»   » ‘ಅಂಬಿ’ಗನ ಪ್ರೇಮ ಯಾತ್ರೆ

‘ಅಂಬಿ’ಗನ ಪ್ರೇಮ ಯಾತ್ರೆ

Subscribe to Filmibeat Kannada


ಏನಿಲ್ಲ ಈ ಕತೆಯಾಳಗೆ? ಸೆಂಟಿಮೆಂಟು, ಆ್ಯಕ್ಷನ್‌, ಸ್ನೇಹ, ಪ್ರೇಮ... ಎಲ್ಲವೂ ಇದೆ. ಇದೆಲ್ಲದರ ಜತೆಗೆ ನೆಂಜಿಕೊಳ್ಳುವುದಕ್ಕೆ ತೆಲುಗಿನ ‘ಸೂಪರ್‌’ ಸ್ಫೂರ್ತಿಯ ಕಾಮಿಡಿಯಿದೆ. ಇದೆಲ್ಲವನ್ನೂ ನಾಗೇಂದ್ರಪ್ರಸಾದ್‌ ಒಟ್ಟಿಗೆ ಹೇಗೋ ಜೋಡಿಸಿದ್ದಾರೆ. ನೋಡೋ ತಾಳ್ಮೆ ನಿಮಗಿರಬೇಕು. ತಾಳಿದವನು ಬಾಳಿಯಾನು ಅನ್ನೋ ಗಾದೆ ಗೊತ್ತಲ್ಲಾ?

  • ಚೇತನ್‌ ನಾಡಿಗೇರ್‌
ಅವನು ಅಂಬಿ. ಇನ್ನೂ ಸರಿಯಾಗಿ ಹೇಳಬೇಕೆಂದರೆ ರೌಡಿಸಂ ಎಂಬ ಹೊಳೆಯ ಮೇಲೆ ಅಣ್ಣಾಜಿ ಎಂಬ ಡಾನ್‌ನ ನೌಕೆಯನ್ನು ದಾಟಿಸುವ ಅಂಬಿಗ.

ಎಲ್ಲಾ ರೌಡಿಗಳಂತೆ ಇವನೂ ಸಹಾ ಹುಟ್ಟಾ ಕೆಟ್ಟವನಲ್ಲ. ಹುಟ್ಟುತ್ತಾ ಒಳ್ಳೆಯವನೇ. ಆದರೆ ಪರಿಸ್ಥಿತಿಯ ಪಿತೂರಿ, ವ್ಯವಸ್ಥೆಯ ಹುನ್ನಾರ, ಕೈಚಳಕ... ಅಂಬಿ ತಾಯಿ-ತಂಗಿಯನ್ನು ಕಳೆದುಕೊಳ್ಳುತ್ತಾನೆ. ತಾಯಿಯನ್ನು ಅತ್ಯಚಾರ ಮಾಡಿ ಅವಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುವ ದುಷ್ಟ ಇನ್ಸ್‌ಪೆಕ್ಟರ್‌ನನ್ನು ಕೊಲ್ಲುತ್ತಾನೆ. ಜೈಲಿಗೆ ಹೋಗುವುದಕ್ಕೆ ಮುನ್ನ, ಅಣ್ಣಾಜಿಯ ರೌಡಿಸಂ ಜೈಲಿನಲ್ಲಿ ಬಂದಿಯಾಗುತ್ತಾನೆ. ಕ್ರಮೇಣ ಅಂಬಿ ದೊಡ್ಡವನಾಗುತ್ತಾನೆ. ರೌಡಿಸಂನಲ್ಲೂ ಸಹ.

ಇದು ಹಳೆಯ ಕತೆ. ಅದು ನಾಗೇಂದ್ರ ಪ್ರಸಾದ್‌ಗೂ ಗೊತ್ತು. ಅದಕ್ಕೆ ಅವರು ನಾಯಕಿ ಪಲ್ಲವಿಯನ್ನು ಕರೆತರುತ್ತಾರೆ. ಇದು ಮತ್ತೂ ಹಳೆಯ ಕತೆ. ಸ್ವಲ್ಪ ಸಮಕಾಲೀನವಾಗಿರಲಿ ಎಂದು ಆಕೆಯ ಕೈಗೊಂದು ಮೊಬೈಲು ಕೊಡುತ್ತಾರೆ. ಯಾರಿಗೋ ಫೋನು ಮಾಡುವಂತೆ ಮಾಡಬೇಕಾದವಳು, ಕನ್‌ಫ್ಯೂಸಾಗಿ ನಾಯಕನಿಗೆ ಫೋನ್‌ ಮಾಡುವಂತೆ ಮಾಡುತ್ತಾರೆ.

ಅಲ್ಲಿಯವರೆಗೂ ‘ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ’, ‘ಬಿಐಯಾಗಿದ್ದಾರೆ’ ಅಥವಾ ‘ಸ್ವಿಚ್‌ ಆಫ್‌ ಮಾಡಿದ್ದಾರೆ’ ಎಂಬ ಹೆಣ್ಣು ಧ್ವನಿ ಮಾತ್ರ ಕೇಳಿದ್ದ ಅಂಬಿಗೆ ಈ ಹೊಸ ಧ್ವನಿ ಕೇಳಿ ಪುಳಕವಾಗುತ್ತದೆ. ಹೀಗೆ ಮಾತಿಗೆ ಮಾತು ಬೆಳೆದು ಕ್ರಮೇಣ ಮುಖ ನೋಡದಿದ್ದರೂ ಅವರಿಬ್ಬರ ನಡುವೆ ಪ್ರೇಮ ಬೆಳೆಯುತ್ತದೆ.

ಅಷ್ಟರಲ್ಲಿ ಏನೋ ಆಗುತ್ತದೆ. ತಾನು ರೌಡಿ ಶೀಟರ್‌ ಎಂದು ಗೊತ್ತಾದರೆ, ರೌಟಿ ಹೇಟರ್‌ ಪಲ್ಲವಿ ತನ್ನನ್ನು ಇಷ್ಟಪಡುತ್ತಾಳಾ? ಎಂದು ಅಂಬಿಗೆ ಗಿಲ್ಟ್‌ ಕಾಡುತ್ತದೆ. ಅಷ್ಟರಲ್ಲಿ ಇನ್ನೇನೋ ಆಗುತ್ತದೆ. ಈ ರೌಡಿಸಂ ಸಾಕು, ಅಣ್ಣಾಜಿಯ ಸಹವಾಸವೇ ಸಾಕು ಎಂಬ ತೀರ್ಮಾನಕ್ಕೆ ಅಂಬಿ ಮನಸ್ಸು ಬರುತ್ತದೆ. ಅಷ್ಟರಲ್ಲಿ ಮತ್ತಿನ್ನೇನೋ ಆಗುತ್ತದೆ. ಗುರು-ಶಿಷ್ಯ ನಡುವೆ ಘೋರ ಲಾಂಗ್‌-ವರಸೆ ನಡೆಯುತ್ತದೆ.

ಏನೋ, ಇನ್ನೇನೋ, ಮತ್ತಿನ್ನೇನೋ ಆಗಬೇಕೆನುವಷ್ಟರಲ್ಲಿ ಬೇರೆಯಾಗಿದ್ದ ಜೀವಗಳು ಒಂದಾಗುತ್ತವೆ. ಇದೆಲ್ಲಾ ಮುಗಿಯುವ ಹೊತ್ತಿಗೆ, ಕೆ.ಸಿ.ಎನ್‌. ಕುಮಾರ್‌ರ 25ನೇ ಕಾಣಿಕೆಯನ್ನು ನೋಡಿದ ಪ್ರೇಕ್ಷಕರ ಮೈ-ಮನಗಳು ಹೈರಾಣಾಗಿರುತ್ತವೆ.

ಏನಿಲ್ಲಾ ಈ ಕತೆಯಾಳಗೆ? ಸೆಂಟಿಮೆಂಟು, ಆ್ಯಕ್ಷನ್‌, ಸ್ನೇಹ, ಪ್ರೇಮ... ಎಲ್ಲವೂ ಇದೆ. ಇದೆಲ್ಲದರ ಜತೆಗೆ ನೆಂಜಿಕೊಳ್ಳುವುದಕ್ಕೆ ತೆಲುಗಿನ ‘ಸೂಪರ್‌’ ಸ್ಫೂರ್ತಿಯ ಕಾಮಿಡಿಯಿದೆ. ಇದೆಲ್ಲವನ್ನೂ ನಾಗೇಂದ್ರಪ್ರಸಾದ್‌ ಒಟ್ಟಿಗೆ ಹೇಗೋ ಜೋಡಿಸಿದ್ದಾರೆ.

ಪಕ್ಕಾ ಆ್ಯಕ್ಷನ್‌ ಚಿತ್ರದಂತೆ ಕಂಡುಬಂದರೂ ಈ ಚಿತ್ರ ರಕ್ತಮಯವಾಗಿಲ್ಲ. ಬದಲಿಗೆ ಪ್ರೇಮಮಯವಾಗಿದೆ ಎಂಬ ವಿಷಯ ಮಾತ್ರ ಖಂಡಿತಾ ಖುಷಿ ತರುತ್ತದೆ. ಆದರೆ, ಅದನ್ನು ನಿರೂಪಿಸುವಲ್ಲಿ ನಾಗೇಂದ್ರಪ್ರಸಾದ್‌ ಯಡವಿದ್ದಾರೆ ಎಂದಾಗ ಮತ್ತೆ ದುಃಖ ಉಮ್ಮಳಿಸಿಬರುತ್ತದೆ. ಆದರೂ ಕೆಲವು ಕಡೆ ನಾಗೇಂದ್ರಪ್ರಸಾದ್‌ರ ಕುಸುರಿ ಕೆಲಸ ಇಷ್ಟವಾಗುತ್ತದೆ. ಅದರಲ್ಲೂ ಅಂಬಿ ಕಿವುಡು ಗೆಳೆಯನನ್ನು ಕೂರಿಸಿಕೊಂಡು ತನ್ನ ಪ್ರೀತಿಯನ್ನು ವ್ಯಕ್ತಪಡಿಸುವುದು, ಪಲ್ಲವಿಗೆ ತಾನು ರೌಡಿ ಎಂದು ಹೇಳಿಕೊಳ್ಳುವುದಕ್ಕೆ ಪರದಾಡುವುದು... ಮುಂತಾದ ದೃಶ್ಯಗಳನ್ನು ನಾಗೇಂದ್ರ ಪ್ರಸಾದ್‌ ಚೆನ್ನಾಗಿ ಸೆರೆ ಹಿಡಿದಿದ್ದಾರೆ.

‘ನಲ್ಲ’ ಚಿತ್ರದಂತೆ ಇಲ್ಲೂ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ, ಅಂತ ನೂರೆಂಟು ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ ಪ್ರಸಾದ್‌. ಇಷ್ಟರಲ್ಲಿ ಯಾವುದರಲ್ಲಿ ಗೆದ್ದಿದ್ದಾರೆ ಎಂದು ಪ್ರಶ್ನೆ ಮಾಡಿಕೊಂಡರೆ, ಉತ್ತರ ಸಿಗುವುದು ಕಷ್ಟವೇ. ಏಕೆಂದರೆ, ಕೆಲ ಸಂಭಾಷಣೆಗಳು ಹಾಗೂ ಒಂದು ಹಾಡು ಬಿಟ್ಟರೆ ನಾಗೇಂದ್ರ ಪ್ರಸಾದ್‌ ಹೆಚ್ಚು ಗಮನ ಸೆಳೆಯುವುದಿಲ್ಲ. ಆದರೂ ಅಷ್ಟೊಂದು ಜವಾಬ್ದಾರಿಗಳನ್ನು ಅವರು ಹೊತ್ತಿರುವುದರಿಂದ ಇದು ಬೆಳೆಯುವ ಲಕ್ಷಣ ಎಂದು ಮಾತ್ರ ಖುಷಿ ಪಡಬಹುದು.

ಸಾಹಿತ್ಯ, ಸಂಭಾಷಣೆಯಲ್ಲಿ ಲವ್ವು, ಡವ್ವು, ಸ್ಕೆಚ್ಚು, ಕ್ಯಾಚು... ಮುಂತಾದ ಪದಗಳನ್ನು ಯಥೇಚ್ಛವಾಗಿ ಬಳಸಿದ್ದಾರೆ. ಇದೆಲ್ಲದರ ಜೊತೆಗೆ ಒಂದು ಹಾಡಿನ ಕೆಲವು ಸಾಲುಗಳಿಗೆ ಅವರು ಧ್ವನಿ ಕೂಡಿಸಿದ್ದಾರೆ. ಸುಮ್ಮನಿದ್ದವನಿಗೆ ‘ಡವ್‌ ಹೊಡಿ ಡವ್‌ ಹೊಡಿ ಮಚ್ಚಾ ಡವ್‌ ಹೊಡಿ ಎಂದು ದುರ್ಬೋದನೆ ಮಾಡಿ ಕೆಟ್ಟವರಾಗುತ್ತಾರೆ. ಇದೆಲ್ಲಾ ಕ್ಷಮಿಸಿಬಿಡಬಹುದು ಎಂದು ಪ್ರೇಕ್ಷಕರೇ ಹೇಳುತ್ತಾರೆ. ಆದರೆ, ಬೇಂದ್ರೆಯವರ ‘ನೀ ಹೀಂಗಾ ನೋಡಬ್ಯಾಡ ನನ್ನ...’ ಪಲ್ಲವಿಯನ್ನು ಏನೋ ಪ್ರಯೋಗ ಮಾಡುವುದಕ್ಕೆ ಹೋಗಿ ಪ್ರೇಕ್ಷಕರಿಗೆ ಬೇಸರ ತರಿಸಿರುವುದಂತೂ ನಿಜ.

‘ಡೆಡ್ಲಿ ಸೋಮ’ ದಲ್ಲಿ ಡೆಡ್ಲಿಯಾಗಿ ಕಾಣಿಸಿಕೊಂಡಿದ್ದ ಆದಿತ್ಯ ಕೂಡಾ ಇಲ್ಲಿ ತುಸು ಡಲ್ಲಾಗಿದ್ದಾರೆ. ನೋಡುವುದಕ್ಕೂ ಅಷ್ಟೇ, ಅಭಿನಯದಲ್ಲೂ ಅಷ್ಟೇ. ಮಾನ್ಯ ಬಾಯಿ ತುಂಬಾ ನಗುತ್ತಾರೆ, ಅರಳು ಹುರಿದಂತೆ ಮಾತನಾಡುತ್ತಾರೆ... ಅಭಿನಯ ಓಕೆ.

ಕಿಶೋರ್‌ ಬಂದದ್ದೂ ಗೊತ್ತಾಗಲ್ಲ, ಹೋಗಿದ್ದೂ ಗೊತ್ತಾಗಲ್ಲ. ಪಂಚಮಿ, ಮನ್‌ದೀಪ್‌ ರೈ, ಚಿತ್ರಾ ಶೆಣೈ, ಶಂಕರ್‌ ಅಶ್ವಥ್‌, ಮುಂತಾದವರೆಲ್ಲ ‘ಬಂದ ಪುಟ್ಟ , ಹೋದ ಪುಟ್ಟ’. ಇದ್ದುದ್ದರಲ್ಲಿ ಶೋಭರಾಜ್‌ ಹಾಗೂ ಬುಲೆಟ್‌ ಪ್ರಕಾಶ್‌ ಅಭಿನಯ ಚೆಂದ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada