»   » ‘ರಾಮ್‌’ಬೊ ಗೆಟಪ್‌ನಲ್ಲಿ ಮಾಲಾಶ್ರೀ

‘ರಾಮ್‌’ಬೊ ಗೆಟಪ್‌ನಲ್ಲಿ ಮಾಲಾಶ್ರೀ

Subscribe to Filmibeat Kannada
  • ರಮೇಶ್‌ಕುಮಾರ್‌ ನಾಯಕ್‌
ಬ್ರೂಸ್ಲಿ, ಜಾಕಿ ಚಾನ್‌, ಜೇಮ್ಸ್‌ ಬಾಂಡ್‌ರಂಥವರನ್ನು ನೀವು ಸ್ತ್ರೀ ರೂಪದಲ್ಲಿ ನೋಡಿ ಆನಂದಿಸಬೇಕೆ ? ಎದುರಾಳಿಗಳ ಅಂಗಾಂಗಗಳನ್ನು ನಾಯಕಿ ಪೀಸ್‌ ಪೀಸ್‌ ಮಾಡಿ ಎಸೆಯುವ ದೃಶ್ಯ ನೋಡಿ ಪುಳಕಗೊಳ್ಳಬೇಕೆ ? ಬದಲಾವಣೆಯ ಸಮಯ ಬಂದಿದೆ ; ಬನ್ನಿ , ‘ದುರ್ಗಿ’ಯನ್ನು ನೋಡಿ.

ಸರಿಸುಮಾರು ನಾಲ್ಕು ವರ್ಷಗಳ ಬಳಿಕ ಮಾಲಾಶ್ರೀ ‘ರ್ಯಾಂಬೊ’ ಗೆಟಪ್‌ನಲ್ಲಿ ಬೆಳ್ಳಿತೆರೆಯನ್ನು ಆಕ್ರಮಿಸಿದ್ದಾರೆ. ಮಾಲಾಶ್ರೀ ಆಂಟಿ ಯಾವ ಪರಿ ಫೈಟ್‌ ಮಾಡುತ್ತಾರೆಂದರೆ, ಪೋಲಿಗಳನ್ನು ಹತ್ತಿಯ ಮೂಟೆಯಂತೆ ಎತ್ತಿ ಎಸೆಯುತ್ತಾರೆ. ಅವರ ಮುಷ್ಠಿ ಪ್ರಹಾರಕ್ಕೆ ವೈರಿ ಪಾಳಯದ ಹುಡುಗರು ಆಕಾಶದಲ್ಲಿ ಗಿರಗಿಟ್ಲೆ ಹೊಡೆಯುತ್ತಾರೆ. ರೌಡಿಗಳ ದೇಹ ಬಸ್‌ನ ಮುಂದಿನ ಗಾಜಿನಿಂದ ಒಳಹೊಕ್ಕು ಹಿಂದಿನ ಗಾಜಿನಿಂದ ಹೊರಬೀಳುತ್ತದೆ, ನೂರಡಿ ಎತ್ತರದ ಜಾಹೀರಾತು ಫಲಕಕ್ಕೆ ಜೋತು ಬೀಳುತ್ತದೆ, ನಾಲ್ಕಂತಸ್ತಿನ ಕಟ್ಟಡಕ್ಕೆ ಅಪ್ಪಳಿಸಿ ಅಪ್ಪಚ್ಚಿಯಾಗುತ್ತದೆ.... ಅಬ್ಬಬ್ಬಾ ಎಂಥ ಸಾಹಸ ರಾಮುರಾಮು !

ನಿರ್ಮಾಪಕ ರಾಮು ಇದನ್ನು ತಮ್ಮ ಟೇಸ್ಟ್‌ನ ಸಿನಿಮಾ ಎಂದಿದ್ದಾರೆ. ಆದರೆ ಥ್ರಿಲ್ಲರ್‌ ಮಂಜು ಎಷ್ಟೇ ಮಜಬೂತಾಗಿ ಸಾಹಸ ದೃಶ್ಯ ಸಂಯೋಜಿಸಿದ್ದರೂ ಇದು ರಾಮು ಟೇಸ್ಟ್‌ನ ‘ಎ.ಕೆ. 47’, ‘ಲಾಕಪ್‌ ಡೆತ್‌’ ಚಿತ್ರದ ಮಟ್ಟ ತಲುಪಿಲ್ಲ . ಇದಕ್ಕೆ ಕಾರಣ, ನಿರ್ದೇಶಕರು ಚರ್ವಿತಚರ್ವಣ ಕತೆ ಆರಿಸಿಕೊಂಡಿದ್ದು ಮತ್ತು ಪಂಚ್‌ರಹಿತ ಪಂಕ್ಚರ್‌ ಸಂಭಾಷಣೆ.

ಇಂಟರ್‌ವಲ್‌ವರೆಗೆ ಚಿತ್ರ ನಿರ್ದೇಶಿಸಿದ್ದು ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು. ಅಲ್ಲಿಯವರೆಗೆ ದುರ್ಗಿಯ ಸಾಹಸ ಪ್ರವಾಹೋಪಾದಿಯಲ್ಲಿ ಹರಿಯುತ್ತದೆ. ಕೈ, ಕಾಲುಗಳೇ ಮಾತಾಡುವುದರಿಂದ ನಾಯಕಿ ಮೂಗಿ!

ಚಿತ್ರದ ಕತೆ ಮಧ್ಯಂತರದ ಬಳಿಕ ಶುರುವಾಗುತ್ತದೆ. ಆಗ ನಿರ್ದೇಶಕ ಪಿ.ರವಿಶಂಕರ್‌ ಅಖಾಡಕ್ಕಿಳಿಯುತ್ತಾರೆ. ನಾಯಕಿಯ ಈ ಪರಿ ಪರಾಕ್ರಮದ ಹಿಂದೆ ಬಲವಾದ ಕತೆ ಇರಬೇಕು ಎಂಬ ಪ್ರೇಕ್ಷಕರ ನಿರೀಕ್ಷೆಗೆ ಅವರು ತಣ್ಣೀರೆರಚುತ್ತಾರೆ. ಊರಿನ ಶ್ರೀಮಂತರ ಮಕ್ಕಳಿಂದ ದುರ್ಗಾಪುರದ ದುರ್ಗಿಯ 10 ವರ್ಷದ ತಂಗಿಯ ಮೇಲೆ ಅತ್ಯಾಚಾರ, ತಂದೆಯ ಕೊಲೆ, ಇದಕ್ಕೆ ದುರ್ಗಿಯ ಪ್ರತೀಕಾರ ಎಂದು ಗೊತ್ತಾಗುತ್ತಲೇ ಇಂಥ ಹಳಸಲು ಕತೆಗೆ ಮಾಲಾಶ್ರೀ ಅಭಿಮಾನಿಗಳು ಮಮ್ಮಲ ಮರುಗುತ್ತಾರೆ.

ಈ ನಡುವೆ ನಿರ್ದೇಶಕರು, ಖಳನಾಯಕರಾದ ಜೆ.ಡಿ. (ರಘುವರನ್‌) ಮತ್ತು ಮಾರಿಗುಡಿ (ಕಲಾಭವನ ಮಣಿ) ಪಾತ್ರಗಳನ್ನು ರಂಜನೀಯವಾಗಿ ಪೋಷಿಸಿದ್ದಾರೆ. ಮಾರಿಗುಡಿಯ ಭಯಾನಕ ವ್ಯಕ್ತಿತ್ವಕ್ಕೆ ಯಕ್ಷಗಾನ ವೇಷದ ಟಚ್‌ಅಪ್‌ ನೀಡಿ ಹೊಸತನ ಪ್ರದರ್ಶಿಸಿದ್ದಾರೆ. ಪೊಲೀಸ್‌ ಕಮೀಷನರ್‌ ಆಗಿ ಆಶಿಷ್‌ ವಿದ್ಯಾರ್ಥಿ ಇಷ್ಟವಾಗುತ್ತಾರೆ. ಪಾತ್ರ ಸಮೂಹದಲ್ಲಿ ಎದ್ದು ಕಾಣುವ ಮತ್ತೊಂದು ಪಾತ್ರ ಮಂಡ್ಯ ಮಂಗಮ್ಮ (ಆಶಾಲತಾ).

ಹಂಸಲೇಖ ಸಂಯೋಜಿಸಿರುವ ಹಾಡುಗಳು ಯಾರ ಟೇಸ್ಟ್‌ನದ್ದೆಂದು ಹೇಳೋದು ಕಷ್ಟ . ಛಾಯಾಗ್ರಹಣ, ಸಂಕಲನ ಸಾಧಾರಣ.

ಇಂಥ ಮಾರಾಮಾರಿ ಚಿತ್ರದಲ್ಲೂ ಹಾಸ್ಯದ ತುಣುಕೊಂದು ಕಚಗುಳಿ ಇಡುತ್ತದೆ- ಮಗು ಊಟ ಮಾಡದೆ ಅಮ್ಮನನ್ನು ಸತಾಯಿಸುತ್ತಿರುತ್ತದೆ. ಆಗ ಮಧ್ಯ ಪ್ರವೇಶಿಸುವ ದುರ್ಗಿ ಅನ್ನದ ಬಟ್ಟಲನ್ನು ಕೈಗೆ ತೆಗೆದುಕೊಂಡು ‘ಇದನ್ನು ನೀನು ತಿನ್ನುತ್ತೀಯಾ ನಾನು ತಿನ್ನಲೋ’ ಎನ್ನುತ್ತಾಳೆ. ತಕ್ಷಣ ಮಗು ಅನ್ನದ ಬಟ್ಟಲಿಗೆ ಕೈ ಹಾಕುತ್ತದೆ. ದುರ್ಗಿ ಆ ಮಗುವಿನ ಅಮ್ಮನ ಶಹಬ್ಭಾಸ್‌ಗಿರಿ ಗಿಟ್ಟಿಸುತ್ತಾಳೆ. ಮುಂದೆ ಸಾಧು ಕೋಕಿಲಾ ಇದೇ ಟ್ರಿಕ್ಸ್‌ಗಿಳಿಯುತ್ತಾರೆ. ಮಗುವೊಂದು ತಾಯಿಯ ಹಾಲು ಕುಡಿಯದೆ ಹಟ ಮಾಡುತ್ತಿರುತ್ತದೆ. ಅಲ್ಲಿ ಪ್ರತ್ಯಕ್ಷರಾಗುವ ಸಾಧು, ಮಗುವನ್ನು ಎತ್ತಿಕೊಂಡು, ‘ಅಮ್ಮನ ಹಾಡು ಕುಡಿಬೇಕು ಜಾಣರಿ, ನೀನು ಕುಡೀತಿಯೋ ಇಲ್ಲ ನಾನು....’ ಎಂದು ಧರ್ಮದೇಟು ತಿನ್ನುತ್ತಾನೆ !

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada