For Quick Alerts
  ALLOW NOTIFICATIONS  
  For Daily Alerts

  ಕೃಷ್ಣನಿಗೆ ಮದುವೆ ಹುಚ್ಚು : ರಾಮನಿಗೆ ಪ್ರೀತಿಯೇ ಹೆಚ್ಚು

  By Staff
  |
  • ವಿನಾಯಕ ತದ್ದಲಸೆ
  ಆತ ರಾಮ ಈತ ಕೃಷ್ಣ. ರಾಮ ಏಕಪತ್ನಿ ವ್ರತಸ್ಥ ಅಲ್ಲ. ಕೃಷ್ಣ ಕಂಡ ಕಂಡ ಗೋಪಿಕಾ ಸ್ತ್ರೀಯರ ಹಿಂದೆ ಸುತ್ತುವವನೂ ಅಲ್ಲ. ಅಪ್ಪ ಶಂಕರಪ್ಪ ಊರಿನಲ್ಲಿ ಥಿಯೇಟರ್‌ ಕಟ್ಟಿಸಿದರೆ, ಈ ಮಕ್ಕಳಿಬ್ಬರೂ ಟಿಕೆಟ್‌ ಕೌಂಟರ್‌ನಲ್ಲಿ . ಲೇಡೀಸ್‌ ಕೌಂಟರ್‌ಗೇ ಕುಳಿತುಕೊಳ್ಳಲು ಇಬ್ಬರಲ್ಲೂ ಜಗಳ...

  ರವಿಚಂದ್ರನ್‌ ರಾಮನಾಗಿ, ಜಗ್ಗೇಶ್‌ ಕೃಷ್ಣನಾಗಿ-ಅಣ್ಣ ತಮ್ಮಂದಿರಾಗಿ ಅಭಿನಯಿಸಿರುವ ಈ ಚಿತ್ರ ಹಾಸ್ಯದೊಂದಿಗೇ ತೆರೆದುಕೊಳ್ಳುತ್ತದೆ. ಮದುವೆ ಒಲ್ಲೆ ಎನ್ನುತ್ತ ಅಪ್ಪ ನೋಡಿದ ಹುಡುಗಿಯನ್ನು ನೋಡಲು ಪರವೂರಿಗೆ ಹೋದ ಅಣ್ಣ ರಾಮ, ಎಲ್ಲೋ ಎಡವಟ್ಟಾಗಿ ಬೇರೆ ಹುಡುಗಿ ಸೀತಾ(ಕಲ್ಯಾಣಿ) ಮನೆ ತಲುಪುತ್ತಾನೆ. ನಂತರ ಗೊತ್ತಾಗುತ್ತದೆ, ತಾವು ಕಾಯುತ್ತಿದ್ದ ಹುಡುಗ ಈತನಲ್ಲ , ಆತ ಇನ್ನೂ ಬರಲಿಲ್ಲ ಎಂದು. ಅಷ್ಟೊತ್ತಿಗಾಗಲೇ ರಾಮ-ಸೀತಾ ಹೃದಯ ಒಂದಾಗಿರುತ್ತದೆ.

  ಶಂಕರಪ್ಪ (ದೊಡ್ಡಣ್ಣ) ಕೊಟ್ಟ ಮಾತಿನಂತೆ ತಾನು ನೋಡಿ ಬಂದ ಹುಡುಗಿಯನ್ನೇ ನೋಡಿ ಬರುವಂತೆ ಮತ್ತೊಮ್ಮೆ ಕಳಿಸುತ್ತಾನೆ. ಆಕೆ ಲಕ್ಷ್ಮಿ(ಲೈಲಾ). ಆದರೆ ಆಕೆಯ ಮನೆಗೆ ಹೋದರೂ ಮುಖ ನೋಡುವುದಿಲ್ಲ. ಆಕೆಯ ತಂದೆಯಾದ ಮೇಷ್ಟ್ರೊಡನೆ(ಶ್ರೀನಿವಾಸ ಮೂರ್ತಿ) ತಾನು ಸೀತೆಯನ್ನು ಪ್ರೀತಿಸುತ್ತಿರುವ ವಿಷಯ ತಿಳಿಸಿ ಮದುವೆ ನಿರಾಕರಿಸುತ್ತಾನೆ. ಸೂಕ್ಷ್ಮ ಮನಸ್ಸಿನ ಲಕ್ಷ್ಮಿ ಬಾವಿಗೆ ಹಾರುತ್ತಾಳೆ. ತಲೆಗೆ ಪೆಟ್ಟು ಬಿದ್ದು ಮೂಕಿಯಾಗುತ್ತಾಳೆ. ಇದರಿಂದ ನೊಂದ ಶಂಕರಪ್ಪ , ತನ್ನ ಮಗನಿಂದಲೇ ಆಕೆಗೆ ಈ ಗತಿ ಬಂತು, ಮದುವೆಯಾಗುವುದೇ ಇದಕ್ಕೆ ಪ್ರಾಯಶ್ಚಿತ್ತ ಎಂದು ತೀರ್ಪಿಡುತ್ತಾನೆ. ಅತ್ತ ಸೀತೆಯ ತಂದೆಯೂ ವಿದ್ಯಾವಂತ ವರನನ್ನು ನೋಡುತ್ತಾನೆ. ಎರಡೂ ಮದುವೆ ದಿನವೂ ಬರುತ್ತದೆ. ಮದುವೆಯಾಯಿತೆ? ಪ್ರೇಮಿಗಳು ಒಂದಾಗಲಿಲ್ಲವೆ? ಕೃಷ್ಣನ ಮದುವೆ ಕತೆ ಏನು? ಇದನ್ನೆಲ್ಲಾ ಇಲ್ಲೇ ಹೇಳಿದರೆ ಸಿನಿಮಾ ನೋಡೋ ಮಜಾ ಹೋಗಿಬಿಡುತ್ತದೆ !

  ಹೌದು. ಈ ಚಿತ್ರದ ಮಜಕೂರು ಇರುವುದೇ ಸಹಜವಾಗಿ ಹರಿದು ಬರುವ ಜಗ್ಗೇಶ್‌ ಹಾಸ್ಯದಲ್ಲಿ . ಮತೊಮ್ಮೆ ಹಳೆಯ ಹಿಟ್‌ಗಳನ್ನು ನೆನಪಿಸುವಂತೆ ಜಗ್ಗೇಶ್‌ ಹಾಸ್ಯರಸ ಹರಿದಿದೆ. ಜತೆಗೆ ರವಿಚಂದ್ರನ್‌ ಅಭಿನಯ ಕೂಡ ಸಹಜವಾಗಿದೆ. ನಾಯಕಿ ಕಲ್ಯಾಣಿ(‘ಸಂಭ್ರಮ’ದ ಕಾವೇರಿ) ಪರವಾಗಿಲ್ಲ , ಮತ್ತೊಬ್ಬ ನಾಯಕಿ ಲೈಲಾ ಲವ್‌ಲವಿಕೆ. ದೊಡ್ಡಣ್ಣರದು ಹದವರಿತ ಅಭಿನಯ. ನಿರ್ದೇಶಕ ಓಂ ಸಾಯಿಪ್ರಕಾಶ್‌ ಅಭಿನಯಿಸಿದ್ದೊಂದು ವಿಶೇಷ.

  ಹಳ್ಳಿ ಹಿನ್ನೆಲೆಯ ಈ ಚಿತ್ರವನ್ನು ಇನ್ನಷ್ಟು ಗ್ರಾಮ್ಯವಾಗಿ ಮಾಡಬಹುದಿತ್ತು. ಅಂಥ ಅವಕಾಶವನ್ನು ನಿರ್ದೇಶಕರು ಬೇಕಂತಲೇ ಕೈ ಚೆಲ್ಲಿ, ಪಟ್ಟಣ-ಹಳ್ಳಿ ಮಿಕ್ಸ್‌ ಮಾಡಿಬಿಟ್ಟಿದ್ದಾರೆ. ಹೀಗಾಗಿ ನಾಯಕರಿಬ್ಬರೂ ಹಳ್ಳಿಯವರಾದರೂ ಸದಾಕಾಲ ಪ್ಯಾಂಟ್‌-ಷೂ ಹಾಕಿಕೊಂಡೆ ಮನೆಯಾಳಗೆಲ್ಲ ಓಡಾಡುತ್ತಿರುತ್ತಾರೆ; ಅವರ ವರ್ತನೆಯೂ ಹಾಗೆಯೇ. ಮಾರಾಮಾರಿಯೂ ನಡುವೆ ಉಂಟು. ನಾಯಕಿಯರು ಹಳ್ಳಿಯವರಾಗೇ ಉಳಿದಿದ್ದಾರೆ. ಮೂಲ ತಮಿಳು ಚಿತ್ರದಲ್ಲಿ ಎಲ್ಲ ಸರಿಯಾಗೇ ಇತ್ತಂತೆ. ರಿಮೇಕ್‌ನಲ್ಲಿ ತಿದ್ದುವ ಭರದಲ್ಲಿ ಆದ ತಪ್ಪಿದು. ಹಾಗೆಯೇ ಸಾಧು ಕೋಕಿಲ ಸಂಗಡಿಗರ ಹಾಸ್ಯ ಕಚಗುಳಿ ಇಟ್ಟರೂ, ನೀರ ಮೇಲಿನ ಎಣ್ಣೆ ಹನಿಯಂತೆ ಬೇರೆಯಾಗೇ ಉಳಿಯುತ್ತದೆ.

  ಸಂಕಲನ ಎಲ್ಲೂ ಗೊಂದಲ ಹುಟ್ಟಿಸುವುದಿಲ್ಲ. ಛಾಯಾಗ್ರಹಣ ಹದಿನೈದು ವರ್ಷಗಳ ಹಿಂದಿನ ಚಿತ್ರ ನೆನಪಿಸುತ್ತದೆ. ಹಿನ್ನೆಲೆ ಸಂಗೀತ ಸಾಧಾರಣ, ಹಾಡುಗಳೆರಡೂ ಗುನುಗುವಂತಿವೆ; ಇನ್ನೆರಡು ಹಾಡು ಅನವಶ್ಯಕ. ಒಮ್ಮೆ ನೋಡಿ ನಕ್ಕುನಲಿಯಲು ಕೊಟ್ಟ ದುಡ್ಡಿಗೆ ಮೋಸವಿಲ್ಲ.

  (ಸ್ನೇಹಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X