»   » ಗಟ್ಟಿ ಅಡಿಕೆಯ ಸುಣ್ಣ ಬಳಿದ ರಸಹೀನ 'ಪಾನ್'ವಾಲಾ

ಗಟ್ಟಿ ಅಡಿಕೆಯ ಸುಣ್ಣ ಬಳಿದ ರಸಹೀನ 'ಪಾನ್'ವಾಲಾ

Posted By:
Subscribe to Filmibeat Kannada
ಶಿವಣ್ಣನ ಚಿತ್ರ ಒಂದು ಬಾರಿಯಾದರೂ ನೋಡಲೇಬೇಕು ಎನ್ನುವಂಥವರು ಒಂದು ಬಾರಿ ಚಿತ್ರ ನೋಡಬಹುದು. ಪಾನ್ ಇಷ್ಟಪಡುವವರೂ ಇದನ್ನು ನೋಡಬಹುದು!

* ಪ್ರಸಾದ ನಾಯಿಕ

ರುಚಿಯಾದ ಅಡಿಕೆ, ಸಿಹಿಗಷ್ಟು ಗಲಕಂದು, ಘಮ್ಮೆನ್ನಲು ಚಮನ್ನು, ಹಿತಕರವಾದ ಸೋಂಪು... ಯಾವುದೂ ಇಲ್ಲದೇ ಬಾಯಿ ಸುಟ್ಟುಹೋಗುವಂತೆ ಬರೀ ಸುಣ್ಣ ಬಳಿದು 'ಪರಮೇಶ್ ಪಾನವಾಲಾ' ಎಂಬ ಪಾನನ್ನು ಮಡಚಿಟ್ಟು ಕೊಟ್ಟಿದ್ದಾರೆ 'ಆಕಾಶ್' ಖ್ಯಾತಿಯ ಮಹೇಶ್ ಬಾಬು. ಕಥೆಯೆಂಬ ಅಡಿಕೆ ಅರಗಿಸಿಕೊಳ್ಳಲಾಗದಷ್ಟು ಬಿರುಸಾಗಿದೆ. ಎಷ್ಟೇ ಅಗಿದು ತಿಂದು ಅರಗಿಸಿಕೊಳ್ಳಲು ಯತ್ನಿಸಿದರೂ ಕೊನೆಗೆ ದಕ್ಕುವುದು... ಪಿಚಕ್!

ಕಥೆ ಬರೆದಿರುವವರು ಕೆಲ ನಿರ್ಮಾಪಕರಿಗೆ ಅನಿವಾರ್ಯವೆಂಬಂತಿರುವ ಜನಾರ್ಧನ ಮಹರ್ಷಿ. ಚೆನ್ನಾಗಿದೆ ಎಂಬಂತೆ ನೀಡಿರುವ ಪಾನನ್ನು ಬಾಯಿಗೆ ಹಾಕಿಕೊಂಡಾಗಲೇ ಗೊತ್ತಾಗುತ್ತದೆ ಅಡಿಕೆ ಎಂಥದೆಂಬುದು. ಒಂದು ಅತ್ಯುತ್ತಮವಾದ, ಸದಭಿರುಚಿಯ ಚಿತ್ರ ಹೇಗಿರಬೇಕು, ಹೇಗಿರಬಾರದು ಎಂಬುದಕ್ಕೆ ಪ್ರಾತ್ಯಕ್ಷಿಕೆಯಂತಿದೆ ಆದಿತ್ಯಬಾಬು ನಿರ್ಮಾಣದ 'ಪರಮೇಶ್ ಪಾನವಾಲಾ'. ಕಥೆ, ಕಥೆಗಾರ, ಪಾತ್ರವರ್ಗ, ಲೊಕೇಷನ್ನಿನ ಆಯ್ಕೆಯಲ್ಲಿ ನಿರ್ಮಾಪಕರು ಇನ್ಮುಂದೆ ಪಟ್ಟಾಗಿ ಕುಳಿತು ಚಿಂತಿಸದೇ ಹೋದರೆ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ಕನ್ನಡ ಚಿತ್ರರಂಗಕ್ಕೂ ತಟ್ಟುವುದು ದೂರವಿಲ್ಲ!

ಪರಮೇಶ್ ಪಾನವಾಲಾ ಒಬ್ಬ ಯಕಃಶ್ಚಿತ್ ಬೀಡಾ ವ್ಯಾಪಾರಿ. ಅಂಗಡಿಯಲ್ಲಿ ಒಂದೇ ದಿನವೂ ಕಾಣದ ಆತ, ಐಷಾರಾಮಿ ಬಂಗಲೆ ಇಟ್ಟಿದ್ದಾನೆ, ಇತರರಿಗಾಗಿ ಲಕ್ಷಗಟ್ಟಲೆ ಹಣ ಸುರಿದು ದಾನ ಧರ್ಮಗಳನ್ನೂ ಮಾಡುತ್ತಾನೆ. ಇಂತಿಪ್ಪ ಬೀಡಾ ವ್ಯಾಪಾರಿಗೊಬ್ಬ ತಂಗಿ. ಆ ತಂಗಿಯ ಖುಷಿಗಾಗಿ ಏನು ಮಾಡಲೂ ಪರಮೇಶ್ ರೆಡಿ. ತಂಗಿಯ ಮೇಲೆ ಕಣ್ಣು ಹಾಕಿದವರೆಲ್ಲ ಪುಡಿಪುಡಿ. 'ಪ್ರೀತಿಯಿಂದ ಕೇಳಿದ್ರೆ ಪಾನ್ ಕೊಡ್ತೀನಿ, ಇಲ್ಲದಿದ್ದರೆ ಪ್ರಾಣ ತೆಗಿತೀನಿ' ಎನ್ನುತ್ತಲೇ ಏಕಾಂಗಿಯಾಗಿ ರೌಡಿಗಳನ್ನು ಮಟ್ಟಹಾಕುತ್ತಾನೆ. ಹೀಗಿರುವಾಗ, ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸನೊಬ್ಬ ಡಾನ್‌ನ ಮಗನನ್ನು ಸಾಯಿಸಿ ಆತನ ಕ್ರೋಧಕ್ಕೆ ಗುರಿಯಾಗುತ್ತಾನೆ. ಆಗಿದ್ದರೂ ತನ್ನ ಮಗನನ್ನು ಡಾನ್‌ನಿಂದ ಕಾಪಾಡಿಕೊಳ್ಳಲು ಸುಳ್ಳು ನಾಟಕವಾಡಿ ಪರಮೇಶ್ ತನ್ನ ಮಗನನ್ನು ಕಾಪಾಡುತ್ತಾನೆ ಎಂಬ ಕಾರಣದಿಂದ ಪರಮೇಶ್ ತಂಗಿಯನ್ನು ತನ್ನ ಸೊಸೆಯನ್ನಾಗಿ ಮಾಡಿಕೊಳ್ಳುತ್ತಾನೆ. ಖುದ್ದು ಪೊಲೀಸ್ ಆಗಿದ್ದರೂ ಕಮಿಷನರ್ ಹೇತ್ಲಾಂಡಿಯಂತೆ ವರ್ತಿಸುತ್ತಾನೆ. ಪೊಲೀಸ್ ಇಲಾಖೆಗಿಂತ ಪರಮೇಶ್ ಮೇಲೆ ಆತನಿಗೆ ಹೆಚ್ಚಿನ ನಂಬಿಕೆ!

ಪರಮೇಶ್ ಪಾನವಾಲಾ ಹೇಗೆ ಆ ಡಾನ್‌ನನ್ನು ಆಟವಾಡಿಸುತ್ತಾನೆ, ರೌಡಿಗಳ ರಕ್ತ ಚೆಂಡಾಡುವ ತಾನೇ ಪ್ರೀತಿಯಿಂದ ಡಾನ್‌ನ ಮನಪರಿವರ್ತನೆ ಹೇಗೆ ಮಾಡುತ್ತಾನೆ ಎಂಬುದು ಮುಂದಿನ ಕಥೆ. ಕಥೆಯಲ್ಲಿ ನಯಾಪೈಸೆ ನೈಜತೆಯಿಲ್ಲ, ನಾವೀನ್ಯತೆಯಂತೂ ಇಲ್ಲವೇ ಇಲ್ಲ. ಡಾನ್‌ಗೆ ಪರಮೇಶ್ ಒಬ್ಬನೇ ಸಿಕ್ಕಾಗಲೂ ತನ್ನ ಮಕ್ಕಳು ಆತನ ಬಂಧನದಲ್ಲಿ ಇದ್ದಾರೆಂದು ಹೆದರಿ ಆತನನ್ನು ಹೋಗಲು ಬಿಡುವುದು ಕಥೆಯ 'ನಾವೀನ್ಯ'ತೆಗೆ ಒಂದು ಉದಾಹರಣೆ. ಪರಮೇಶನನ್ನು ಅಲ್ಲೇ ಮುಗಿಸಿಹಾಕಿದ್ದರೆ ಬೇರೆ ಯಾರ ರಕ್ಷಣೆಯಲ್ಲೂ ಇಲ್ಲದ ತನ್ನ ಮಕ್ಕಳು ತನಗೆ ದಕ್ಕುತ್ತಿರಲಿಲ್ಲವೆ? ದಡ್ಡ ಡಾನ್!

ಇನ್ನು ನಿರ್ದೇಶಕ ಮಹೇಶ್ ಬಾಬೂ ಪ್ರತಿಯೊಂದು ಹಂತದಲ್ಲಿಯೂ ಎಡವಿದ್ದಾರೆ. ಶಿವರಾಜಕುಮಾರ್ ಇಮೇಜಿಗೆ ತಕ್ಕಂತೆ ಅದ್ಧೂರಿಯಾಗಿ ಚಿತ್ರ ಮಾಡಿರುವುದಾಗಿ ಹೇಳಿರುವ ಮಹೇಶ್ ಬಾಬು ಮಾಡಿಕೊಂಡಿರುವ ಪೂರ್ವತಯಾರಿ ಏನೂ ಸಾಲದು. ಬೀಡಾ ಅಂಗಡಿ ಇಟ್ಟಿರುವ ಪಾನ್‌ವಾಲಾಗೆ ಒಂದು ಪುಟ್ಟ ಮನೆಯನ್ನು ನಿರ್ದೇಶಕರು ದಯಪಾಲಿಸಿದ್ದರೆ ಅರ್ಧ ಗೆದ್ದಿರುತ್ತಿದ್ದರು. ಕಥೆ ಆಯ್ಕೆಯಲ್ಲಿಯೇ ಮೊದಲು ಎಡವಿದ್ದಾರೆ. ಸುರ್ವಿನ್ ಚಾವ್ಲಾಗಿಂತ ಪ್ರತಿಭಾವಂತ ಮತ್ತು ಸುಂದರವಾಗಿರುವ ನಾಯಕಿಯರು ಕನ್ನಡದಲ್ಲಿ ಇಲ್ಲವೆ? ಪಕ್ಕದಲ್ಲೇ ಗುಲಕಂದ್ ನಂಥ ಸೋನುವನ್ನು ಇಟ್ಟುಕೊಂಡು ದೂರದ ಮುಂಬೈನಿಂದ ಸುರ್ವಿನ್ ಳನ್ನು ತಂದಿದ್ದಾರೆ. ಪಾನ್ ಅಂಗಡಿ ಇಟ್ಟುಕೊಂಡಿರುವ ವ್ಯಕ್ತಿ ಐಷಾರಾಮಿ ಜೀವನ ನಡೆಸಲು ಹೇಗೆ ಸಾಧ್ಯ? ಇನ್ನಾರೋ ಒಬ್ಬನ ಮನಪರಿವರ್ತನೆ ಮಾಡಲು ಲಕ್ಷಗಟ್ಟಲೆ ಹಣ ಖರ್ಚು ಮಾಡಲು ಹೇಗೆ ಸಾಧ್ಯ? ಮಹೇಶ್ ಬಾಬು ಕಲ್ಪನೆಗಳಿಗೆ ಮಾತ್ರ ಎಟಕುವ ಸಾಧ್ಯತೆಗಳಿವು.

ಡಾನ್ ಆಗಿ ಆಶಿಶ್ ವಿದ್ಯಾರ್ಥಿ, ಪರಮೇಶ್ ಪ್ರೇಯಸಿಯಾಗಿ ಸುರ್ವೀನ್ ಚಾವ್ಲಾ ಮಾತನಾಡುವಾಗ ತಪ್ಪುವ ಮಾತು-ತುಟಿಯ ಲಯ ಕೆಟ್ಟ ಸಂಕಲನಕ್ಕೆ ಸಾಕ್ಷಿ. ಎಂ.ಎಸ್. ರಮೇಶ್ ಬರೆದಿರುವ ಸಂಭಾಷಣೆಯಲ್ಲಿ ಚಾರಸೌ, ಛೇಸೌ, ಕಲ್ಕತಾ, ಜರ್ದಾ ಕಿಕ್ಕು ಮಾಯವಾಗಿದೆ. ಸಾಧು ಕೋಕಿಲಾ ಮತ್ತು ಓಂಪ್ರಕಾಶ್ ನಡುವೆ ನಡೆಯುವ ಹಾಸ್ಯ ಪ್ರಸಂಗ ಕೂಡ ಪೇಲವ ಸಂಭಾಷಣೆಯಿಂದ ತೀವ್ರತೆಯನ್ನು ಕಳೆದುಕೊಂಡಿದೆ.

ಶಿವರಾಜ್ ಕುಮಾರ್ ಗೆ ಈ ಚಿತ್ರ ಬೇಕಾಗಿತ್ತಾ? ರವಿವರ್ಮ ಸಂಯೋಜಿಸಿರುವ ಹೊಡೆದಾಟದ ದೃಶ್ಯಗಳಲ್ಲಿ ಶಿವಣ್ಣ ಮಿಂಚಿದ್ದು ಬಿಟ್ಟರೆ ಸೆಂಟಿಮೆಂಟಿನ ದೃಶ್ಯಗಳಲ್ಲಿ ರಸಾಹೀನವಾಗಿದ್ದಾರೆ. ಪಾನ್ ಹಾಕಿಕೊಳ್ಳುವಾಗ ತೋರುವ ಮ್ಯಾನರಿಸಂ, ಸಂಭಾಷಣೆ ಒಪ್ಪಿಸುವ ಶೈಲಿ ಮಹರ್ಷಿ ಕಥೆಗಿಂತ ಭಿನ್ನವಾಗೇನೂ ಇಲ್ಲ. ಶಿವಣ್ಣನ ಚಿತ್ರ ಒಂದು ಬಾರಿಯಾದರೂ ನೋಡಲೇಬೇಕು ಎನ್ನುವಂಥವರು ಒಂದು ಬಾರಿ ಚಿತ್ರ ನೋಡಬಹುದು. ಪಾನ್ ಇಷ್ಟಪಡುವವರೂ ಇದನ್ನು ನೋಡಬಹುದು!

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada