»   » ಪ್ರೇಮಗೀತೆಗೆ ರಕ್ತ ಸಂಗೀತ : ಇದು ಪಾರ್ಥನ ಹೊಸ ಟ್ಯೂನು !

ಪ್ರೇಮಗೀತೆಗೆ ರಕ್ತ ಸಂಗೀತ : ಇದು ಪಾರ್ಥನ ಹೊಸ ಟ್ಯೂನು !

Posted By:
Subscribe to Filmibeat Kannada

*ಮಹೇಶ್‌ ದೇವಶೆಟ್ಟಿ

ಒಂದು ಬಾಟಲ್‌ ‘ಕೋಕ್‌’ ಹಿಡಿದು ಕುಳಿತುಕೊಳ್ಳಿ. ಅದರ ಕೊನೆ ಸಿಪ್‌ ಗಂಟಲಲ್ಲಿ ಇಳಿಯುವ ಹೊತ್ತಿಗೆ ವಿರಾಮ ಬಂದಿರುತ್ತದೆ. ಅಷ್ಟೇ ಪ್ರಮಾಣದ ಇನ್ನೊಂದು ಕೋಕ್‌ ಖಾಲಿಯಾಗುವ ಹೊತ್ತಿಗೆ ಪೂರ್ಣವಿರಾಮ ಬಿದ್ದಿರುತ್ತದೆ. ಇದೇನಯ್ಯ, ಇದೇನು ಕೋಕ್‌ ಆ್ಯಡಾ ಎಂದು ಮುಖ ತಿರುಗಿಸಬೇಡಿ. ಯಾಕೆಂದರೆ ಇದು ‘ಪಾರ್ಥ’ನ ಹಾಡು, ಪ್ರೇಮದ ಹಾಡು. ಪ್ರೀತಿಗಾಗಿ ಹುಡುಕುವ, ತಡಕುವ, ತದುಕುವ ಕೊನೆಗೆ ಪ್ರೀತಿಯನ್ನು ಪ್ರೀತಿಯಿಂದಲೇ ದಕ್ಕಿಸಿಕೊಳ್ಳುವ ಹುಡುಗನ ಪಾಡು.

ಅವಳು ಹುಡುಗಿ. ಅವನು ಹುಡುಗ. ದೇವಸ್ಥಾನದಲ್ಲಿ ನೋಡುತ್ತಾರೆ. ಕಣ್ಣಿನಲ್ಲಿಯೇ ಮಾತಾಡುತ್ತಾರೆ. ಅದೆ ಪ್ರೀತಿಯ ಗ್ರೀನ್‌ ಸಿಗ್ನಲ್ಲು. ಅದಕ್ಕೇ ಏನೋ ನಾಯಕ ಕೂಡಾ ಸಿಗ್ನಲಿನಲ್ಲಿ, ಬಸ್‌ಸ್ಟಾಪಿನಲ್ಲಿ ಅವಳ ಬೆನ್ನುಹತ್ತುತ್ತಾನೆ. ಹೆಸರು ಹೇಳಲು ಪೀಡಿಸುತ್ತಾನೆ. ಕೊನೆಗೆ ಮನೆಗೇ ಹೋಗುತ್ತಾನೆ. ಅದು ಆ ಊರಿನ ರೌಡಿಗೆ ಗೊತ್ತಾಗುತ್ತದೆ. ಅವಳ ಮನೆಗೆ ಹೋಗಿ ಅಪ್ಪ- ಅಮ್ಮನನ್ನು ಒದೆಯುತ್ತಾನೆ. ಅವಳನ್ನು ಬೆದರಿಸುತ್ತಾನೆ. ಯಾಕೆಂದರೆ ಆ ರೌಡಿಯ ತಮ್ಮ ಅವಳನ್ನು ಮದುವೆಯಾಗಲು ನಿರ್ಧರಿಸಿರುತ್ತಾನೆ. ಅವಳಿಗಾಗಿ ಹುಡುಗನೊಬ್ಬನ ಕೈ ಕಡಿದು ಜೈಲಿಗೆ ಹೋಗಿರುತ್ತಾನೆ. ಇದು ನಾಯಕನಿಗೆ ಗೊತ್ತಾಗುತ್ತದೆ. ಆತ ಎಲ್ಲ ಹೀರೋಗಳಂತೆ ರೌಡಿಗಳ ಮೈ ಪುಡಿಪುಡಿ ಮಾಡಿ ಅವಳನ್ನು ಮದುವೆಯಾಗುತ್ತಾನೆ.

ಇದೇನು ಅದ್ಭುತ ಕತೆಯಲ್ಲ. ಹಾಗಂತ ಒಂದೆ ಏಟಿಗೆ ತೆಗೆದುಹಾಕುವಂತೆಯೂ ಇಲ್ಲ. ನೋಡುತ್ತಾ ಹೋದರೆ ಬೋರ್‌ ಆಗುವುದಿಲ್ಲ, ನೋಡಿದ ಮೇಲೆ ಏನೂ ಅನಿಸುವುದಿಲ್ಲ. ಕುರ್ಚಿಯ ತುದಿಗೆ ತಂದು ಕೂಡಿಸುವುದಿಲ್ಲ. ಹಿಂದಕ್ಕೆ ಆತುಕೊಂಡು ನಿದ್ದೆ ಮಾಡುವಂತೆಯೂ ಇಲ್ಲ. ಪ್ರತಿಯಾಂದು ವಿಭಾಗದಲ್ಲೂ ಅಚ್ಚುಕಟ್ಟುತನವಿದೆ ಮತ್ತು ನಟ- ನಟಿಯರ, ತಂತ್ರಜ್ಞರ ಶ್ರದ್ಧೆ ಇದೆ.

ನಿರ್ದೇಶಕ ಓಂಪ್ರಕಾಶ್‌ ರಾವ್‌ ಒಂದು ಸ್ವಮೇಕ್‌ ಕತೆಯನ್ನು ನಿರೂಪಿಸಿದ್ದಾರೆ. ಬರಿ ಸಂಭಾಷಣೆಯನ್ನು ಬರೆದರೆ ಎಷ್ಟು ಚೆನ್ನಾಗಿರುತ್ತೆ ಅನಿಸುವಂತಿವೆ ಎಂ.ಎಸ್‌.ರಮೇಶ್‌ ಮಾತುಗಳು. ಅಣಜಿ ನಾಗರಾಜ್‌ ಕ್ಯಾಮರಾದಲ್ಲಿ ಕೆಲವು ಲೊಕೇಶನ್‌ಗಳು ಅದ್ಭುತವಾಗಿ ಮೂಡಿ ಬಂದಿವೆ. ಹಾಡು ಮತ್ತು ಫೈಟ್‌ಗಳಲ್ಲಿ ಅಣಜಿಯಷ್ಟೇ ಸಂಕಲನಕಾರ ಮನೋಹರ್‌ ನಿಯತ್ತೂ ಕೈಜೋಡಿಸಿದೆ. ಆದರೆ ಚೆಂದದ ಲೊಕೇಷನ್‌ ನಡುವೆ ಬೆಂಕಿ ಹಚ್ಚಿಸಿ ‘ಒಗೆ’ ಹಾಕಿದ್ದು ಯಾರ ಕೆಲಸವೊ?

‘ಈ ಪ್ರೀತಿ ಒಂಥರ ಕಚಗುಳಿ’ ಹಾಡು ಮೆಲೊಡಿ ಮತ್ತು ಫಾಸ್ಟ್‌ ಮ್ಯೂಸಿಕ್‌ ಒಂದುಗೂಡಿಸುವ ರೀತಿ ಗುರುಕಿರಣ್‌ ಕಲೆಗೆ ಕನ್ನಡಿ ಹಿಡಿಯುತ್ತದೆ. ಹೊಡೆದಾಟವೆಂದರೆ ಹೇಗಿರಬೇಕು ಎಂದು ಸಾಹಸ ನಿರ್ದೇಶಕ ತೋರಿಸಿದ್ದಾರೆ.

ಸುದೀಪ್‌ ತಲೆಹಿಂದೆ ಕೈಯಾಡಿಸುವುದನ್ನು ಬಿಟ್ಟು ಸುಮ್ಮನೆ ಪಕ್ಕದ ಮನೆಯ ವಯಸ್ಸಿನ ಹುಡುಗನಂತೆ ಮುದನೀಡುತ್ತಾರೆ. ಹುಡುಗಿ ಹಿಂದೆ ಬೀಳುವ ಪಡ್ಡೆಯಾಗಿ, ರೌಡಿಗಳ ಕೈಕಾಲು ಮುರಿಯುವ ಪೊರ್ಕಿಯಾಗಿ ಸುದೀಪ್‌ ಹೊಸ ಮ್ಯಾನರಿಸಂ ಸೃಷ್ಟಿಸಿದ್ದಾರೆ. ಹೊಡೆದಾಟದಲ್ಲಿ ಸಾಧ್ಯವಾದಷ್ಟು ಸಹಜತೆ ತಂದಿದ್ದಾರೆ. ಡೈಲಾಗ್‌ ಡೆಲಿವರಿ ಕೂಡಾ ಭಾವನೆಗೆ ತಕ್ಕಂತೆ ‘ಕಾರಿ’ಕೊಂಡಿದ್ದಾರೆ.

ಗೀತಾ ಎಸ್‌.ರಾವ್‌ ಎನ್ನುವ ಹೊಸ ಹುಡುಗಿ ಅತ್ತಿಗೆಯಾಗಿ ನಿಮ್ಮ ಮನೆ- ಮನದವರೆಗೂ ಬಂದುಬಿಡ್ತಾಳೆ. ಅತ್ತಿಗೆ ಅಂದ್ರೆ ಹೀಗಿರಬೇಕು ನೋಡಿ. ಅಣ್ಣನಾದ ಡಾ। ವಿಜಯ, ನಾಯಕ- ನಾಯಕಿಯರ ಅಪ್ಪ- ಅಮ್ಮ, ಖಳನಾಯಕರಾದ ಸಿದ್ಧಾರ್ಥ, ಅಯ್ಯಪ್ಪ... ಎಲ್ಲರೂ ನೆನಪಿನಲ್ಲಿ ಉಳಿಯುತ್ತಾರೆ. ಹಾಗಂತ ಇವರಲ್ಲಿ ತಪ್ಪುಗಳೇ ಇಲ್ಲವೆಂದಲ್ಲ. ಮೊದಲರ್ಧದಲ್ಲಿ ಕತೆಯೇ ಮುಂದೆ ಹೋಗುವುದಿಲ್ಲ. ರೌಡಿಗಳಿಂದ ನಾಯಕಿಗೆ ಬೆದರಿಕೆ ಇರುವುದನ್ನು ಸಸ್ಪೆನ್ಸ್‌ನಲ್ಲಿಡುವ ಒಂದೇ ಉದ್ದೇಶದಿಂದ ಮೊದಲಭಾಗದ ಅಂತ್ಯದವರೆಗೆ ಅದಕ್ಕೆ ಪುಷ್ಟಿ ನೀಡುವ ದೃಶ್ಯವೇ ಚಿತ್ರಿತವಾಗಿಲ್ಲ. ಅದು ನಿರ್ದೇಶಕರ ಅತಿ ಜಾಣತನ. ಅಂದಹಾಗೆ ನಾಯಕಿ ಹರ್‌ದೀಪ್‌ಸಿಂಗ್‌ ಚಿತ್ರಕ್ಕೊಂದು ದೃಷ್ಟಿಬೊಟ್ಟು. ನೆಟ್ಟಗೆ ನಗಲೂ ಬಾರದ ಅವಳನ್ನು ಮುಂಬಯಿಯಿಂದ ಕರೆಸುವ ಅಗತ್ಯವಿತ್ತಾ ? ಅಥವಾ ಓಂ ಪ್ರಕಾಶ್‌ ಅಷ್ಟೊಂದು ಅರಸಿಕ (?) ರಾ? ಅವರಿಗಷ್ಟೇ ಗೊತ್ತು.

(ಸ್ನೇಹಸೇತು- ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada