»   » ರಿಮೇಕ್‌ ಹಾವಳಿ ನಡುವೆ ಶಿವಮಣಿ ಶ್ರಮಪಟ್ಟು ಸಿನಿಮಾ ಮಾಡಿದ್ದಾರೆ; ಲವ್‌ ಯೂ ಅನ್ನಿ.

ರಿಮೇಕ್‌ ಹಾವಳಿ ನಡುವೆ ಶಿವಮಣಿ ಶ್ರಮಪಟ್ಟು ಸಿನಿಮಾ ಮಾಡಿದ್ದಾರೆ; ಲವ್‌ ಯೂ ಅನ್ನಿ.

Subscribe to Filmibeat Kannada

‘ಲವ್‌ ಎಟ್‌ ಫಸ್ಟ್‌ ಸೈಟ್‌’ ಎನ್ನುವ ಹಳೆಯ ಥಿಯರಿಗೆ ಇಲ್ಲಿ ಜಾಗವಿಲ್ಲ. ಕಾರಣವಿಲ್ಲದೆ ಪ್ರೀತಿ ಹುಟ್ಟಬಹುದು. ಅದು ಕೂಡ ಗಟ್ಟಿಯಾಗಿ ನೆಲೆ ಊರಬಹುದು. ಶಿವಮಣಿ ಅಂತಹ ವಿಶಿಷ್ಟ ಕತೆಯನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ. ಆಕಸ್ಮಿಕವಾಗಿ ಮೂಡಿದ ಪ್ರೀತಿಯ ಹಿಂದೆಯೂ ಭಾವನೆಗಳಿರುತ್ತವೆ ಎನ್ನುವ ಹೊಸ ತರ್ಕ ಮಂಡಿಸುತ್ತಾರೆ. ದ್ವಿತೀಯಾರ್ಧದಲ್ಲಿ ಒಂದು ‘ಲಾಂಗ್‌ ಟೂರ್‌’ಗೆ ಕರೆದೊಯ್ಯುತ್ತಾರೆ. ಅಲ್ಲಿ ಕಪ್ಪು ರಸ್ತೆ, ಹಸಿರು ಕಾಡು, ಕಾಡಿನಲ್ಲೊಂದು ಹಾಡು, ಹಾಡಿಗೊಂದು ನೀರಿನ ಜಾಡು, ಕೊನೆಗೆ ಬೆಂಗಳೂರು ಮುಟ್ಟಿಸಿ ಮದುವೆಯಾಗಿ ನಿಟ್ಟುಸಿರು ಬಿಡುತ್ತಾರೆ. ಜೊತೆಗೆ ನೀವು ಕೂಡ...

ಸ್ನೇಹ ಪ್ರೇಮವಾಗಲು ವಿಫಲವಾದರೆ ಮೊದಲಿನ ಸಲುಗೆಯೂ ಉಳಿಯಾಲ್ಲ ಎಂದು ಬದುಕಿಗೆ ಹತ್ತಿರವೆನಿಸುವ ಮಾತು ಬರೆದ ಪ್ರವೀಣ್‌ ನಾಯಕ್‌ ಕೆಲವೊಮ್ಮೆ ‘ಉಪೇಂದ್ರ’ ಮೈಯಲ್ಲಿ ಹೊಕ್ಕಂತೆ ಶಬ್ದಗಳನ್ನು ಉದುರಿಸುತ್ತಾರೆ. ಮಂಗಳೂರಿನ ಚೆಂದದ ಜಾಗಗಳನ್ನು ಅತಿ ಚೆಂದವಾಗಿ ತೋರಿಸುವ ಛಾಯಾಗ್ರಹಣವಿದೆ. ಹಾಡಿನ ಪ್ರತಿ ಶಾಟ್‌ನಲ್ಲೂ ಎದೆ ತುಂಬುವ ಖುಷಿ. ಕಲ್ಯಾಣ್‌, ಮನೋಹರ್‌ ಬರೆದ ಸುಂದರ ಹಾಡುಗಳಿಗೆ ಸುಂದರವಾದ ಕದ್ದ ಟ್ಯೂನ್‌ಗಳನ್ನು ಗುರುಕಿರಣ್‌ ಅಳವಡಿಸಿದ್ದಾರೆ. ಆದರೂ ಮೂರು ಹಾಡುಗಳ ಮಾಧುರ್ಯ ಬಾಯಿ ಚಪ್ಪರಿಸುವಂತಿದೆ. ಮುಂಬೈ ನಟ ನಿರ್ಮಲ್‌ ಪಾಂಡೆ ವಿಶಿಷ್ಟ ಮ್ಯಾನರಿಸಂನಿಂದ ಮುದ ನೀಡುತ್ತಾರೆ. ಅತ್ತರೂ, ನಕ್ಕರೂ ಒಂದೇ ರೀತಿ ಕಾಣುವ ಚಾಂದಿನಿ ಯಾಕೋ ಮಂಕಾಗಿದ್ದಾರೆ. ಇವರ ನಡುವೆ ರಿಲೀಫ್‌ ನೀಡಲೆಂದು ಕಾಲಿಡುವ ಕಾಶಿ, ಸದಾ ಟೆಲಿಫೋನ್‌ ಡೈರೆಕ್ಟರಿ ಹೊತ್ತು ತಿರುಗುವ ಸಿಹಿಕಹಿ ಚಂದ್ರು, ಯಜಮಾನರಿಲ್ಲ ಎಂದು ಧರ್ಮ ಸಂಕಟದಲ್ಲಿ ಒದ್ದಾಡುವ ಚಿತ್ರಾ ಶೆಣೈ, ‘ ಲವ್ವೋ ಲವ್ವೋ’ ಎಂದು ಕಾಡಿಸುವ ಮಕ್ಕಳು... ಎಲ್ಲರೂ ಚಿಕ್ಕದಾಗಿ ಚೊಕ್ಕವಾಗಿ ಕಾಣಿಸಿದ್ದಾರೆ.

ಹಾಗಂತ ಇದರಲ್ಲಿ ತಪ್ಪುಗಳೇ ಇಲ್ಲ ಎಂದಲ್ಲ. ದ್ವಿತೀಯಾರ್ಧ ಎಲ್ಲೆಲ್ಲೋ ಓಡುವ ಕತೆಯಲ್ಲಿ ಇನ್ನಷ್ಟು ಬಿಗಿ ಬೇಕಾಗಿತ್ತು. ಭೂಗತ ಲೋಕದ ದೊರೆಯೇ ನಾಯಕನನ್ನು ಕೊಲ್ಲಲು ಬೀದಿಗೆ ಬರುವುದು ಹಾಸ್ಯಾಸ್ಪದ. ವಿಲನ್‌ಗಳು ಬೆನ್ನು ಹತ್ತಿದಾಗ ಡ್ಯೂಯೆಟ್‌ ಹಾಡುವುದು ಯಾರ ಖುಷಿಗಾಗಿ ?

ಆದರೂ ಶಿವಮಣಿ ಇಷ್ಟವಾಗುತ್ತಾರೆ. ಅವರ ಚಿತ್ರ ಇಷ್ಟವಾಗುತ್ತದೆ. ರಿಮೇಕ್‌ ಹಾವಳಿಗಳ ನಡುವೆ ನಿಜವಾದ ಅರ್ಥದಲ್ಲಿ ಶ್ರಮಪಟ್ಟು ಸಿನಿಮಾ ಮಾಡಿದ್ದಾರೆ. ಪ್ರೇಕ್ಷಕರು ಒಂದು ಸಲ ಈ ಹೀರೋಗೆ ‘ಲವ್‌ ಯೂ’ ಅನ್ನಲು ಅಡ್ಡಿಯಿಲ್ಲ.

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada