ಶಿವಣ್ಣ ಈಗ ‘ನಟ ಸಾರ್ವಭೌಮ’
- ಎಂ.ಡಿ.
ನಿರ್ದೇಶಕ ಮಹೇಶ್ ಸುಖಧರೆ ವಿಭಿನ್ನ ಕಲ್ಪನೆ ಮಾಡಿದ್ದಾರೆ. ಆದರೆ ಅದನ್ನು ನಿರೂಪಿಸುವಲ್ಲಿ ಎಡವಿದ್ದಾರೆ. ಅವರಿಗೆ ಏನೇನೋ ಹೇಳಬೇಕೆನ್ನುವ ಹಂಬಲವೇ ಚಿತ್ರಕತೆಗೆ ಮುಳುವಾಗಿದೆ. ಇಡೀ ಚಿತ್ರದ ಮೈನಸ್ ಪಾಯಿಂಟ್ ಅಂದರೆ ಪಾಕಿಸ್ತಾನವನ್ನು ಬೈಯ್ಯುವುದರ ಮೂಲಕ ಇಂಡಿಯಾವನ್ನು ಮೆಚ್ಚಿಸಲು ಹೊರಟಿದ್ದು. ಇದು ಕಮರ್ಶಿಯಲ್ ಟ್ರಿಕ್. ಇದನ್ನು ಸದಭಿರುಚಿಯೆಂದು ಹೇಳಲು ಸಾಧ್ಯವೆ ?
ಇನ್ನು ಕತೆ ಬಗ್ಗೆ ಒಂದೆರಡು ಸಾಲಿನಲ್ಲಿ ಕೇಳಿಬಿಡಿ. ನಾಯಕ ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುತ್ತಾನೆ. ಬಿಡುಗಡೆಯಾಗಿ ಬರುವಷ್ಟರಲ್ಲಿ ಆತನ ಮಗ ದೇಶದ್ರೋಹಿಗಳ ಕೈಕೆಳಗೆ ಕೆಲಸ ಮಾಡುತ್ತಿರುತ್ತಾನೆ. ಪತ್ನಿ ಕೋಮಾದಲ್ಲಿರುತ್ತಾಳೆ. ದೇಶಪ್ರೇಮಿ ತಂದೆ, ದೇಶದ್ರೋಹಿ ಮಗ ಎದುರಾಗುತ್ತಾರೆ. ಕೊನೆಯಲ್ಲಿ ಒಂದಾಗುತ್ತಾರೆ. ನಾಯಕಿ ಶಿಲ್ಪಾ ಶಿವಾನಂದ್ ಪತ್ರಕರ್ತೆ. ಆಕೆ ಬಳಿ ಇರುವ ಫೋಟೊಗಳು ಗೃಹಮಂತ್ರಿಯನ್ನು ಖಳನಾಯಕನೆಂದು ತೋರಿಸುತ್ತವೆ. ಅವಳಿಂದ ಅದನ್ನು ಪಡೆಯಲು ಗೃಹಮಂತ್ರಿ ಅವಳ ಬೆನ್ನುಬಿದ್ದಿರುತ್ತಾನೆ.
ಮೊದಲರ್ಧದಲ್ಲಿ ಸುಮ್ಮನೆ ದೃಶ್ಯಗಳು ಸಿಗುತ್ತವೆ. ತಂದೆ ಗೆಟಪ್ಪಿನ ಶಿವಣ್ಣ ಬಂದಾಗಲೇ ಕತೆಗಿಷ್ಟು ಫೋರ್ಸ್ ಬರುತ್ತದೆ. ಅದಕ್ಕೆ ಶಿವಣ್ಣನ ಧ್ವನಿ ಮತ್ತು ಬಾಂಡಿ ಲಾಂಗ್ವೇಜ್ ಪೂರಕವಾಗಿ ಕೆಲಸ ಮಾಡಿವೆ. ಜೈಲಿನ ದೃಶ್ಯಗಳಲ್ಲಿ ಪಾತ್ರವೇ ತಾವಾಗಿ ಬಿಟ್ಟಿದ್ದಾರೆ. ಅವರ ವೃತ್ತಿಜೀವನದಲ್ಲಿ ಇದು ಮಹತ್ವದ ಪಾತ್ರವಾಗಿ ದಾಖಲಾಗಿದೆ.
ಶಿಲ್ಪಾ ಎನ್ನುವ ನಾಟಕದ ಹುಡುಗಿಯನ್ನು ಅಲ್ಲಿಂದ ಕರೆತರುವ ಅಗತ್ಯವಿರಲಿಲ್ಲ . ಮಯೂರಿ, ರಂಗಾಯಣ ರಘು ಮತ್ತು ಶರತ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮಹೇಂದ್ರನ್ ಕ್ಯಾಮರಾ ಕೂಡಾ ನಿಯತ್ತಾಗಿ ಕೆಲಸ ಮಾಡಿದೆ. ಬಿ.ಎ.ಮಧು ಕೆಲವು ಕಡೆ ಚಪ್ಪಾಳೆ ಗಿಟ್ಟಿಸುವ ಸಂಭಾಷಣೆ ಬರೆದಿದ್ದಾರೆ.
ಇಡೀ ಚಿತ್ರದ ಖಳನಾಯಕನೆಂದರೆ ಹಂಸಲೇಖಾ. ಎರಡು ಹಾಡಿನಲ್ಲಿ ಅವರು ತಮ್ಮ ಪ್ರತಿಭೆ ತೋರಿಸಿದ್ದು ನಿಜವಾದರೂ ಮಾತುಗಳನ್ನೇ ನುಂಗಿಹಾಕುವ ಹಿನ್ನೆಲೆ ಸಂಗೀತ ನೀಡಿ ಸಿಗದ ಅವಕಾಶಗಳ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಅಂದಹಾಗೆ ಇಂಥ ಪ್ರಯತ್ನಕ್ಕೆ ದುಡ್ಡು ಸುರಿದ ನಿರ್ಮಾಪಕ ಜಗದೀಶ್ ಧೈರ್ಯವನ್ನು ಮೆಚ್ಚಲೇಬೇಕು. ಮಾಮೂಲಿ ಕತೆಗಳ ನಡುವೆ ತನ್ನದೇ ಹಾದಿ ರೂಪಿಸಿರುವ ‘ಸಾರ್ವಭೌಮ’ನ ಬೆನ್ನು ತಟ್ಟಬೇಕಿರುವುದು ಸಹೃದಯ ಪ್ರೇಕ್ಷಕರ ಕರ್ತವ್ಯ !
(ಸ್ನೇಹಸೇತು : ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications











