»   » ನೀನೆಲ್ಲೋ ನಾನಲ್ಲೆ : ಇಂಥಾ ಚಿತ್ರ ಕೊಟ್ರೆ ಬೇಡಾಂತಾರಾ?

ನೀನೆಲ್ಲೋ ನಾನಲ್ಲೆ : ಇಂಥಾ ಚಿತ್ರ ಕೊಟ್ರೆ ಬೇಡಾಂತಾರಾ?

Subscribe to Filmibeat Kannada

;?
ಮೈತುಂಬ ಬಟ್ಟೆ ಧರಿಸಿ ಚಿತ್ರವನ್ನು ಸಹ್ಯವಾಗಿಸಿದ ರಕ್ಷಿತಾಗೆ, ಪಕ್ವ ಅಭಿನಯ ನೀಡಿದ ಅನಿರುದ್ಧ್‌ಗೆ, ಚಿಕ್ಕಪಾತ್ರದಲ್ಲೂ ಗಮನ ಸೆಳೆದ ವಿಷ್ಣು ಮತ್ತು ಅನಂತನಾಗ್‌ಗೆ, ಒಳ್ಳೆ ಚಿತ್ರ ಕೊಟ್ಟ ದಿನೇಶ್‌ಬಾಬುಗೆ ಥ್ಯಾಂಕ್ಸ್‌ಗಳ ಗುಚ್ಛ.

  • ಚೇತನ್‌ ನಾಡಿಗೇರ್‌
ಇಡೀ ಆಕಾಶದಲ್ಲಿ ಎರಡೇ ಮಿನುಗುವ ನಕ್ಷತ್ರಗಳು!

ತಂಗಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಅಣ್ಣ ಅದನ್ನು ತೋರಿಸುತ್ತಾ ಹೇಳುತ್ತಾನೆ. ಒಂದು ನಾನು, ಇನ್ನೊಂದು ನೀನು!

ಕೆಲವೇ ದಿನಗಳ ನಂತರ ಇದ್ದಕ್ಕಿದ್ದಂತೆ ಅದೇ ಆಕಾಶದಲ್ಲಿ ಮೂರು ನಕ್ಷತ್ರಗಳು ಕಾಣಿಸಿಕೊಳ್ಳುತ್ತವೆ. ಅದಕ್ಕೂ ಅಣ್ಣ ಹಾಗೆಯೇ ಹೇಳುತ್ತಾನೆ. ಒಂದು ನಾನು, ಇನ್ನೊಂದು ನನ್ನ ತಂಗಿ, ಮತ್ತೊಂದು ಅಧಿಕ ಮಾಸದಲ್ಲಿ ಬಂದು ಹೋಗುವ ಅಧಿಕ ನಕ್ಷತ್ರ. ಪಾಪ ಅವನಿಗೆ ಗೊತ್ತಿಲ್ಲ, ಅದು ಜಸ್ಟ್‌ ಹೀಗೆ ಬಂದು ಹಾಗೆ ಹೋಗುವ ನಕ್ಷತ್ರವಲ್ಲ ಅಂತ. ತನ್ನ ತಂಗಿಯ ಬಾಳಿನಲ್ಲಿ ಶಾಶ್ವತವಾಗಿ ಮಿನುಗುವ ನಕ್ಷತ್ರ, ಎಷ್ಟೇ ಕಷ್ಟವಾದರೂ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಒದ್ದಾಡುವ ಮಿನುಗುವ ನಕ್ಷತ್ರ ಅಂತ.

ಅದು ಅವನಿಗೆ ಗೊತ್ತಾಗುವ ಹೊತ್ತಿಗೆ ಸಾಕಷ್ಟು ಘಟನೆಗಳು ನಡೆದು ಹೋಗಿರುತ್ತವೆ. ಅದೇ ಚಿತ್ರದ ಕತೆ. ಅದನ್ನೇ ಕೇಳುವಂತವರಾಗಿ. ಈಗಾಗಲೇ ಅನಾಥ ಅಣ್ಣ-ತಂಗಿಯ ಕತೆ ಇದು ಎಂದು ಗೊತ್ತಾಗಿರುತ್ತದೆ. ಮತ್ತು ಇಬ್ಬರೂ ಒಬ್ಬರನ್ನೊಬ್ಬರು ಇಷ್ಟು ಪ್ರೀತಿಸುತ್ತಿರುತ್ತಾರೆ ಎಂದು ಗೊತ್ತಾಗಿರುತ್ತದೆ. ಹೀಗಿರುವಾಗ ಒಂದು ದಿನ ಕೂಡ ತನ್ನ ಅಣ್ಣನನ್ನು ಬಿಟ್ಟು ಹೋಗದ ತಂಗಿ, ಸ್ನೇಹಿತೆಯ ಮದುವೆಗೆಂದು ಹಳ್ಳಿ ಬಿಟ್ಟು ಪಟ್ನ ಸೇರುತ್ತಾಳೆ. ಅಲ್ಲಿ ಎನ್ನಾರೈ ನಾಯಕ ಅವಳನ್ನು ಮೊದಲ ಬಾರಿಗೆ ನೋಡುತ್ತಾನೆ.

ಜಗಳವಾಡುತ್ತಾ ಆಡುತ್ತಾ ಇಬ್ಬರೂ ಒಬ್ಬರಾಗುತ್ತಾರೆ. ಇದು ಹಿರಿಯರಿಗೆ ಗೊತ್ತಾಗುತ್ತದೆ. ಎಲ್ಲಿಯ ಎನ್ನಾರೈ ಹುಡುಗ, ಎಲ್ಲಿಯ ಹಳ್ಳಿ ಹುಡುಗಿ? ಮನೆಯ ಹಿರಿಯರು ರೆಬೆಲ್‌ಸ್ಟಾರ್‌ಗಳಾಗುತ್ತಾರೆ. ಹುಡುಗಿಯನ್ನು ಅವಮಾನ ಮಾಡಿ ಮನೆಬಿಟ್ಟು ಓಡಿಸುತ್ತಾರೆ. ಅಷ್ಟರಲ್ಲಿ ಅಣ್ಣನ ಆಗಮನವೂ ಆಗುವುದರಿಂದ ಅವನೂ ಅವಮಾನದಲ್ಲಿ ಪಾಲುದಾರನಾಗುತ್ತಾನೆ. ಇವರ ಸಹವಾಸವೇ ಬೇಡ ಅಂತ ಊರಿಗೆ ಬಂದರೆ, ಅತ್ತ ನಾಯಕನೂ ನಾಯಕಿಯನ್ನು ಹುಡುಕಿಕೊಂಡು ಬಂದು ನೀನೆಲ್ಲೋ ನಾನಲ್ಲೇ ಅಂತ ಹಳ್ಳಿಯಲ್ಲಿ ಝಂಡಾ ಹೂಡುತ್ತಾನೆ. ತನ್ನ ಪ್ರೀತಿಯನ್ನು ಗೆಲ್ಲಲು ಏನು ಬೇಕಾದರೂ ಮಾಡೋಕೆ ಸಿದ್ಧ ಅಂತ ಅಣ್ಣನಿಗೆ ಸವಾಲು ಹಾಕಿ ಹೊಲ ಊಳಲು ಶುರುಮಾಡುತ್ತಾನೆ. ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾನೆ. ಅಷ್ಟೆಲ್ಲಾ ಮಾಡಿದ ಮೇಲೆ ಅವನು ಗೆದ್ದೇ ಗೆಲ್ಲುತ್ತಾನೆ ಅಂತ ನಿಮಗೆ ಗೊತ್ತಿದೆ. ಅದು ಹೇಗೆ ಅಂತ ಚಿತ್ರಮಂದಿರದಲ್ಲಿ ನೋಡಿ.

ನಿರ್ಮಾಪಕ ಕೆ.ಮಂಜು ಈಗ ಬರೆದಿರುವ ಈ ಕತೆ ಮುಂಚೆ ತೆಲುಗಿನ ‘ನುವಸ್ತಾವಂಟೆ ನಾನೋದ್ದಂಟಾನಾ’ ಚಿತ್ರದಲ್ಲೂ ಇರಬಹುದು. ಅದಕ್ಕೂ ಮುನ್ನ ‘ ಮೈನೆ ಪ್ಯಾರ್‌ ಕಿಯಾ’ಹಾಗೂ ‘ ಪ್ಯಾರ್‌ ಕಿಯಾ ತೋ ಡರ್ನಾ ಕ್ಯಾ’ಚಿತ್ರದಲ್ಲೂ ಬಂದಿರಬಹುದು. ನೀನೆಲ್ಲೋ ನಾನಲ್ಲೆ ಈ ಎಲ್ಲಾ ಚಿತ್ರಗಳನ್ನು ಸಲೀಸಾಗಿ ಮೀರಿಸಿಬಿಡುತ್ತದೆ. ಅದಕ್ಕೆ ದಿನೇಶ್‌ಬಾಬು ಅವರ ಚಿತ್ರಕತೆ ಮತ್ತು ನಿರ್ದೇಶನಕ್ಕೊಂದು ಥ್ಯಾಂಕ್ಸ್‌ ಹೇಳಬೇಕು.

ಚಿತ್ರ ಒಂದು ಬಾರಿ ಟೇಕಾಫ್‌ ಆದರೆ, ಮುಗಿಯುವುದು ಗೊತ್ತಾಗುವುದೇ ಇಲ್ಲ. ಚಿತ್ರದುದ್ದಕ್ಕೂ ಲವಲವಿಕೆಯಿದೆ, ಜೀವಂತಿಕೆಯಿದೆ. ಎಲ್ಲೂ ಯಾವುದೂ ಮಿತಿಮೀರುವುದಿಲ್ಲ. ಎಷ್ಟೂ ಬೇಕೋ ಅಷ್ಟಿದೆ. ಎಲ್ಲಕ್ಕೂ ಮಿಗಿಲಾಗಿ ಮನೆಮಂದಿಯೆಲ್ಲಾ ಕೂತು ಯಾವುದೇ ಮುಜುಗರವಿಲ್ಲದೇ ನೋಡುವಂತಿದೆ. ಹಾಗಾಗಿ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ.

ಹಾಗೆ ಮಾಡುವಲ್ಲಿ ಕಲಾವಿದರ ಶ್ರಮ ದೊಡ್ಡದಿದೆ. ಅದರಲ್ಲೂ ಅನಿರುದ್ಧ್‌ ನಿಜವಾದ ಸರ್‌ಪ್ರೆೃಸು. ಚಿತ್ರದುದ್ದಕ್ಕೂ ಅನಿರುದ್ಧ್‌ ಅಭಿನಯ ಲವಲವಿಕೆಯಿಂದ ಕೂಡಿದೆ. ಅಭಿನಯದಲ್ಲಿ ವಿಷ್ಣುವರ್ಧನ್‌ಗೆ ಸವಾಲೊಡ್ಡಿದ್ದಾರೆ. ವಿಷ್ಣುವರ್ಧನ್‌ ಪಾತ್ರ ಚಿಕ್ಕದಾದರೂ ಅಭಿನಯ ಚೊಕ್ಕ. ರಕ್ಷಿತಾ ಮೊದಲ ಬಾರಿಗೆ ಮೈತುಂಬಾ ಬಟ್ಟೆ ತೊಟ್ಟು ಲಕಲಕಿಸುತ್ತಾರೆ.

ಅನಂತ್‌ನಾಗ್‌ ಅಭಿನಯ ನೋಡೇ ಆನಂದಿಸಬೇಕು. ಅದರಲ್ಲೂ ಕಾರದ ಅನ್ನ ತಿಂದು ಅವರು ಒದ್ದಾಡುವ ದೃಶ್ಯವಂತೂ ನಿಜವಾಗಲೂ ಅದ್ಭುತ. ಕೋಮಲ್‌ ಕುಮಾರ್‌ ನಗಿಸುತ್ತಾರೆ. ಮಲ್ಲೇಶ್‌ ಹಾಗೂ ಸಂಗಡಿಗರು ಹೊಟ್ಟೆ ತುಂಬಾ ನಗಿಸುತ್ತಾರೆ. ರಂಗಾಯಣ ರಘು ತಾವೇ ಹೊಟ್ಟೆ ತುಂಬಾ ನಗುತ್ತಾರೆ. ಇನ್ನು ಶ್ರೀನಿವಾಸ ಮೂರ್ತಿ, ಚಿತ್ರಾಶೆಣೈ, ರಾಮಕೃಷ್ಣ, ಲಕ್ಷ್ಮಣ್‌ ಕೂಡ ಮಿಂಚಿದ್ದಾರೆ. ರವಿಚಂದ್ರನ್‌ ಒಂದು ಹಾಡಿನಲ್ಲಿ ಕುಣಿದು ಹೋಗುತ್ತಾರೆ.

ದಿನೇಶ್‌ಬಾಬು ಫಾರ್‌ ಎ ಚೇಂಜ್‌ ಕ್ಯಾಮೆರಾ ಹಿಂದಿಲ್ಲ. ವೇಣು ಸಮರ್ಥವಾಗಿ ಆ ಜಾಗ ತುಂಬಿದ್ದಾರೆ. ಮಂಡ್ಯ, ಮೈಸೂರು ಸುತ್ತಮುತ್ತಲ ಹಸಿರ ಸೊಬಗನ್ನು ಸುಂದರವಾಗಿ ಹಿಡಿದಿಟ್ಟಿದ್ದಾರೆ. ರಮೇಶ್‌ ಕೃಷ್ಣ ಸಂಗೀತದಲ್ಲಿ ಹಾಡುಗಳು ಸುಮಧುರವಾಗಿವೆ. ಈ ಚಿತ್ರವನ್ನು ಮಿಸ್‌ ಮಾಡಬೇಡಿ!

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada