»   » ಸತ್ಯವಾನ್ ಸಾವಿತ್ರಿ : ಹ....ಹ....ಹ್ಹಾ....ವ್ಹಾರೇ ವಾ!

ಸತ್ಯವಾನ್ ಸಾವಿತ್ರಿ : ಹ....ಹ....ಹ್ಹಾ....ವ್ಹಾರೇ ವಾ!

Posted By:
Subscribe to Filmibeat Kannada


ರಾಮ ಶಾಮ ಭಾಮ ಚಿತ್ರ ನಿಮಗೆ ಇಷ್ಟವಾಗಿದ್ದರೆ, ಸತ್ಯವಾನ್ ಸಾವಿತ್ರಿ ಯೂ ಇಷ್ಟವಾಗುತ್ತದೆ! ಕೊಟ್ಟ ಕಾಸಿಗೆ, ತುಸು ಜಾಸ್ತಿಯೇ ನಗೆ ಪಪ್ಪರ್‌ಮೆಂಟ್ ಚಿತ್ರದ ವಿಶೇಷ!

ಚಿತ್ರ : ಸತ್ಯವಾನ ಸಾವಿತ್ರಿ
ನಿರ್ಮಾಣ : ಅಜಯ್ ಚಂದಾನಿ
ನಿರ್ದೇಶನ : ರಮೇಶ್
ಸಂಗೀತ : ಗುರುಕಿರಣ್
ತಾರಾಗಣ : ರಮೇಶ್, ಡೈಸಿ ಬೊಪ್ಪಣ್ಣ, ಜೆನ್ನಿಫರ್, ಕೋಮಲ್ ಮತ್ತು ಮೋಹನ್ ಮತ್ತಿತರರು.

ಹುಡುಗಿ ಮುನಿಸಿಕೊಂಡಿದ್ದರೆ, ಹೆಂಡತಿ ರಾಂಗಾಗಿದ್ದರೆ , ಮಕ್ಕಳು ತಲೆ ತಿನ್ನುತ್ತಿದ್ದರೆ, ಟ್ರಾಫಿಕ್ ಜಾಮ್ ತಲೆ ಬಿಸಿಮಾಡಿದ್ದರೆ ಸುಮ್ಮನೆ ‘ಸತ್ಯವಾನ್ ಸಾವಿತ್ರಿಗೆ ಹೋಗಿ ಬನ್ನಿ. ಪಕ್ಕದಲ್ಲಿ ಕುಂತ ಹೆಂಡತಿ ಇಷ್ಟವಾಗುತ್ತಾಳೆ, ಮಕ್ಕಳು ಮುದ್ದಾಗಿ ಕಾಣುತ್ತಾರೆ. ಹುಡುಗಿ ಆಪ್ತವಾಗುತ್ತಾಳೆ. ಟ್ರಾಫಿಕ್ ಜಾಮ್ ಮರೆತು ಹೋಗುತ್ತದೆ. ಮನಸು ನಿರಾಳ, ನಗು ಸರಳ. ಇದು ಈ ವರ್ಷ ನಟ ಕಮ್ ರಮೇಶ್ ನೀಡಿದ ಸ್ಪೆಶಲ್ ಊಟ.

ರಾಮ ಶಾಮ ಭಾಮ ನೋಡಿದವರು ಮತ್ತೆ ಅದೇ ಕಾಮಿಡಿ ಸಿನಿಮಾನಾ ಎಂದು ಮೂಗೆಳೆಯುತ್ತಾ ಒಳ ಹೋಗುತ್ತಾರೆ. ಆದರೆ ಬರುವಾಗ ಮಾತ್ರ ಹೊಟ್ಟೆ ಹಿಡಿದುಕೊಂಡು ಬರುತ್ತಾರೆ. ಅಷ್ಟೊಂದು ಫ್ರೆಶ್ ಅಂಡ್ ಪಂಚಿಂಗ್ ಹಾಸ್ಯವನ್ನು ತಿನ್ನಿಸುತ್ತಾರೆ ರಮೇಶ್. ಅವರಿಗೆ ಸಾಥ್ ನೀಡಿದ್ದು ರಾಜೆಂದ್ರ ಕಾರಂತ್ ಬರೆದ ಸಂಭಾಷಣೆ.

ಇಲ್ಲಿಯ ಕೆಲವು ದೃಶ್ಯಗಳನ್ನು ಅಲ್ಲಿಲ್ಲಿ ನೋಡಿರುವ ಸಾದ್ಯತೆ ಇದೆ. ಆದರೆ ಸಂಭಾಷಣೆ ಮಾತ್ರ ತಾಜಾ ತಾಜಾ ತರಕಾರಿ. ಸಾಮಾನ್ಯ ಅನ್ನಿಸುವ ದೃಶ್ಯಕ್ಕೆ ಕಾರಂತ್ ತಮ್ಮ ಪೆನ್ನಿನಿಂದ ಜೀವ ತುಂಬಿದ್ದಾರೆ. ರಮೇಶ್ ನಿರ್ದೇಶಕರಾಗಿ ಇನ್ನಷ್ಟು ಪಳಗಿದ್ದಾರೆ. ಯಾವುದನ್ನೂ ಅತಿಯಾಗಿಸದೆ, ಕಡಿಮೆ ಮಾಡದೆ ಒಂದು ಬ್ಯಾಲೆನ್ಸ್ ಕಾಪಾಡಿಕೊಂಡಿದ್ದಾರೆ. ಅವರ ನಟನೆ ಬಗ್ಗೆ ಕೆಮ್ಮಂಗಿಲ್ಲ ಬಿಡಿ.

ಕಿರುಚಾಟವನ್ನೇ ಕೆಲವರು ಕಾಮಿಡಿ ಅನ್ನುತ್ತಾರೆ. ಆದರೆ ಇಲ್ಲಿ ತೀರಾ ಮೆಲು ಮಾತಿನಲ್ಲಿ ರಮೇಶ್ ನಗು ಮೂಡಿಸುತ್ತಾರೆ. ಈ ಕಾರ್ಯಕ್ಕೆ ಅವರೊಂದಿಗೆ ಅನೇಕ ಕಲಾವಿದರಿದ್ದಾರೆ.

ಇದ್ದರೆ ಇಂಥ ಗೆಳತಿ ಇರಬೇಕು ಎನ್ನುವಂತೆ ಮಾಡುತ್ತಾರೆ ಡೈಸಿ ಬೋಪಣ್ಣ. ಜೆನ್ನಿಫರ್ ಟೈಟ್ ಜೀನ್ಸ್ ಟೀ ಶರ್ಟ್‌ನಲ್ಲಿ ಕಿಕ್ ಕೊಡುತ್ತಾರೆ. ಅನಿರುದ್ಧ ಎಂದಿನಂತೆ ಕೊಟ್ಟ ಪಾತ್ರವನ್ನು ನೀಟಾಗಿ ನಿಭಾಯಿಸಿದ್ದಾರೆ. ಹಾಗೇ ಇಷ್ಟವಾಗುತ್ತಾರೆ. ಸಿಪ್ಪೇಗೌಡನಾಗಿ ಕೋಮಲ್ ಮಸ್ತ್ ಮಸ್ತ್ . ಮೋಹನ್ ಕೂಡ ಹಿಂದೆ ಬಿದ್ದಿಲ್ಲ. ಗುರುಕಿರಣ್ ಹಿನ್ನೆಲೆ ಸಂಗೀತ ಓಟಕ್ಕೆ ಕತೆಯ ಓಟಕ್ಕೆ ದಾರಿ ಮಾಡಿದೆ.

ಇಷ್ಟೆಲ್ಲಾ ಹೇಳಿ ಕತೆಯನ್ನು ತಿಳಿಸದಿದ್ದರೆ ಹೇಗೆ ? ಇದೊಂದು ವಿಚಿತ್ರ ಕತೆ. ನಾಯಕನದು ಹಾರ್ಮಲೆಸ್ ಫ್ಲರ್ಟ್ ಸ್ವಭಾವ. ಹುಡುಗಿಯರ ಜೊತೆ ಅಡ್ಡಾಡುವ ಆಸೆ. ಆದರೆ ಮದುವೆ ಆಗು ಅಂದರೆ ಮೊಸರಲ್ಲಿ ಕಲ್ಲು ಸಿಕ್ಕಂತೆ ಮುಖ ಮಾಡುತ್ತಾನೆ. ಅದಕ್ಕೆ ಗೆಳತಿಯರಿಗೆ ತನ್ನ ಮದುವೆಯಾಗಿ ಮಕ್ಕಳೂ ಇವೆ ಎಂದು ಬೂಸಿ ಬಿಟ್ಟು ಪಾರಾಗುತ್ತಿರುತ್ತಾನೆ. ಆದರೆ ಜೆನ್ನಿಫರ್ ಮಾತ್ರ ನೀನು ಮದುವೆಯಾಗಿದ್ದರೂ ನಿನ್ನನ್ನು ಮದುವೆ ಆಗುತ್ತೇನೆ ಎನ್ನುತ್ತಾಳೆ. ಅಲ್ಲಿಂದ ಶುರುವಾಗುತ್ತದೆ ಸತ್ಯವಾನನ ಸುಳ್ಳಿನ ಪುರಾಣ.

ನಕಲಿ ಹೆಂಡತಿಯಾಗಿ ಡೈಸಿ ಬರುತ್ತಾಳೆ. ಅವಳಿಗೆ ಒಬ್ಬ ಬಾಯ್ ಫ್ರೆಂಡ್ ಹುಟ್ಟುತ್ತಾನೆ. ಇನ್ಯಾರೊ ಮಕ್ಕಳು ಈತನ ಮಕ್ಕಳಾಗುತ್ತವೆ. ಹೀಗೆ ಅನಿವಾರ್ಯವಾಗಿ ನಾಯಕ ತನ್ನ ಜೀವನದಲ್ಲಿ ಭೂಕಂಪಕ್ಕೆ ಕಾರಣವಾಗುತ್ತಾನೆ. ಕೊನೆಗೆ ಏನಾಗುತ್ತದೆ ? ಯಾರು ಯಾರನ್ನು ಮದುವೆಯಾಗುತ್ತಾರೆ ಎನ್ನುವುದನ್ನು ತೆರೆ ಮೇಲೆ ನೋಡಿ.

ಪಕ್ಕಾ ಕತೆ, ಚಿತ್ರಕತೆ, ಸಂಕಲನ, ಸಂಭಾಷಣೆಯಿಂದ ಚಿತ್ರವನ್ನು ಎಲ್ಲೂ ಬೋರಾಗದಂತೆ, ಬೋರಾಡಿ ನಗುವಂತೆ ರಮೇಶ್ ಚಿತ್ರಿಸಿದ್ದಾರೆ. ಕಣ್ಣ ತುಂಬಾ ನಗು ತುಂಬಿಕೊಂಡು ನೋಡುವಂತೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮನೆ ಮಂದಿಯೆಲ್ಲಾ ಮುಜುಗರವಿಲ್ಲದೆ ನೋಡುವ ಸಿನಿಮಾ ಬಂದಿರಲಿಲ್ಲ. ಈ ಪರಿಸ್ಥಿತಿ ತಪ್ಪಿಸಲು ಸತ್ಯವಾನ ಸಾವಿತ್ರಿ ಬಂದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada