ಕೊಟ್ಟಷ್ಟು ಹಣ ತಗೋಬೇಕು ಅಂತಾರೆ. ಅದೇ ಕಾರಣಕ್ಕೆ ಕನ್ನಡ ಸಿನಿಮಾಗಳು ಓಟಿಟಿಗೆ ಬರೋದು ಕೆಲವೊಮ್ಮೆ ತಡವಾಗುತ್ತದೆ.
'ಕಾಂತಾರ-1' ರೀತಿಯ ಹಿಟ್ ಸಿನಿಮಾ 4 ವಾರಕ್ಕೂ ಮುನ್ನ ಓಟಿಟಿಗೆ ಬರುವಂತಾಗಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ ಚಿತ್ರವನ್ನು ಈ ಶುಕ್ರವಾರ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಮಾಡ್ತಿದ್ದಾರೆ. ಆದರೆ 'ಎಕ್ಕ' ಸಿನಿಮಾ ತೆರೆಗೆ ಬಂದು 4 ತಿಂಗಳು ಕಳೆದರೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರಲಿಲ್ಲ. ಈ ಬಗ್ಗೆ ಸಿನಿರಸಿಕರು ಬೇಸರಗೊಂಡಿದ್ದರು. ಅಂತೂ ಇಂತೂ ಸಿನಿಮಾ ಓಟಿಟಿಗೆ ಬರುವ ಸಮಯ ಹತ್ತಿರವಾಗಿದೆ.

ಈ ಹಿಂದೆ ಜೀ-5 ಸಂಸ್ಥೆ 'ಎಕ್ಕ' ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಈ ಬಗ್ಗೆ ನಿರ್ಮಾಪಕ ಜಯಣ್ಣ ಪ್ರತಿಕ್ರಿಯಿಸಿ ಫಿಲ್ಮಿಬೀಟ್ ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದರು. ಯಾವುದೇ ಸಂಸ್ಥೆಗೆ ಓಟಿಟಿ ರೈಟ್ಸ್ ಒಪ್ಪಂದ ಆಗಿಲ್ಲ ಎಂದಿದ್ದರು. ರೋಹಿತ್ ಪದಕಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಎಕ್ಕ' ಸಿನಿಮಾ ಜುಲೈ 18ರಂದು ತೆರೆಗೆ ಬಂದಿತ್ತು.
ಯುವರಾಜ್‌ಕುಮಾರ್ ಹೀರೊ ಆಗಿ ನಟಿಸಿದ ಎರಡನೇ ಸಿನಿಮಾ ಇದು. ಸಂಜನಾ ಆನಂದ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಅತುಲ್ ಕುಲಕರ್ಣಿ, ಶ್ರುತಿ ಸೇರಿದಂತೆ ಅನುಭವಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಮುತ್ತು ಪಾತ್ರದಲ್ಲಿ ಯುವ ಮೋಡಿ ಮಾಡಿದ್ದರು. ಡ್ಯಾನ್ಸ್, ಆಕ್ಷನ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದರು. ಚರಣ್ ರಾಜ್ ಸಂಗೀತದಲ್ಲಿ 'ಬ್ಯಾಂಗಲ್ ಬಂಗಾರಿ' ಸಾಂಗ್ ಸೂಪರ್ ಹಿಟ್ ಆಗಿತ್ತು.

'ಎಕ್ಕ' ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಜುಲೈ ಕೊನೆವಾರ 'ಸು ಫ್ರಮ್ ಸೋ' ಸಿನಿಮಾ ತೆರೆಗೆ ಬಂದು ಅಚ್ಚರಿಯ ಗೆಲುವು ಕಂಡಿತ್ತು. ಆ ಸಿನಿಮಾ ಆರ್ಭಟದ ಮುಂದೆ 'ಎಕ್ಕ' ಡಲ್ಲಾಗಿತ್ತು. ಬಹಳ ಬೇಗ ಚಿತ್ರಮಂದಿರಗಳಿಂದ ದೂರಾಗಿತ್ತು. ನವೆಂಬರ್ 7ರಂದು ಸಿನಿಮಾ ಸನ್ ನೆಕ್ಸ್ಟ್ ಓಟಿಟಿಗೆ ಬರುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಬರಬೇಕಿದೆ.
ಪ್ರೈಂ ವೀಡಿಯೋ, ಜೀ-5ಗೆ ಹೋಲಿಸಿದರೆ ಸನ್ ನೆಕ್ಸ್ಟ್ ಓಟಿಟಿ ಚಂದಾದಾರರ ಸಂಖ್ಯೆ ಕಮ್ಮಿ ಇದೆ. ಇದು ಸಹಜವಾಗಿಯೇ ಓಟಿಟಿ ವೀಕ್ಷಕರಿಗೆ ನಿರಾಸೆ ಮೂಡಿಸಿದೆ. ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಗಳು ಒಟ್ಟಾಗಿ 'ಎಕ್ಕ' ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಬಹಳ ದಿನ ಚಿತ್ರಮಂದಿರಗಳಲ್ಲಿ ಸಿನಿಮಾ ಉಳಿಯಲಿಲ್ಲ. ಹಾಗಾಗಿ ಸಾಕಷ್ಟು ಜನ ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿದ್ದಾರೆ.
'ರತ್ನನ್ ಪ್ರಪಂಚ' ಬಳಿಕ ರೋಹಿತ್ ಪದಕಿ 'ಎಕ್ಕ' ಚಿತ್ರ ಕೈಗೆತ್ತಿಕೊಂಡಿದ್ದರು. ಕೊಂಚ 'ಜಾಕಿ' ಸಿನಿಮಾ ಛಾಯೆ ಕಾಣುವ 'ಎಕ್ಕ' ಚಿತ್ರದಲ್ಲಿ ಮುತ್ತು (ಯುವ) ತನಗೆ ಅರಿವಿಲ್ಲದೇ ಭೂಗತಲೋಕಕ್ಕೆ ಇಳಿಯುವ ಕಥೆಯಿದೆ. ಚರಣ್ ರಾಜ್ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿತ್ತು. ಫಸ್ಟ್ ಹಾಫ್ ಸೂಪರ್ ಎಂದಿದ್ದ ಪ್ರೇಕ್ಷಕರು ಸೆಕೆಂಡ್ ಹಾಫ್ ಪರವಾಗಿಲ್ಲ ಎಂದಿದ್ದರು.
ಈ ವಾರ ಸೂಪರ್ ಹಿಟ್ 'ಕಾಂತಾರ- 1' ಹಾಗೂ 'ಮಾರಿಗಲ್ಲು' ಕನ್ನಡ ವೆಬ್ ಸೀರಿಸ್ ಓಟಿಟಿಗೆ ಬರ್ತಿದೆ. ಜೊತೆಗೆ ತಮಿಳಿನ 'ಇಡ್ಲಿ ಕಡೇ' ಹಾಗೂ ಮಲಯಾಳಂನ 'ಲೋಕ' ಸೇರಿ ಸಾಕಷ್ಟು ಸಿನಿಮಾಗಳು ಸ್ಟ್ರೀಮಿಂಗ್ ಆಗಲಿವೆ. ಮುಂದಿನ 'ಎಕ್ಕ' ಸೇರಿ ಒಂದಷ್ಟು ಸಿನಿಮಾ ಹಾಗೂ ವೆಬ್ ಸೀರಿಸ್ ಓಟಿಟಿ ವೀಕ್ಷಕರನ್ನು ರಂಜಿಸಲು ಸಜ್ಜಾಗುತ್ತಿವೆ.
Disclaimer: ನವೆಂಬರ್ 7ರಂದು 'ಎಕ್ಕ' ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗುತ್ತದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಓಟಿಟಿ ವೇದಿಕೆ ಅಧಿಕೃತವಾಗಿ ಖಚಿತ ಪಡಿಸಬೇಕಿದೆ.


Click it and Unblock the Notifications











