ಮಳೆ-ಮಂಜು ಜತೆ ಪಾರ್ವತಿ ಜುಗಲ್‌ಬಂದಿ

By *ದೇವಶೆಟ್ಟಿ ಮಹೇಶ್/ ವಿನಾಯಕರಾಮ್ ಕಲಗಾರು

ಚಿತ್ರ: ಮಳೆ ಬರಲಿ, ಮಂಜು ಇರಲಿ
ಕತೆ, ಚಿತ್ರಕತೆ, ನಿರ್ದೇಶನ: ವಿಜಯಲಕ್ಷ್ಮಿ ಸಿಂಗ್
ಸಂಭಾಷಣೆ: ಬಿ.ಎ.ಮಧು
ಛಾಯಾಗ್ರಹಣ: ಅಜಯ್ ವಿನ್ಸೆಂಟ್
ಸಂಗೀತ: ಮನೋಮೂರ್ತಿ
ತಾರಾಗಣ: ಪಾರ್ವತಿ, ಶ್ರೀನಗರ ಕಿಟ್ಟಿ, ನಾಗಕಿರಣ್, ಶರಣ್, ಸಾಧುಕೋಕಿಲ, ಮೇಘಾಭಾಗವತರ್, ಉಮಾಶ್ರೀ ಮುಂತಾದವರು.

ಇಲ್ಲಿ ಮಳೆ ಮಾತನಾಡುತ್ತದೆ. ಮಂಜು ಮಳೆಯಲ್ಲಿ ನೆನೆದ ಅನುಭವ ನೀಡುತ್ತದೆ. ಇಡೀ ಚಿತ್ರ ಒಂದೇ ಗ್ರಾಫ್‌ನಲ್ಲಿ ಹೋಗುತ್ತದೆ... ಮಡಿಕೇರಿಯ ನಿಸರ್ಗಧಾಮ. ಕಣ್ಮನದಲ್ಲಿ ಕಲರವ ಮೂಡಿಸುವ ದೃಶ್ಯಗಳು. ಅದಕ್ಕೆ ಹೊಂದಿಕೊಳ್ಳುವ ಪಾತ್ರವರ್ಗ... ಪಾತ್ರವೇ ತಾನಾಗಿ, ತಾನೇ ಪಾತ್ರವಾಗುವ ನಾಯಕಿ ಪಾರ್ವತಿ. ಸಿಡುಕಿನಲ್ಲೂ ಸಿಂಗಾರಗೊಂಡ ವೇದಿಕೆಯಂತೆ ಕಾಣುವ, ಐಸ್ ಕ್ಯೂಬ್ ನಲ್ಲಿ ಬಚ್ಚಿಟ್ಟ ಕ್ಯಾಂಡಿಯನ್ನು ಹೊರತೆಗೆದರೆ ಎಲ್ಲಿ ಕರಗಿ, ಕಾವೇರಿ ಪಾಲಾಗುತ್ತದೆಯೋ ಎಂಬ ಸಂಕಟದಲ್ಲಿ ತೊಳಲಾಡುವ ಶ್ರೀನಗರ ಕಿಟ್ಟಿ, ದೂರ ನಿಂತರೆ ದರ್ಶನ್, ಹತ್ತಿರ ಬಂದರೆ ಸುದರ್ಶನ್ ಥರ ಕಾಣುವ ನಾಗಕಿರಣ್...

ಇಡೀ ಚಿತ್ರ ಮಳೆಯಲ್ಲೇ ಸಾಗುತ್ತದೆ. ಹಾಗಂತ ಮನರಂಜನೆ ಎಷ್ಟು ಪರ್ಸೆಂಟ್ ಇದೆ? ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಚಿತ್ರಕತೆ ಕಡೆ ಮುಖ ಮಾಡಬೇಕು... ಮಳೆ ಜೊಯ್ ಅಂತ ಸುರಿಯುತ್ತಿರುತ್ತದೆ. ತಂದೆ ಸಾಹುಕಾರರ ಮನೆಯಲ್ಲಿ ಗುಮಾಸ್ತ. ಮಗಳು ಎಂಬಿಎ ಮುಗಿಸಿರುತ್ತಾಳೆ. ಇದ್ದಕ್ಕಿದ್ದಂತೆ ಊರಿಗೆ ಬರುತ್ತಾಳೆ. ಸಾಹುಕಾರರ ಮಕ್ಕಳು ಶ್ರೀನಗರ ಕಿಟ್ಟಿ ಹಾಗೂ ನಾಗಕಿರಣ್. ಇಬ್ಬರಲ್ಲಿ ಈಕೆ ಒಬ್ಬನನ್ನು ಪ್ರೀತಿಸುತ್ತಾಳೆ. ಇನ್ನೊಬ್ಬ ಆಕೆಯನ್ನು ಪ್ರೀತಿಸುತ್ತಾನೆ.... ಹೀಗೆ ಇದು ಪಕ್ಕಾ ತ್ರಿಕೋನ ಪ್ರೇಮಕತೆ.

ಉದಾಹರಣೆಗೆ ಹಿಂದಿಯಲ್ಲಿ ದಿಲ್ಲಗಿ ಸಿನಿಮಾ ಬಂದಿತ್ತು ನೋಡಿ, ಆ ಥರದ ಕತೆ. ಹಾಗಂತ ಯಥಾವತ್ ಕಾಪಿ ಎಸ್ಟೇಟ್' ಅಂತೂ ಅಲ್ಲ! ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ವಿಜಯಶಾಲಿಯಾಗಿರುವುದು ದೃಶ್ಯಗಳನ್ನು ಕಟ್ಟಿಕೊಡುವಲ್ಲಿ... ಹಿನ್ನೆಲೆಯಲ್ಲಿ ಕಾಣುವ ಹಸಿರೆಲೆಗಳ ಸಮ್ಮಿಶ್ರ ಸರಕಾರ, ಕಲ್ಲಿನ ರಾಶಿಗಳ ಮಧ್ಯೆ ನಾಯಕ, ನಾಯಕಿ. ಹಿಂಬದಿಯಲ್ಲಿ ಒಂದು ಮರ. ಸುತ್ತಮುತ್ತ ಕಣ್ಣಿಗೆ ಮುತ್ತಿಡುವ ಮಲೆನಾಡ ಸಿರಿ. ಆಗಾಗ ಇಳೆ ಚುಂಬಿಸುವ ಮಂಜುಮಿಶ್ರಿತ ಮಳೆ... ಹೀಗೆ ಎಲ್ಲೆಲ್ಲೂ ಹಸಿರು ಸಂಪತ್ತು ಉಸಿರಾಡುತ್ತವೆ. ಆ ಮೂಲಕ ಸಿಂಗಮ್ಮ ಮತ್ತೆ ಹಸಿರು ಹಂಗಾಮಾ ಮಾಡುತ್ತಾರೆ...

ಆದರೆ ಸಾಮಾನ್ಯ ಪ್ರೇಕ್ಷಕನಿಗೆ ಈ ಥರದ ಫೀಲಿಂಗು, ರೀಲಿಂಗು, ಇನ್ ಕಮಿಂಗು, ಔಟ್ ಗೋಯಿಂಗು ಎಲ್ಲ ಮಾಮೂಲಿ. ಅವನಿಗೆ ಕಣ್ಣೀರಿನ ಕತೆ ಬೇಕಾಗಿಲ್ಲ. ಎಳಸಲು ಎನಿಸುವ ಚಿತ್ರಕತೆ ಬೇಡವೇಬೇಡ. ಬೇಕಾದ್ದು ೨೪ ಕ್ಯಾರೆಟ್ ಮನರಂಜನೆ. ಅದನ್ನು ಬಿಟ್ಟು ಬೇರೆ ಎಲ್ಲವೂ ಇಲ್ಲಿ ಇವೆ... ಮಳೆ ಇರಲಿ, ಮಂಜೂ ಬರಲಿ... ಹೆಸರು ಕೇಳಿದಾಗ ಇದು ಪಕ್ಕಾ ಮೆಲೊಡಿ ಚಿತ್ರ ಎಂಬ ಭಾವನೆ ಮೂಡುತ್ತದೆ. ಆದರೆ ಸಂಗೀತ ನಿರ್ದೇಶಕ ಮನೋಮೂರ್ತಿ ಹಾಗೆ ಮೂಡಿದ ಭಾವನೆ ಮರುಕ್ಷಣದಲ್ಲಿ ಮಾಸುವಂತೆ ಮಾಡುತ್ತಾರೆ. ಹಿಂದೆ ಎಲ್ಲೋ ಬಳಸಿದ ಟ್ಯೂನ್‌ಗಳನ್ನೇ ಇಲ್ಲಿ ಮರು ತಿದ್ದುಪಡಿ ಮಾಡಿ, ಫಿಲ್ಟರ್ ಮಾಡಿ ಬಳಸಿದ್ದಾರೆ. ನಾಯಕಿ ಕ್ಲೈಮ್ಯಾಕ್ಸ್ ಹೊತ್ತಿಗೆ ತಂದೆಯ ಮಡಿಲಲ್ಲಿ ಮಲಗಿ ಅಳುವಾಗ ಮಳೆ ನಿಂತು ಹೋದ ಮೇಲೆ...' ದಾಟಿಯ ಹಾಡು ಬಂದಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ.

ಆದರೆ ಅಲ್ಲಿ ಬರುವ ಹಾಡು ದೃಶ್ಯಕ್ಕೆ ಹೊಂದಿಕೊಳ್ಳಲು ಒದ್ದಾಡುತ್ತದೆ. ಆದರೆ ರೀ ರೆಕಾರ್ಡಿಂಗ್‌ನಲ್ಲಿ ಹೆಚ್ಚು ಸ್ಕೋರ್ ಮಾಡಿದ್ದಾರೆ. ಕಾಮಿಡಿ ದೃಶ್ಯಕ್ಕೆ ತಕ್ಕ ಹಿನ್ನೆಲೆ ಸಂಗೀತ ಕೊಡುವಲ್ಲಿ ಮನೋಮೂರ್ತಿ ಗೆದ್ದಿದ್ದಾರೆ. ಬಿ.ಎ.ಮಧು ಸಂಭಾಷಣೆಯಲ್ಲಿ ನೈಜತೆ ಇದೆ.ಆದರೆ ಕ್ಲೈಮ್ಯಾಕ್ಸ್‌ನಲ್ಲಿ ಕಿಟ್ಟಿ ಹೇಳುವ ಡೈಲಾಗ್ ಪೇಲವ ಎನಿಸುತ್ತದೆ. ಶ್ರೀನಗರ ಕಿಟ್ಟಿ ಚೆನ್ನಾಗಿ ಅಭಿನಯಿಸಿದ್ದಾರೆ. ನಾಗಕಿರಣ್ ಚೆನ್ನಾಗಿ ಕಾಣುತ್ತಾರೆ. ನಾಯಕಿ ಪಾರ್ವತಿ ಎರಡನ್ನೂ ಸರಿದೂಗಿಸಿಕೊಂಡು ಹೋಗಿದ್ದಾರೆ. ತಂದೆಯ ಪಾತ್ರದಲ್ಲಿ ಜೈಜಗದೀಶ್ ಮನೋಜ್ಞ ಅಭಿನಯ ನೀಡಿದ್ದಾರೆ. ಜೈ ಹಾಗೂ ಪಾರ್ವತಿ ನಡುವಿನ ಕೆಮಿಸ್ಟ್ರಿ ಸರಿಯಾಗಿ ಹೊಂದಿಕೊಳ್ಳುತ್ತದೆ. ಹರಿಪ್ರಿಯಾ ಕ್ಲೈಮ್ಯಾಕ್ಸ್ ಹೊತ್ತಿಗೆ ಬಂದು ಹಾಟ್' ಬೀಟ್ ಹೆಚ್ಚಿಸುತ್ತಾರೆ. ಅನಗತ್ಯ ವಾಗಿ ಹಾಡೊಂದಕ್ಕೆ ಹೆಜ್ಜೆ ಹಾಕಿ, ಮಾಯವಾಗುತ್ತಾರೆ. ಆ ಹಾಡು ಚಿತ್ರಕ್ಕೂ ಅನಗತ್ಯ ಎನ್ನುವುದು ವಿಜಯಮ್ಮನ ತುರ್ತು ಗಮನಕ್ಕೆ. ಶರಣ್-ಸಾಧುಕೋಕಿಲಾ ಕಾಮಿಡಿಯಲ್ಲಿ ಹೊಸ ವರ್ಷನ್ ಇಲ್ಲ. ಹಾಗಂತ ಚೆನ್ನಾಗಿಲ್ಲ ಎಂದು ತೆಗೆದುಹಾಕುವಂತಿಲ್ಲ.

ಮುಖ್ಯಮಂತ್ರಿ ಚಂದ್ರು, ಹೇಮಾ ಚೌಧರಿ ಪಾತ್ರಗಳು ಕತೆಯ ಜತೆ ಬೆಸೆದುಕೊಂಡಿದೆ. ಉಮಾಶ್ರೀ ಇಲ್ಲಿ ಪೋಷಕ ನಟಿಯಲ್ಲ, ಸ್ನೇಹ ಪೂರ್ವಕ ನಟಿ, ಅಷ್ಟೇ! ನಿರ್ದೇಶನದ ಮಟ್ಟಿಗೆ ವಿಜಯಲಕ್ಷ್ಮಿ ಸಿಂಗ್ ಗೆದ್ದಿದ್ದಾರೆ. ಒಂದೊಂದು ಪಾತ್ರಕ್ಕೂ ಅದರದೇ ಆದ ಮಹತ್ವ ಬರುವಂತೆ, ಒಬ್ಬೊಬ್ಬರ ಬಾಡಿ ಲ್ಯಾಂಗ್ವೇಜ್ ಹೀಗೇ ಇರುತ್ತದೆ ಎನ್ನುವುದನ್ನು ಕೂಲಂಕಷವಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪವರ್‌ಫುಲ್ ಪಾರ್ವತಿ !
ಅರಳು ಹುರಿದಂತೆ ಮಾತು, ಹರಳಿ ನಂತೆ ಹೊಳೆ ಯುವ ಮುಖಭಾವ, ಸರಳ ಹಾಗೂ ವಿರಳ ಎನಿಸುವ ನಟನೆ. ದೃಶ್ಯದಿಂದ ದೃಶ್ಯಕ್ಕೆ ಬದಲಾಗುವ ಮ್ಯಾನರಿಸಂ. ಕುಣಿತ, ಜಿಗಿತ, ಸೆಳೆತ... ಹೀಗೆ ಪ್ರತೀ ವಿಭಾಗದಲ್ಲೂ ಸೈ ಎನಿಸಿಕೊಂಡಿದ್ದಾರೆ ನಾಯಕಿ ಪಾರ್ವತಿ. ಪ್ರೀತಿ ಕೈ ತಪ್ಪಿ ಹೋದಾಗ ಆಕೆ ನಲಗುವ ಪರಿ ಉಸಿರು ಬಿಸಿಯಾ ಗುವಂತೆ ಮಾಡುತ್ತದೆ. ಅದಕ್ಕಿಂತ ಹೆಚ್ಚಾಗಿ ಕೇರಳತಿಯಾಗಿ ಕನ್ನಡತಿಯರಿಗೆ ಸವಾಲು ಹಾಕುವಂತೆ ಡಬ್ ಮಾಡಿರುವುದು. ಕೆಲವು ಕಡೆ ಮಾತು ತೊದಲಿದಂತೆ ಕೇಳಿಸಿದರೂ ಅದು ಇಷ್ಟವಾಗುತ್ತದೆ. ಇನ್ನು ಕೆಲವು ಕಡೆ ಸುಹಾಸಿನಿ ಮಾತನಾಡಿದಂತೆ ಭಾಸವಾಗುತ್ತದೆ. ಡಬ್ಬಿಂಗ್ ಎಂದರೆ ಹಾವು ತುಳಿದಂತೆ ಆಡುವ ಕೆಲ ಕನ್ನಡ ರಮ್ಯ ನಟಿಯರು ಒಮ್ಮೆ ಮ. ಇ. ಮಂ. ಬ. ಸಿನಿಮಾ ನೋಡಬೇಕು. ಅಥವಾ ವಿಜಯಲಕ್ಷ್ಮಿ ಸಿಂಗ್ ಕನ್ನಡ ಕೋಚಿಂಗ್ ಕ್ಲಾಸ್'ಗೆ ಮೂರು ವಾರ ಸೇರಿಕೊಳ್ಳಬೇಕು!

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X