»   » ವೀರು : ಸಮಾಜದ ‘ಒಡಕಲು’ ಪ್ರತಿಬಿಂಬ

ವೀರು : ಸಮಾಜದ ‘ಒಡಕಲು’ ಪ್ರತಿಬಿಂಬ

Subscribe to Filmibeat Kannada


ಇಲ್ಲಿ ಮೌನಕ್ಕಿಂತ ಮಾತು ಹೆಚ್ಚಾಗಿದೆ. ಆ್ಯಕ್ಟಿಂಗ್‌ಗಿಂಥ ಓವರ್‌ ಆ್ಯಕ್ಟಿಂಗ್‌ ಎದ್ದು ಕಾಣುತ್ತದೆ. ಅದನ್ನಾದರೂ ಹೇಗೋ ಸಹಿಸಿಕೊಳ್ಳಬಹುದು. ಆದರೆ ಚಿತ್ರದುದ್ದಕ್ಕೂ ಕೇಳಿ ಬರುವ ಗದ್ದಲ ಮಾತ್ರ ತಲೆ ಚಿಟ್ಟು ಹಿಡಿಸುತ್ತದೆ. ಹಾಗಾಗಿಯೇ ಪೀಕ್‌ ಹವರ್‌ನಲ್ಲಿ ಮೆಜೆಸ್ಟಿಕ್‌ನಲ್ಲಿ ರೌಂಡ್‌ ಹೊಡೆದಂತಿರುತ್ತದೆ ಚಿತ್ರದ ಒಟ್ಟಾರೆ ಅನುಭವ.

  • ಚೇತನ್‌ ನಾಡಿಗೇರ್‌
ಪ್ರಿಯ ನಾರಾಯಣ್‌,

ಈ ಚಿತ್ರ ಸಮಾಜದ ಕನ್ನಡಿಯಾಗಲಿದೆ ಎಂದು ಕೆಲವು ದಿನಗಳ ಹಿಂದೆ ನೀವು ಹೇಳಿದಾಗ, ‘ವೀರು’ ಅದ್ಹೇಗೆ ಸಮಾಜದ ಕನ್ನಡಿಯಾಗುತ್ತದೆ ಎಂಬ ಕುತೂಹಲದಿಂದಲೇ ಚಿತ್ರ ನೋಡಿದೆ. ನಿಮ್ಮ ಮಾತು ನಿಜ. ಈ ಚಿತ್ರ ಸಮಾಜದ ಪ್ರತಿಬಿಂಬ. ಆದರೆ ಸ್ವಲ್ಪ ‘ಅತಿಬಿಂಬ.

ಕತೆಗೆ ಪ್ರಾಮುಖ್ಯತೆ ಇಲ್ಲದಿರುವ ಈ ದಿನಗಳಲ್ಲಿ ನೀವು ಈ ಬಾರಿಯೂ ಕತೆಗೆ ಪ್ರಾಮು ಖ್ಯತೆ ಕೊಟ್ಟಿದ್ದು ಖುಷಿ ಕೊಡುತ್ತದೆ. ಒಂದು ಕಡು ಬಡಕುಟುಂಬ. ತಂದೆ ಊರ ಧಣಿಯ ಗಣಿಯಲ್ಲಿ ಜೀತದಾಳಾಗಿ ಕೆಲಸ ಮಾಡಿದರೆ, ತಾಯಿ ಊದಿನಕಡ್ಡಿ ಹೊಸೆಯುತ್ತಾಳೆ. ಆ ದಂಪತಿಗೊಬ್ಬ ಬುದ್ಧಿವಂತ ಮಗ ವೀರು. ಬಡತನವಿದ್ದರೂ ಮಗನನ್ನು ಮಾತ್ರ ದೊಡ್ಡ ಸಾಹೇಬ ಮಾಡಬೇಕೆಂದು ಅಪ್ಪ ಕನಸು ಕಾಣುತ್ತಿರುವಾಗಲೇ, ತೀರಿಕೊಳ್ಳುತ್ತಾನೆ.

ತಂದೆ ಸತ್ತ ಮೇಲೆ ಗೌಡ ವೀರುವನ್ನು ಜೀತಕ್ಕಿಟ್ಟುಕೊಳ್ಳುತ್ತಾನೆ. ತನ್ನ ತಂದೆಯ ಗಲೀಜು ಕ್ಲೀನು ಮಾಡಲು ಬಳಸಿಕೊಳ್ಳುತ್ತಾನೆ. ಆದರೆ ವೀರುಗೆ ಓದುವ ಹಂಬಲ. ಅವನಂತೆಯೇ ಗೌಡನ ಮುಷ್ಠಿಯಲ್ಲಿ ಸಿಕ್ಕಿರುವ ಹಲವು ಜೀತದಾಳುಗಳನ್ನು ಸಂಘಟಿಸಿ ಅವನ ವಿರುದ್ಧ ದಂಗೆ ಏಳುತ್ತಾನೆ. ಕೊನೆಗೆ ವೀರು ಆ ಗೌಡನ ಆಳ್ವಿಕೆಗೆ ಅಂತ್ಯ ಹಾಡುವಲ್ಲಿಗೆ ಚಿತ್ರ ಮುಗಿಯುತ್ತದೆ.

ಇದೇ ಎಳೆಯ ಹಲವಾರು ಕತೆಗಳು ಈಗಾಗಲೇ ಅವೆಷ್ಟು ಬಂದು ಹೋಗಿವೆಯೋ? ಗೊತ್ತಿಲ್ಲ. ಆದರೆ ಅವ್ಯಾವುದನ್ನೂ ನಾರಾಯಣ್‌ ನಿರ್ದೇಶಿಸಿರಲಿಲ ್ಲ ಎಂಬುದೂ ನಿಜ. ಏಕೆಂದರೆ, ಒಂದು ಪಕ್ಕಾ ಆರ್ಟ್‌ ಸಿನಿಮಾಕ್ಕೆ ಆಗುವ ಕತೆಯನ್ನು ಒಬ್ಬ ಪಕ್ಕಾ ಕಮರ್ಷಿಯಲ್‌ ನಿರ್ದೇಶಕ ನಿರ್ದೇಶಿಸಿದರೆ ಏನಾಗುತ್ತದೆಯೋ? ಅದೇ ಇಲ್ಲಿ ಆಗಿದೆ.

ನಾರಾಯಣ್‌ಜೀ, ಇಂಥ ಸೂಕ್ಷ್ಮ ಕತೆಗೆ ಮಾತಿಗಿಂಥ ಹೆಚ್ಚಾಗಿ ಮೌನ ಮಾತಾಡುತ್ತದೆ ಎಂಬುದು ನಿಮ್ಮ ಕ್ರಿಯಾಶೀಲ ಮನಸ್ಸಿಗೆ ಗೊತ್ತಿಲ್ಲ ಎಂದೇನಲ್ಲ. ಆದರೂ ಇಲ್ಲಿ ಮೌನಕ್ಕಿಂತ ಮಾತು ಹೆಚ್ಚಾಗಿದೆ. ಆ್ಯಕ್ಟಿಂಗ್‌ಗಿಂಥ ಓವರ್‌ ಆ್ಯಕ್ಟಿಂಗ್‌ ಎದ್ದು ಕಾಣುತ್ತದೆ. ಅದನ್ನಾದರೂ ಹೇಗೋ ಸಹಿಸಿಕೊಳ್ಳಬಹುದು. ಆದರೆ ಚಿತ್ರದುದ್ದಕ್ಕೂ ಕೇಳಿ ಬರುವ ಗದ್ದಲ ಮಾತ್ರ ತಲೆ ಚಿಟ್ಟು ಹಿಡಿಸುತ್ತದೆ. ಹಾಗಾಗಿಯೇ ಪೀಕ್‌ ಹವರ್‌ನಲ್ಲಿ ಮೆಜೆಸ್ಟಿಕ್‌ನಲ್ಲಿ ರೌಂಡ್‌ ಹೊಡೆದಂತಿರುತ್ತದೆ ಚಿತ್ರದ ಒಟ್ಟಾರೆ ಅನುಭವ.

ಹೋಗಲಿ ಬಿಡಿ, ಏನೇ ಗಲಾಟೆಯಿದ್ದರೂ, ಉಮಾಶ್ರೀ ಅಭಿನಯ ಕೌಶಲ್ಯವನ್ನು ಅಷ್ಟು ಚೆನ್ನಾಗಿ ಬಳಸಿಕೊಂಡಿದ್ದಕ್ಕೆ ನಿಮಗೆ ಒಂದು ಧನ್ಯವಾದ ಸಲ್ಲಿಸಲೇ ಬೇಕು. ಅವರ ಆ್ಯಕ್ಟಿಂಗ್‌ ಖುಷಿಕೊಡುತ್ತದೆ. ಆದರೆ ಓವರ್‌ ಆ್ಯಕ್ಟಿಂಗ್‌ ಮಾತ್ರ ಸಾಕುಸಾಕೆನಿಸುತ್ತದೆ. ಇನ್ನು ನಿಮ್ಮ ಮಗ ಪಂಕಜ್‌ ಅಭಿನಯದಲ್ಲಿ ನೀವೇ ಎದ್ದು ಕಾಣುತ್ತೀರಿ. ಊರ ಗೌಡನ ಕ್ರೌರ್ಯ ಮಿಂಚುತ್ತದೆ. ಅವರ ಟೈಮಿಂಗ್‌, ಮಾತಾಡುವ-ಅಬ್ಬರಿಸುವ ಶೈಲಿ ಖುಷಿ ಕೊಡುತ್ತದೆ. ಕನ್ನಡದಲ್ಲಿ ಒಳ್ಳೆಯ ವಿಲನ್‌ಗಳಿಲ್ಲ ಎಂಬ ಕೊರತೆಯನ್ನು ಅವರು ನೀಗಿಸಬಹುದು.

ಎಂದಿನಂತೆ ಈ ಚಿತ್ರದಲ್ಲಿ ನೀವು ಬಹುಮುಖ ಪ್ರತಿಭೆ ಎಂದು ಗುರುತಿಸಿಕೊಂಡಿದ್ದೀರಿ. ನಿಮ್ಮ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೂರು ಹಾಡುಗಳಲ್ಲಿ ಎರಡು ಹಾಡು ಕೇಳಲಡ್ಡಿಯಿಲ್ಲ. ಅಜಯ್‌ ವಾರಿಯರ್‌ ಹಾಗೂ ಅಶ್ವತ್‌ ಹಾಡಿರುವ ಹಾಡುಗಳು ಚಿತ್ರದ ಪೂರಾ ಕಾಡುವುದರಿಂದ ನೀವು ಆ ವಿಭಾಗದಲ್ಲಿ ಗೆದ್ದಿದ್ದೀರಿ ಎಂದೇ ಅರ್ಥ.

ಸಂಗೀತವಲ್ಲದೆ ಪಿ.ಕೆ.ಎಚ್‌. ದಾಸ್‌ರ ಕ್ಯಾಮೆರಾ ಕೂಡ ಗಮನ ಸೆಳೆಯುತ್ತದೆ. ಅಷ್ಟೇ ಅಲ್ಲ ಕಣ್ಮನ ತಣಿಸುತ್ತದೆ ಅದರಲ್ಲೂ ಅವರ ನೆರಳು ಬೆಳಕಿನಾಟವನ್ನು ನೋಡಿಯೇ ಎಂಜಾಯ್‌ ಮಾಡಬೇಕು. ಸೌಂದರ್‌ರಾಜನ್‌ರಂಥ ಸಂಕಲನಕಾರ ಕೂಡ ಚಿತ್ರವನ್ನು ಬೋರಾಗದಂತೆ ತಡೆಯಲು ಸಾಧ್ಯವಾಗಿಲ್ಲ.

ಹೊಸ ಪ್ರಯತ್ನ ಮಾಡಿದ್ದೀರಿ. ನಿಮಗೆ ಜೈ. ಆದರೆ ಇನ್ನಷ್ಟು ಶ್ರದ್ಧೆ, ಸಂಯಮ ಜತೆಗೂಡಿಸಿ ಮಾಡಿದ್ದರೆ ನೀವು ಗೆಲ್ಲಬಹುದಿತ್ತೇನೋ? ಆ ದಿನ ಬೇಗ ಬರಲಿ.

ಇಂತಿ ತಮ್ಮ ವಿಶ್ವಾಸಿ.

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada