twitter
    For Quick Alerts
    ALLOW NOTIFICATIONS  
    For Daily Alerts

    ಸಾಫ್ಟ್ ಕಥೆವುಳ್ಳ ಈ ಸಂಭಾಷಣೆ ಚಿತ್ರ ವಿಮರ್ಶೆ

    By Super
    |

    haripriya
    ಎನ್ನಾರೈ, ಸಾಫ್ಟ್‌ವೇರ್ ಎಂಜಿನಿಯರ್, ಹೈ ಕ್ಲಾಸ್ ಹುಡುಗ/ ಹುಡುಗಿಯರ ಕುರಿತ ಸಿನಿಮಾ ಸಿಕ್ಕಾಪಟ್ಟೆ ಬಂದಿವೆ. ಅವು ಹಾಗೇ ಸುಮ್ಮನೆ' ಬಂದು ಹಾಗೇ ಹೋಗಿವೆ. ಇನ್ನು ಕೆಲವಂತೂ ಬಂದ ಹಾದಿಯಲ್ಲೇ ಹಿಂದಿರುಗಿವೆ.ಅದೇ ಫಾರ್ಮುಲಾ ಹಿಡಿದು ಬಂದಿರುವ ಚಿತ್ರ ಈ ಸಂಭಾಷಣೆ..

    * ವಿನಾಯಕರಾಮ್ ಕಲಗಾರು

    ಅವನಿಗೆ ಅವಳನ್ನು ಕಂಡರೆ ಇಷ್ಟ. ಇವಳಗೂ ಅದೇ. ಆಫೀಸಿನಲ್ಲಿ ಆಕೆ, ಆಕೆ ಪಕ್ಕದಲ್ಲಿ ಈತ. ಇಬ್ಬರೂ ಕಣ್ಣು ಕಣ್ಣು ಕಲೆತಾಗ... ಅದಕ್ಕೂ ಮುನ್ನ ಸತಾಯಿಸುತ್ತಾಳೆ. ಈತ ಸಾಯುವ ಸೂಚನೆ ಕೊಡುತ್ತಾನೆ. ನಿರ್ದೇಶಕರು ಅದಾಗಲೇ ಒಬ್ಬ ವಿಲನ್‌ನನ್ನು ಸೃಷ್ಟಿಸಿರುತ್ತಾನೆ. ಇನ್ನೇನು ಇಬ್ಬರೂ ಸೇರಿ 'ಈ ಸಂಭಾಷಣೇ... ನಮ್ಮ ಈ ಪ್ರೇಮ ಸಂಭಾಷಣೇ...' ಎಂದು ಕನಸಿನ ಲೋಕದ ಕದ ತಟ್ಟಬೇಕು; ತಗಳಪ್ಪಾ... ವಿಲನ್ ಕರಡಿಯಾಗುತ್ತಾನೆ. ಶಿವಪೂಜೆಗೆ ಅಡ್ಡಗಾಲಾಗುತ್ತಾನೆ...ಅಷ್ಟು ಹೊತ್ತಿಗೆ ವಿರಾಮ...;

    ಇದು ಈ ಸಂಭಾಷಣೆ ಚಿತ್ರದ ಗುಣ ವಿಶೇಷ. ಅದನ್ನು ವಿಭಿನ್ನವಾಗಿ ನಿರೂಪಿಸಲು ನಿರ್ದೇಶಕ ರಾಜಶೇಖರ್ ಯತ್ನಿಸಿದ್ದಾರೆ. ಅಲ್ಲಲ್ಲಿ ಅರಳು ಹುರಿದಂಥ ಸಂಭಾಷಣೆ.
    ಮತ್ತೆ ಮತ್ತೆ ಮೆಲುಕು ಹಾಕುವಂಥ ದೃಶ್ಯ ಜೋಡಣೆ, ಹಚ್ಚ ಹಸುರಿನ ಎಲೆಯಲ್ಲಿ ಹನಿ ಹನಿ ಜಿನುಗುವಂತಿರುವ ಹರಿಪ್ರಿಯಾ ನಟನೆ, ಈಗಷ್ಟೇ ಕಡೆದ ಮುತ್ತಿನಂತಿರುವ ನಾಯಕ ಸಂದೇಶ್, ಅಲ್ಲಲ್ಲಿ ಕಾಡುವ ಮನೋಹರ್ ಹಾಡುಗಳು. ಚಳಿಯಲ್ಲೂ ಬಿಸಿ ಮುಟ್ಟಿಸುವ ಚಂದ್ರು ಛಾಯಾಗ್ರಹಣ. ಮಧ್ಯಮಧ್ಯ ಮತ್ತೊಮ್ಮೆ, ಇನ್ನೊಮ್ಮೆ ನಗಿಸುವ ಶರಣ್ ಕಾಮಿಡಿ... ಇವೆಲ್ಲವನ್ನೂ ಹೊರತಾಗಿರುವ ಕ್ಲೈಮ್ಯಾಕ್ಸ್...

    ಶರಣ್ ಇಲ್ಲಿ ಒಂಥರಾ ನಾಯಕ ಇದ್ದಹಾಗೆ. ನಿರೀಕ್ಷೆಗೂ ಮೀರಿ ನಗಿಸುವ ಜವಾಬ್ದಾರಿ ಹೊತ್ತಿದ್ದಾರೆ. ಅಲ್ಲಿ ನೈಜತೆಗಿಂತ ಹೆಚ್ಚಿನ ನಟನೆಯಿದೆ. ಇದ್ದಕ್ಕಿದ್ದಂತೆ ಏನೋ ಹೇಳಿ, ಗೊಳ್ಳ್ಳ್... ಎಂದು ಸದ್ದು ತರಿಸುತ್ತಾರೆ. ಉದಯಟಿವಿ ಕುರಿಗಳು...ಸುನಿಲ್ ಕಿರುಚುವ ಮೂಲಕ ನಗೆಪಾಟಲಿಗೆ ಗುರಿಯಾಗಿ, ಗದರಿಸುತ್ತಾರೆ!

    ಹಾಗಂತ ಸಂದೇಶ್ ನಟನೆ ನಗಣ್ಯ ಎಂದಲ್ಲ. ತಮ್ಮ ಕೈಲಾದಷ್ಟು ನಟಿಸಲು ಯತ್ನಿಸಿದ್ದಾರೆ. ಮುದ್ದಾದ ಮುಖ ಇರುವುದರಿಂದ ಅಲ್ಲಿ ಹೆಚ್ಚು ತಪ್ಪುಗಳು ಎದ್ದು ಕಾಣುವುದಿಲ್ಲ. ವಿ.ಮನೋಹರ್ ಸಂಗೀತದಲ್ಲಿ ತಂಗಾಳಿ ಅರಮನೇಲಿ..., ಒಂದು ಬೆಚ್ಚನೆಯ ನೆನಪೇ ಘಮಾಘಮ... ಹಾಡುಗಳು ಹಸಿರೆಲೆಯಂತಿವೆ. ಅದನ್ನು ಚಿತ್ರೀಕರಿಸುವಲ್ಲಿ ಛಾಯಾಗ್ರಾಹಕರು ಬೆವರಿನ ಜತೆ ಶ್ರಮ ಹರಿಸಿದ್ದಾರೆ. ರೀ ರೆಕಾರ್ಡಿಂಗ್ ನಲ್ಲಿ ಇನ್ನಷ್ಟು ಸಾಧ್ಯತೆ ಬಳಸಿಕೊಳ್ಳಬಹುದಿತ್ತು. ರಾಮಕೃಷ್ಣ ಮತ್ತೊಮ್ಮೆ ಉತ್ತಮ ಪಾತ್ರ ನಿರ್ವಹಿಸಿದ್ದಾರೆ, ಅಥವಾ ಅವರು ನಿರ್ವಹಿಸಿರುವುದರಿಂದ ಅದು ಉತ್ತಮವಾಗಿದೆ. ಖಳ ಪಾತ್ರದಲ್ಲಿ ಬಿ.ಗಣಪತಿ ಬೀ ಸೀರಿಯಸ್. ಹಳೆ ತಲೆ ಲಕ್ಷ್ಮೀದೇವಮ್ಮ ಅಜ್ಜಿಯ ಪಾತ್ರಕ್ಕೆ ಹೊಂದಿಕೊಂಡು, ಹಳೇ ವರ್ಷನ್ ಶುರುಮಾಡುತ್ತಾರೆ. ಬೇಬಿ ಶ್ರೇಯಾ ಪಟಪಟಪಟ ಅಂತ ಮಾತನಾಡಿ, ಮಲ್ಲಿಗೆ ಮೊಗ್ಗಿನಂತೆ ಇಷ್ಟವಾಗುತ್ತಾಳೆ.

    ಸುಮಲತಾ ಹಿಂದಿನ ಗ್ಲಾಮರ್ ಉಳಿಸಿಕೊಂಡಿದ್ದರೂ ಇಲ್ಲಿ ಹೆಚ್ಚು ಬಣ್ಣ ಹಚ್ಚಿಲ್ಲ. ನಟನೆಯಲ್ಲಿ ಹಿಂದೆ ಬಿದ್ದಿಲ್ಲ! ಮಂಜು ಮಾಂಡವ್ಯ ಸಂಭಾಷಣೆ ಕಾಮಿಡಿ ದೃಶ್ಯಗಳಲ್ಲಿ ಹೆಚ್ಚು ವರ್ಕ್ ಔಟ್ ಆಗಿದೆ. ಗಾಂನಗರದ ಸಿದ್ಧಭಾಷೆಗೆ ಅವರ ಲೇಖನಿ ಉತ್ತರವಾಗುತ್ತದೆ. ದ್ವಿತಿಯಾರ್ಧದಲ್ಲಿ ಬುಲೆಟ್ ಪ್ರಕಾಶ್ ಎಂಟ್ರಿಯಾಗಿದ್ದೇ ತಡ,ಮತ್ತೆ ಕತೆ ಎದ್ದು ನಿಲ್ಲುತ್ತದೆ... ಶರವೇಗದಲ್ಲಿ ಸಾಗಿ, ಕೊನೆಗೆ ಮತ್ತೆ ಏಕೋ ನಿಧಾನವೇ ಪ್ರಧಾನ... ನಿರ್ಮಾಪಕರು ಖರ್ಚಿನ ಬಗ್ಗೆ ಮೋಸ ಮಾಡಿಲ್ಲ. ಅದನ್ನು ಪುತ್ರ ಪ್ರೇಮ ಎನ್ನುವ ಬದಲು ನಿರ್ದೇಶಕರ ಮೇಲೆ ಇಟ್ಟ ನಂಬಿಕೆ ಎಂದರೆ ಎಲ್ಲರೂ ಸೇಫ್. ನಿರ್ದೇಶಕರು ನಂಬಿಕೆಗೆ ಮೋಸ ಮಾಡಿಲ್ಲ. ಇತ್ತೀಚಿನ ಉದ್ದಂಡ ಮಲಗುತ್ತಿರುವ ಚಿತ್ರಂಗಳಿಗಿಂತಂ ಈ ಸಂಭಾಷಣೆ ಸಹ್ಯಂ... ಹರಿ ಓಂ... ಪ್ರಿಯಾಹ ನಮಃ....

    ನಿರ್ದೇಶಕರಿಗೊಂದು ಕಿವಿ ಮಾತು...ನಿಮಗೆ ಪ್ರತಿಭೆ ಇದೆ. ಜತೆಯಲ್ಲಿ ಒಂದು ಕತ್ತರಿ, ಕತೆಯಲ್ಲಿ ಹೊಸ ತರಿ, ತಕ್ಕಮಟ್ಟಿಗಿನ ತರಾತುರಿ, ಚಿತ್ರಕತೆಯಲ್ಲಿ ಹೊಸ ಶಾಯರಿ ಇದ್ದರೆ ಖಂಡಿತ ಇದಕ್ಕಿಂತ ಒಳ್ಳೆ ಸಿನಿಮಾ ಕೊಡುತ್ತೀರಿ....

    Saturday, June 30, 2012, 15:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X