»   » ತಂದೆಗೆ ತಕ್ಕ ಮಕ್ಕಳು ಮತ್ತು ಹಳ್ಳಿಯ ಒಕ್ಕಲು

ತಂದೆಗೆ ತಕ್ಕ ಮಕ್ಕಳು ಮತ್ತು ಹಳ್ಳಿಯ ಒಕ್ಕಲು

Subscribe to Filmibeat Kannada


ಚಿತ್ರದಲ್ಲಿ ಒಂದಷ್ಟು ಕೇಳಬಲ್ಲ ಹಾಡಿವೆ, ಫೈಟುಗಳಿವೆ, ಇವೆಲ್ಲವನ್ನೂ ಮೀರಿಸುವಂಥ ಹೇರಳವಾದ ಸೆಂಟಿಮೆಂಟಿದೆ. ಈ ತರಹದ ಕತೆ ಕನ್ನಡದಲ್ಲಿ ಸಾಕಷ್ಟು ಬಂದಿರಬಹುದು. ಆದರೂ ಪಕ್ಕ ತಮಿಳು ಸಿನಿಮಾವನ್ನು ಇಲ್ಲಿನ ನೇಟಿವಿಟಿಗೆ ಒಪ್ಪುವ ಹಾಗೆ ನೇರವಾಗಿ ಕನ್ನಡೀಕರಿಸಿದ್ದಾರೆ ಎಸ್‌.ಮಹೇಂದರ್‌.

  • ಚೇತನ್‌ ನಾಡಿಗೇರ್‌
ಅವರು ಶಾಂತಿಯ ಧೂತ; ಇವರು ಅಶಾಂತಿಯ ಅವಧೂತ!

ದ್ವೇಷಕ್ಕೆ ದ್ವೇಷವೇ ಪರಿಹಾರ ಅಲ್ಲ ಎನ್ನುತ್ತಾರೆ ಶಾಂತಿಯ ಧೂತ; ದ್ವೇಷವಿಲ್ಲದೆ ಅಸ್ತಿತ್ವವೇ ಇಲ್ಲ ಎನ್ನುತ್ತಾರೆ ಅಶಾಂತಿಯ ಅವಧೂತ!

ವಿಶೇಷವೆಂದರೆ ಅವರಿಬ್ಬರೂ ಒಂದೇ ಹಳ್ಳಿಯ ಒಕ್ಕಲು. ಮತ್ತೂ ವಿಶೇಷವೆಂದರೆ ಒಂದೇ ತಾಯಿಯ ಮಕ್ಕಳು. ಒಂದೇ ತಾಯಿಯ ರಕ್ತ ಹಂಚಿಕೊಂಡು ಬೆಳೆದರೂ ಇಬ್ಬರೂ ಸಣ್ಣ ವಿಷಯವೊಂದಕ್ಕೆ ದೂರವಾಗಿರುತ್ತಾರೆ. ಅವರಿಂದಾಗಿ ಒಂದಾಗಿದ್ದ ಹಳ್ಳಿಯೂ ಎರಡು ಹೋಳಾಗಿರುತ್ತದೆ. ಎರಡೂ ಕುಟುಂಬಗಳ ನಡುವೆ ದ್ವೇಷ ಹೊಗೆಯಾಡಿದಾಗ ಊರು ಬೆಂಕಿಯಾಗುತ್ತದೆ. ಹಳ್ಳಿಯ ಜನರ ಬದುಕು ದುರ್ಬರವಾಗುತ್ತದೆ.

ಹೀಗಿರುವಾಗಲೇ ಇದ್ಯಾವುದೂ ಗೊತ್ತಿರದ ಒಳ್ಳೆಯವರ ಮಗ ನಗರದಿಂದ ಬರುತ್ತಾನೆ. ಅವನು ತಂದೆಗೆ ತಕ್ಕ ಮಗ. ಏಕೆಂದರೆ ಅವನು ಸಹ ಶಾಂತಿಯಲ್ಲಿ ನಂಬಿಕೆಯಿಟ್ಟವನು. ಕೂಡಿ ಬಾಳಿದರೆ ಸ್ವರ್ಗ ಸುಖ ಎಂದು ತಿಳಿದುಕೊಂಡಿರುವವನು. ಇಂಥವನು ಗೆಳತಿಯನ್ನು ಸಂತೋಷಪಡಿಸುವುದಕ್ಕಾಗಿ ಆಕಸ್ಮಿಕವಾಗಿ ದೇವಸ್ಥಾನದ ಬಾಗಿಲನ್ನು ತೆಗೆಸುತ್ತಾನೆ. ಆ ದೇವಸ್ಥಾನದ್ದೋ ಒಂದು ದೊಡ್ಡ ಕಿರಿಕ್ಕು. ಅದು ಇತ್ಯರ್ಥವಾಗದೆ ಧೂತ, ಅವಧೂತರಿಬ್ಬರೂ ಅದಕ್ಕೆ ಬೀಗ ಹಾಕಿರುತ್ತಾರೆ. ಇಂಥ ಬೀಗವನ್ನು ಮುರಿದಿದ್ದಕ್ಕೆ ಹಳ್ಳಿಯಲ್ಲಿ ದೊಡ್ಡ ಗಲಾಟೆಯೇ ನಡೆಯುತ್ತದೆ.

ಇಂಥದೊಂದು ಸಂದರ್ಭಕ್ಕೆಂದೇ ಕಾಯುತ್ತಿರುತ್ತಾನೆ ಕೆಟ್ಟವರ ಮಗ. ಅವನೂ ಒಂಥರಾ ತಂದೆಗೆ ತಕ್ಕ ಮಗನೇ. ತಂದೆ ಹಾಗೂ ಅವರಿಗೆ ತಕ್ಕ ಮಗನ ವಿರುದ್ಧ ಈ ಸಂದರ್ಭ ಬಳಸಿಕೊಂಡು ಹಲ್ಲು ಮಸೆಯುತ್ತಾನೆ. ಮಾತಿಗೆ ಮಾತು ಬೆಳೆಯುತ್ತದೆ. ಊರ ಜನರ ಮುಂದೆ ಒಳ್ಳೆಯ ಮಗನ ಮಾನ ಹರಾಜಾಗುತ್ತದೆ. ಇದೇ ಬೇಸರದಿಂದ ಅವರ ಪ್ರಾಣಪಕ್ಷಿ ಹಾರಿಹೋಗುತ್ತದೆ. ತಂದೆ ಹೊರಟ ನಂತರ ಮಗ ಅಧಿಕಾರವಹಿಸಿಕೊಳ್ಳುತ್ತಾನೆ. ಅಲ್ಲಿಗೆ ತಂದೆಗಳ ಲೆವಲ್ಲಿಗಿದ್ದ ಫೈಟು ಮಕ್ಕಳವರೆಗೂ ಬರುತ್ತದೆ. ಶಾಂತಿ ಮಂತ್ರ ಸಾರುವ ಒಳ್ಳೆಯವನು, ಕೊನೆಗೂ ಅನಿವಾರ್ಯವಾಗಿ ಕೆಟ್ಟವನ ರುಂಡ ಎಗರಿಸುವುದರ ಮೂಲಕ ಅಷ್ಟೂ ವರ್ಷಗಳ ಫೈಟಿಗೆ, ಎರಡು ಕುಟುಂಬಗಳ ಮಧ್ಯದ ದ್ವೇಷಕ್ಕೆ ಹಾಗೂ ಹಳ್ಳಿಗರ ಗೊಂದಲಕ್ಕೆ ಇತಿಶ್ರೀ ಹಾಡುತ್ತಾನೆ. ಈ ಮಧ್ಯೆ ತಂದೆಗೆ ತಕ್ಕ ಮಗ ಒಂದು ಹುಡುಗಿಯನ್ನು ಒಪ್ಪಿ ಪ್ರೀತಿಸುತ್ತಾನೆ. ಇನ್ನೊಬ್ಬಳನ್ನು ಅನಿವಾರ್ಯವಾಗಿ ಮದುವೆಯಾಗುತ್ತಾನೆ.

ಇದು ತಂದೆಗೆ ತಕ್ಕ ಮಗನ ಒಟ್ಟಾರೆ ಕತೆ.

ಚಿತ್ರದಲ್ಲಿ ಒಂದಷ್ಟು ಹಾಡಿವೆ, ಫೈಟುಗಳಿವೆ, ಇವೆಲ್ಲವನ್ನೂ ಮೀರಿಸುವಂಥ ಹೇರಳವಾದ ಸೆಂಟಿಮೆಂಟಿದೆ. ಈ ತರಹದ ಕತೆ ಕನ್ನಡದಲ್ಲಿ ಸಾಕಷ್ಟು ಬಂದಿರಬಹುದು. ಆದರೂ ಪಕ್ಕ ತಮಿಳು ಸಿನಿಮಾವನ್ನು ಇಲ್ಲಿನ ನೇಟಿವಿಟಿಗೆ ಒಪ್ಪುವ ಹಾಗೆ ನೇರವಾಗಿ ಕನ್ನಡೀಕರಿಸಿದ್ದಾರೆ ಎಸ್‌.ಮಹೇಂದರ್‌.

ಚಿತ್ರದಲ್ಲಿ ಹಲವು ಲೋಪ-ದೋಷಗಳಿವೆ. ಇದು ಸ್ಟ್ರೇಟ್‌ ರೀಮೇಕ್‌ ಆದ್ದರಿಂದ ತಪ್ಪೆಲ್ಲ ಕತೆ ಬರೆದವರಿಗೆ ಹೋಗಬೇಕು. ಅಷ್ಟೇ ಅಲ್ಲ ಚಿತ್ರ ತಮಿಳಿನ ಮೂಲದಷ್ಟೇ ಉದ್ದವಿದೆ. ಅಂದರೆ ಸುಮಾರು ಮೂರು ಗಂಟೆಯಷ್ಟಿದೆ. ಹಾಗಾಗಿ ಮೊದಲಾರ್ಧ ಸ್ವಲ್ಪ ಎಳೆದಂತಾಗಿದೆ. ದ್ವಿತೀಯಾರ್ಧದಲ್ಲಿ ಇದ್ದಿದ್ದರಲ್ಲಿ ಕೊಂಚ ಸ್ಪೀಡಾಗುತ್ತದೆ. ಆದರೂ ಕೃಷ್ಣ ಕುಮಾರ್‌ ಕ್ಯಾಮೆರಾ ಕೆಲಸ ಹಾಗೂ ಎಸ್‌.ಎ.ರಾಜ್‌ಕುಮಾರ್‌ರ ಒಂದೆರಡು ಹಾಡುಗಳು ಚಿತ್ರವನ್ನು ನೋಡುವಂತೆ ಮಾಡಿವೆ.

ತಂದೆಯಾಗಿ ಅಂಬರೀಷ್‌ ಒಳ್ಳೆಯ ಅಭಿನಯ ನೀಡಿದ್ದಾರೆ. ಅದರಲ್ಲೂ ಪಂಚಾಯಿತಿಯಲ್ಲಿ ಅವಮಾನದ ನಂತರ ಬರುವ ಅಷ್ಟುದ್ದದ ದೃಶ್ಯದಲ್ಲಿ ಬೇಸರ ಮಾಡಿಕೊಂಡು ಮಾತಾಡುವ ಅವರ ಅಭಿನಯ ಸಂತೋಷ ನೀಡುತ್ತದೆ. ಉಪೇಂದ್ರ ಕೂಡ ಅಭಿನಯದ ವಿಷಯಕ್ಕೆ ಬಂದರೆ ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ.

ಸಾಕ್ಷಿ ಶಿವಾನಂದ್‌ ಮುದ್ದಾಗಿ ಕಾಣಿಸುತ್ತಾರೆ. ಶ್ರೀನಿವಾಸ ಮೂರ್ತಿ, ಬಿ.ವಿ.ರಾಧಾ, ರಮೇಶ್‌ಭಟ್‌ ಮುಂತಾದವರ ಅಭಿನಯ ಕೂಡ ಓ.ಕೆ. ಆಶೀಶ್‌ ವಿದ್ಯಾರ್ಥಿ ಅವರದ್ದು ಎಂದಿನಂತೆ ಅಬ್ಬರದ ಅಭಿನಯ.

ಚಿತ್ರದಲ್ಲಿ ಘಟಾನುಘಟಿಗಳಿದ್ದರೂ ಇಷ್ಟವಾಗುವುದು ಲೈಲಾ. ಆ ಸೌಂದರ್ಯ, ಮುಗ್ಧತೆ, ಅಭಿನಯ... ಎಂಥವರನ್ನೂ ಒಂದು ಕ್ಷಣ ಕಟ್ಟಿ ಹಾಕದೆ ಬಿಡುವುದಿಲ್ಲ. ಇನ್ನುಳಿದಂತೆ ಅಸಂಖ್ಯ ಪಾತ್ರಗಳಿವೆ. ಅವ್ಯಾವುದೂ ಮನಸಿನಲ್ಲಿ ಹೆಚ್ಚು ಹೊತ್ತು ನಿಲ್ಲುವುದಿಲ್ಲ.

(ಸ್ನೇಹ ಸೇತು - ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada