twitter
    For Quick Alerts
    ALLOW NOTIFICATIONS  
    For Daily Alerts

    ತಿರುಪತಿ : ಕ್ಲಾಸ್‌ಗೂ ಮಾಸ್‌ಗೂ ಸೈಯಾರೆ ಸೈ

    By Staff
    |


    ನಿರ್ದೇಶಕ ಶಿವಮಣಿ ತಂಡದ ಕೆಲವು ತಂತ್ರಜ್ಞರಿಂದಾಗಿ, ಚಿತ್ರಕ್ಕೆ ಕೆಲವೆಡೆ ಮಾಸ್‌ ಜತೆ ಕ್ಲಾಸ್‌ ಸ್ಪರ್ಶ ಸಿಕ್ಕಿದೆ. ‘ಮೈ ಆಟೋಗ್ರಾಫ್‌’ನಲ್ಲಿ ಸಾಫ್ಟ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುದೀಪ್‌ಗಿಲ್ಲಿ ತದ್ವಿರುದ್ಧ ಪಾತ್ರ. ಅವರು ಮೊದಲ ಬಾರಿಗೆ ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ... ಅಭಿಮಾನಿಗಳ ಶಿಳ್ಳೆ ಸಂಪಾದಿಸಿದ್ದಾರೆ.

    • ಚೇತನ್‌ ನಾಡಿಗೇರ್‌
    ‘ಆ ತಿರುಪತಿಗೆ ಕಾಲಿಟ್ರೆ ಮೂರು ನಾಮ
    ಈ ತಿರುಪತಿಗೆ ಕೈಇಟ್ರೆ ನಿರ್ನಾಮ!’

    ತಿರುಪತಿ ಸುಮ್ಮನೆ ಇಂಥ ಪ್ರಾಸಬದ್ಧ ಮಾತುಗಳನ್ನಾಡುವುದಿಲ್ಲ. ಆ ಮಾತು ಮರೆತುಹೋಗುವಷ್ಟರಲ್ಲಿ ಅವನ ಮೇಲೆ ಕೈಇಟ್ಟವರು ಖಂಡಿತ ನಿರ್ನಾಮ. ಅದಕ್ಕೆ ಸರಕಾರವೇ ಅವನಿಗೆ ಲೈಸೆನ್ಸು ಕೊಟ್ಟಿದೆ. ಕಾರಣ ಅವನು ಪೊಲೀಸ್‌ ಅಧಿಕಾರಿ. ಅಷ್ಟೇ ಅಲ್ಲ , ಬಹಳ ರಫ್‌ ಆ್ಯಂಡ್‌ ಟಫ್‌ ಅಧಿಕಾರಿ. ಅವನಿಗೆ ಒಳ್ಳೆಯವರೊಂದಿಗೆ ಕ್ಲಾಸಾಗಿರುವುದೂ ಗೊತ್ತು. ಕೆಟ್ಟವರೊಂದಿಗೆ ಮಾಸಾಗಿರುವುದೂ ಗೊತ್ತು . ಬಂದೂಕಿನ ಜತೆ ಅವನಿಗೆ ಲಾಂಗು, ಮಚ್ಚು ಕೂಡ ಸಲೀಸು. ಮುಷ್ಟಿಯುದ್ಧದಲ್ಲಿ ಅವನಿನ್ನೂ ಫೇಮಸು. ಅವನಿಗೆ ಕೆಟ್ಟವರ ಕಂಡರೆ ಕೆಟ್ಟ ಕೋಪ. ಕಾನೂನು ಮುರಿಯುವವರಿಗೆ ಅವನು ಉಗ್ರರೂಪ.

    ಪಾಲಿಕೆ ಆಯುಕ್ತೆ ಮಾರ್ಗರೆಟ್‌ ಕೊಲೆಯಾದಾಗ, ಆ ಕೇಸಿನ ವಿಚಾರಣೆಗೆ ತಿರುಪತಿ ಖಾಕಿ ತೊಟ್ಟು ಕ್ಲಾಸಾಗಿಯೇ ಬರುತ್ತಾನೆ. ವಿಚಾರಣೆ ನಡೆಸುತ್ತಾನೆ. ಪರಿಸ್ಥಿತಿ ಕೈಮೀರಿದಾಗ ಅನಿವಾರ್ಯವಾಗಿ ಅವನು ಖಾಕಿ ಬಿಚ್ಚಿ ಮಾಸ್‌ ಆಗಬೇಕಾಗುತ್ತದೆ. ರಕ್ತ್ತದೋಕುಳಿ ಆಡಬೇಕಾಗುತ್ತದೆ. ಅದರಲ್ಲೂ ತನ್ನ ತಾಯಿಗೆ ಮೋಸ ಮಾಡಿ ಓಡಿ ಹೋದ ತಂದೆ ಹಾಗೂ ಆತನ ಇನ್ನೊಬ್ಬ ಮಗನೇ ಈ ಎಲ್ಲ ಪಿತೂರಿಯಲ್ಲಿ ಪ್ರಮುಖ ಆರೋಪಿಗಳು ಎಂದು ಗೊತ್ತಾದಾಗ ಹಳೆಯ ದ್ವೇಷದ ಜತೆ ಹೊಸ ನಿಷ್ಠೆ ಸೇರಿ, ಚಿತ್ರ ಇನ್ನೊಂದು ರೂಪ ಪಡೆಯುತ್ತದೆ. ಮಾರ್ಗರೆಟ್‌ ಕೊಲೆ ಮೂಲೆಗುಂಪಾಗುತ್ತದೆ, ತಂದೆ ಮೇಲಿನ ಜಿದ್ದು ಒಂದಂಶದ ಅಜೆಂಡವಾಗುತ್ತದೆ. ಚಿತ್ರ ಮಾಸಾಗುತ್ತದೆ.

    ಒಂದು ಕಡೆ ನಿರ್ದೇಶಕ ಶಿವಮಣಿ, ಇನ್ನೊಂದು ಕಡೆ ಸುದೀಪ್‌ ‘ತಿರುಪತಿ’ಗೆ ಶಕ್ತಿ ತುಂಬಿದ್ದಾರೆ. ಚಿತ್ರದ ಉಪಶೀರ್ಷಿಕೆಯೇ ಹೇಳುವಂತೆ, ಈ ಚಿತ್ರ ಮಾಸ್‌ ಪೊಲೀಸ್‌ ಒಬ್ಬನ ಕತೆ. ಹಾಗಾಗಿ ಚಿತ್ರ ಸಂಪೂರ್ಣ ಮಾಸ್‌ಮಯವಾಗಿದೆ. ಇದರೆ ಜತೆಗೆ ಡೇವಿಡ್‌ ಬರೆದಿರುವ ಚಿತ್ರಕತೆಯೂ ಸೇರಿ ಪ್ರೇಕ್ಷಕರು ಒಂದು ಕ್ಷಣ ಕೂಡ ಮಿಸುಕಾಡದಂತೆ ಆಗುತ್ತದೆ. ಒಂದು ಘಟನೆಯಾದ ತಕ್ಷಣ ಇನ್ನೊಂದು, ಇನ್ನೊಂದರ ಹಿಂದೆ ಮತ್ತೊಂದು. ಘಟನೆಗಳ ಜತೆಗೇ ಫೈಟ್‌, ಹಾಡು, ಡ್ಯಾನ್ಸು, ಸೆಂಟಿಮೆಂಟ ು . . . ಹೀಗೆ ಒಂದರ ಹಿಂದೊಂದು ಹಾಜರಾಗುತ್ತಲೇ ಇರುತ್ತದೆ.

    ಆ್ಯಕ್ಷನ್‌ ಚಿತ್ರಗಳು ಸ್ವಲ್ಪ ಲೌಡ್‌ ಆಗಿರಬೇಕು ಎಂಬ ಅಲಿಖಿತ ನಿಯಮವಿರುವುದರಿಂದಲೋ ಏನೋ, ಚಿತ್ರ ಶಬ್ಧಮಯವಾಗಿದೆ. ಆದರೂ ಶಿವಮಣಿ, ಛಾಯಾಗ್ರಾಹಕ ಎ.ಸಿ. ಮಹೇಂದ್ರನ್‌ರಂಥ ತಂತ್ರಜ್ಞರು ಇರುವುದರಿಂದ ಚಿತ್ರಕ್ಕೊಂದು ಕ್ಲಾಸ್‌ ಸ್ಪರ್ಶ ಸಿಕ್ಕಿದೆ. ಜತೆಗೆ ಬಿ.ಎ. ಅವರ ಸಂಭಾಷಣೆ ಚೆನ್ನಾಗಿದೆ. ಹಾಗಾಗಿ ಚಿತ್ರ ಕೆಲವು ಕಡೆ ಮಾಸ್‌ ಜತೆ ಕ್ಲಾಸ್‌ ಕೂಡ ಇಷ್ಟಪಡುವಂತಾಗಿದೆ.

    ‘ಮೈ ಆಟೋಗ್ರಾಫ್‌’ನಲ್ಲಿ ಸಾಫ್ಟ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುದೀಪ್‌ಗಿದು ತದ್ವಿರುದ್ಧ ಪಾತ್ರ. ಅವರು ಮೊದಲ ಬಾರಿಗೆ ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತು ಆ ಪಾತ್ರಕ್ಕೆ ಸುದೀಪ್‌ ಬಹಳ ಚೆನ್ನಾಗಿ ಒಗ್ಗಿಕೊಳ್ಳುತ್ತಾರೆ ಎನ್ನುವುದು ವಿಶೇಷ. ಅದರಲ್ಲೂ ಸಾಹಸಮಯ ಹಾಗೂ ಆರ್ಭಟದ ದೃಶ್ಯಗಳಲ್ಲಿ ಸುದೀಪ್‌ ಅಭಿನಯಕ್ಕೆ ಭರ್ತಿ ಶಿಳ್ಳೆ. ಬಹಳ ದಿನಗಳ ನಂತರ ಅಭಿನಯಿಸುತ್ತಿರುವ ಚರಣ್‌ರಾಜ್‌ಗೂ ಚಿತ್ರದಲ್ಲಿ ವಿಭಿನ್ನ ಪಾತ್ರವಿದೆ. ಅದನ್ನು ಅವರು ಇನ್ನೂ ಚೆನ್ನಾಗಿ ಬಳಸಿಕೊಂಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

    ಪೂಜಾ ಕನ್ವಾಲ್‌ ಹಾಡು-ಕುಣಿತಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಮಿಕ್ಕ ಕಡೆಗಳಲ್ಲಿ ಅವರ ಪ್ರತಿಭೆ ಅಷ್ಟೊಂದು ಅನಾವರಣಗೊಂಡಿಲ್ಲ. ಚಿಕ್ಕ ಪಾತ್ರಗಳಾದರೂ ಸುಧಾರಾಣಿ, ಯತಿರಾಜ್‌, ಸಬಾ ಹಾಗೂ ವಾಟಾಳ್‌ ನಾಗರಾಜ್‌ರನ್ನೇ ಹೋಲುವ ರಂಗಾಯಣ ರಘು ಅಭಿನಯ ಚೆನ್ನಾಗಿದೆ. ರಾಜೇಶ್‌ ರಾಮನಾಥ್‌ರ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿವೆ.

    (ಸ್ನೇಹ ಸೇತು : ವಿಜಯಕರ್ನಾಟಕ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Tuesday, April 23, 2024, 23:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X