»   » ಮದನ : ಕೊಂಚ ಸುದ್ದಿ ಮಾಡ್ತಾನಾ?

ಮದನ : ಕೊಂಚ ಸುದ್ದಿ ಮಾಡ್ತಾನಾ?

Subscribe to Filmibeat Kannada


ಈ ಮದನ, ಚೆಂದದ ಹುಡುಗಿಯರಿಗೆ ಏನಾದರೂ ಮಾಡಿ ಬಲೆ ಬೀಸುತ್ತಾನೆ. ಮಜಾ ಮಾಡಿ, ಕೊಂದು ಬಿಡುತ್ತಾನೆ! ಇಂತಹ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ ಜೈಜಗದೀಶ್‌ ಎಡವಿದ್ದೆಲ್ಲಿ?

  • ದೇವಶೆಟ್ಟಿ ಮಹೇಶ್‌
ಚಿತ್ರ : ಮದನ
ನಿರ್ಮಾಪಕ : ಜೈಜಗದೀಶ್‌
ನಿರ್ದೇಶಕ : ಜೈಜಗದೀಶ್‌
ಸಂಗೀತ : ಯುವನ್‌ ಶಂಕರ್‌
ತಾರಾಗಣ : ಆದಿತ್ಯ, ಏನೈತಿ ಅಂಥಾದ್ದೇನೈತಿ...

ಆತನಿಗೆ ಹುಡುಗಿಯರನ್ನು ಕಂಡರೆ ಉರಿ ಉರಿ. ಹಾಗಂತ ಎಲ್ಲರೂ ಅಲ್ಲ. ಒಬ್ಬನಿಗೆ ಮನಸು ಕೊಟ್ಟಂತೆ ನಟಿಸಿ, ಇನ್ನೊಬ್ಬನೊಂದಿಗೆ ಡಿಂಗ್‌ ಡಾಂಗ್‌ ಮಾಡುತ್ತಾರಲ್ಲ... ಅಂಥ ಹುಡುಗಿಯರನ್ನು ಕಂಡರೆ ಆತನಿಗೆ ಕೆಂಡ ಕೆಂಡ. ಅಷ್ಟಕ್ಕೇ ಸುಮ್ಮನಾಗುತ್ತಾನಾ ? ಇಲ್ಲ. ಅವರ ಹಿಂದೆ ಬೀಳುತ್ತಾನೆ. ಏನಾದರೂ ಮಾಡಿ ಅವರಿಗೆ ಬಲೆ ಬೀಸುತ್ತಾನೆ. ಮಜಾ ಮಾಡಿ, ಕೊಂದು ಬಿಡುತ್ತಾನೆ. ಆದರೆ, ಅವರ ಶವ ಮಾತ್ರ ಯಾರಿಗೂ ಸಿಗುವುದಿಲ್ಲ.

ಈ ನಡುವೆ ಅವನನ್ನು ನಿಜಕ್ಕೂ ಪ್ರೀತಿಸುವ ಹುಡುಗಿ ಸಿಗುತ್ತಾಳೆ. ಆದರೆ, ಆತ ಪ್ರೀತಿಸುವುದಿಲ್ಲ. ಹೀಗೆ ಒಬ್ಬೊಬ್ಬರನ್ನೇ ಕೊಲ್ಲುವ ಮದನನನ್ನು ಹಿಡಿಯಲು ಪೊಲೀಸರು ಟ್ರಿಗರ್‌ ಅದುಮುತ್ತಾರೆ. ಆತ, ಸಿಕ್ಕೂ ಬಿಡುತ್ತಾನೆ. ಆತನೇ ಅಪರಾಧಿ ಎನ್ನಲು ಸಾಕ್ಷಿಗಳಿದ್ದರೂ ತಾನು ಕೊಲೆಗಾರ ಅಲ್ಲ ಎನ್ನುತ್ತಾನೆ. ಅದಕ್ಕೆ ತಕ್ಕ ಕತೆಯನ್ನು ಹೇಳುತ್ತಾನೆ. ಅದು ಏನು ಅನ್ನೋದನ್ನು ಇಲ್ಲೇ ಹೇಳಿದರೆ ಹೆಂಗೆ ?

ಏನ್‌ ವಿಶೇಷಾ ಮಾಮು...?

ಕತೆಯ ಕೆಲವು ತಿರುವುಗಳು ನಿಜಕ್ಕೂ ಥ್ರಿಲ್‌ ಕೊಡುತ್ತವೆ. ಅದನ್ನು ಹೇಳಿದರೆ ನೀವು ಕೊಡುವ ಕಾಸಿಗೆ ಮೋಸ ಮಾಡಿದಂತಾಗುತ್ತದೆ. ಅದಕ್ಕೇ ಸಿನಿಮಾ ನೋಡಿ. ಎಲ್ಲಕ್ಕಿಂತ ಅಚ್ಚರಿ ಮತ್ತು ಖುಷಿ ಕೊಡುವುದು ಆದಿತ್ಯ ಅಭಿನಯ. ಉಳಿದಂತೆ ಮಾಮೂಲಾದರೂ ಕ್ಲೈಮ್ಯಾಕ್ಸ್‌ ದೃಶ್ಯಕ್ಕೂ ಕೆಲವು ನಿಮಿಷಗಳ ಮಿಂಚಿನ ಎರಡು ದೃಶ್ಯಗಳಲ್ಲಿ ಆದಿತ್ಯ ತಾವೊಬ್ಬ ಅಪ್ಪಟ ಕಲಾವಿದ ಎಂದು ತೋರಿಸಿದ್ದಾರೆ.

ಪ್ರೇಯಸಿಯನ್ನು ಕೊಂದು ಅವಳ ಮುಂದೆ ಅಳುತ್ತಿದ್ದೇನೆ? ಅವಳು ತಪ್ಪು ಮಾಡಿದ್ದಳು ಅದಕ್ಕೆ ಕೊಂದೆ.. ಎಂದು ಹೇಳುವಾಗ ಆ ಪಾತ್ರವೇ ತಾವಾಗಿದ್ದಾರೆ. ಅದರ ನಂತರದ ಎರಡು ದೃಶ್ಯಗಳಲ್ಲೂ ಆದಿ ವಂಡರ್‌ಫುಲ್‌. ಆದರೆ ಇದೇ ಮಾತನ್ನು ಇಡೀ ಚಿತ್ರದುದ್ದಕ್ಕೂ ಹೇಳಲು ಆಗೋಲ್ಲ. ‘ಮುಗ್ಧ’ ಆದಿತ್ಯನೇ ಹೆಚ್ಚು ಇಷ್ಟವಾಗುತ್ತಾನೆ.

ಆ ಹುಡುಗನ ಇಂಥ ಪ್ರತಿಭೆಗೆ ತಕ್ಕ ಕತೆ ಮತ್ತು ಪಾತ್ರವನ್ನು ಯಾರಾದರೂ ಕೊಡಲಿ. ಇನ್ನೊಂದು, ಸಂಭಾಷಣೆ. ರಾಜೇಂದ್ರ ಕಾರಂತ್‌ ಬರೆದ ಸಂಭಾಷಣೆ ಚಿತ್ರಕತೆಯ ಎಷ್ಟೋ ದೌರ್ಬಲ್ಯಗಳನ್ನು ಮುಚ್ಚಿ ಹಾಕುತ್ತದೆ. ಏನೊ ಹೊಸತನದ ಹುಡುಕಾಟ ಅವರ ಅಕ್ಷರಗಳಲ್ಲಿ ಕಾಣುತ್ತದೆ.

ಜೈ ಎಡವಿದ್ದೆಲ್ಲಿ ?

ದಶಕಗಳ ಹಿಂದೆ ಕಮಲ ಹಾಸನ್‌ ನಟಿಸಿದ ತಮಿಳು ಚಿತ್ರದ ಕತೆಯನ್ನು ಇದು ಹೋಲುತ್ತದೆ. ಅದನ್ನು ತಮ್ಮ ಮೊದಲ ನಿರ್ದೇಶನದ ಚಿತ್ರಕ್ಕೆ ಜೈ ಜಗದೀಶ್‌ ಆಯ್ಕೆ ಮಾಡಿಕೊಂಡಿದ್ದಾರೆ. ಕತೆಯೇನೊ ಗಟ್ಟಿಯಾಗಿದೆ. ಆದರೆ, ಅದನ್ನು ಅಷ್ಟೇ ನೀಟಾಗಿ, ಬೋರ್‌ ಆಗದಂತೆ ನಿರೂಪಿಸುವಲ್ಲಿ ಜೈ ಎಡವಿದ್ದಾರೆ. ಕಾರಣ ಚಿತ್ರಕತೆಯ ದೌರ್ಬಲ್ಯ.

ಕುತೂಹಲ ಮೂಡಿಸುವಂತಿರುವ ಕತೆಗೆ ಅಷ್ಟೇ ನೀರಸ ದೃಶ್ಯಗಳು ಅಡ್ಡಗಾಲು ಹಾಕಿವೆ. ಮೊದಲಾರ್ಧದಲ್ಲಿ ನಾಯಕ ನಾಯಕಿಯ ಪ್ರೇಮದಾಟ ಮನಸಿಗೆ ತಟ್ಟುವುದಿಲ್ಲ. ಅದರಲ್ಲೂ ಕನಸಲ್ಲಿ ರೇಪ್‌ ಮಾಡಿದಾತನನ್ನು ನಾಯಕಿ ಇಲ್ಲಿ ಪ್ರೀತಿಸುತ್ತಾಳೆ. ಅದು ಹೊಸ ಶೋಧ. ರೇಪ್‌ ಎನ್ನುವ ಪದವನ್ನು ಅದೆಷ್ಟು ಸಾರಿ ಬಳಸಿದ್ದಾರೆಂದರೆ ‘ಇಂಥದ್ದನ್ನು ಇಷ್ಟ ಪಡುವ ಪ್ರೇಕ್ಷಕ’ರಿಗೂ ವಾಕರಿಕೆ ಬರುತ್ತದೆ.

ಹುಡುಗಿಯರನ್ನು ಕೊಲ್ಲುವಾಗ ನಾಯಕನ ಮೂಗಿನಿಂದ ಸೋರುವ ರಕ್ತಕ್ಕೆ ಕಾರಣವಿಲ್ಲ. ಮೊದಲ ದೃಶ್ಯದಲ್ಲಿ ನಾಯಕ ಆಸ್ಪತ್ರೆಯಲ್ಲಿ ಯಾಕಿರುತ್ತಾನೆ ಎಂಬುದಕ್ಕೆ ಮುಂದೆಲ್ಲೂ ಉತ್ತರವಿಲ್ಲ. ಇನ್ನೇನು ಮುಗಿಯಿತು ಅನ್ನುವಾಗ ಹಾಡು ತೋರಿಸಿದ್ದನ್ನು ಯಾರೂ ಕ್ಷಮಿಸುವುದಿಲ್ಲ. ಯುವನ್‌ ಶಂಕರ್‌ ಹಿನ್ನೆಲೆ ಸಂಗೀತ ಓಕೆ.

ಇನ್ನು ನಾಯಕಿ ಸಮೀಕ್ಷಾ ಎನ್ನುವ ಎಣ್ಣೆ ಮುಖದ ಚೆಲುವೆಯನ್ನು ಅಲ್ಲಿಂದ ಇಲ್ಲಿಗೆ ಕರೆ ತರುವ ಅಗತ್ಯ ಇರಲಿಲ್ಲ. ಆಕೆಯ ಮಾತು ಒಂದು ಕಡೆ. ಅಭಿನಯ ಇನ್ನೊಂದು ಕಡೆ. ಎಲ್ಲಾ ಓವರ್‌ ಡೋಸ್‌. ಕೆಟ್ಟ ಮೇಕಪ್‌ ಆಕೆಯ ಇದ್ದ ಅಂದವನ್ನೂ ಹಾಳು ಮಾಡಿದೆ. ಈ ಮಾತನ್ನು ಖುದ್ದು ಜೈ ಸಮೀಕ್ಷೆ ಮಾಡಿ ನೋಡಲಿ...

ಏನು ಮಾಡಬೇಕಿತ್ತು...

ಕನಿಷ್ಠ ಅರ್ಧ ಗಂಟೆಯಷ್ಟು ಚಿತ್ರಕ್ಕೆ ಕತ್ತರಿ ಹಾಕಬೇಕಿತ್ತು. ಅನಗತ್ಯ ಹಾಡು, ದೃಶ್ಯ ತೆಗೆಯಬೇಕಿತ್ತು. ಆದರೆ ಈಗ ಅದನ್ನು ಮಾಡಲು ಆಗುವುದಿಲ್ಲ. ಸೋ... 30 ವರ್ಷಗಳ ಅಭಿನಯದ ಅನುಭವವನ್ನು ಬಳಸಿಕೊಂಡು ನಿರ್ದೇಶನಕ್ಕೆ ಕೈ ಹಾಕಿರುವ ಜೈಜಗದೀಶ್‌ ಅವರಿಗೊಂದು ಆಲ್‌ ದಿ ಬೆಸ್ಟ್‌ ಹೇಳಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada