»   » ಹಳೇ ಹೆಂಡತಿಯಂಥಾ ಜಗ್ಗೇಶು !

ಹಳೇ ಹೆಂಡತಿಯಂಥಾ ಜಗ್ಗೇಶು !

Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

ಜಗ್ಗೇಶ್‌ ನಟಿಸಿದ ಒಂದು ಚಿತ್ರದ ಟೈಟಲ್‌ ಅನ್ನು ಅವರದೇ ಬೇರೊಂದು ಚಿತ್ರಕ್ಕೆ ಅಂಟಿಸಿದರೆ ಏನೂ ವ್ಯತ್ಯಾಸವಾಗುವುದಿಲ್ಲ. ಹಾಗಂತ ಅವರ ಚಿತ್ರಗಳನ್ನು ಸಾರ್ವಕಾಲಿಕವೆಂದೋ, ಟೈಟಲಾತೀತವೆಂದೋ ಕರೆದು ಆ ಶಬ್ದಗಳಿಗೆ ಅವಮಾನ ಮಾಡಬೇಡಿ. ಜಗ್ಗೇಶ್‌ ಇದೇ ರೀತಿ ಇನ್ನೂ ಐದು ಗಾದೆಮಾತುಗಳ ಹೆಸರಿನ ಚಿತ್ರಗಳಲ್ಲಿ ನಟಿಸಿದ್ದೇ ಆದರೆ ಪರ್ಮನಂಟಾಗಿ ಮನೆಯ ಗಾದಿಯ ಮೇಲೆ ಸೆಟೆಲ್‌ ಆಗುವುದು ಖಂಡಿತ.

ಹಾಗಾದರೆ ಇದೊಂದು ಡಬ್ಬಾ ಚಿತ್ರವೆಂದು ಅರ್ಥವಲ್ಲ. ಎಂದಿನಂತೆ ಜಗ್ಗೇಶ್‌ ತಮ್ಮ ಮ್ಯಾನರಿಸಂನಿಂದ, ಅವರಿಗಷ್ಟೇ ಸಾಧ್ಯವಾಗುವ ಡೈಲಾಗ್‌ ಡೆಲಿವರಿಯಿಂದ, ಅದರಲ್ಲಿ ಹುಟ್ಟಿಸುವ ಪನ್‌ಗಳಿಂದ ನಗಿಸುತ್ತಾರೆ. ಕೊಂಚವಾದರೂ ರಿಲೀಫ್‌ ಕೊಡುತ್ತಾರೆ. ಆದರೆ ಅದೊಂದರಿಂದಲೇ ಚಿತ್ರವನ್ನು ನೋಡುವಂತೆ ಮಾಡಿಸುವ ತಾಕತ್ತು ಅವರಿಗಿಲ್ಲ. ಸಹಾಯ ಮಾಡಲೇಬೇಕಿದ್ದ ಉಳಿದ ವಿಭಾಗಗಳಿಗೆ ಕೆಲಸವಿಲ್ಲ. ಹೀಗಾಗಿ ಇದು ಹುಚ್ಚರ ಸಂತೆಯಲ್ಲಿ ಉಳಿದವರದೇ ಪುಣ್ಯ ಅನ್ನುವಂತಾಗಿದೆ. ಏಕೆಂದರೆ, ಇದು ಅದೇ ಜೋಕುಗಳ, ಅದೇ ಮುಖಗಳ, ಅದೇ ಕತೆಗಳ, ಅದೇ ಜಗ್ಗೇಶ್‌ ಚಿತ್ರ...

ನಾಯಕ ಪ್ರೀತಿಸುವ ಹುಡುಗಿ ಒಂದು ಕಡೆ, ಈತನಿಗೇ ತನ್ನ ಮಗಳನ್ನು ಮದುವೆ ಮಾಡಬೇಕೆನ್ನುವ ಅಕ್ಕ ಮತ್ತೊಂದು ಕಡೆ. ತುರಿಯುವಮಣೆ ಹಲ್ಲಿನ ಮಗಳನ್ನು ಹೇಗಾದರೂ ನಾಯಕನಿಗೆ ಗಂಟು ಹಾಕಲೇಬೇಕೆನ್ನುವ ದೊಡ್ಡಣ್ಣ ಇನ್ನೊಂದು ಕಡೆ. ಈ ಮೂವರ ನಡುವೆ ಸಿಕ್ಕು ಒದ್ದಾಡುವ ನಾಯಕ ಆಗಾಗ ಹಾಡು ಹಾಡುತ್ತಾನೆ, ಪ್ರೀತಿ ಮಾಡುತ್ತಾನೆ, ನಾಟಕವಾಡುತ್ತಾನೆ, ಟೋಪಿ ಹಾಕುತ್ತಾನೆ. ಇಂಥವನಿಗೆ ಹೊಡೆದಾಡಲು ಅವಕಾಶ ನೀಡಲೆಂದು ಒಬ್ಬ ವಿಲನ್‌ ಬರುತ್ತಾನೆ. ಒಂದು ಕಮರ್ಷಿಯಲ್‌ ಚಿತ್ರಕ್ಕೆ ಅನ್ನುವುದಕ್ಕಿಂತ ಜಗ್ಗೇಶ್‌ ಚಿತ್ರಕ್ಕೆ ಇಷ್ಟಿದ್ದರೆ ಸಾಕೆಂದು ನಿರ್ದೇಶಕ ಬಾಲಾಜಿ ಸಿಂಗ್‌ ತಿಳಿದಿದ್ದಾರೆ.

ಲಾಠಿಗೆ ಮೆಣಸಿನಕಾಯಿ ಹಚ್ಚುವ ಜೋಕು ಜಗ್ಗೇಶ್‌ ಇಳಿದ ಮಟ್ಟವನ್ನು ತೋರಿಸುತ್ತದೆ. ನಾಯಕಿ ರಾಧಿಕಾ ಚೌಧುರಿ ಮೈತುಂಬ ಸೀರೆ ಉಟ್ಟಿದ್ದರಿಂದ ಅವಳ ಅಭಿನಯಕ್ಕೆ ಸ್ಕೋಪ್‌ ಸಿಕ್ಕಿಲ್ಲ. ಅದನ್ನು ಹಾಡಿನಲ್ಲಿ ಸಂಪೂರ್ಣ ತೀರಿಸಿಕೊಂಡಿದ್ದಾಳೆ ! ಇನ್ನೊಂದು ಹುಡುಗಿ ಸ್ವಪ್ನ ಮಾಧುರಿ ತನ್ನ ಫ್ಯಾಮಿಲಿ ಲುಕ್‌ ಮುಖದಿಂದ ಇಷ್ಟವಾಗುತ್ತಾಳೆ. ದೊಡ್ಡಣ್ಣ, ಗಿರಿಜಾ ಲೋಕೇಶ್‌ ಮತ್ತು ದತ್ತಣ್ಣ ಅವರವರ ಕೆಲಸ ಮಾಡಿದ್ದಾರೆ. ಹಾಡು, ಸಂಗೀತ, ಛಾಯಾಗ್ರಹಣದ ಬಗ್ಗೆ ಹೇಳುವುದು ವ್ಯರ್ಥ. ಒಂದು ಮಾತಂತೂ ನಿಜ. ಅದೇ ಗಂಡ ಅಥವಾ ಅದೇ ಹೆಂಡತಿಯೇ ಹಳಬರಾಗುವ, ಬೋರಾಗುವ ಇಂದಿನ ದಿನಗಳಲ್ಲಿ ಅದೇ ಜೋಕು, ಅದೇ ಹೆಸರು ಮತ್ತು ಅದೇ ಜಗ್ಗೇಶ್‌ ಕೂಡ ಅದೇ ಹಾದಿಯಲ್ಲಿ...

(ಸ್ನೇಹಸೇತು- ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada