For Quick Alerts
  ALLOW NOTIFICATIONS  
  For Daily Alerts

  ರೀಮೇಕಿಗೂ ಸ್ವಮೇಕಿಗೂ ‘ಸೈ’ಯ್ಯರೆ ಸಯ್ಯಾ

  By Staff
  |
  • ಚೇತನ್‌ ನಾಡಿಗೇರ್‌
  ಮೊದಲು ಒಂದು ಸಣ್ಣ ಚರ್ಚೆ. ರೀಮೇಕ್‌ ಮಾಡಬೇಕಾದರೆ ಏನೆಲ್ಲಾ ಕಷ್ಟಗಳನ್ನು ಎದುರಿಸಬೇಕಾಗಬಹುದು? ರೀಮೇಕ್‌ ಚಿತ್ರ ಮಾಡಿದವರೆಂಬ ಅಪವಾದ ಹೊರಬೇಕು. ಇದಕ್ಕೂ ಮಿಗಿಲಾಗಿ ರೀಮೇಕ್‌ ಹಕ್ಕುಗಳಿಗೆ ಲಕ್ಷಾಂತರ ಖರ್ಚು ಮಾಡಬೇಕು. ಆದರೆ ರೀಮೇಕ್‌ ಮಾಡಿದರೂ, ಮಾಡದಿದ್ದ ಹಾಗಿದ್ದರೆ ಹೇಗೆ? ಅದೂ ಸುಲಭ.

  ಸಿಂಪಲ್ಲಾಗಿ ಬೇರೆ ಭಾಷೆಗಳಲ್ಲಿ ಯಶಸ್ವಿಯಾದ ಅಂಶಗಳನ್ನಿಟ್ಟುಕೊಂಡು, ಅದಕ್ಕೊಂದು ಚಿತ್ರಕತೆ ಬರೆದು, ಸ್ವಮೇಕ್‌ ಎಂದು ಬಿಡುಗಡೆ ಮಾಡಿದರೆ? ಆಗ ಅಪವಾದವೂ ಇಲ್ಲ. ಖರ್ಚೂ ಇಲ್ಲ. ನಿರ್ದೇಶಕ ಅರುಣ್‌ಪ್ರಸಾದ್‌ ಕೂಡ ಹಾಗೆಯೇ ಮಾಡಿದ್ದಾರೆ. ಇದು ಅವರ ಅಮೋಘ ಎರಡನೆಯ ಪ್ರಯತ್ನ. ಈ ಹಿಂದೆ ಸುದೀಪ್‌ ನಾಯಕತ್ವದಲ್ಲಿ ಚಂದು ಎಂಬ ಚಿ(ತ್ರಾನ್ನ)ತ್ರ ಮಾಡಿದ್ದರು. ಈಗ ಮತ್ತೆ ಅವರದೇ ನಾಯಕತ್ವದಲ್ಲಿ ‘ಸೈ’ ಎಂಬ ಚಿತ್ರ ಮಾಡಿದ್ದಾರೆ.

  ಒಂದಲ್ಲ, ಎರಡಲ್ಲ, ಆದರೆ ಮೂರು ಚಿತ್ರಗಳ ರೀಮೇಕು ಈ ‘ಸೈ’. ಮೊದಲು ಬಂದಿದ್ದು ತೆಲುಗಿನ ‘ಶ್ರೀರಾಮ್‌’. ಅದು ತಮಿಳಿಗೆ ‘ದಿಲ್‌’ ಎಂದು ರೀಮೇಕಾಯಿತು. ಅದೇ ಚಿತ್ರ ಹಿಂದಿಯಲ್ಲಿ ‘ಧಮ್‌’ ಎಂಬ ಹೆಸರಿನಲ್ಲಿ ಬಂತು. ಈಗ ಅವೆಲ್ಲದರ ಪರಿಷ್ಕೃತ ಅವತರಣಿಕೆಯಂತೆ ‘ಸೈ’ ಬಂದಿದೆ.

  ಚಕ್ರಿ(ಸುದೀಪ್‌)ಗೆ ಪೊಲೀಸ್‌ ಅಧಿಕಾರಿಯಾಗಿ ದೇಶ ಸೇವೆ ಮಾಡಬೇಕೆಂಬ ಹಂಬಲ. ವಾರಕ್ಕೊಂದು ಬಾರಿ ವಠಾರದಲ್ಲಿಯೇ ಕಮಾಂಡೋ ವೇಷ ಧರಿಸಿ ಸ್ನೇಹಿತರ ಜತೆ ಕಳ್ಳ-ಪೊಲೀಸ್‌ ಆಟವನ್ನೂ ಆಡುತ್ತಿರುತ್ತಾನೆ. ಜತೆಗೆ ಯಾರಾದರೂ ಪೊಲೀಸರ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ಅವನಿಗೆ ಭಯಂಕರ ಸಿಟ್ಟು. ಹೀಗೆ ಆಡುತ್ತಾ, ಹೊಡೆದಾಡುತ್ತಾ, ಸಮಯ ಸಿಕ್ಕರೆ ಹಾಡುತ್ತಾ ಪೊಲೀಸ್‌ ಪರೀಕ್ಷೆಯಲ್ಲಿ ಆಯ್ಕೆಯೂ ಆಗುತ್ತಾನೆ. ಅಷ್ಟೊತ್ತಿಗೆ ತನ್ನ ಭಾವೀ ಭಾವನ ತಂಗಿ(ಕನ್ನಿಹಾ)ಯ ಜತೆ ಪ್ರೀತಿ ಚಿಗುರೊಡೆಯುತ್ತದೆ.

  ಒಮ್ಮೆ ಚಕ್ರಿ ತನ್ನ ಪ್ರೇಮಿಯಾಡನಿದ್ದಾಗ, ಭ್ರಷ್ಟ ಇನ್‌ಸ್ಪೆಕ್ಟರ್‌ ಮುಸುಳಿ(ಪಶುಪತಿ)ಯಾಂದಿಗೆ ಜಗಳವಾಗುತ್ತದೆ. ಒಬ್ಬ ಸಾಮಾನ್ಯ ಹುಡುಗ ತನ್ನ ಮುಖ ಕಿತ್ತುಹೋಗುವಂತೆ ಹೊಡೆದನಲ್ಲ ಎಂದು ಮುಸುಳಿ, ಚಕ್ರಿಯ ವಿರುದ್ಧ ಸಂಘರ್ಷಕ್ಕಿಳಿಯುತ್ತಾನೆ ಅಲ್ಲಿಯವರೆಗೂ ತಂದೆ-ತಾಯಿಗೆ ಒಳ್ಳೆಯ ಮಗ, ವಠಾರಕ್ಕೆಲ್ಲ ಚಿನ್ನದಂಥಾ ಹುಡುಗ ಎಂದು ಸೈ ಎನಿಸಿಕೊಂಡಿದ್ದ ಚಕ್ರಿ ಈ ಸಂಘರ್ಷದಲ್ಲೂ ಹೇಗೆ ಸೈ ಎನಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಮುಂದಿನ ಭಾಗ.

  ರೀಮೇಕ್‌ ಚಿತ್ರವಾದರೂ ಮತ್ತೊಮ್ಮೆ ನೋಡುವಂತೆ ಮಾಡುವಲ್ಲಿ ಅರುಣ್‌ಪ್ರಸಾದ್‌ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ. ಆ ಯಶಸ್ಸು ಮೊದಲಾರ್ಧದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಮೊದಲಾರ್ಧ ಲವಲವಿಕೆಯಿಂದ ಮುಗಿಯುವುದೇ ಗೊತ್ತಾಗುವುದಿಲ್ಲ. ಆದರೆ, ಇದೇ ಮಾತು ದ್ವಿತೀಯಾರ್ಧಕ್ಕೆ ಹೇಳುವಂತಿಲ್ಲ. ನಾಯಕನಿಗೆ ಕಾನೂನು, ನ್ಯಾಯ, ನಿಷ್ಠೆಗಳ ಬಗ್ಗೆ ಅತೀವ ಕಾಳಜಿ ಇರುವುದರಿಂದಲೋ ಏನೋ ಅವನ ನ್ಯಾಯ, ನಿಷ್ಠೆ ಮೆರೆಸುವಲ್ಲಿ ಚಿತ್ರ ಅಂತ್ಯವಾಗುತ್ತದೆ. ಆ ಮಟ್ಟಿಗೆ ಇದು ಸಂಪೂರ್ಣ ವಿಭಿನ್ನ ಚಿತ್ರ. ಹಳೆಯ ಮೂರು ಚಿತ್ರಗಳಲ್ಲಿ ನಾಯಕನ ಕಾರ್ಯ-ಕಲಾಪಗಳೇನಿದ್ದರೂ ಕೌಟುಂಬಿಕ ವ್ಯವಹಾರಗಳಿಗೆ ಸೀಮಿತವಾಗಿತ್ತು. ಹಾಗಾಗಿ ಅರುಣ್‌ಪ್ರಸಾದ್‌ ಏನೋ ಹೊಸತನ್ನು ಕೊಟ್ಟರಲ್ಲ ಎಂದು ಖುಷಿಪಡಬೇಕು.

  ನಟನೆಯ ವಿಷಯಕ್ಕೆ ಬಂದರೆ ಸುದೀಪ್‌ಗೆ ಫುಲ್‌ ಮಾರ್ಕ್ಸ್‌. ತಮ್ಮ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ಅವರಿಲ್ಲಿ ಸಿಗರೇಟು ಕಡಿಮೆ ಮಾಡಿದ್ದಾರೆ. ಹಾಗಾಗಿ ಮತ್ತಷ್ಟು ಆರೋಗ್ಯವಂತರಾಗಿ ಕಾಣುತ್ತಾರೆ. ಚಿತ್ರವನ್ನು ಸಂಪೂರ್ಣವಾಗಿ ಹೆಗಲಮೇಲೆ ಹೊತ್ತು ಸೈ ಎನಿಸಿಕೊಂಡಿದ್ದಾರೆ. ನಾಯಕಿ ಕನ್ನಿಹಾ ಮುದ್ದಾಗಿ ಕಾಣುತ್ತಾರೆ. ಮುಗುಳಿ ಪಾತ್ರಧಾರಿ ಪಶುಪತಿಯವರ ಆರ್ಭಟ ಸ್ವಲ್ಪ ಹೆಚ್ಚಾಯಿತೇನೋ? ಅವರ ಅಭಿನಯ ಚೆನ್ನಾಗಿದೆ. ರಾಜೇಶ್‌ರವರಿಗೊಂದು ಸುದೀರ್ಘ ಪಾತ್ರವಿದೆ. ಇನ್ನು ಮಂಡ್ಯ ರಮೇಶ್‌ ಹಾಗೂ ಬುಲೆಟ್‌ ಪ್ರಕಾಶ್‌ ಪ್ರೇಕ್ಷಕರನ್ನು ನಗಿಸುವ ತಮ್ಮ ಜವಾಬ್ದಾರಿಯಲ್ಲಿ ಗೆಲ್ಲುತ್ತಾರೆ. ಇನ್ನು ಅವಿನಾಶ್‌, ಶ್ರೀನಾಥ್‌, ಸುಮಿತ್ರಾ, ಸತ್ಯಜಿತ್‌ ಮುಂತಾದವರ ಅಭಿನಯವೂ ಸೈ.

  ವೆಂಕಟ್‌ರ ಛಾಯಾಗ್ರಹಣದಲ್ಲಿ ಹೊಡೆದಾಟದ ದೃಶ್ಯಗಳು ಚೆನ್ನಾಗಿ ಮೂಡಿಬಂದಿವೆ. ಆದರೆ ರಮಣೀಯವಾಗಬೇಕಿದ್ದ ಹೊರದೇಶಗಳಲ್ಲಿನ ಹಾಡಿನ ದೃಶ್ಯಗಳು ಮಸುಕಾಗಿವೆ. ಗುರುಕಿರಣ್‌ ಸಂಗೀತ ನಿರ್ದೇಶನದಲ್ಲಿ ಒಂದು ಹಾಡು ಹಿಂದಿ ಹಾಗೂ ಮತ್ತೊಂದು ತೆಲುಗಿನ ಹಾಡಿನಂತಿರುವುದನ್ನು ಬಿಟ್ಟರೆ ಉಳಿದವು ಕೇಳಲಡ್ಡಿಯಿಲ್ಲ.

  (ಸ್ನೇಹಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X