Zebra OTT: ಧನಂಜಯ್ ನಟನೆಯ 'ಜೀಬ್ರಾ' ಓಟಿಟಿ ರಿಲೀಸ್ ಡೇಟ್ ಘೋಷಣೆ
ಈಶ್ವರ್ ಕಾರ್ತಿಕ್ ನಿರ್ದೇಶನದ 'ಜೀಬ್ರಾ' ಸಿನಿಮಾ ಇತ್ತೀಚೆಗೆ ತೆರೆಕಂಡು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ತೆಲುಗು ನಟ ಸತ್ಯದೇವ್ ಹೀರೊ ಆಗಿ ನಟಿಸಿದ್ದರೆ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ನವೆಂಬರ್ 22ಕ್ಕೆ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ಬಂದಿತ್ತು.
ಕನ್ನಡಕ್ಕೆ 'ಜೀಬ್ರಾ' ಚಿತ್ರವನ್ನು ಬಹಳ ಸೊಗಸಾಗಿ ಡಬ್ ಮಾಡಲಾಗಿದೆ. 2 ವಾರಗಳನ್ನು ಪೂರೈಸಿ ಸಿನಿಮಾ 3ನೇ ವಾರಕ್ಕೆ ಕಾಲಿಟ್ಟಿದೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿರುವುದು ವಿಶೇಷ. ಚಿತ್ರದಲ್ಲಿ ಸತ್ಯರಾಜ್, ಪ್ರಿಯಾ ಭವಾನಿ ಶಂಕರ್, ಅಮೃತಾ ಅಯ್ಯಂಗಾರ್, ಸುನೀಲ್ ಸೇರಿದಂತೆ ದೊಡ್ಡ ತಾರಾಗಣವಿದೆ. ಬ್ಯಾಂಕಿಂಗ್ ವ್ಯವಸ್ಥೆಯ ಸುತ್ತಾ ಚಿತ್ರದ ಕಥೆ ಸುತ್ತುತ್ತದೆ.

'ಜೀಬ್ರಾ' ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗಾಗಿ ಸಾಕಷ್ಟು ಜನ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸಿನಿಮಾ 9 ದಿನಕ್ಕೆ ಬಾಕ್ಸಾಫೀಸ್‌ನಲ್ಲಿ 10 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಬಹಳ ತಡವಾಗಿ ತೆರೆಗೆ ಬಂದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು.
ಈ ಚಿತ್ರದ ಕಥೆ ಬಹಳ ಸಿಂಪಲ್. ಬ್ಯಾಂಕ್‌ವೊಂದರಲ್ಲಿ ನಾಯಕ ಸೂರ್ಯ(ಸತ್ಯದೇವ್) ಸೇಲ್ಸ್ ರಿಲೇಷನ್‌ಶಿಪ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಮತ್ತೊಂದು ಬ್ಯಾಂಕ್ ಉದ್ಯೋಗಿ ಸ್ವಾತಿ(ಪ್ರಿಯಾ ಭವಾನಿ ಶಂಕರ್)ಯನ್ನು ಆತ ಪ್ರೀತಿಸುತ್ತಿರುತ್ತಾನೆ. ಆದರೆ ಆಕೆಯ ಸಣ್ಣ ಎಡವಟ್ಟಿನಿಂದ ಯಾರದ್ದೋ ಅಕೌಂಟ್‌ಗೆ ಹಾಕಬೇಕಿದ್ದ ಹಣ ಮತ್ತೊಬ್ಬರ ಅಕೌಂಟ್‌ಗೆ ಹೋಗುತ್ತದೆ. ಅದನ್ನು ಸೂರ್ಯ ತನ್ನ ಚಾಕಚಕ್ಯತೆಯಿಂದ ವಾಪಸ್ ತೆಗೆದು ಸೇರಬೇಕಾದರವರಿಗೆ ಸೇರಿಸುತ್ತಾನೆ.
ಒಂದು ಸಮಸ್ಯೆಯಿಂದ ತಪ್ಪಿಸುಕೊಳ್ಳುವಷ್ಟರಲ್ಲಿ ಸೂರ್ಯ ಮತ್ತೊಂದು ದೊಡ್ಡ ಸಮಸ್ಯೆಯಲ್ಲಿ ಸಿಲುಕುತ್ತಾನೆ. ಪರಿಣಾಮ 4 ದಿನಗಳಲ್ಲಿ ಡಾನ್ ಆದಿ(ಡಾಲಿ ಧನಂಜಯ್)ಗೆ 5 ಕೋಟಿ ರೂ. ಕೊಡಬೇಕಾದ ಅನಿವಾರ್ಯತೆ ಸಿಲುಕುತ್ತಾನೆ. ಈ ಪ್ರಯತ್ನದಲ್ಲಿ ಸೂರ್ಯ ಗೆಲ್ತಾನಾ? ಮುಂದೇನು ಆಗುತ್ತದೆ? ಎನ್ನುವುದು 'ಜೀಬ್ರಾ' ಚಿತ್ರದ ಇನ್ನುಳಿದ ಕಥೆ.
ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಡಾಲಿ ಧನಂಜಯ ಅಬ್ಬರಿಸಿದ್ದಾರೆ. ಚಿತ್ರದ ಕಾಲಾವಧಿ ಕೊಂಚ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಆದರೆ ಓಟಿಟಿಯಲ್ಲಿ ಸಿನಿಮಾ ವೀಕ್ಷಕರನ್ನು ರಂಜಿಸಲಿದೆ. ಅಹಾ ಓಟಿಟಿ ಪ್ಲಾಟ್‌ಫಾರ್ಮ್ 'ಜೀಬ್ರಾ' ಚಿತ್ರದ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ತೆಲುಗು ಹಾಗೂ ತಮಿಳು ವರ್ಷನ್ ಅಹಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆದರೆ ಕನ್ನಡ ವರ್ಷನ್ ಕಥೆ ಏನು ಎನ್ನುವ ಬಗ್ಗೆ ಇನ್ನಷ್ಟೆ ಮಾಹಿತಿ ಸಿಗಬೇಕಿದೆ.
ಈ ಚಿತ್ರದಲ್ಲಿ ಧನಂಜಯ್ ಜೊತೆ ಅಮೃತಾ ಅಯ್ಯಂಗಾರ್ ಮತ್ತೊಮ್ಮೆ ನಟಿಸಿರುವುದು ವಿಶೇಷ. ಈ ಜೋಡಿಯನ್ನು ಕನ್ನಡ ಸಿನಿರಸಿಕರು ಈಗಾಗಲೇ ನೋಡಿ ಇಷ್ಟಪಟ್ಟಿದ್ದಾರೆ. ಓಲ್ಡ್ ಟೌನ್ ಪ್ರೊಡಕ್ಷನ್ ಹಾಗೂ ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಜಂಟಿಯಾಗಿ 'ಜೀಬ್ರಾ' ಸಿನಿಮಾ ನಿರ್ಮಾಣ ಮಾಡಿವೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ.
ಬರೋಬ್ಬರಿ 5.50 ಕೋಟಿ ರೂ.ಗೆ 'ಜೀಬ್ರಾ' ಓಟಿಟಿ ರೈಟ್ಸ್ ಅಹಾ ಸಂಸ್ಥೆ ಸ್ವಂತ ಮಾಡಿಕೊಂಡಿದೆ ಎನ್ನಲಾಗ್ತಿದೆ. ಇನ್ನು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮುಗಿದ ಬಳಿಕ ಓಟಿಟಿಗೆ ಬರಲಿದೆ. ಇತ್ತೀಚೆಗೆ ದೊಡ್ಡ ದೊಡ್ಡ ಸಿನಿಮಾಗಳೇ 20 ದಿನಕ್ಕೆಲ್ಲಾ ಸ್ಮಾಲ್ ಸ್ಕ್ರೀನ್‌ಗೆ ಬರ್ತಿದೆ. ಡಿಸೆಂಬರ್ 20ಕ್ಕೆ ಅಹಾದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವುದು ಖಚಿತವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.
'ಪುಷ್ಪ'-2 ರಿಲೀಸ್ ಬಳಿಕ 'ಜೀಬ್ರಾ' ಸಿನಿಮಾ ಹವಾ ಕಮ್ಮಿ ಆಗಿದೆ. ಹಾಗಾಗಿ ಆದಷ್ಟು ಬೇಗ ಓಟಿಟಿಗೆ ಬರುವ ನಿರೀಕ್ಷೆಯಿದೆ. 'ಪುಷ್ಪ'-2 ಚಿತ್ರದಲ್ಲೂ ಜಾಲಿ ರೆಡ್ಡಿಯಾಗಿ ಧನಂಜಯ್ ಮಿಂಚಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ ಕೆಲ ಸೆಕೆಂಡ್ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಬೇಸರ ತಂದಿದೆ.


Click it and Unblock the Notifications











