»   » ಚಿತ್ರವಿಮರ್ಶೆ: ಘಮ ಘಮ ಗಂಗೆ ತುಂಗೆ !

ಚಿತ್ರವಿಮರ್ಶೆ: ಘಮ ಘಮ ಗಂಗೆ ತುಂಗೆ !

Subscribe to Filmibeat Kannada

ಈ ಹೆಸರು ಕೇಳಿದರೆ ಯಾವುದೋ ಹಳೇ ಸಿನಿಮಾದ ಹ್ಯಾಂಗೋವರ್ ಕಾಡಿದರೂ ಆಶ್ಚರ್ಯವಿಲ್ಲ. ಅಥವಾ ಇನ್ಯಾವುದೋ ಮಹಿಳಾ ಪ್ರಧಾನ ಚಿತ್ರ ಕಣ್ಮುಂದೆ ಸುಳಿಯಬಹುದು. ಆದರೆ ಇದು ಆ ಎಲ್ಲಾ ಕಲ್ಪನೆಗಳಿಗೂ ಮೀರಿದೆ.

*ವಿನಾಯಕರಾಮ್ ಕಲಗಾರು

ಏಕೆಂದರೆ ವಿಭಿನ್ನ , ವಿಶಿಷ್ಟವಾಗಿ ಮೂಡಿ ಬಂದಿದೆ. ಅದಕ್ಕೆ ಕಾರಣ ಸಾಧು ಅಪರೂಪಕ್ಕೆ ಅಪ್ಪಟ ಕನ್ನಡ ಚಿತ್ರಕ್ಕೆ ಕ್ಯಾಮರಾ ಹಿಡಿದಿರುವುದೂ ಇರಬಹುದೇನೋ !
ಹೌದು, ಸಾಧು ಕೋಕಿಲಾ ಕೋಕಿಲಾ ಸಾಧುವಾಗಿ ಬದಲಾದ ನಂತರ ಮೂರನೇ ಬಾರಿಗೆ ಸ್ವಂತ ಮಗ'ನಿಗೆ ಜನ್ಮ ನೀಡಿದ್ದಾರೆ. ಒಂದು ಸಣ್ಣಸಾಮಾನ್ಯ ಕತೆಗೆ ಲವಲವಿಕೆಯ ಚಿತ್ರಕತೆ, ಹದವಾದ ನಿರೂಪಣೆ, ಸಿಳ್ಳೆಗಿಟ್ಟಿಸುವ ಡೈಲಾಗು, ಪ್ರಜ್ವಲ್ ಎಂಬ ದೇಸಿ ಪ್ರತಿಭೆ, ಸುನೈನಾ, ಗಾಯತ್ರಿ ಎಂಬ ಎರಡು ಪಾದರಸದಂಥ ಬೆಡಗಿಯರನ್ನು ಸೇರಿಸಿ ಬೋರ್ ಹೊಡೆಸದ ಗಂಗೆ ತುಂಗೆ ಗೆ ಜೀವ ತುಂಬಿದ್ದಾರೆ.

ಮೊದಲು ಕತೆ ಕೇಳಿಬಿಡಿ. ಆತ ಹರ್ಷ. ಓದಿದ್ದು ಎಲೆಕ್ಟ್ರಿಕಲ್ ಎಂಜಿನಿಯರಿಂಗ್. ಅಪ್ಪನ ಸ್ನೇಹಿತನ ಮಗಳು ಯಮುನಾಳ ಮದುವೆ ಸಮಾರಂಭ ಅದ್ಯಾವುದೋ ಊರಿಗೆ ಬರುತ್ತಾನೆ. ಅಲ್ಲಿ ಗಂಗೆ-ತುಂಗೆ ಎಂಬ ಶುದ್ಧ ತರ್ಲೆಗಳನ್ನು ಭೇಟಿಯಾಗುತ್ತಾನೆ. ಒಂದಿಷ್ಟು ಚೆಲ್ಲಾಟ ಆಡುತ್ತಾನೆ. ಹರ್ಷನ ಗ್ರಹಚಾರವೊ ಏನೋ, ಅವರಿಬ್ಬರೂ ಹರ್ಷನನ್ನು ಪ್ರೀತಿಸುತ್ತಾರೆ. ಆದರೆ ಹರ್ಷನಿಗೆ ಮಾತ್ರ ಗಂಗೆಯದ್ದೇ ಗುಂಗು. ಆದರೆ ತುಂಗೆಗೆ ಹರ್ಷನ ಮೇಲೆ ಡಿಂಗ್‌ಡಾಂಗು. ಇಬ್ಬರ ಜತೆಯಲ್ಲೂ ಅವನ ಥೈಥೈ ಸಾಂಗು. ಇನ್ನೇನು ಇಬ್ಬರ ಪ್ರೀತಿಯೂ ಅತಿರೇಕಕ್ಕೆ ತಿರುಗುತ್ತೆ ಅನ್ನುವಷ್ಟರಲ್ಲಿ ಹರ್ಷ ಮನೆ ಸೇರಿಕೊಳ್ಳುತ್ತಾನೆ. ಅಲ್ಲಿಗೆ ಎಲ್ಲವೂ ಅಂತ್ಯ ಎಂದುಕೊಳ್ಳಬೇಡಿ. ಅವನ ಹಿಂದೆಯೇ ತುಂಗೆಯೂ ಬೆಂಗಳೂರು ಬಸ್ ಏರುತ್ತಾಳೆ. ಅಲ್ಲಿಂದ ಕತೆ ಇನ್ನೊಂದು ಆಯಾಮಕ್ಕೆ ತಿರುಗಿಕೊಳ್ಳುತ್ತೆ....

ಗಂಗೆ ತುಂಗೆಯರ ಮಧ್ಯೆ ಸಿಲುಕಿ ನಲುಗುವ ಕ್ರೇಜಿ ಬಾಯ್ ಆಗಿ, ಎರಡು ಹೃದಯಗಳ ಮನಸ್ಸನ್ನು ಅರ್ಥೈಸಿಕೊಂಡು, ಮನೆತನದ ಗೌರವವನ್ನು ಕ್ರಮಬದ್ಧವಾಗಿ ನಿಭಾಯಿಸಿ ಕಾಪಾಡುವ , ಕಣ್ಣಿನಲ್ಲೇ ಆಟ ಆಡುವ ಲವ್ವರ್ ಬಾಯ್ ಆಗಿ, ಹೊಡೆದಾಟಕ್ಕೆ ನಿಂತಾಗ ಎನೆರ್ಜಿಟಿಕ್ ಬಾಯ್ ಆಗಿ ಪ್ರಜ್ವಲ್ ಇಷ್ಟವಾಗ್ತಾರೆ. ಸುನೈನಾ ಹಾಗೂ ಗಾಯತ್ರಿಯ ತುಂಟಾಟ, ಕುಣಿದಾಟ, ಮಾತುಗಾರಿಕೆ ಎಲ್ಲವೂ ವಂಡರ್‌ಫುಲ್.

ಕತೆಯ ಇನ್ನೊಂದು ಟ್ರ್ಯಾಕ್‌ನಲ್ಲಿ ನಿಲ್ಲುತ್ತಾರೆ ಬುಲೆಟ್ ಪ್ರಕಾಶ್. ಅವ ಬಂದು ನಿಂತ ಎಂದರೆ ಸಾಕು. ನಗು ನಿಲ್ಲಿಸೋದೇ ಕಷ್ಟ. ಕರಡಿಯ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದಾರೆ ಪ್ರಕಾಶ್! ಶೇಖರ್‌ಚಂದ್ರು ಕ್ಯಾಮರಾ ಕಣ್ಣು ಬಲು ಹರಿತವಾಗಿದೆ. ರಾಮಕೃಷ್ಣ ಮೊದಲ ಬಾರಿಗೆ ಹೆಚ್ಚು ಹೊತ್ತು ಪರದೆ ಮೇಲೆ ನಿಂತಿದ್ದಾರೆ. ಭವ್ಯಾ, ಶ್ರೀನಾಥ್, ರಮೇಶ್ ಭಟ್ ಮುಂತಾದವರು ಕತೆಗೆ ಅನಿವಾರ್ಯ.

ಹಾಗಂತ ಎಲ್ಲವೂ ಚೆನ್ನಾಗಿದೆ ಎಂದಲ್ಲ. ಮೊದಲಾರ್ಧದ ಓಟ ಕೊನೆವರೆಗೂ ಇಲ್ಲ. ಕೆಲವು ಅನಗತ್ಯ ಸನ್ನಿವೇಶಗಳನ್ನು ಕತ್ತರಿಸಿ ಬಿಸಾಡಬಹುದಿತ್ತು. ಹಾಡು ಒಂದೆರಡು ಕಡಿಮೆ ಇದ್ದಿದ್ದರೆ ಯಾರಿಗಾದರೂ ನಷ್ಟವಾಗುತ್ತಿತ್ತಾ ಎನ್ನುವುದಕ್ಕೆ ಸಾಧುವೇ ಉತ್ತರಿಸಬೇಕು. ಎಲ್ಲ ಪಕ್ಕಕ್ಕಿಟ್ಟರೆ ಸುಮ್ಮನೆ ಬೇಸಿಗೆಯಲ್ಲಿ ತಂಪಾಗಲು ಇದನ್ನು ನೋಡಬಹುದು. ಅಕಸ್ಮಾತ್ ಈ ಚಿತ್ರವನ್ನು ಕೆಟ್ಟದ್ದು ಅಂದರೆ ಒಂದು ಅವರಿಗೆ ಕಣ್ಣು ಸರಿ ಇಲ್ಲ ಅಥವಾ ಮೆಂಟಲ್ ಪೇಶಂಟ್ ಅಷ್ಟೇಯಾ...!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada