For Quick Alerts
  ALLOW NOTIFICATIONS  
  For Daily Alerts

  ಈ ಬಾರಿ ‘ಮಲ್ಲ’ ಗೆಲ್ಲಬಲ್ಲ ...

  By Staff
  |
  • ರಮೇಶ್‌ ಕುಮಾರ್‌ ನಾಯಕ್‌
  ಪುರಾಣ, ಇತಿಹಾಸದ ಪರದೆ ಮೇಲೆ ವರ್ತಮಾನದ ಚಿತ್ರ. ಇದಕ್ಕೆ ಫ್ಯಾಂಟಸಿಯ ಪೇಂಟಿಂಗ್‌. ಡೈಲಾಗ್‌ ಮಾತಿನ ಮಂಟಪ, ಉಪ್ಪು-ಖಾರ ಬೇಕೆಂದವರಿಗೆ ನಾಯಕಿಯ ಮೈಮಾಟ. ಹಿಂದೆಲ್ಲೂ ಕೇಳಿದ ನೆನಪಿಲ್ಲ ಎನ್ನುವಂಥ ಕತೆ. ಹಿಂದೆ ಯಾರೂ ಹೆಜ್ಜೆ ಹಾಕಿದ ಗುರುತಿಲ್ಲ ಎಂಬಂಥ ನಿರೂಪಣೆಯ ಹಾದಿ... ಈ ಬಾರಿ ‘ಕನಸುಗಾರ’ನ ಕೃತಿ ಬರಿ ಕನಸಾಗಿ ಉಳಿದಿಲ್ಲ.

  ಸಾಹಿತ್ಯ, ಸಂಗೀತ, ಕಥೆ-ಚಿತ್ರಕಥೆ, ನಿರ್ದೇಶನ ಮತ್ತು ನಟನೆಯ ಜವಾಬ್ದಾರಿ ಹೊತ್ತಿರುವ ವಿ. ರವಿಚಂದ್ರನ್‌ ‘ಮಲ್ಲ’ನನ್ನು ಗೆದ್ದೇ ಗೆಲ್ಲಿಸುವಂತೆ ರೂಪಿಸಿದ್ದಾರೆ. ಈ ಪುಣ್ಯಾತ್ಮ ಕತೆಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡೋದಿಲ್ಲ ಎಂಬವರಿಗೂ ಉತ್ತರ ಕೊಟ್ಟಿದ್ದಾರೆ.

  ‘ಮಲ್ಲ’ ಊರಿಗೆ ಉಪಕಾರಿ. ಅಲ್ಲೊಬ್ಬನಿದ್ದಾನೆ (ಅ)ಧರ್ಮಾಧಿಕಾರಿ. ಆತನ ಕುಕೃತ್ಯಗಳನ್ನು ಮಲ್ಲ ಮಟ್ಟ ಹಾಕುತ್ತ ಬರುತ್ತಾನೆ. ಮುಂದೆ ಅನಿರೀಕ್ಷಿತ ಬೆಳವಣಿಗೆಯಾಂದರಲ್ಲಿ ಧರ್ಮಾಧಿಕಾರಿಯ ತಂಗಿಯನ್ನೇ ಮಲ್ಲ ಮದುವೆಯಾಗುತ್ತಾನೆ. ದುಷ್ಟರು ಮಲ್ಲನ ಜೀವ ತೆಗೆಯುತ್ತಾರೆ. ಆಗಷ್ಟೇ ಹುಟ್ಟಿದ ಆತನ ಮಗುವನ್ನು ಊರಿಗೆ ಅಪಕಾರಿಯಾಗುವಂತೆ ಬೆಳೆಸುತ್ತಾರೆ. ‘ಮರಿ ಮಲ್ಲ’ ಮುಂದೇನಾದ ಎನ್ನುವುದು ಮಂದಿನ ಕತೆ.

  ಪ್ರೇಕ್ಷಕರಿಗೆ ಕಣ್ಣು ಮಿಟುಕಿಸಲೂ ಅವಕಾಶ ಸಿಗದಂತೆ ರವಿ ಪಾತ್ರ ಮತ್ತು ಸನ್ನಿವೇಶಗಳನ್ನು ಜೋಡಿಸಿದ್ದಾರೆ. ಅವರ ಜಾಣ್ಮೆಗೆ ತಲೆದೂಗುವಂತೆ ಮಾಡುವುದು ಚಿತ್ರದಲ್ಲಿ ಹೂವನ್ನು ಬಳಸಿದ ರೀತಿ. ಆರಂಭ, ಅಂತ್ಯ ಮತ್ತು ಮಹತ್ವದ ಘಟ್ಟಗಳಲ್ಲಿ ಹೂ ಮುಖ್ಯ ಪಾತ್ರ ವಹಿಸಿದೆ. ಸೌಹಾರ್ದ, ಕ್ರೌರ್ಯ, ಪ್ರೇಮ-ಕಾಮ, ಮಮಕಾರಗಳನ್ನು ಹೂಗಳ ಮೂಲಕ ಸಶಕ್ತವಾಗಿ ಅಭಿವ್ಯಕ್ತಿಪಡಿಸಿದ್ದಾರೆ. ಚಿತ್ರದ ಉತ್ತಮ ಪೋಷಕ ನಟನೆಗೆ ನೀಡುವ ಪ್ರಶಸ್ತಿಯನ್ನು ಹೂಗೇ ನೀಡಬೇಕಾದೀತು!

  ರವಿ ಚಿತ್ರದ ಮೂಲಕ ನಾಯಕಿಯ ‘ಎಕ್ಸ್‌ಪೋಸ್‌’ಗೆ ಹೊಸ ಕಸುವು ನೀಡಿದ್ದಾರೆ. ವಾತ್ಸಾಯನನನ್ನು ಮೈಮೇಲೆ ಆವಾಹಿಸಿಕೊಂಡು ನಾಯಕಿ ಪ್ರಿಯಾಂಕಾಳ ಮೈಮೇಲೆ ಹಾವಿನಂತೆ ಹರಿದಾಡಿದ್ದಾರೆ. ಇನ್ನೊಂದು ಇಂಚು ಮುಂದೆ ಸರಿದರೆ ಶಾಕ್‌ ಹೊಡೆದೀತು ಎನಿಸಿದಾಗಲೆಲ್ಲ ಹೂಗಳನ್ನು ಛೂ ಬಿಟ್ಟಿದ್ದಾರೆ. ನಾಯಕಿ ತುಂಡು ಬಟ್ಟೆಯಲ್ಲಿ ಇರುವುದನ್ನು ಮಲ್ಲ ಕಟುವಾಗಿ ವಿರೋಧಿಸುತ್ತಾನೆ. ಆದರೆ ಆಕೆಯ ಜತೆ ಡ್ಯೂಯೆಟ್‌ ಹಾಡುವಾಗ ಮಾತ್ರ ಆತನಿಗೆ ಆಕೆಯ ಮೈಮೇಲೆ ಬಟ್ಟೆ ಕಂಡರೆ ಅಲರ್ಜಿ!

  ಸಂಗೀತ ಉತ್ತಮವಾಗಿರದಿದ್ದರೂ ನಾಟ್‌ ಬ್ಯಾಡ್‌. ಹಾಡುಗಳನ್ನು ರವಿಚಂದ್ರನ್‌ ಅವರೇ ಬರೆದಿದ್ದಾರೆನ್ನುವುದಕ್ಕೆ ಸಾಕ್ಷ್ಯ ಬೇಕಿಲ್ಲ. ಆದರೆ, ‘ನೀನಿಲ್ಲದ ಹೊತ್ತು ನಾ ಹೇಗೆ ಬಾಳಲಿ ಹೇಳು’ ಹಾಡು, ರವಿ ಇಷ್ಟು ಚೆನ್ನಾಗಿ ಬರೆಯುತ್ತಾರಾ ಎಂಬ ಸಂದೇಹ ಮೂಡಿಸುತ್ತದೆ. ಹಾಡುಗಳ ದೃಶ್ಯ ಸಂಯೋಜನೆ ಅದ್ಭುತವಾಗಿದೆ.

  ಹೊಸ ಜಾಡಿನ ಹಾಸ್ಯ ಸುರುಳಿ ಈ ಚಿತ್ರದ ಮತ್ತೊಂದು ಪ್ಲಸ್‌ ಪಾಯಿಂಟ್‌. ಪವಿತ್ರಾ ಲೋಕೇಶ್‌ರನ್ನು ಹಾಸ್ಯರಸಕ್ಕೆ ಬಳಸಿಕೊಂಡಿರುವ ರವಿ ವಿಲಕ್ಷಣ ರೀತಿಯಲ್ಲಿ ಕಚಗುಳಿ ಇಡುತ್ತಾರೆ. ಮೋಹನ್‌ರ ‘ದ್ವಿಪಾತ್ರ’ ಚಿತ್ರದ ತೂಕ ಹೆಚ್ಚಿಸಿದೆ. ನಾಯಕನ ಗೆಳೆಯನಾಗಿ ಇಷ್ಟವಾಗುವ ಮೋಹನ್‌, ಅರ್ಥಪೂರ್ಣ ಸಂಭಾಷಣೆಯಿಂದ ಬೆರಗು ಮೂಡಿಸುತ್ತಾರೆ.

  ಇಷ್ಟಾಗಿಯೂ ಚಿತ್ರದ ಆರಂಭ ಮತ್ತು ಅಂತ್ಯ ದುರ್ಬಲವಾಗಿದೆ. ಟೈಟಲ್‌ಕಾರ್ಡ್‌ ಪ್ರದರ್ಶನ ಮತ್ತು ಮರಿ ಮಲ್ಲನ ಪ್ರವೇಶಕ್ಕೆ ಫೋರ್ಸ್‌ ಇಲ್ಲ. ಕಳರಿಪಯಟ್‌ ಮಾದರಿಯ ಹೊಡೆದಾಟದ ಮೂಲಕ ರವಿ ಕ್ಲೈಮ್ಯಾಕ್ಸ್‌ ಮುಗಿಸಿದ್ದಾರೆ. ಆದರೆ, ಮಲ್ಲನ ಕೊಲೆಯ ರಹಸ್ಯ ಬಯಲಾಗಿ ವಿಲನ್‌ಗಳು ಬಲೆಗೆ ಬಿದ್ದಾಗಲೇ ಕುತೂಹಲ ತಣಿಯುತ್ತದೆ.

  ಡಯಲಾಗ್‌ ಆಫ್‌ ದಿ ಫಿಲ್ಮ್‌: ಅತ್ಯಾಚಾರಿಯ ಮರ್ಮಾಂಗವನ್ನು ಮಲ್ಲ ಘಾಸಿಗೊಳಿಸುತ್ತಾನೆ. ಆಗ ಕೇಳಿ ಬರುವ ಸಂಭಾಷಣೆ-‘ಕರೆಂಟ್‌ ಇದೆ ಅಂತ ಊರಿನ ಎಲ್ಲರ ಮನೆಯ ದೀಪ ಹೊತ್ತಿಸೋಕೆ ಹೋದರೆ ಹೀಗೇ ಆಗೋದು. ಈಗ ನೋಡು ನಿಮ್ಮನೆ ದೀಪ ಬೆಳಗಿಸಲೂ ಕರೆಂಟ್‌ ಇಲ್ಲ!’.

  (ಸ್ನೇಹಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X