»   » ನಗುವಿನ ದೋಣಿಯಲ್ಲಿಯ ಪಯಣ

ನಗುವಿನ ದೋಣಿಯಲ್ಲಿಯ ಪಯಣ

Posted By:
Subscribe to Filmibeat Kannada
  • ಮಹಾಂತೇಶ ಬಹಾದುಲೆ
ಒಂದೇ ರೀತಿಯ ಹೆಸರುಗಳಿಂದ ಆಗುವ ಫಜೀತಿಗಳು, ಒಂದು ಸುಳ್ಳನ್ನು ಮುಚ್ಚಲು ನೂರೆಂಟು ಸುಳ್ಳುಗಳ ಸೃಷ್ಟಿ, ಪರಸ್ಪರ ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧವಾಗುವ ದಂಪತಿ, ಪ್ರೀತಿಯನ್ನು ಮಾತ್ರ ಯಾವುದೇ ಪ್ರಸಂಗದಲ್ಲೂ ಹಂಚಿಕೊಳ್ಳಲಾಗದಂಥ ಸೂಕ್ಷ್ಮತೆಗಳನ್ನು ಪೋಣಿಸುತ್ತ ಹೋದರೆ ಅಪ್ಪಟ ಮನರಂಜನೆಯ ಚಿತ್ರವೊಂದು ಸಿದ್ಥವಾಗದೆ?

ಇಂಥದೊಂದು ಪ್ರಯತ್ನವನ್ನು ಮಲಯಾಳಿಗಳು ಎಂದೋ ಮಾಡಿದ್ದಾರೆ. ಅದು ನಂತರ ತೆಲುಗಿಗೆ ರಿಮೇಕಾಯಿತು. ಹಿಂದಿಯಲ್ಲಿ ಅದು ‘ ಹಂಗಾಮ’ ಹೆಸರಿನಲ್ಲಿ ಹೆಸರು ಮಾಡಿತು. ಅದೀಗ ಕನ್ನಡಕ್ಕೆ ರೀರೀರೀಮೇಕಾಗಿ ‘ಜೂಟಾಟ’ವಾಗಿ ಬಂದಿದೆ.

ಇದು ‘ಗಂಭೀರವಾದ ಹಾಸ್ಯ’ ಚಿತ್ರ ಎಂದು ನಿರ್ದೇಶಕ ಎನ್‌. ಎಸ್‌. ಶಂಕರ್‌ ಹೇಳಿದ್ದು ಸುಳ್ಳೇನಲ್ಲ. ಏಕೆಂದರೆ ಇಲ್ಲಿ ಕುಚೋದ್ಯವಿಲ್ಲ, ಹಾಸ್ಯದ ನೆಪದಲ್ಲಿ ಬೇರೆಯವರನ್ನು ಅಪಹಾಸ್ಯ ಮಾಡುವ ಯತ್ನವಿಲ್ಲ, ದ್ವಂದಾರ್ಥ ಬಳಸಿ ಅದನ್ನು ಹಾಸ್ಯ ಎಂದು ಹೇಳುವ ಮೂರ್ಖತನವಿಲ್ಲ. ಖಂಡಿತವಾಗಿಯೂ ಕುಟುಂಬ ಸಮೇತ ನೋಡುವ ಕಾಮಿಡಿ ಚಿತ್ರವಿದು.

ಸಂಗೀತದ ಹುಚ್ಚಿನಿಂದ ತನ್ನ ಹಳ್ಳಿ ಬಿಟ್ಟು ಬರುವ ಸಂಜು(ಧ್ಯಾನ್‌) ಹಾಗೂ ಮನೆಯವರು ನಿಶ್ಚಯಿಸಿದವನೊಡನೆ ಮದುವೆಯಾಗಲು ಒಪ್ಪದೇ ನೌಕರಿ ಅರಸಿಕೊಂಡು ಬರುವ ನಂದಿತಾ (ರೀಚಾ) ಬೆಂಗಳೂರಿನಲ್ಲಿ ಭೇಟಿಯಾಗುವುದು, ಮನೆ ಮಾಲೀಕರಿಗೆ ತಾವು ದಂಪತಿ ಎಂದು ಸುಳ್ಳು ಹೇಳಿ ತಮಗರಿಯದಂತೆ ಪ್ರೇಮಪಾಶದಲ್ಲಿ ಬೀಳುವುದು ಕಥೆಯ ಒಂದು ಮಗ್ಗುಲು.

ಮತ್ತೊಂದೆಡೆ ವಿಡಿಯೋಕಾನ್‌ವಿಕ್ಕಿ(ಆಕಾಶ್‌) ನಂದಿತಾಳ ಆಕರ್ಷಣೆಗೆ ಒಳಗಾಗುವುದು ಇನ್ನೊಂದು ಮಗ್ಗುಲನ್ನು ಪರಿಚಯಿಸುತ್ತ ತ್ರಿಕೋಣ ಪ್ರೇಮ ಕಥೆಯಾಗಿ ಪರಿವರ್ತನೆ , ನಂದಿತಾ ಹೇಳುವ ಒಂದೇ ಸುಳ್ಳು ರಂಗಾಯಣ ರಘು ಹಾಗೂ ತುಳಸಿ ಶಿವಮಣಿ ಜೋಡಿಯನ್ನು ಫಜೀತಿಗೆ ಈಡು ಮಾಡುವ ಸನ್ನಿವೇಶಗಳು ಸಿನಿಮಾದುದ್ದಕ್ಕೂ,ಅಷ್ಟೇ ಏಕೆ ಕೊನೆತನಕ ಸಾಗಿಕೊಂಡು ಹೋಗಿವೆ.

ರಂಗಾಯಣ ರಘು ಹಾಗೂ ತುಳಸಿ ಪಾತ್ರಗಳು ನಾಯಕ-ನಾಯಕಿ ಪಾತ್ರಗಳಷ್ಟೇ ಮಿಂಚಿದ್ದು ವಿಶೇಷ. ಇನ್ನೊಂದು ರೀತಿಯಲ್ಲಿ ಇದು ಪೋಷಕ ಪಾತ್ರಗಳಿಗೆ ಪೋಷಣೆಯನ್ನು ಕೊಟ್ಟಂತಾಗಿದೆ. ಚಿತ್ರ ಕಥೆ ಹಾಸ್ಯದಿಂದಲೇ ಆರಂಭವಾಗಿ ಅದರೊಂದಿಗೇ ಮುಂದುವರಿದ ಹಾಸ್ಯದಲ್ಲೇ ಕೊನೆಗೊಳ್ಳುವ ನಗುವಿನ ದೋಣಿಯ ಪಯಣ ಅನುಭವ ನೀಡುತ್ತದೆ.

ಹಾಸ್ಯ ಪ್ರಸಂಗಗಳು ಕಾಲ್ಪನಿಕವಾದರೂ ಇದರಲ್ಲಿ ಬರುವ ಸನ್ನಿವೇಶಗಳು ಮಾತ್ರ ನೈಜ ಬದುಕಿನಲ್ಲಿ ದಿನವೂ ಕಾಣುವಂಥವೆ. ಹಿತ-ಮಿತ ಹಾಸ್ಯ, ನವಿರು ಸಂಭಾಷಣೆ ಮುದ ನೀಡುತ್ತದೆ. ಹಿನ್ನೆಲೆ ಸಂಗೀತ ಸಂದರ್ಭಗಳಿಗೆ ತಾಕತ್ತು ತುಂಬುತ್ತದೆ. ಒಂದು ಹಾಡು ಸಂಗೀತದ ಖುಷಿ ಕೊಡುತ್ತದೆ.

ಬೇರೆ ಭಾಷೆಗಳ ಅವತರಣಿಕೆಗಳಿಗೆ ಹೋಲಿಸದೇ ಇದೊಂದು ಕನ್ನಡ ಸಿನಿಮಾ ಎಂದಷ್ಟೆ ನೋಡಿದರೆ ಈ ಚಿತ್ರ ಇಷ್ಟವಾಗುತ್ತದೆ. ಆದರೆ ಪ್ರಮುಖ ತಾರಾ ಬಳಗದಲ್ಲಿರುವ ಧ್ಯಾನ್‌, ಆಕಾಶ್‌ ಇಲ್ಲವೆ ರೀಚಾ ಯಾರೊಬ್ಬರೂ ಕನ್ನಡಿಗರಲ್ಲ ಎಂದು ನೆನಪಾದಾಗ ಅಷ್ಟೇ ನೋವೆನಿಸುತ್ತದೆ.

ಅದನ್ನೆಲ್ಲ ಪಕ್ಕಕ್ಕಿಟ್ಟು ಇವರನ್ನು ಕಲಾವಿದರೆಂದು ನೋಡಲು ಹೋದರೆ, ಈ ಮೂವರಲ್ಲಿ ಯಾರೂ ಪರಿಪಕ್ವವಾದ ಅಭಿನಯ ನೀಡಲು ಸಮರ್ಥವಾಗಿಲ್ಲ ಎಂದು ಹೇಳುವುದು ಅನಿವಾರ್ಯವೆನಿಸುತ್ತಿದೆ. ಧ್ಯಾನ್‌ ಅಭಿನಯ ಇದ್ದುದರಲ್ಲಿ ಪರವಾಗಿಲ್ಲ. ಆಕಾಶ್‌ ಅಭಿನಯಿಸಲು ಯತ್ನಿಸಿದ್ದಾರೆ. ರೀಚಾ ಮಾತ್ರ ಎಲ್ಲ ಸಂದರ್ಭಗಳಲ್ಲೂ ಒಂದೇ ತೆರವಾದ ಪೋಸ್‌ ಕೊಡುತ್ತಾರೆ. ಯಾವ ಸನ್ನಿವೇಶಗಳಿಗೂ ತಾರತಮ್ಯ ತೋರಿಲ್ಲ.

ರಂಗಾಯಣ ರಘು ಹಾಗೂ ತುಳಸಿ ಶಿವಮಣಿ ಚಿತ್ರಕ್ಕೆ ರಂಗುತುಂಬಿದ್ದಾರೆ. ಪೋಷಕ ಪಾತ್ರದಲ್ಲಿ ಶ್ರೀನಾಥ್‌ ಕೂಡ ಬಂದು ಹೋಗುತ್ತಾರೆ. ಚಿತ್ರೀಕರಣ ಬೆಂಗಳೂರಿನ ವ್ಯಾಪ್ತಿಯನ್ನು ದಾಟದೇ ಇರುವುದರಿಂದ ಅಂಥ ಅಪರೂಪದ ತಾಣಗಳ ದರ್ಶನವೇನೂ ಪ್ರೇಕ್ಷಕರಿಗೆ ದೊರೆಯುವುದಿಲ್ಲ. ಹೋಗಲಿ ಹಾಡಿನ ಸಂದರ್ಭದಲ್ಲಾದರೂ ರಮಣೀಯ ಪ್ರದೇಶಗಳನ್ನು ತೋರಿಸಬಹುದಿತ್ತು.

ಕೆಲವು ಲೋಪದೋಷಗಳ ನಡುವೆಯೂ ಸಿನೆಮಾ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದೇ ಇದರ ಪ್ಲಸ್‌ ಪಾಯಿಂಟ್‌. ಒಟ್ಟಿನಲ್ಲಿ ಕನ್ನಡಿಗರಿಗೆ ಇಂಥದೊಂದು ಸದಭಿರುಚಿಯ ಚಿತ್ರ ಕೊಟ್ಟ ನಿರ್ಮಾಪಕರಾದ ಕೆ.ವಿ. ವಿಜಯಕುಮಾರ್‌, ಸಾಧನಾ ಶಂಕರ್‌ ಹಾಗೂ ಗೋವಿಂದರಾಜು ಅಭಿನಂದನಾರ್ಹರು.

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada