»   » ಒಂದು ತ್ರಿಕೋನ ಪ್ರೇಮ ಕತೆಗೆ ನಕ್ಸಲ್‌ ನಂಟು

ಒಂದು ತ್ರಿಕೋನ ಪ್ರೇಮ ಕತೆಗೆ ನಕ್ಸಲ್‌ ನಂಟು

Posted By:
Subscribe to Filmibeat Kannada


ಚಿತ್ರದ ಬಗ್ಗೆ ಖುಷಿಪಡುವುದಕ್ಕೆ ಪ್ರಮುಖ ಕಾರಣ ಇಲ್ಲಿ ಕಿರುತೆರೆಯ ಕಲಾವಿದರೇ ತುಂಬಿದ್ದಾರೆ. ಶಂಕರ್‌ ಆರ್ಯನ್‌, ನಾರಾಯಣಸ್ವಾಮಿ, ಅಚ್ಯುತ್‌ ಕುಮಾರ್‌, ರಾಜೇಶ್‌ ಹೀಗೆ ‘ಗುಪ್ತಗಾಮಿನಿ’ಯ ದಂಡೇ ಈ ಚಿತ್ರದಲ್ಲಿದೆ.

ಚಿತ್ರ : ಒಂದು ಪ್ರೀತಿಯ ಕತೆ
ನಿರ್ಮಾಣ ಮತ್ತು ನಿರ್ದೇಶನ : ರಾಜಶೇಖರ ರಾವ್‌
ಸಂಗೀತ : ಗಂಧರ್ವ
ತಾರಾಗಣ :ಶಂಕರ್‌ ಆರ್ಯನ್‌, ನಾರಾಯಣ ಸ್ವಾಮಿ, ಯಜ್ಞಾ ಶೆಟ್ಟಿ ಮತ್ತಿತರರು.

‘ನಿಂಗೆ ಸೂರ್ಯ ಏನು, ಸೂರ್ಯನ ಕಿರಣ ಕೂಡ ಸಿಗಲ್ಲ. ನೀನು ಭ್ರಮೆಯಲ್ಲಿದ್ದೀಯ ... ’
ಸಾಕ್ಷಿಯ ಅಮ್ಮ ಮಗಳಿಗೆ ಬುದ್ಧಿವಾದ ಹೇಳುತ್ತಿದ್ದರೆ ಆಕೆ ನಕ್ಕು ಸುಮ್ಮನಾಗುತ್ತಾಳೆ. ಯಾವುದೇ ಕಾರಣಕ್ಕೂ ತನ್ನ ಹಾಗೂ ಸೂರ್ಯನ ಪ್ರೀತಿಗೆ ಅಡ್ಡಿ-ಆತಂಕ ಬರುವುದಿಲ್ಲ ಎಂದು ವಿಶ್ವಾಸದಿಂದ ನುಡಿಯುತ್ತಾಳೆ.

ತನ್ನ ಮಾತುಗಳೇ ಮುಂದೊಂದು ದಿನ ಸೂರ್ಯನನ್ನು ದೂರ ಮಾಡುತ್ತದೆ ಎಂದು ತಿಳಿಯುವ ಹೊತ್ತಿಗೆ ಸೂರ್ಯ ಊರು ಬಿಟ್ಟಿರುತ್ತಾನೆ. ಅವನ ನೆನಪು ಅತಿಯಾಗಿ ಆಕೆ ಕೂಡ ಊರು ಬಿಡುತ್ತಾಳೆ. ಮೈಸೂರು ಸೇರುತ್ತಾಳೆ. ಶರತ್‌ ಎಂಬಾತನ ಆಪ್ತ ಸ್ನೇಹಿತೆಯಾಗುತ್ತಾಳೆ. ಅವನು ‘ಪ್ರೀತ್ಸೆ ಪ್ರೀತ್ಸೆ ’ಎಂದು ಎಷ್ಟೇ ಗೋಗರೆದರೂ ತಮ್ಮದು ಕೇವಲ ಸ್ನೇಹ ಎಂದು ನೆನಪಿಸುತ್ತಿರುತ್ತಾಳೆ. ಇದ್ದಕ್ಕಿದ್ದಂತೆ ಸ್ನೇಹಿತ ಹೇಳದೆಕೇಳದೇ ಮಾಯವಾಗುತ್ತಾನೆ

ಅವನನ್ನು ಹುಡುಕುತ್ತಾ ಸಾಕ್ಷಿ, ಶೃಂಗೇರಿಗೆ ಹೋಗುತ್ತಾಳೆ. ಒಂದಕ್ಕೊಂದು ಫ್ರೀ ಎನ್ನುವಂತೆ, ಶರತ್‌ ಹುಡುಕಾಟದಲ್ಲಿದ್ದಾಗ ಸೂರ್ಯ ಕೂಡ ಅವಳಿಗೆ ಸಿಗುತ್ತಾನೆ. ಈಗವನು ನಕ್ಸಲ್‌. ಒಂದು ಕಡೆ ಸ್ನೇಹ, ಪ್ರೀತಿ. ಇನ್ನೊಂದು ಕಡೆ ಹುಡುಗಾಟ, ಹೋರಾಟ... ಸಾಕ್ಷಿ ಯಾವುದಕ್ಕೆ ಸಾಕ್ಷಿಯಾಗುತ್ತಾಳೆ ಇದು ಒಂದು ಪ್ರೀತಿಯ ಕತೆಯ ಮುಂದಿನ ಅಧ್ಯಾಯ.

ನಮ್ಮಲ್ಲಿ ತ್ರಿಕೋನ ಪ್ರೇಮಕತೆಗಳಿಗೆ ಬರವಿಲ್ಲ. ಈಗಾಗಲೇ ಅಂಥ ಅಸಂಖ್ಯ ಚಿತ್ರಗಳು ಬಂದು ಹೋಗಿವೆ. ಸ್ವಲ್ಪ ವಿಭಿನ್ನವಾಗಿ ಮಾಡಿದ್ದರೆ ಈ ಚಿತ್ರವನ್ನು ಆ ಪಟ್ಟಿಯಿಂದ ಸ್ವಲ್ಪ ದೂರವಿಡಬಹುದಾಗಿತ್ತು. ಒಂದು ಪ್ರೇಮಕತೆಗೆ ಹಿನ್ನೆಲೆಯಲ್ಲಿ ನಕ್ಸಲ್‌ ವಿಚಾರ ಸೇರಿಸಿವುದು ಸ್ವಲ್ಪ ಕಷ್ಟವೇ. ಆ ಬಗ್ಗೆ ನಿರ್ದೇಶಕ ರಾಜಶೇಖರ್‌ ರಾವ್‌ ಅವರನ್ನು ಮೆಚ್ಚೋಣ. ಆದರೆ, ಅದನ್ನು ಇನ್ನೂ ತೀವ್ರವಾಗಿ ಮಾಡಬಹುದಾಗಿತ್ತು ಎಂಬ ಕಂಪ್ಲೇಂಟನ್ನು ಅವರ ಮೇಲೆ ಹಾಕೋಣ.

ಕತೆ ಚೆನ್ನಾಗಿದೆ, ಉದ್ದೇಶವೂ ಅಷ್ಟೇ. ಆದರೆ ಅದು ಫೀಲ್‌ ಆಗುವುದಿಲ್ಲ ಎಂಬ ಬೇಸರ ಕಾಡದೇ ಇರುವುದಿಲ್ಲ. ಸೂರ್ಯ ನಕ್ಸಲ್‌ ಚಳವಳಿಯತ್ತ ಆಕರ್ಷಿತನಾಗುವುದು, ಮತ್ತೆ ಪ್ರೀತಿಯತ್ತ ಮುಖ ಮಾಡುವುದು ಎಲ್ಲವೂ ಸನ್ನಿವೇಶಗಳಾಗುತ್ತವೆಯೇ ಹೊರತು, ಮನ ಮುಟ್ಟುವುದಿಲ್ಲ, ಕಲಕುವುದಿಲ್ಲ. ಹಾಗೆಯೇ ನಿರೂಪಣೆಯನ್ನು ಇನ್ನಷ್ಟು ವೇಗಗೊಳಿಸಿದ್ದರೆ ಚೆನ್ನಾಗಿರುತ್ತಿತ್ತು. ಇದು ರಾಜಶೇಖರ್‌ ರಾವ್‌ ಅವರ ಮೊದಲ ಚಿತ್ರವಾದ್ದರಿಂದ ಅವರಿಗೆ ತಿದ್ದಿಕೊಳ್ಳುವುದಕ್ಕೆ ಸಾಕಷ್ಟು ಅವಕಾಶವಿದೆ.

ಚಿತ್ರದ ಬಗ್ಗೆ ಖುಷಿಪಡುವುದಕ್ಕೆ ಪ್ರಮುಖ ಕಾರಣ ಇಲ್ಲಿ ಎಲ್ಲ ಕಿರುತೆರೆಯ ಕಲಾವಿದರೇ ತುಂಬಿದ್ದಾರೆ. ಶಂಕರ್‌ ಆರ್ಯನ್‌, ನಾರಾಯಣಸ್ವಾಮಿ, ಅಚ್ಯುತ್‌ ಕುಮಾರ್‌, ರಾಜೇಶ್‌ ಹೀಗೆ ‘ಗುಪ್ತಗಾಮಿನಿ’ಯ ದಂಡೇ ಈ ಚಿತ್ರದಲ್ಲಿದೆ. ಎಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗಿದ್ದಾರೆ.

ನಾಯಕಿ ಯಜ್ಞಾ ಶೆಟ್ಟಿಗೂ ನಟನೆ ಹೊಸತು. ಆದರೂ ಹುಡುಗಿ ಪರವಾಗಿಲ್ಲ ಎಂದೆನಿಸುವಂತಿದೆ ಆಕೆಯ ಅಭಿನಯ. ಡಬ್ಬಿಂಗ್‌ ಕೂಡ ಅವರದೇ. ಆ ಕ್ರೆಡಿಟ್ಟು ಅವರಿಗೇ ಸಲ್ಲಬೇಕೋ ನಿರ್ದೇಶಕರ ಪಾಲಾಗಬೇಕೋ ಎಂಬ ವಿಷಯ ಚರ್ಚಾಸ್ಪದವಾಗಬಹುದು.

ಚಿತ್ರ ಮೆಚ್ಚುವುದಕ್ಕೆ ಇನ್ನೊಂದು ಕಾರಣ ಗಂಧರ್ವರ ಸಂಗೀತ. ‘ಇದು ಯಾರೋ ಬರೆದ ಕವನ’ ಮುಂತಾದ ಹಾಡುಗಳು ಕೇಳುವಂತಿವೆ. ಒಂದು ಹಾಡಿನಲ್ಲಿ ಕ್ಯಾಮೆರಾಮನ್‌ ಉಮೇಶ್‌ ತಮ್ಮ ಕೈಚಳಕ ತೋರಿಸಿದ್ದು ಬಿಟ್ಟರೆ ಇಡೀ ಚಿತ್ರದುದ್ದಕ್ಕೂ ಅವರ ಜಾದೂ ಕಾಣಿಸುವುದಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada