»   » ಸೂಪರ್‌ ಅಳಿಯ, ಪಾಪರ್‌ ಪ್ರೇಕ್ಷಕ

ಸೂಪರ್‌ ಅಳಿಯ, ಪಾಪರ್‌ ಪ್ರೇಕ್ಷಕ

Subscribe to Filmibeat Kannada
  • ರಮೇಶ್‌ ಕುಮಾರ್‌ ನಾಯಕ್‌
ಎಲ್ಲ ಸಿನಿಮಾಗಳ ಉದ್ದೇಶ ಪ್ರೇಕ್ಷಕ ಮಹಾಪ್ರಭುವನ್ನು ಮೆಚ್ಚಿಸುವುದು ಅಲ್ಲವಾ? ನಿರ್ಮಾಪಕನಾಗಬೇಕೆಂಬ ತೆವಲಿಗೆ, ನಿರ್ದೇಶಿಸಬೇಕೆಂಬ ಚಟಕ್ಕೆ ಸಿನಿಮಾಗಳು ಹುಟ್ಟುತ್ತಾವಾ? ಇಂಥ ಪ್ರಶ್ನೆಗಳು ಎದ್ದಿದ್ದು ಸುದೀರ್ಘ ಕಾಲ ಡಬ್ಬದಲ್ಲಿದ್ದು ಇದೀಗ ಬಿಡುಗಡೆಯಾಗಿರುವ ‘ಸೂಪರ್‌ ಅಳಿಯ’ನನ್ನು ನೋಡಿದಾಗ.

ಕೈತುಂಬ ಕಾಸಿದ್ದವನು, ಅಥವಾ ಮೈತುಂಬ ಸಾಲ ಮಾಡುವ ಹುಂಬ ಧೈರ್ಯವಿದ್ದವನು ನಿರ್ಮಾಪಕನಾಗಿ ಅವತರಿಸುತ್ತಾನೆ. ಕಾಶೀನಾಥರಂಥ ಪ್ರತಿಭಾವಂತರೂ ‘ಹೊಟ್ಟೆ ಪಾಡು ಸ್ವಾಮಿ’ ಎಂದು ಸಹಿ ಎಳೆಯುತ್ತಾರೆ. ಸಿಕ್ಕಿದವರಿಗೆ ಸೀರುಂಡೆ ಎಂದುಕೊಂಡು ರಾಜೇಂದ್ರಕುಮಾರ್‌ ಆರ್ಯರಂಥವರು ಆ್ಯಕ್ಷನ್‌, ಕಟ್‌ ಎಂದು ರೀಲು ಬಿಡುತ್ತಾರೆ. ಕುಣಿಗಲ್‌ ನಾಗಭೂಷಣರಂಥ ‘ಡೈಲಾಗ್‌ ಜೆರಾಕ್ಸ್‌ ಮೆಷಿನ್‌’ ನಿಂದ ಹಳಹಳಹಳಸಲು ಸಂಭಾಷಣೆಗಳು ಉದುರುತ್ತವೆ. ಜತೆಗೆ, ಅರ್ಧಂಬರ್ಧ ಉಡುಪಿನ ಹುಡುಗಿಯರ ನಾಲ್ಕು ಡಾನ್ಸ್‌, ಎರಡು ಫೈಟ್‌ ಜೋಡಿಸಿಬಿಟ್ಟರೆ ಮುಗಿಯಿತು. ಚಿತ್ರ ಅತಿ ಶೀಘ್ರದಲ್ಲಿ ಬಿಡುಗಡೆ!

ಅವನು ನಾಯಕ. ರಿಕ್ಷಾ ಚಾಲಕ. ಹೆಸರು ಗಣೇಶ. ಮನೇಲಿ ವಯಸ್ಸಾದ ಅಮ್ಮ ಇದ್ದಾಳೆ. ವರದಕ್ಷಿಣೆ ಕಿರುಕುಳಕ್ಕೆ ತುತ್ತಾದ ತಂಗಿ ತವರು ಸೇರಿದ್ದಾಳೆ. ಗಣೇಶನಿಗೋ ವರದಕ್ಷಿಣೆ ದುಡ್ಡು ಹೊಂದಿಸಿ ತಂಗಿಯನ್ನು ಗಂಡನ ಮನೆ ಸೇರಿಸುವ ಧಾವಂತ. ಈ ನಡುವೆ ಆತನಿಗೆ ಅತ್ತಿಗೆ ಮಗಳ ಕಾಟ; ಪ್ರೇಮದಾಟ.

ಗಣೇಶನನ್ನೇ ಹೋಲುವ ಮತ್ತೊಬ್ಬನಿದ್ದಾನೆ. ವಿಜಯ್‌. ಶ್ರೀಮಂತನ ಮಗ. ‘ಸಿನಿ ನಿಯಮ’ ದಂತೆ ಶ್ರೀಮಂತನನ್ನು ಕಂಪನಿಯ ಅಧಿಕಾರಿಗಳಾದ ಶೀನ್ಯಾ ಮತ್ತು ಮಾನ್ಯಾ ಕೊಲೆ ಮಾಡುತ್ತಾರೆ. ವಿಜಯ್‌ನ ಕೊಲೆಗೂ ಯತ್ನಿಸುತ್ತಾರೆ. ವಿಜಯ್‌ ಪ್ರಾಣಾಪಾಯದಿಂದ ಪಾರಾಗಿ ಗಣೇಶನ ಮನೆ ಸೇರುತ್ತಾನೆ. ಗಣೇಶ, ವಿಜಯನ ಅರಮನೆಗೆ ಬರುತ್ತಾನೆ. ಅಲ್ಲಿ ಆತನಿಗೆ ಶೀನ್ಯಾ ಮತ್ತು ಮಾನ್ಯಾರ ಮಗಳಂದಿರ ಕಾಟ. ಅಂತಿಮವಾಗಿ ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷೆ. ಇಂಥ ಕತೆಗಳನ್ನು ನಾವು ಎಷ್ಟು ಕಂಡಿಲ್ಲ, ಎಷ್ಟು ಕೇಳಿಲ್ಲ ? ಬಿ. ರಾಮಮೂರ್ತಿ ಅವರ ಕತೆಯನ್ನು ನಿರ್ದೇಶಕ ಆರ್ಯರು ‘ದ್ರಾವಿಡ ಪ್ರಾಣಾಯಾಮ’ ಮಾಡಿ ಮುಗಿಸಿದ್ದಾರೆ.

ಪ್ರೇಕ್ಷಕರು ಆರಂಭದಿಂದ ಕೊನೆಯವರೆಗೆ ಜೋಲು ಮೋರೆ ಹಾಕಿಕೊಂಡಿರುವುದು ‘ಸೂಪರ್‌ ಅಳಿಯ’ ಎಂಬ ಕಾಮಿಡಿ ಚಿತ್ರದ ಟ್ರ್ಯಾಜಿಡಿ. ಚಿತ್ರ ಮುಗಿದು ಹೊರಬರುವಾಗ ಪ್ರೇಕ್ಷಕನೊಬ್ಬ, ‘ಇಲ್ಲೇ ಒಂದು ಅನಾಸಿನ್‌ ಸ್ಟಾಲ್‌ ಹಾಕಿದರೆ ಸಖತ್‌ ವ್ಯಾಪಾರ ಮಾಡಬಹುದು ಗುರು’ ಎಂದಿದ್ದು ಈ ಟ್ರ್ಯಾಜಿಡಿ ಸಿನಿಮಾಕ್ಕೆ ಸಂಬಂಧಿಸಿದ ಏಕೈಕ ಕಾಮಿಡಿ!

ಕಾಶೀನಾಥ್‌, ಪಂಚಮಿ, ಮಾಧುರಿ, ಸುಧೀರ್‌, ಬ್ಯಾಂಕ್‌ ಜನಾರ್ದನ್‌ ಸೇರಿದಂತೆ ಎಲ್ಲರಿಗೂ ‘ತಪ್ಪಲೆಭರ್ತಿ’ ಪಾತ್ರ. ಆದರೆ, ಚಿತ್ರವನ್ನು 1 ಗಂಟೆ 55 ನಿಮಿಷಕ್ಕೆ ಸೀಮಿತಗೊಳಿಸಿದ್ದಕ್ಕೆ ಪ್ರೇಕ್ಷಕರು ಸಂಕಲನಕಾರನಿಗೆ ಚಿರಋಣಿಯಾಗಿರಬೇಕು.

ಕಾಶೀನಾಥ್‌, ಜಗ್ಗೇಶ್‌ರಂಥವರನ್ನು ಹಾಕಿಕೊಂಡು ನಾಲ್ಕಾರು ಹುಡುಗಿಯರನ್ನು ಮಿಡಿಯಲ್ಲಿ ಕುಣಿಸಿದ ತಕ್ಷಣ ಕಾಮಿಡಿ ಚಿತ್ರ ರೆಡಿ ಎಂಬ ಭ್ರಮೆಯಲ್ಲಿದ್ದಾರೆ ಕೆಲವರು. ಇಂಥವರು ಬಾಲಿವುಡ್‌ನ ಹೊಸಚಿತ್ರ ‘ಮುನ್ನಾಭಾಯಿ ಎಂಬಿಬಿಎಸ್‌’ ನೋಡಬೇಕು. ಬೆರಳೆಣಿಕೆಯಷ್ಟು ಪಾತ್ರಗಳು, ಲಿಮಿಟೆಡ್‌ ಲೊಕೇಶನ್‌, ಲೋ ಬಜೆಟ್‌. ಆದರೆ ಚಿತ್ರದುದ್ದಕ್ಕೂ ನಗೆ ಬುಗ್ಗೆ. ಥಿಯೇಟರ್‌ ತುಂಬ ಹಹ್ಹಹ್ಹಹ್ಹಹ್ಹ, ಚಿತ್ರದಲ್ಲಿನ ಮಾತಷ್ಟೇ ಅಲ್ಲ, ಮೌನವೂ ಕಚಗುಳಿ ಇಡುತ್ತದೆ.

ಮೂರು ವರ್ಷಗಳ ಹಿಂದೆ ‘ಮಿಷನ್‌ ಕಾಶ್ಮೀರ್‌’ ನಿರ್ಮಿಸಿದ್ದ ವಿಧು ವಿನೋದ್‌ ಛೋಪ್ರಾ ಇದರ ನಿರ್ಮಾಪಕ. ಎಲ್ಲಿಯ ಮಿಷನ್‌, ಎಲ್ಲಿಯ ಕಾಮಿಡಿ? ‘ಕಾಶ್ಮೀರ್‌’ನಲ್ಲಿ ಗನ್‌ ಹಿಡಿದಿದ್ದ ಸಂಜಯ್‌ ದತ್‌ ಕೈಯಲ್ಲಿ ಸ್ಟೆತೊಸ್ಕೋಪ್‌. ಯಶಸ್ಸು, ಅಪಯಶಸ್ಸು ಆಮೇಲಿನ ಮಾತು. ಪ್ರೇಕ್ಷಕ ದೊರೆಯ ಮೇಲೆ ನಿಜವಾದ ಗೌರವ ಇದ್ದಾಗ ಮಾತ್ರ ಇಂಥ ಸೊಗಸಾದ ಚಿತ್ರ ಮೂಡಿಬರಲು ಸಾಧ್ಯ. ಅಲ್ಲವೇ?

(ಸ್ನೇಹಸೇತು : ವಿಜಯಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada