»   » ಚಿತ್ರವಿಮರ್ಶೆ: ಕಂಗಳು ತುಂಬುವ ನಂದಾದೀಪ

ಚಿತ್ರವಿಮರ್ಶೆ: ಕಂಗಳು ತುಂಬುವ ನಂದಾದೀಪ

Subscribe to Filmibeat Kannada

ಆತ ನಾಗಣ್ಣ. ಊರು ಹುಬ್ಬಳ್ಳಿಯ ಸಂಶಿ ಕುಗ್ರಾಮ. ಮುತ್ತು ವ್ಯಾಪಾರಿ. ಊರೂರು ಸುತ್ತಿ, ಮುತ್ತು ಮಾರದಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಮನೆಯಲ್ಲಿ ಮುದ್ದಿನ ಮಡದಿ ಶಾಂತಾ, ಮಗ ರಾಮು. ಬಡತನ ಅವರ ಬ್ಯಾಂಕ್ ಬ್ಯಾಲೆನ್ಸ್. ನಾಗಣ್ಣನ ಕುಟುಂಬದ ಬಗ್ಗೆ ಒಟ್ಟಾರೆ ಹೇಳುವುದಾದರೆ: ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ಅವರ ಬಾಳಿಗೆ...

*ವಿನಾಯಕರಾಮ್ ಕಲಗಾರು

ವಿಧಿ ಮುನಿಸು, ಚಿಗುರದ ಕನಸು: ಮಗ ಅಸಾಧ್ಯ ಬುದ್ದಿವಂತ, ಅವನನ್ನು ಓದಿಸಿ, ಡಾಕ್ಟರ್ ಮಾಡಬೇಕು. ಹೆಂಡತಿಯ ಅಸ್ತಮಾ ಕಾಯಿಲೆಗೆ ಪೇಟೆಯ ಡಾಕ್ಟರ್ ಬಳಿ ಚಿಕಿತ್ಸೆ ಕೊಡಿಸಬೇಕು ಎನ್ನುವುದು ನಾಗಣ್ಣನ ಹೆಬ್ಬಾಸೆ. ಆದರೆ ಅದು ಚಿಗುರೊಡೆಯುವ ಹೊತ್ತಿಗೇ ಆ ದುರ್ವಿಧಿ ಎರಡೂ ಕೈ ಎತ್ತಿ, ಡಬ್ಬಲ್ ಗೇಮ್' ಆಡಲು ಶುರು ಮಾಡುತ್ತೆ. ಶಾಂತಾಳ ಪ್ರಾಣಪಕ್ಷಿ'ಯ ರೆಕ್ಕೆ ಕಿತ್ತು, ಕೈಲಾಸಪರ್ವತಕ್ಕೆ ಎಸೆಯುತ್ತೆ. ಅಪ್ಪ ಅಸಹಾಯಕನಾಗುತ್ತಾನೆ. ಮಗ ತಾಯಿಯಿಲ್ಲದ ತಬ್ಬಲಿಯಾಗುತ್ತಾನೆ. ಕೊನೆಗೆ ಹಿರಿಯರ ಮಾರ್ಗದರ್ಶನದಂತೆ, ಮಗನನ್ನು ನೋಡಿಕೊಳ್ಳಲು ನಾಗಣ್ಣ ಇನ್ನೊಬ್ಬ ಮಲತಾಯಿ ತರುತ್ತಾನೆ. ಅಷ್ಟಕ್ಕೆ ಸಿನಿಮಾ ಮುಗಿದರೆ ಅದು ಗುರುರಾಜ್ ಹೊಸಕೋಟೆಯವರ ಕಣ್ಣೀರಿನ ಕತೆ' ಆಗುವುದಿಲ್ಲ; 32 ನಿಮಿಷದ ಕರುಳು ಕಿವಿಚುವ ಜನಪದ ಗೀತೆಯಾಗುವುದಿಲ್ಲ.

ಅಲ್ಲಿಂದ ಕತೆ ಇನ್ನೊಂದು ಆಯಾಮಕ್ಕೆ ತಿರುಗಿ ಕೊಳ್ಳುತ್ತೆ. ಜಾಲಿ ಮರದ ನೆರಳು ನೆರಳಲ್ಲ, ಮಲತಾಯಿ ಯಾವತ್ತೂ ತಾಯಿಯಲ್ಲ' ಎಂಬ ಗಾದೆಯ ಅರ್ಥದ ಸ್ಪಷ್ಟ ಚಿತ್ರಣ ಸಿಗುತ್ತೆ. ಗಂಡ ಮುತ್ತು ಮಾರಲು ಪ್ಯಾಟೆಯ ಹಾದಿ ಹಿಡಿಯುತ್ತಾನೆ. ಇತ್ತ ಮಲತಾಯಿ' ಮಾಯವ್ವ, ತನ್ನ ಹಸಿದ ಹೊಟ್ಟೆ ' ತುಂಬಿಸಿಕೊಳ್ಳಲು ಪರ ಪುರುಷನ ಸಂಘ' ಮಾಡುತ್ತಾಳೆ. ಗಂಡನಿಂದ ದಕ್ಕದ ದಾಳಿಂಬೆ' ಯನ್ನು ಕಾಳಸಂತೆ'ಯಲ್ಲಿ ಹುಡುಕಿ ತರುತ್ತಾಳೆ. ದೇಹದ ಬೆವರಿಳಿಸಲು ಹರಸಾಹಸ' ಪಡುತ್ತಾಳೆ. ಅತ್ತ ಅಪ್ಪ ಮಗನ ಓದಿಗಾಗಿ, ಹಗಲು ರಾತ್ರಿ ಬೆವರು ಸುರಿಸು ತ್ತಿರುತ್ತಾನೆ. ಆದರೆ ಮಾಯವ್ವ ಮಲಮಗ ರಾಮುನನ್ನು ಮಲಕ್ಕಿಂತ ಕಡೆಯಾಗಿ ಕಾಣುತ್ತಾಳೆ. ಕೊಡಬಾರದ ಕಷ್ಟ ಕೊಟ್ಟು, ಶಾಲೆ ಬಿಡಿಸಿ, ದನ ಕಾಯಲು ಕಳಿಸುತ್ತಾಳೆ...

ಶಿವು ಹಿರೇಮಠ್ ನಿರ್ದೇಶನದ ನಂದಾದೀಪ' ಚಿತ್ರದ ಕತೆಯ ಸಾರವಿದು. ಇದು ಯಾವ ಕ್ಯಾಟಗರಿಯ ಚಿತ್ರ ಎಂಬ ಪ್ರಶ್ನೆಗೆ ಸಾರಾಸಗಟಾಗಿ ಉತ್ತರಿಸುವುದು ಕಷ್ಟ. ಅತ್ತ ಕಮರ್ಷಿಯಲ್ ಆಗಿಯೂ ಇಲ್ಲ, ಇತ್ತ ಕಲಾತ್ಮಕ ಚಿತ್ರವೂ ಅಲ್ಲ. ಒಟ್ಟಾರೆ ಇದೊಂದು ಆಫ್‌ಬೀಟ್ ಚಿತ್ರ. ಹಾಗಾಗಲು ಕಾರಣವಿದೆ. ಇದು ಗುರುರಾಜ್ ಹೊಸಕೋಟೆಯವರ ಜನಪದ ಗೀತೆಯ ತಿರುಳನ್ನು ಆಧರಿಸಿದ ಚಿತ್ರ. ಇಡೀ ಸಿನಿಮಾ ಕಣ್ಣೀರಿನ ಪ್ರತೀಕ. ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಕತೆ. ಅಚ್ಚುಕಟ್ಟಾದ ಸೆಟ್ ಹಾಕಿ, ಎಲ್ಲಿಯೂ ಆಭಾಸವೆನಿಸದಂತೆ, ಪಕ್ಕಾ ಜನಪದ ಹಿನ್ನೆಲೆಯಲ್ಲಿ ಚಿತ್ರೀಕರಣ ಮಾಡಿರುವುವುದು ಹಿರೇಮಠರ ಹಿರಿಮೆ.

ಸೆಂಟಿಮೆಂಟ್ ದೃಶ್ಯಗಳು ನೈಜತೆಗೆ ಸಾಕಷ್ಟು ಹತ್ತಿರವಾಗಿವೆ. ರಾಮಣ್ಣನ ಪಾತ್ರಕ್ಕೆ ದೇವರಾಜ್ ಹೊಂದಿಕೊಂಡಿದ್ದಾರೆ. ಶ್ರುತಿ ಅಮ್ಮನ ಪಾತ್ರಕ್ಕೆ ಹೇಳಿಮಾಡಿಸಿದಂತಿದೆ. ಆದರೆ ನೇಪಥ್ಯ ದೃಶ್ಯಗಳನ್ನು ಸೃಷ್ಟಿಸುವಷ್ಟು ಸರಾಗವಾಗಿ ಸಂಭಾಷಣೆಯ ಬಳಕೆ ಆಗಿಲ್ಲ. ಹಳ್ಳಿ ಸೊಗಡು ಸೂಸಬೇಕಾದ ಸಂಭಾಷಣೆ ಯಲ್ಲಿ ಇದ್ದಕ್ಕಿದ್ದಂತೆ ಗಾಂನಗರದ ಗಾಳಿ ಬೀಸತೊಡ ಗುತ್ತದೆ. ಗುರುರಾಜ್ ಹೊಸಕೋಟೆಯವರ ಡೈಲಾಗ್‌ಗಳು ಮಾತ್ರ ಜನಪದ ಕಂಪು ಸೂಸುತ್ತದೆ. ಉತ್ತರ ಕರ್ನಾಟಕದ ಕೆಲವು ಗಾದೆಗಳ ಬಳಕೆ ಕತೆಯ ಘನತೆಗೆ ಮೆರುಗು ನೀಡಿದೆ. ಮಾಯವ್ವಳಾಗಿ ಸಂಜನಾ ಪಡ್ಡೆಗಳ ನಿದ್ದೆಗೆಡಿಸುತ್ತಾಳೆ. ಕರಿಬಸವಯ್ಯ ಕಾಮಿಡಿ ಮಾಡುತ್ತೇನೆ ಎಂದು ಏನೇನೋ ಮಾಡುವುದು ಮಾತ್ರ ಸಹಿಸಲಸಾಧ್ಯ. ನಿರ್ದೇಶಕರು ಕನ್ಯೆಯ ಕಾಮ'ನೆಗಳನ್ನು ಅಭಿವ್ಯಕ್ತಿ ಗೊಳಿಸುವ ನೆಪದಲ್ಲಿ ಎಲ್ಲಿಯೂ ಕಣ್ಣಾ ಮುಚ್ಚಾಲೆ ಆಟ'ವನ್ನು ವೈಭವೀಕರಣ' ಮಾಡಿಲ್ಲ. ಅದು ಅವರಿಗೆ ಮಾತ್ರ ಸಂದಾಯವಾಗಬೇಕಾದ ಗೌರವ.

ಮಾಸ್ಟರ್ ಮನೋಜ್ ಇಡೀ ಕತೆಯ ಕೇಂದ್ರಬಿಂದು. ಆ ಪುಟ್ಟ ಪ್ರತಿಭೆ ಅಷ್ಟು ಅಚ್ಚುಕಟ್ಟಾಗಿ ನಟಿಸಿದೆ. ತಾಯಿಯ ಸಮಾಧಿ ಎದುರು ಕುಳಿತು, ಅಮ್ಮಾ, ನಿನ್ನನ್ನು ನೆನೆಸಿ ಕೊಂಡು ಹಳಸನ್ನ ತಿಂದರೂ ಅದು ಮೃಷ್ಟಾನ್ನ ದಂತಿರುತ್ತೆ' ಎಂದು, ಗಬಗಬ ನುಂಗುವಾಗ ದುಃಖ ಉಮ್ಮಳಿಸಿ ಬರುತ್ತೆ. ಈ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ಸಂದಾಯ ವಾದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ಆದರೆ ಇಂದು ಎಷ್ಟು ಜನ: ಕಣ್ಣೀರಿನ ಕತೆಯಿರುವ ಸಿನಿಮಾವೊಂದು ಬಿಡುಗಡೆ ಆಗಿದೆ. ಒಮ್ಮೆ ನೋಡಿ, ಗೊಳ ಗೊಳ ಅಳೋಣ, ರಿಲ್ಯಾಕ್ಸ್ ಆಗೋಣ' ಎಂದು ಯೋಚಿಸುತ್ತಾರೆ ಹೇಳಿ? ಏಕೆಂದರೆ ದುನಿಯಾ ಬದಲಾಗಿದೆ, ಪ್ರೇಕ್ಷಕರ ಚಿಂತನೆಗಳು ಚೇಂಜ್ ಆಗಿವೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada