twitter
    For Quick Alerts
    ALLOW NOTIFICATIONS  
    For Daily Alerts

    ತನುತನುವಿನಲೂ ಮಜವೊಂದೇ ನಿಜ!

    By Staff
    |


    ಕನ್ನಡದ ಮಟ್ಟಿಗೆ ಇದೊಂದು ಹೊಸ ಪೀಳಿಗೆಯ ಚಿತ್ರ! ಯಾವುದೇ ಅಬ್ಬರಗಳಿಲ್ಲದೇ, ನಯವಾದ ಶೃಂಗಾರ ಕ್ರೀಡೆಯಂತೆ ‘ಗಂಡ ಹೆಂಡತಿ’ ಚಿತ್ರ ಸುದೀರ್ಘವಾಗಿ ಮುಂದುವರೆಯುತ್ತದೆ. ಚಿತ್ರ ಬೋರ್‌ ಆಗುತ್ತದೆ ಅನ್ನಿಸಿದಾಗಲೆಲ್ಲ, ಸಚಿನ್‌(ತಿಲಕ್‌) ಮತ್ತು ಸಂಜನಾರ ಚುಂಬನೋತ್ಸವ ಹಾಜರಾಗುತ್ತದೆ. ತುಟಿತುಟಿಗಳು ಸೇರಿದಾಗ..

    ‘ನನ್ನ ಎದೆಯ ಮೇಲೆ ನಿನ್ನ ಹಚ್ಚೆಯಿದೆ. ನನ್ನ ಉಸಿರನ್ನು ಹಿಡಿದು ನಿನ್ನ ಹೆಸರ ಬರೆಯಬಲ್ಲೆ.. ಮೈ ಬಿಸಿ ಏರಿದಾಗ ಇಳಿಸೋಕೆ ನಾನು ಬೇಕು. ಬಿಸಿ ಕಮ್ಮಿಯಾದ ಮೇಲೆ ಗಂಡ ಬೇಕಾ’ ಎನ್ನುತ್ತಾನೆ ಬಾಯ್‌ ಫ್ರೆಂಡ್‌.

    ‘ನಾವಿಬ್ಬರೂ ಗಂಡ ಹೆಂಡತಿ ಆದ್ವಿ ಮುಂದೇನು? ಫ್ಯಾಮಿಲಿ ಫೋಟೊ ಬಂದದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ನಿಮಗೆ ಭಾವನೆಗಳೇ ಇಲ್ಲ ’ ಅನ್ನೋದು ಹೆಂಡತಿ ದೂರು.

    ‘ನಿನ್ನ ಮದುವೆಯಾಗೋದಕ್ಕೆ ನಾನು ನಿಮ್ಮಪ್ಪನ ಕಾಲು ಹಿಡಿಯಲಿಲ್ಲ. ನೀನೇ ಬಯಸಿ ಮದುವೆಯಾದೆ. ಸ್ವಾರ್ಥ ಬಿಟ್ಟು ನಿನಗೆ ಬೇರೇನೂ ಗೊತ್ತಿಲ್ಲ. ನೀನು ನಿನ್ನ ಬಗ್ಗೆಯಷ್ಟೇ ಯೋಚಿಸ್ತೀಯ. ನಾವು ಬ್ಯಾಂಕಾಕ್‌ಗೆ ಬಂದದ್ದೇಕೆ? --ದುಡಿಯೋದಕ್ಕೆ. ಭಾವನೆಗಳಿಗಿಂತ ನನಗೆ ಬ್ಯುಸಿನೆಸ್‌ ದೊಡ್ಡದು’ ಅನ್ನೋದು ಗಂಡನ ಸಮಜಾಯಿಷಿ.

    ಮೇಲಿನ ಈ ಮೂರು ಹೇಳಿಕೆಗಳೇ, ಚಿತ್ರದ ನಾಯಕಿ ಸಂಜನಾ ಬಟ್ಟೆ ಕಳಚಿದಂತೆ, ಕತೆಯನ್ನು ಕಳಚುತ್ತವೆ. ಈ ಮಧ್ಯೆ ಸಂಜನಾ ಮತ್ತು ತಿಲಕ್‌ರ ಚುಂಬನೋತ್ಸವಗಳು ಒಂದಾದ ಮೇಲೆ ಮತ್ತೊಂದರಂತೆ ಹಾಜರಾಗುತ್ತವೆ. ಈ ಸಂದರ್ಭ ಕನ್ನಡ ಪ್ರೇಕ್ಷಕರಿಗೆ ತುಸು ಹೊಸತು ಅನ್ನಿಸಬಹುದು. ಆಗ ಟಾಕೀಸ್‌ನಲ್ಲಿ ಪರಿಚಿತರ್ಯಾರಾದರೂ ಇದ್ದಾರಾ ಅಂತ ಕಣ್ಣಾಡಿಸಬಹುದು! ತೆರೆ ಮೇಲೆ ಬಿಸಿಯೇರುತ್ತಿದ್ದಂತೆಯೇ, ಪ್ರೇಕ್ಷಕರೂ ಬೆಚ್ಚಗಾಗಿರುತ್ತಾರೆ!

    ಅಂದ ಹಾಗೇ ಈ ಚಿತ್ರದಲ್ಲಿ ಮರ್ಡರ್‌ ಇದ್ದರೂ ಮಿಸ್ಟರಿ ಇಲ್ಲ. ರವಿಬೆಳಗೆರೆ ಇದ್ದರೂ ಕಡಕ್‌ ಮಾತಿಲ್ಲ(ಪಾತ್ರಕ್ಕೆ ಬೇರೊಬ್ಬರಿಂದ ಡಬ್ಬಿಂಗ್‌ ಮಾಡಿಸಲಾಗಿದೆ). ಚಿತ್ರ ಪೂರ್ತಿ ನಡೆಯೋದು ಬ್ಯಾಂಕಾಕ್‌ನಲ್ಲಿ. ಬಾಯ್‌ ಫ್ರೆಂಡ್‌ನ ಯಾಕೆ ಕೊಂದೆ ಅನ್ನೋದನ್ನು ಒಂದು ಕಡೆ ಸಂಜನಾ(ಆಕೆ ನಿಜ ನಾಮವೂ ಸಂಜನಾ! ಪೂರ್ವ ನಾಮ -ಅರ್ಚನಾ), ಇನ್ನೊಂದು ಕಡೆ ಸುಶೀಲ್‌(ವಿಶಾಲ್‌ ಹೆಗಡೆ) ಪೊಲೀಸ್‌ ಅಧಿಕಾರಿ(ರವಿ ಬೆಳಗೆರೆ)ಗೆ ಹೇಳ್ತಾ ಹೋಗ್ತಾರೆ. ಆ ಮೂಲಕ ಕತೆ ಬಿಚ್ಚಿಕೊಳ್ಳುತ್ತದೆ.

    ಕ್ರೆೃಂ ಇದ್ದರೂ, ಅನಗತ್ಯ ಕಿರುಚಾಟಗಳಿಲ್ಲ. ಯಾವುದೇ ಅಬ್ಬರಗಳಿಲ್ಲದೇ, ನಯವಾದ ಶೃಂಗಾರ ಕ್ರೀಡೆಯಂತೆ ಚಿತ್ರ ಸುದೀರ್ಘವಾಗಿ ಮುಂದುವರೆಯುತ್ತದೆ. ಚಿತ್ರ ಬೋರ್‌ ಆಗುತ್ತದೆ ಅನ್ನಿಸಿದಾಗಲೆಲ್ಲ, ಸಚಿನ್‌(ತಿಲಕ್‌) ಮತ್ತು ಸಂಜನಾರ ಚುಂಬನೋತ್ಸವ ಹಾಜರಾಗುತ್ತದೆ. ತುಟಿತುಟಿಗಳು ಸೇರಿದಾಗ ದೃಶ್ಯದ ಹಿನ್ನೆಲೆಯಲ್ಲಿ -

    ನಿದಿರಿಗೆ ರಜಾ
    ನೋವೆಲ್ಲ ವಜಾ
    ಇನ್ನೆಲ್ಲ ಮಜಾ
    ತನುತನುವಿನಲೂ
    ಮಜವೊಂದೇ ನಿಜ
    ತುಟಿ ಸಿಹಿಕಣಜ
    ಈ ಪ್ರತಿ ಇರುಳು ಕೊಡು
    ಸುಖದ ಸಜ

    ಎನ್ನುವ ಹಾಡು ಕೇಳುಗರ ಆವರಿಸುತ್ತದೆ. ಬೆಳ್ಳೆತೆರೆಯನ್ನು ಮೊದಲ ಸಲ ಪ್ರವೇಶಿಸಿದ್ದರೂ ಬಾಯ್‌ ಫ್ರೆಂಡ್‌ ಪಾತ್ರದಲ್ಲಿ ತಿಲಕ್‌ ನೈಜವಾಗಿ ಅಭಿನಯಿಸಿದ್ದಾರೆ. ಜೊತೆಗೆ ಅನುಭವಿಸಿದ್ದಾರೆ. ‘ಓ ಮಲ್ಲಿಗೆಯೇ ವಿಲಾಸಿ, ಕಾಮದರಸಿ ಆಸೆ ತಂದವಳೇ..’ ಅನ್ನುತ್ತಾ ಸಂಜನಾ ಕಂಡಾಗಲೆಲ್ಲ, ತೋಳ್ಬಲಗಳ ಪ್ರದರ್ಶಿಸುತ್ತಾರೆ. ಇವರಿಬ್ಬರ ಚೆಲ್ಲಾಟ.. ಮುದ್ದಾಟ.. ತುಂಟಾಟ ಕಂಡು ಸುಶೀಲ್‌ ‘ಮಾತು ಮುರಿದೇ ಮಾತಾಡದೇ . ಮೋಹಕ ಮೋಸವ ಮಾಡಿದೆ.. ’ ಎಂದು ಗೋಳಾಡುತ್ತಾರೆ. ಹೆಂಡತಿಯನ್ನು ಉಳಿಸಿಕೊಳ್ಳಬೇಕು ಅಂತ ಮತ್ತೊಂದು ಕಡೆಯಿಂದ ಪ್ರಯತ್ನಿಸುತ್ತಾರೆ.

    ‘ಕಣ್‌ ಮುಚ್ಚಿಕೊಂಡು ಬೆಕ್ಕಿನಂತೆ ಹಾಲು ಕುಡಿಯಬೇಡ.. ನಿನ್ನ ಕತೆ ಎಲ್ಲ ನನಗೆ ಗೊತ್ತು’ ಎಂದು ಗೆಳತಿ(ಮಂಜುಭಾಷಿಣಿ)ಒಂದು ಸಲ ಸಂಜನಾಗೆ ಕ್ಲಾಸ್‌ ತಗೋಳ್ತಾಳೆ. ಮನೆಯಲ್ಲಿನ ಮುದ್ದಾದ ಮಗಳು(ಅದವರ ಅಕ್ಕನ ಮಗಳಂತೆ, ಅವಳಿಗಾಗಿಯೇ ಸುಶೀಲ್‌ನ ಮದ್ವೆಯಾದದ್ದಂತೆ) ಸಂಚಲಿ, ಅಮ್ಮ ನನಗೆ ನೀನು ಬೇಕು ಎಂದು ಒಂದೇ ಕಣ್ಣಲ್ಲಿ ಅಳುತ್ತಿರುತ್ತಾಳೆ. ಆದರೂ ಈಯಮ್ಮನಿಗೆ ಸುಖದ ಮಜದ ಚಿಂತೆ.

    ಚಿತ್ರದ ಮೂಲಕ ನಿರ್ದೇಶಕ ರವಿ ಶ್ರೀವತ್ಸ, ಆಧುನಿಕ ಪ್ರೇಮಾಯಣವನ್ನು ಪರಿಚಯಿಸಿದ್ದಾರೆ. ‘ನಾವು ನೂರು ಸರಿ ಹೆಜ್ಜೆ ಹಾಕಿದರೂ ಪ್ರಯೋಜನವಿಲ್ಲ. ಒಂದೇಒಂದು ತಪ್ಪಿನ ಹೆಜ್ಜೆಯಿಂದ ಸಂಸಾರ ನರಕವಾಗುತ್ತದೆ’ ಎಂಬುದನ್ನು ಪದೇಪದೇ ಪಾತ್ರಗಳ ಮೂಲಕ ಹೇಳಿಸುವ ಮೂಲಕ, ಒಂದು ಸಂದೇಶ ನೀಡಲು, ಚುಂಬನ ಚಳವಳಿ ಸಮರ್ಥಿಸಿಕೊಳ್ಳಲು ತಿಣುಕಾಡಿದ್ದಾರೆ. ಜೊತೆಗೆ ಗೆದ್ದಿದ್ದಾರೆ. ಜೊತೆಗೆ ಅಂಥದ್ದೊಂದು ಹಾಡು ಸಹಾ ಇದೆ -

    ಸಂಸಾರಕ್ಕೆ ಹೆಣ್ಣೆ ಕಣ್ಣು
    ಸಂಸಾರದಾದಿ ಹೆಣ್ಣು
    ಶೋಕೀಯಾ ಮೂಲ ಹೆಣ್ಣು
    ಶೋಕದ ಮೂಲ ಹೆಣ್ಣು
    ಸಂಗ್ರಾಮದಾದಿ ಹೆಣ್ಣು
    ಸಂತಾಪಕೆ ಕಾರಣ ಹೆಣ್ಣು

    ‘ಎಲ್ಲಾ ಕುಟುಂಬಗಳಲ್ಲೂ ಸಮಸ್ಯೆಗಳಿರುತ್ತವೆ. ಅದಕ್ಕೆ ನಾನು ಆರಿಸಿಕೊಂಡ ಮಾರ್ಗ ತಪ್ಪು. ಅದು ಪರಿಹಾರವಲ್ಲ’ ಎಂದು ಹೆಂಡತಿ ಬಾಯಲ್ಲಿ ಹೇಳಿಸಿದ್ದಾರೆ. ಚಿತ್ರದ ಕಡೆಯ ಹದಿನೈದು ನಿಮಿಷ, ಈ ಬಗ್ಗೆಯೇ ರವಿ ಬೆಳಗೆರೆಯವರಿಂದ ಭಾಷಣ ಹೊಡೆಸಿದ್ದಾರೆ.

    ಅದೆಲ್ಲಾ ಸರಿ ಶ್ರೀವತ್ಸಾ, ಇಂಥ ಸಬ್ಜೆಕ್ಟ್‌ಗಳನ್ನು ಸಭ್ಯವಾಗಿ ಹೇಳೋದಕ್ಕೆ ಸಾಧ್ಯವಿಲ್ಲವೇ ಅನ್ನೋ ಪ್ರಶ್ನೆ ಕೇಳಬೇಕಾಗುತ್ತದೆ. ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ ಇಂಥದ್ದೇ ಕತೆಯಿದೆ. ಆದರೆ ಅಲ್ಲಿ ಒಂದಿಷ್ಟೂ ಅಸಭ್ಯತೆ ಇಲ್ಲ. ಮುತ್ತು-ಮತ್ತು-ರೋಮಾಂಚಕತೆಗಳನ್ನು ನಮ್ಮ ಹಳೆಯ ಚಿತ್ರಗಳಲ್ಲಿ ಸಂಕೇತಗಳ ಮೂಲಕ ಇನ್ನೂ ಪವರ್‌ಫುಲ್‌ ಆಗಿಯೇ ಹೇಳಿದ್ದಾರೆ ಅನ್ನೋ ಕೊಂಕು ತೆಗೆಯಬಹುದು.

    ನಮ್ಮ ಕನ್ನಡ ಮಾರ್ಕೆಟ್‌ ಇಂಥ ಚಿತ್ರಗಳನ್ನು ಹೇಗೆ ಸ್ವೀಕರಿಸುತ್ತೆ ಅನ್ನೋದು ಈ ಸಂದರ್ಭದಲ್ಲಿಯೇ ಪ್ರಕಟವಾಗಲಿದೆ. ಚಿತ್ರದ ಹಾಟ್‌ ದೃಶ್ಯಗಳನ್ನು ಇನ್ನಷ್ಟು ಹಾಟ್‌ ಆಗಿ ಮೂಡಿಸಲು ಸಂಜನಾ ಮೇಡಂ ಸಹಕರಿಸಿದ್ದಾರೆ. ನಿರ್ದೇಶಕರು ನಿರ್ದೇಶಿಸಿದ್ದಾರೆ. ನಿರ್ಮಾಪಕ ಶೈಲೇಂದ್ರ ಬಾಬು(ಗೌರಮ್ಮ, ಕುಟುಂಬ ನಿರ್ಮಾಪಕ) ನಿರ್ಮಾಣ ಮಾಡಿದ್ದಾರೆ. ಕಾಫಿ ರಾಘವೇಂದ್ರರ ಸಂಭಾಷಣೆ ಕೆಲವೆಡೆ ಕೈತಟ್ಟುವಂತಿದೆ. ಗುರುಕಿರಣ್‌ ಹಾಡುಗಳ ಕೆಲವು ಟ್ಯೂನ್‌ಗಳ ಅನುಕರಿಸಿದ್ದರೂ ಕೇಳಲು ಅಡ್ಡಿಯಿಲ್ಲ. ಛಾಯಾಗ್ರಹಣದ ಬಗ್ಗೆ ಹೆಸರಿಡುವಂತಿಲ್ಲ.

    ಎಲ್ಲವೂ ಸರಿ; ಮಡದಿ-ಮಕ್ಕಳೊಂದಿಗೆ ಇಂಥ ಚಿತ್ರ ನೋಡೋದು ಹೇಗ್ರೀ?


    Saturday, April 20, 2024, 1:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X