»   » ಸ್ಯಾಂಡಲ್‌ವುಡ್‌ನ ಮೊದಲ ತಮಿಳ್ಗನ್ನಡ ಚಿತ್ರ ಎಚ್‌ಟುಒ ಉಪೇಂದ್ರರ ಎಲ್ಲ ಗಿಮಿಕ್‌ಗಳನ್ನು ಹೊಂದಿದ್ದರೂ, ಮಾಮೂಲಿ ಪ್ರೇಮಕಥೆಯ ಮಟ್ಟದಿಂದ ಮೇಲೇರುವುದೇ ಇಲ್ಲ !

ಸ್ಯಾಂಡಲ್‌ವುಡ್‌ನ ಮೊದಲ ತಮಿಳ್ಗನ್ನಡ ಚಿತ್ರ ಎಚ್‌ಟುಒ ಉಪೇಂದ್ರರ ಎಲ್ಲ ಗಿಮಿಕ್‌ಗಳನ್ನು ಹೊಂದಿದ್ದರೂ, ಮಾಮೂಲಿ ಪ್ರೇಮಕಥೆಯ ಮಟ್ಟದಿಂದ ಮೇಲೇರುವುದೇ ಇಲ್ಲ !

Subscribe to Filmibeat Kannada

ಹೊನ್ನೂರು ಹಾಗೂ ಚೆನ್ನೂರಿನ ಜನಕ್ಕೆ ಕಾಯಿಲೆ ಕಸಾಲೆಯಾದರೆ ಉಪಚರಿಸಲು ಒಬ್ಬರೇ ಡಾಕ್ಟರು. ಆಕೆ ಪರಿಸರದ ನಡುವೆ ಬೆಳೆದ ಹುಡುಗಿಯೆಂಬುದು ವಿಶೇಷ. ಹೊನ್ನೂರು ಚೆನ್ನೂರು ನಡುವೆ ನಾವೆಯಂತೆ ಓಡಾಡಿಕೊಂಡ ಈ ಹುಡುಗಿಯ ಹೆಸರು ಕಾವೇರಿ!

‘ಹೂವೇ ಹೂವೇ’ ಎಂದು ಸಂಭ್ರಮಿಸಿಕೊಂಡು ನದಿಯಂತೆಯೇ ಬಳುಕಾಡುವ ಕಾವೇರಿ (ಪ್ರಿಯಾಂಕ) ಯನ್ನು ಕಂಡರೆ ಉದಯಶಂಕರನಿಗೆ ಲವ್ವು. ಅವಳನ್ನು ಮದುವೆಯಾಗುವ ಹಂಬಲದೆದುರು ಆದರ್ಶಗಳೆಲ್ಲಾ ಸುಳ್ಳು. ಆದರೆ, ವೈರಮುತ್ತುವಿಗೂ ಕಾವೇರಿಯೆಂದರೆ ಬಿಟ್ಟಿರಲಾರದಷ್ಟು ಇಷ್ಟ . ಕಾವೇರಿ ಏಕೆ ಓಡುವೆ, ನನ್ನಲ್ಲಿ ಪ್ರೀತಿ ಇಲ್ಲವೆ ಎಂದು ಇಬ್ಬರೂ ಹುಡುಗರು ಕಾಡುತ್ತಾರೆ, ಕಾವೇರಿಗೋ ಕಕ್ಕಾಬಿಕ್ಕಿ.

ಒಂದೆಡೆ ನನ್ನನ್ನೇ ಮದುವೆಯಾಗಬೇಕು ಎಂದು ಹಿಂಸಿಸುವ ಭಯಂಕರ ಪ್ರೀತಿಯ ಉದಯಕುಮಾರ, ಇನ್ನೊಂದೆಡೆ ತನ್ನದೇ ನಿಜವಾದ ಪ್ರೀತಿ ಎನ್ನುವ ವೈರಮುತ್ತು - ಇಬ್ಬರ ನಡುವೆ ಕಾವೇರಿ ಹೊಯ್ದಾಡುತ್ತಾಳೆ. ಈ ನಡುವೆ ಕಿರಿಕ್‌ ಎನ್ನುವ (ಮೋಹನ್‌ಬಾಬು) ಖಳ ನಾಯಕನ ಪ್ರವೇಶವೂ ಆಗಿ, ಪ್ರೇಮ ಸಾಕ್ಷಾತ್ಕಾರಕ್ಕಾಗಿ ಸುಳ್ಳು ಸತ್ಯಗಳ ಪ್ರಯೋಗವೂ ಆಗುತ್ತದೆ.

ಕಾವೇರಿ ಯಾರಿಗೆ ದಕ್ಕುತ್ತಾಳೆ ಅನ್ನುವುದು ಚಿತ್ರದ ಕ್ಲೈಮಾಕ್ಸ್‌ !
- ಈ ಬಗೆಯ ಎಚ್‌ಟುಒ ಚಿತ್ರ ಸುಮಾರು ಎರಡು ವರ್ಷಗಳ ನಂತರ ತೆರೆ ಕಂಡಿರುವ ಉಪೇಂದ್ರ ನಾಯಕತ್ವದ ಕನ್ನಡ ಚಿತ್ರ. ಉಪೇಂದ್ರ ಅವರ ಎಲ್ಲ ಗಿಮಿಕ್‌ಗಳು ಈ ಚಿತ್ರದಲ್ಲೂ ಇವೆ. ಚಿತ್ರಕ್ಕೊಂದು ರಭಸವಿದೆ, ಒರಟುತನವಿದೆ, ಉಪ್ಪಿ ಅಭಿಮಾನಿಗಳಿಗೆ ಖುಷಿ ಕೊಡುವ ಮ್ಯಾನರಿಸಂಗಳಿವೆ. ಲೋಕನಾಥ್‌ ಮತ್ತು ರಾಜಾರಾಮ್‌ ನಿರ್ದೇಶಕರೆಂದು ಟೈಟಲ್‌ ಕಾರ್ಡ್‌ನಲ್ಲಿದ್ದರೂ, ಚಿತ್ರದ ಪ್ರತಿ ಫ್ರೇಂನಲ್ಲೂ ಉಪೇಂದ್ರ ಕೈವಾಡವಿದೆ.

ಎಚ್‌ಟುಒ ಚಿತ್ರ ಸರಳ ಪ್ರೇಮಕಥೆಯ ಚಿತ್ರವಲ್ಲ . ಕನ್ನಡ ಹಾಗೂ ತಮಿಳು ನಡುವಿನ ಮುರಿದ ಮನಸ್ಸುಗಳ ಕಥೆಯನ್ನು ಪ್ರೇಮಕಥೆಗೆ ತಳುಕು ಹಾಕಲು ಉಪೇಂದ್ರ ಪ್ರಯತ್ನಿಸಿದ್ದಾರೆ. ಹೊನ್ನೂರು ಕರ್ನಾಟಕವಾಗಿ, ಉದಯಶಂಕರ ಕನ್ನಡಿಗರ ಪ್ರತಿನಿಧಿಯಾಗಿ ಕಾಣಿಸಿದರೆ- ಚೆನ್ನೂರು ತಮಿಳುನಾಡಾಗಿ, ವೈರಮುತ್ತು ತಮಿಳರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಇಬ್ಬರ ನಡುವೆ ಕಾವೇರಿಯಿದ್ದಾಳೆ. ಕಾವೇರಿಯನ್ನು ಪಡೆಯಲು ರಕ್ತವೂ ಹರಿಯುತ್ತದೆ.

ಕಾವೇರಿ ವಿವಾದವನ್ನು ಅರ್ಥಪೂರ್ಣವಾಗಿ ದುಡಿಸಿಕೊಳ್ಳಲು ಉಪೇಂದ್ರ ಅವರಿಗೆ ಸಾಧ್ಯವಾಗಿಲ್ಲ . ಸಮಸ್ಯೆಯ ಮೇಲ್ಮುಖಗಳನ್ನು ತೆಳುವಾಗಿ ಸ್ಪರ್ಶಿಸುವ ಕಾರಣ, ಎಚ್‌ಟುಒ ಒಂದು ಸವಕಲು ಪ್ರೇಮಕಥೆಯ ಇನ್ನೊಂದು ಚಿತ್ರವಾಗಿ ಮುಕ್ತಾಯಗೊಳ್ಳುತ್ತದೆ. ಉಪೇಂದ್ರ ಅವರ ವೈಶಿಷ್ಟ್ಯವಾದ ಗೊಂದಲದ ಮುಕ್ತಾಯವೇ ಇಲ್ಲೂ ಮುಂದುವರಿಯುತ್ತದೆ. ಇದು ಉಪೇಂದ್ರ ಅವರ ಅಭಿಮಾನಿಗಳಿಗೆ ಇಷ್ಟವಾಗಬಹುದು.

ಉಪೇಂದ್ರ ಅವರದು ಯಥಾ ಪ್ರಕಾರದ ಅಬ್ಬರದ ಅಭಿನಯ. ಗ್ಲೋಬ್‌ ಮೇಲೆ ಕಪ್ಪೆಯಂತೆ ಕುಪ್ಪಳಿಸುತ್ತಾರೆ. ನಾಯಕಿಯನ್ನು ಗೋಳು ಹುಯ್ದುಕೊಳ್ಳುತ್ತಾರೆ. ಪ್ರಭುದೇವ್‌ ತಮಿಳಲ್ಲೇ ಮಾತನಾಡುತ್ತಾರೆ. ಅವರು ನೃತ್ಯಪಟುವಾದ್ದರಿಂದ ನಟನೆಯ ಬಗ್ಗೆ ಆಕ್ಷೇಪ ಎತ್ತುವಂತಿಲ್ಲ . ಉಳಿದಂತೆ ನಾಯಕಿ ಪ್ರಿಯಾಂಕಾ ದಣಿದ ಹುಡುಗಿ. ಆ ಕಾರಣದಿಂದಲೇ ಸದಾ ಅರೆಬೆತ್ತಲೆಯಾಗಿದ್ದರೂ ಪ್ರಿಯಾಂಕ ಉತ್ಸಾಹ ಮೂಡಿಸುವುದಿಲ್ಲ .

ತಂತ್ರಜ್ಞರ ಪೈಕಿ ಶಶಿಕುಮಾರ್‌ (ಸಂಕಲನ) ಹಾಗೂ ರಾಮ್‌ಶೆಟ್ಟಿ (ಸಾಹಸ) ಗಮನ ಸೆಳೆಯುತ್ತಾರೆ. ಸಾಧುಕೋಕಿಲ ಸಂಗೀತ ಹೇಳಿಕೊಳ್ಳುವಂತಿಲ್ಲ . ಪ್ರತಿ ಫ್ರೇಂನ್ನೂ ಪ್ರೀತಿಯಿಂದ ಕಟ್ಟಿಕೊಡುವ ವೇಣು ಅವರ ಛಾಯಾಗ್ರಾಹಣಕ್ಕೆ ಫುಲ್‌ ಮಾರ್ಕ್ಸ್‌. ರಾಜಸ್ತಾನದ ಥಾರ್‌ ಮರುಭೂಮಿ ಕೂಡ ವೇಣು ಅವರ ಕೆಮರಾದಲ್ಲಿ ಮೋಹಕವಾಗಿ ಕಾಣುತ್ತದೆ.

ಇಷ್ಟಿದ್ದೂ- ಎಚ್‌ಟುಒ ನಿರಾಶೆ ಉಂಟು ಮಾಡುತ್ತದೆ. ಅದಕ್ಕೆ ಕಾರಣ- ಚಿತ್ರದಲ್ಲಿ ಬಳಕೆಯಾಗಿರುವ ಮಿತಿ ಮೀರಿದ ತಮಿಳು ಬಳಕೆ ಹಾಗೂ ಉಪೇಂದ್ರ ಅವರ ಕಾಳಜಿಗಳ ಬಗ್ಗೆ ಮೂಡುವ ಅನುಮಾನ!

ಜಲ ವಿವಾದ
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada