»   » ಶುಭ್ರಆಕಾಶ, ಆಗಾಗ ಗುಡುಗು-ಸಿಡಿಲು

ಶುಭ್ರಆಕಾಶ, ಆಗಾಗ ಗುಡುಗು-ಸಿಡಿಲು

Subscribe to Filmibeat Kannada
  • ಚೇತನ್‌ ನಾಡಿಗೇರ್‌
ಅವರು ಆಕಾಶ್‌(ಪುನೀತ್‌ ರಾಜ್‌ ಕುಮಾರ್‌). ಹೆಸರಿನಷ್ಟೇ ಶುಭ್ರ. ಸದಾ ಆತ್ಮವಿಶ್ವಾಸದಿಂದ ಬೀಗುತ್ತಿರುವವ. ‘ಕಷ್ಟನೋ ಸುಖಾನೋ ನಗ್ತಾ ಇರಬೇಕು. ಅವನೇ ನಿಜವಾದ ಗಂಡ್ಸು’ ಎಂದು ಬಲವಾಗಿ ನಂಬಿದವ ಮತ್ತು ಅದೇ ರೀತಿ ಜೀವನ ನಡೆಸುವವ. ಅವನಿಗೆ ಮಾತೇ ಬಂಡವಾಳ. ಖರ್ಚಿಲ್ದೇ ಕಲಿತಿರೋ ಆ ವಿದ್ಯೆಯಿಂದಲೇ ಎಲ್ಲರಿಗೂ ಹತ್ತಿರವಾಗಿರುವವ. ಬೇರೆಯವರಿಗೆ ಒಳ್ಳೆಯದನ್ನ ಬಯಸೋದೆ ತನ್ನ ಸಂತೋಷದ ಗುಟ್ಟು ಎಂದು ಬೇರೆಯವರಿಗೆ ಆದಷ್ಟು ಒಳ್ಳೆಯದನ್ನು ಮಾಡಿ ಅದರಲ್ಲೇ ತನ್ನ ಸಂತೋಷವನ್ನು ಕಂಡು ಕೊಂಡವ.

ಇಂತಿಪ್ಪ ಸರ್ವ ಗುಣ ಸಂಪನ್ನ ನಾಯಕನಿಗೊಬ್ಬ ಮದುವೆ ವಯಸ್ಸಿನ ತಂಗಿ(ಆಶಿತಾ)ಯಿರುತ್ತಾಳೆ. ಅವಳ ಮದುವೆಗಾಗಿ ಹಣ ಕೂಡಿಡಲು ಅಣ್ಣ ವೀಡಿಯೋ ಗ್ರಾಫರ್‌, ಡ್ರೆೃವಿಂಗ್‌ ಟೀಚರ್‌, ಸ್ವಿಮ್ಮಿಂಗ್‌ ಕೋಚ್‌... ಹೀಗೆ ನಾನಾ ರೀತಿಯ ವೃತ್ತಿಗಳನ್ನು ಬದಲಿಸುತ್ತಾನೆ. ಈ ಮಧ್ಯೆ ಬಿಡುವಿನಲ್ಲಿ ಅವನಿಗೆ ಶ್ರೀಮಂತ ಉದ್ಯಮಿಗಳಿಬ್ಬರ(ಅವಿನಾಶ್‌ ಹಾಗೂ ಕಿಶೋರ್‌) ತಂಗಿ ನಂದಿನಿ(ರಮ್ಯ)ಯಾಂದಿಗೆ ಗೆಳೆತನವಾಗುತ್ತದೆ. ನಾಯಕಿಯ ಅಣ್ಣಂದಿರು ಆಕಾಶ್‌ ಮತ್ತು ನಂದಿನಿಯ ಗೆಳೆತನವನ್ನು ಪ್ರೀತಿ ಎಂದು ಅಪಾರ್ಥ ಮಾಡಿಕೊಳ್ಳುವಷ್ಟು ಅವರ ಗೆಳೆತನ ಗಾಢವಾಗಿ ಬೆಳೆಯುತ್ತದೆ. ನಂತರ ನಾಯಕಿಯ ಅಣ್ಣಂದಿರಿಂದ ನಾಯಕ ಮತ್ತು ಅವನ ತಂಗಿಗೆ ಕಿರುಕುಳ ಪ್ರಾರಂಭ. ಶುಭ್ರ ಆಕಾಶದಂತ್ತಿದ್ದ ನಾಯಕ ಕೊನೆಗೆ‘ಗುಡುಗು ಸಿಡಿಲು’ಗಳಿಗೆ ವಾರಸುದಾರನಾಗುತ್ತಾನೆ... ಇದು ಚಿತ್ರದ ಒಟ್ಟಾರೆ ಸಾರಾಂಶ. ಮುಂದಿನ ಅಧ್ಯಾಯ ತೆರೆಯ ಮೇಲೆ ನೋಡಿ ಆನಂದಿಸಿದರೇ ಚೆನ್ನ!

ಚಿತ್ರದ ಮೊದಲಾರ್ಧ ಕೊಂಚ ನಿಧಾನವಾಗಿದ್ದರೂ ದ್ವಿತೀಯಾರ್ಧದಲ್ಲಿ ವೇಗ ಪಡೆದುಕೊಳ್ಳುತ್ತದೆ. ಚಿತ್ರದ ನಿಜವಾದ ಹೈಲೈಟು ನಾಯಕ ಪುನೀತ್‌ ರಾಜ್‌ಕುಮಾರ್‌. ಪುನೀತ್‌ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅವರು ತಮ್ಮ ಲವಲವಿಕೆಯ ಅಭಿನಯದಿಂದ ಇಷ್ಟವಾಗುತ್ತಾರೆ. ಅದರಲ್ಲೂ ಹೊಡೆದಾಟದ ಹಾಗೂ ನೃತ್ಯದ ಸನ್ನಿವೇಶಗಳಲ್ಲೂ ಅವರಿಗೆ ಫುಲ್‌ ಮಾರ್ಕ್ಸ್‌. ನಾಯಕಿ ರಮ್ಯ ಕೂಡಾ ಲವಲವಿಕೆಯಿಂದ ನಟಿಸಿದ್ದಾರೆ. ಇನ್ನು ಅವಿನಾಶ್‌ ಹಾಗೂ ಕಿಶೋರ್‌ ತಮ್ಮ ಎಂದಿನ ಶೈಲಿಯಲ್ಲೇ ಗಮನ ಸೆಳೆಯುತ್ತಾರೆ. ಕೆಲವೇ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಖಳನಾಯಕ ಅಶೀಶ್‌ ವಿದ್ಯಾರ್ಥಿ ತಮ್ಮ ಛಾಪನ್ನೊತ್ತಿದ್ದಾರೆ.

ಚಿತ್ರದ ಮತ್ತೊಂದು ಪ್ಲಸ್‌ ಪಾಯಿಂಟೆಂದರೆ ಎಂ.ಎಸ್‌. ರಮೇಶ್‌ ಅವರ ಸಂಭಾಷಣೆ, ಚಿತ್ರದಲ್ಲಿ ನಾಯಕಿ, ನಾಯಕನಿಗೆ ‘ನೀನೇನು ನನಗೆ ಹೊಗಳ್ತಾ ಇದ್ಯಾ, ಇಲ್ಲ ಬೈತಾ ಇದ್ಯಾ’ಎಂದು ಕೇಳುವ ಪ್ರಶ್ನೆಯೇ ಪ್ರೇಕ್ಷಕರಿಗೂ ಬಂದರೆ ಅಚ್ಚರಿಯಿಲ್ಲ. ಹಾಗಿದೆ ಎಂ.ಎಸ್‌. ರಮೇಶ್‌ ಮಾತುಗಳು. ಇತ್ತ ಕಡೆ ಬೈದಂಗೂ ಇರದೆ, ಸ್ವಲ್ಪ ಸ್ವಲ್ಪ ಕಾಲೆಳೆಯುತ್ತಾ, ಮತ್ತೂ ಸ್ವಲ್ಪ ಗೇಲಿ ಮಾಡುತ್ತಾ , ಬೆಣ್ಣೆಯಾಳಗೆ ಕೂದಲು ತೆಗೆದಂಗಿರುವ ನಾಯಕನಾಡುವ ಮಾತುಗಳು ಜನರಿಗೆ ಇಷ್ಟವಾಗುತ್ತದೆ.

ಆರ್‌.ಪಿ. ಪಟ್ನಾಯಕ್‌ಅವರ ಸಂಗೀತದಲ್ಲಿ ಎರಡು ಹಾಡುಗಳು ಬಹಳ ಕಾಡುತ್ತವೆ. ಪ್ರಸಾದ್‌ ಬಾಬು ಛಾಯಾಗ್ರಹಣದಲ್ಲಿ ಸ್ವದೇಶ ಮಾಮೂಲು, ಆದರೆ ವಿದೇಶ ಕಂಗೊಳಿಸುತ್ತಿದೆ! ರಾಮಶೆಟ್ಟಿ ಸಾಹಸ ನಿರ್ದೇಶನ ಮೈ ಜುಂ ಎನಿಸುತ್ತದೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada