ವಿದ್ಯಾ ಬಾಲನ್ ದಿ ಡರ್ಟಿ ಪಿಕ್ಚರ್ ಚಿತ್ರ ವಿಮರ್ಶೆ ಓದಿ
ತುಂಬು ಚೆಲುವೆ ವಿದ್ಯಾ ಬಾಲನ್ ಅಭಿನಯದ 'ದಿ ಡರ್ಟಿ ಪಿಕ್ಚರ್' ತೆರೆ ಅಲಂಕರಿಸಿದೆ. ಒಮ್ಮೆ ನೋಡಲೇಬೇಕು ಅನ್ನಿಸಿದರೆ ಹೋಗಿ ಬನ್ನಿ. ನಮ್ಮದೇನು ತಕರಾರು ಇಲ್ಲ. ಆದರೆ ಚಿತ್ರದಲ್ಲಿ ಎಲ್ಲೂ ವಿದ್ಯಾ ಬಾಲನ್ ಕಾಣಿಸುವುದಿಲ್ಲ. ಉಕ್ಕಿರಿ ಬಿಕ್ಕಿರಿ ಆಗುವಂತಹ ಸನ್ನಿವೇಶಗಳು ಮೊದಲೇ ಇಲ್ಲ. ಸಿನಿತಾರೆಯೊಬ್ಬಳ ಏಳುಬೀಳುಗಳು ಹಾಗೂ ಆಕೆಯ ದುರಂತ ಅಂತ್ಯವನ್ನು ಸಮರ್ಥವಾಗಿ ತೆರೆಗೆ ತಂದಿದ್ದಾರೆ ಚಿತ್ರದ ನಿರ್ದೇಶಕ ಮಿಲನ್ ಲೂಥ್‌ರಿಯಾ.
ಈ ಹಿಂದೆ ಇವರು 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. 'ದರ್ಟಿ ಪಿಕ್ಚರ್' ಸಹ ಅಂತಹದ್ದೇ ಒಂದು ನೈಜ ಪ್ರಯತ್ನ. ತೆರೆಯ ಮೇಲೆ ಸೆಕ್ಸ್ ಸಿಂಬಲ್ ಸಿಲ್ಕ್ ಸ್ಮಿತಾ ಜೀವನದ ಎಳೆಎಳೆಗಳನ್ನು ಬಿಡಿಸಿಟ್ಟಿದ್ದಾರೆ ನಿರ್ದೇಶಕರು. ಆದರೆ ಎಲ್ಲೂ ಅಶ್ಲೀಲತೆಯ ಗೋಡೆ ಹಾರಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಸಿಲ್ಕ್ ಆತ್ಮಕ್ಕೆ ನೋವುಂಟಾಗುವಂತೆ ಚಿತ್ರಿಸಿಲ್ಲ.
ವಿದ್ಯಾ ಬಾಲನ್ ಅಭಿನಯ, ವಿಶಾಲ್ ಶೇಖರ್ ಸಂಗೀತ, ರಜತ್ ಅರೋರಾ ಅವರ ಕ್ರಿಯಾತ್ಮಕತೆ ಹಾಗೂ ಚುರುಕಾದ ಸಂಭಾಷಣೆ ಚಿತ್ರದ ಪ್ರಮುಖ ಆಕರ್ಷಣೆಗಳು. ತಾಂತ್ರಿಕತೆಯಲ್ಲೂ ಚಿತ್ರ ಸೊಗಸಾಗಿ ಮೂಡಿಬಂದಿದೆ. ಬಾಬ್ಬಿ ಸಿಂಗ್ ಅವರ ಛಾಯಾಗ್ರಹಣವಂತೂ ಕಣ್ಣಿಗೆ ಕಾಮನಬಿಲ್ಲು, ಮನಸ್ಸಿಗೆ ಮುಗಿಲು.
ಪ್ರಕಾಶ್ ರೈ ಅವರ ಪತ್ನಿ ಪೋನಿ ವರ್ಮಾ ನೃತ್ಯ ಸಂಯೋಜನೆ ನಿಜಕ್ಕೂ ಎಂಬತ್ತರ ದಶಕಕ್ಕೆ ಕರೆದೊಯ್ಯುತ್ತದೆ. ಚಿತ್ರದಲ್ಲಿ ಬಳಸಿಕೊಳ್ಳಲಾಗಿರುವ ವಸ್ತ್ರವೈವಿಧ್ಯತೆಗಳು, ಸೆಟ್ಸ್ ಕಣ್ಮನ ಸೆಳೆಯುತ್ತವೆ. ಎಂಬತ್ತರ ದಶಕದಲ್ಲಿ ಬಂದಂತಹ ದಕ್ಷಿಣ ಭಾರತದ ಚಿತ್ರಗಳ ನೆನಪನ್ನು ತರುತ್ತದೆ 'ಡರ್ಟಿ ಪಿಕ್ಚರ್'. ವಿದ್ಯಾ ಬಾಲನ್ ಅಭಿನಯವಂತೂ ಮತ್ತೊಮ್ಮೆ ಸಿಲ್ಕ್ ಸ್ಮಿತಾ ಹುಟ್ಟಿಬಂದಂತಿದೆ.
ಸಣ್ಣ ಪಟ್ಟಣವೊಂದರ ಕನಸುಕಂಗಳ ಚೆಲುವೆ ರೇಶ್ಮಾ(ವಿದ್ಯಾ ಬಾಲನ್) ಬೆಳ್ಳಿತೆರೆಗೆ ಬರುವ ಕನಸು ಕಾಣುತ್ತಾಳೆ. ಅವಳ ಬಣ್ಣದ ಕನಸುಗಳೆಲ್ಲಾ ವಿಫಲವಾಗುತ್ತವೆ. ಕಡೆಗೆ ಅವಳಿಗೆ ಐಟಂ ಗರ್ಲ್ ಪಾತ್ರವೊಂದು ಸಿಗುತ್ತದೆ. ರಾತ್ರಿ ಬೆಳಗಾಗುವುದರಲ್ಲಿ ರೇಶ್ಮಾ ಪಡ್ಡೆಗಳ ಪಾಲಿಗೆ ಸೆಕ್ಸ್ ದೇವತೆಯಾಗುತ್ತಾಳೆ. ಅಲ್ಲಿಂದ ಆರಂಭವಾದ ಅವಳ ಸಿನಿಯಾನ ಕೊನೆ ನಿಗೂಢ ಆತ್ಮಹತ್ಯೆಯಲ್ಲಿ ಕೊನೆಯಾಗುತ್ತದೆ.
ರೇಶ್ಮಾಳನ್ನು ಪ್ರತಿಯೊಬ್ಬ ಪುರುಷನೂ ಒಳಗೊಳಗೆ ಇಷ್ಟಪಡುತ್ತಿರುತ್ತಾನೆ. ಆದರೆ ಮೇಲ್ನೋಟಕ್ಕೆ ಮಾತ್ರ ತೋರಗೊಡುವುದಿಲ್ಲ. ಆಕೆಯ ಬಾಳಿನಲ್ಲಿ ಬಂದ ಸೂರ್ಯಕಾಂತ್ (ನಾಸಿರುದ್ದೀನ್), ರಮಾಕಾಂತ್ (ತುಷಾರ್) ಹಾಗೂ ಅಬ್ರಹಾಂ (ಇಮ್ರಾನ್) ಮೇಲೆ ಕ್ರಮೇಣ ಆಕೆಗೆ ಆಸಕ್ತಿ ಕಡಿಮೆಯಾಗುತ್ತದೆ. ಚಿತ್ರದ ಮೊದಲರ್ಧದಲ್ಲಿ ಆಕೆಯ ಕಲರ್‌ಫುಲ್ ಲೈಫು, ಇನ್ನರ್ಧ ಲೈಫು ಇಷ್ಟೇನೆ ಎಂಬಂತಾಗುತ್ತದೆ.
ತುಷಾರ್ ಕಪೂರ್, ನಾಸಿರುದ್ದೀನ್ ಶಾ, ಇಮ್ರಾನ್ ಹಸ್ಮಿ ಯಾರೊಬ್ಬರೂ ತಮ್ಮ ಪಾತ್ರವನ್ನು ಬೇಕಾಬಿಟ್ಟಿ ಮಾಡಿಲ್ಲ. ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ್ದಾರೆ. ಇವರೆಲ್ಲರನ್ನೂ ವಿದ್ಯಾ ಬಾಲನ್ ಮೀರಿಸಿರುವುದು ಕೊನೆಯವರೆಗೂ ಕಾಡುವ ಅಂಶ. ವೀಕೆಂಡ್ ಮನರಂಜನೆಗಾಗಿ ಹಾತೊರೆಯುವವರು ಚಿತ್ರವನ್ನು ಒಮ್ಮೆ ನೋಡಿ ಆನಂದಿಸಬಹುದು.
ಚಿತ್ರದ ನಿರ್ಮಾಪಕರು: ಏಕ್ತಾ ಕಪೂರ್ ಹಾಗೂ ಧೀರಜ್ ಶೆಣೈ
ಚಿತ್ರದ ನಿರ್ದೇಶಕ: ಮಿಲನ್ ಲೂಥ್‌ರಿಯಾ
ಪಾತ್ರವರ್ಗ: ವಿದ್ಯಾ ಬಾಲನ್, ನಾಸಿರುದ್ದೀನ್ ಶಾ, ಇಮ್ರಾನ್ ಹಶ್ಮಿ, ತುಷಾರ್ ಕಪೂರ್, ಅಂಜು ಮಹೇಂದ್ರು, ರಾಜೇಶ್ ಶರ್ಮ ಮುಂತಾದವರು.
ಸಂಗೀತ: ವಿಶಾಲ್-ಶೇಖರ್.


Click it and Unblock the Notifications











