»   » ಮುಂಗಾರು ಮಳೆ : ಮಳೆ ಮಡಿಲಲಿ ಮಗು ನಗುವಿನಂಥ ಪ್ರೇಮ!

ಮುಂಗಾರು ಮಳೆ : ಮಳೆ ಮಡಿಲಲಿ ಮಗು ನಗುವಿನಂಥ ಪ್ರೇಮ!

Posted By:
Subscribe to Filmibeat Kannada


ಚಿತ್ರವನ್ನು ಮಳೆ ಬೀಳುವ ಮುನ್ನ ನೋಡಿ ಬನ್ನಿ. ಚಳಿಗಾಲಕ್ಕೆ ಮಧುರ ನೆನಪು ಮರುಕಳಿಸುತ್ತದೆ. ಬದುಕು ಆಪ್ತವಾಗುತ್ತದೆ, ಮನಸು ಹಗುರಾಗುತ್ತದೆ. ಕಾರಣ ಇದು ನಿಮ್ಮ ಪ್ರೇಮಕತೆಯೂ ಆಗಿರ ಬಹುದು...ಡೋಂಟ್‌ ಮಿಸ್‌ ಇಟ್‌...!

ಚಿತ್ರ : ಮುಂಗಾರಿನ ಮಳೆ
ನಿರ್ಮಾಣ : ಕೃಷ್ಣಪ್ಪ
ನಿರ್ದೇಶನ :ಯೋಗರಾಜ ಭಟ್‌
ಸಂಗೀತ : ಮನೋಮೂರ್ತಿ
ತಾರಾಗಣ : ಕಾಮಿಡಿ ಟೈಮ್‌ ಗಣೇಶ್‌, ಸಂಜನಾ ಗಾಂಧಿ, ಅನಂತನಾಗ್‌, ಪದ್ಮಜಾ ರಾವ್‌, ಸುಧಾ ಬೆಳವಾಡಿ ಮತ್ತಿತರರು.

ಮಳೆ ಕತೆಯಾಗುತ್ತದೆ, ಕವಿತೆಯಾಗುತ್ತದೆ, ಪ್ರೀತಿಯಾಗುತ್ತದೆ, ತ್ಯಾಗವಾಗುತ್ತದೆ, ಕಣ್ಣೀರಾಗುತ್ತದೆ, ದುರಂತ ಪ್ರೇಮಕ್ಕೆ ಸಾಕ್ಷಿಯಾಗುತ್ತದೆ. ಕೊನೆಗೆ ಮಳೆಯೇ ಒಂದು ಪಾತ್ರವಾಗಿ ಮನಸಲ್ಲಿ ಜಿಟಿ ಜಿಟಿ ಜಿಟಿ ಜಿಟಿ... ಇದು ‘ಮುಂಗಾರು ಮಳೆ’ ಚಿತ್ರದ ಪುಟ್ಟ ಕ್ಯಾನ್ವಾಸ್‌.

ಯೋಗರಾಜ್‌ ಭಟ್‌ ಮತ್ತೆ ಮೈಕೊಡವಿ ಬಂದಿದ್ದಾರೆ. ‘ಮಣಿ’ ಚಿತ್ರದಲ್ಲಿ ಮಾಡಿದ ಮೋಡಿಯನ್ನೇ ನೆನಪಿಸುತ್ತಾರೆ. ಆದರೆ, ಈ ಬಾರಿ ಬದುಕಿನ ಕ್ರೌರ್ಯಕ್ಕಿಂತ ಪ್ರೀತಿಯ ಮೋಹಕತೆಗೆ ಕ್ಯಾಮೆರಾ ಹಿಡಿದಿದ್ದಾರೆ.

ಈಗಾಗಲೇ ಸಾಕಷ್ಟು ಹಳೆಯದಾಗಿರುವ ಕತೆಗೆ ಹೊಸ ರೀತಿಯ ಟ್ರೀಟ್‌ಮೆಂಟ್‌ ಕೊಟ್ಟಿದ್ದಾರೆ. ಅದಕ್ಕೆ ಮಳೆಯನ್ನು ರೂಪಕವಾಗಿ ಬಳಸಿದ್ದಾರೆ. ಚಿತ್ರಕತೆಯಲ್ಲಿ ಚಿತ್ತಾರ ಬಿಡಿಸಿದ್ದಾರೆ. ಕ್ಯಾಮೆರಾ ಮೂಲಕ ಕವಿತೆ ಹೆಣೆದಿದ್ದಾರೆ. ಪಾತ್ರಗಳನ್ನು ನಮ್ಮ ನಿಮ್ಮ ಮನೆಯ ಅಪ್ಪ , ಅಮ್ಮ, ಹುಡುಗ ಹುಡುಗಿಯರಂತೆ ಕೆತ್ತಿದ್ದಾರೆ. ಹಾಗೆ ಮಾಡಿ ಮಾಡಿ ಇದು ಯಾರದೋ ಅನುಭವದಿಂದ ಹುಟ್ಟಿದ ಕತೆ ಎಂದನಿಸುವಂತೆ ಮಾಡುತ್ತಾರೆ. ಬದುಕಿಗೆ ಹತ್ತಿರವಾದ ಕತೆ, ಅದಕ್ಕೆ ಸರಿಯಾದ ಕ್ಲೈಮ್ಯಾಕ್ಸ್‌ ಕೆಲವರಿಗೆ ಅರಗಿಸಿಕೊಳ್ಳಲು ಕಷ್ಟ. ಆದರೆ ಹಾಗೆ ಮಾಡದಿದ್ದರೆ ಇದೂ ಹತ್ತರಲ್ಲಿ ಹನ್ನೊಂದಾಗುತ್ತಿತ್ತು. ಹಾಗಾಗಿಲ್ಲ ಅನ್ನೋದು ಚಿತ್ರದ ವಿಶೇಷತೆಯೂ ಹೌದು, ದೌರ್ಬಲ್ಯವೂ ಹೌದು !

ಮೊದಲೇ ಹೇಳಿದಂತೆ ಇದೊಂದು ಸಾಮಾನ್ಯ ಕತೆ. ಮದುವೆ ನಿಶ್ಚಯವಾಗಿರುವ ನಾಯಕಿ. ಅದು ಗೊತ್ತಿಲ್ಲದೆ ಆಕೆಯನ್ನು ಪ್ರೀತಿಸುವ ನಾಯಕ. ವಿಷಯ ಗೊತ್ತಾದ ಮೇಲೆಯೂ ಅವಳ ಮನಸನ್ನು ಹೇಗಾದರೂ ಬದಲಿಸಲು ಯತ್ನಿಸುತ್ತಾನೆ. ಮೊದ ಮೊದಲು ಹಿಂದೇಟು ಹಾಕುವ ಹುಡುಗಿ ಕೊನೆಗೆ ಆತನ ಪ್ರೀತಿಯಲ್ಲಿ ಬೀಳುತ್ತಾಳೆ. ಮದುವೆ ಎರಡು ದಿನ ಇರುವಾಗ ಏನೇನೊ ಆಗುತ್ತದೆ. ಅವಳ ಮನೆಯಲ್ಲೇ ಇರುವ ಆತನ ಮೇಲೆ ಆಕೆಯ ಅಪ್ಪ ಅಮ್ಮ ನಂಬಿಕೆ ಇಟ್ಟಿರುತ್ತಾರೆ. ಆ ನಂಬಿಕೆಯೇ ಕತೆಯ ಮುಖ್ಯ ತಿರುವು...

ಒಂದು ಫ್ರೆಶ್‌ ಪ್ರೇಮ ಕತೆಗೆ ಏನೇನು ಬೇಕೊ ಎಲ್ಲವನ್ನೂ ಭಟ್ಟರು ಬಾಳೆ ಎಲೆಯಲ್ಲಿ ತುಂಬಿ ಕೊಟ್ಟಿದ್ದಾರೆ. ಹಸಿರು, ಮಳೆ, ತಂಗಾಳಿ, ನೀರು, ಮಣ್ಣು, ಮನೆ... ಇವೆಲ್ಲ ಕತೆಯಲ್ಲಿ ಒಂದಾಗುವಂತೆ ಚಿತ್ರಿಸಿದ್ದಾರೆ. ಕಿಟ್ಟಿ ಕ್ಯಾಮೆರಾ ಕೆಲಸ ಬರೀ ಕೆಲಸವಲ್ಲ, ಅದಕ್ಕೆ ಸಾಕ್ಷಿ ಎತ್ತರದ ಜಲಪಾತದ ಮೇಲೆ ನಿಂತು ಆ ಝರಿಯ ಎಲ್ಲ ಮಗ್ಗಲುಗಳನ್ನು ತೋರಿಸಿದಾಗ ಗೊತ್ತಾಗುತ್ತದೆ. ಅವರ ಶ್ರಮಕ್ಕೆ ಸಲಾಂ ಹೇಳಲೇಬೇಕು.

ಸಂಭಾಷಣೆಯ ಹೊಸತನ ಖುಷಿ ಕೊಡುತ್ತದೆ. ತೀರಾ ಸಾಮಾನ್ಯ ಭಾಷೆಯನ್ನು ಅದರ ಎಲ್ಲ ಆಳ-ಅಗಲದ ಮೂಲಕ ಭಟ್ಟರು ಬರೆದಿದ್ದಾರೆ. ನಗು ಅವರ ಶಬ್ದಗಳಲ್ಲಿ ಸದಾ ನೆಲೆಸಿರುತ್ತದೆ. ಹಾಡು ಮತ್ತು ಹಿನ್ನೆಲೆ ಸಂಗೀತಕ್ಕೆ ಮನೋ ಮೂರ್ತಿ ಮಲ್ಲಿಗೆಯ ಘಮಲು ತುಂಬುತ್ತಾರೆ. ಆದರೆ ಎರಡು ಹಾಡುಗಳ ಸಾಹಿತ್ಯವನ್ನು ಸಂಗೀತ ತಿನ್ನುವುದನ್ನು ಇನ್ನೊಮ್ಮೆ ಮಾಡದಿರಲಿ.

ಇನ್ನು ಕಾಮಿಡಿ ಟೈಂ ಗಣೇಶ್‌ ನೀಡುವ ಅಚ್ಚರಿಗೆ ಅಚ್ಚರಿಯಾಗುತ್ತದೆ. ಕಾಮಿಡಿ ಟೈಂನಲ್ಲಿ ನೋಡುವ ಗಣೇಶ್‌ ಅದು ಮರೆತು ಹೋಗುವಂತೆ ಪಾತ್ರ ನಿಭಾಯಿಸಿದ್ದಾರೆ. ನಿಧಾನಕ್ಕೆ, ಆದರೆ, ತುಂಟತನದಿಂದ ಡೈಲಾಗ್‌ ಹೇಳುವ ಶೈಲಿ ಬೆರಗು ಮೂಡಿಸುತ್ತದೆ. ಆರಂಭದ ತುಂಟಾಟದ ಗಣೇಶ್‌, ಆಮೇಲೆ ಸೀರಿಯಸ್‌ ಗಣೇಶ್‌ ಎರಡರಲ್ಲೂ ಪಾತ್ರವನ್ನು ತಿನ್ನುವ ಇವರು ತಾವೆಂಥ ಕಲಾವಿದ ಎಂಬುದನ್ನು ತೋರಿಸಿದ್ದಾರೆ. ಕೆರೆ ದಂಡೆ ಮೇಲೆ ಕುಳಿತು ತನ್ನ ಪ್ರೇಮ ವೈಫಲ್ಯವನ್ನು ಹೇಳುವಾಗ, ಕ್ಲೈಮ್ಯಾಕ್ಸ್‌ ಮುಂಚಿನ ದುರಂತ ಸಾವೊಂದಕ್ಕೆ ಕಣ್ಣೀರಿಡುವಾಗ ಗಣೇಶ್‌ ಎಂಥವರಿಗೂ ಆಪ್ತರಾಗುತ್ತಾರೆ.

ನಾಯಕಿ ಸಂಜನಾ ಗಾಂಧಿ ಕೂಡ ಪಕ್ಕದ ಮನೆ ಹುಡುಗಿಯಂತೆ ಕಾಣುತ್ತಾರೆ. ಅನಂತ್‌ನಾಗ್‌, ನೀನಾಸಂ ಅಶ್ವತ್ಥ್‌, ಸುಧಾ ಬೆಳವಾಡಿ, ಪದ್ಮಜಾ ರಾವ್‌ ಸೇರಿದಂತೆ ಎಲ್ಲ ಪಾತ್ರಗಳೂ ಮನಸನ್ನು ಗೆಲ್ಲುತ್ತವೆ. ದ್ವಿತೀಯಾರ್ಧದಲ್ಲಿ ಕೊನೆ ಕೆಲವು ನಿಮಿಷ ಕೊಂಚ ಜಾಸ್ತಿಯಾಯಿತು. ಇನ್ನಾವುದೂ ತೆಗೆದು ಹಾಕುವಂತಿಲ್ಲ. ಮನೆ ಮಂದಿಯೆಲ್ಲ ಮುಜುಗರವಿಲ್ಲದೆ ನೋಡಬಹುದಾದ ಚಿತ್ರವನ್ನು ಮಳೆ ಬೀಳುವ ಮುನ್ನ ನೋಡಿ ಬನ್ನಿ. ಚಳಿಗಾಲಕ್ಕೆ ಮಧುರ ನೆನಪು ಮರುಕಳಿಸುತ್ತದೆ. ಬದುಕು ಆಪ್ತವಾಗುತ್ತದೆ, ಮನಸು ಹಗುರಾಗುತ್ತದೆ. ಕಾರಣ ಇದು ನಿಮ್ಮ ಪ್ರೇಮಕತೆಯೂ ಆಗಿರ ಬಹುದು...ಡೋಂಟ್‌ ಮಿಸ್‌ ಇಟ್‌...!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada