For Quick Alerts
  ALLOW NOTIFICATIONS  
  For Daily Alerts

  ಆಗೋದೆಲ್ಲಾ... ಒಳ್ಳೆದಕ್ಕೆ..! ‘ಏಪ್ರಿಲ್‌ ಫೂಲ್‌’ ಕೊಡುಗೆ

  By Staff
  |
  • ರಮೇಶ್‌ ಕುಮಾರ್‌ ನಾಯಕ್‌
  ಸಿನಿಮಾ ದುನಿಯಾದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಕಿರುತೆರೆಯ ಆಕರ್ಷಣೆಯಿಂದ ಪ್ರೇಕ್ಷಕರನ್ನು ಸೆಳೆಯುವ ಸವಾಲು ಎದುರಾಗಿದ್ದರಿಂದ, ಇತ್ತೀಚಿನ ದಿನಗಳಲ್ಲಿ ನಿರ್ದೇಶಕರು ನವನವೀನ ಫಾರ್ಮುಲಾ ಕಂಡುಹಿಡಿಯುತ್ತಿದ್ದಾರೆ. ಬೆಂಗಾಡಿನ ಉದ್ದಾನುದ್ದ ರಸ್ತೆಯನ್ನೇ ‘ಹೀರೋ’ ಮಾಡಿ ಅಥವಾ ನಾಲ್ಕು ಗೋಡೆಯ ನಡುವೆಯೇ ಕ್ಯಾಮರಾ ತಿರುಗಿಸಿ ಸೂಪರ್‌ ಹಿಟ್‌ ಚಿತ್ರ ನೀಡಿದ ನಿರ್ದೇಶಕರು ನಮ್ಮ ನಡುವೆ ಇದ್ದಾರೆ. ದುರದೃಷ್ಟವಶಾತ್‌ ಈ ಚಿತ್ರದ ನಿರ್ದೇಶಕ ಎ. ಆರ್‌. ಬಾಬು ಅಂಥವರು ಇನ್ನೂ ‘ಕಲಾಸಿಪಾಳ್ಯ ಮಟ್ಟ’ ದಲ್ಲೇ ಇರುವುದು ಬೇಜಾರಿನ ಸಂಗತಿ.

  ‘ಇಷ್ಟರಲ್ಲೇ ನಿನಗೆ ಮದುವೆ, ಸೋಬಾನ, ಮಗುವಿನ ಜನನ, ಪತ್ನಿಯ ಮರಣ’- ಹೀಗಂತ ಜಗ್ಗೇಶ್‌ಗೆ ಶಾಸ್ತಿ ್ರ ಶಾಸ್ತ ್ರ ಹೇಳುತ್ತಾನೆ. ಈ ಭೀತಿಯ ನಡುವೆಯೇ, ‘ನೀನು ಮದುವೆ ಆಗಿ ನಾನು ಮರಿ ಮೊಮ್ಮಗನನ್ನು ನೋಡದೆ ಹೋದರೆ ಎದೆ ಒಡೆದು ಸತ್ತೇ ಹೋಗುತ್ತೇನೆ’ ಎಂಬ ತಾತನ ಬೆದರಿಕೆ. ತಾತನ ಕಾಟ ತಾಳಲಾರದೆ ಆತ ಮದುವೆಯಾಗುತ್ತಾನೆ. ಆದರೆ, ಮಗು ಹುಟ್ಟಿದರೆ ಪತ್ನಿ ಸಾಯತ್ತಾಳೆಂಬ ಭೀತಿಯಿಂದ ಆಕೆಯ (ಅಭಿತಾ) ಮೈ ಮುಟ್ಟಲೂ ಅಂಜುತ್ತಾನೆ. ಅಣ್ಣ ಕುಡಿಯಬೇಕಿದ್ದ ಕಾಮೋತ್ತೇಜಕ ಹಾಲು ಕುಡಿದ ಫಲವಾಗಿ ಆಗಬಾರದ್ದೆಲ್ಲ ಆಗಿ ಹೋಗುತ್ತದೆ. ಪತ್ನಿ ಗರ್ಭ ಧರಿಸುತ್ತಾಳೆ. ಶಾಸ್ತ್ರಿ ಹೇಳಿದ ಶಾಸ್ತ್ರ ನೆನಪಾಗಿ ಈತ ಗಡಗಡ ನಡುಗುತ್ತಾನೆ. ಹೆರಿಗೆ ಕೋಣೆಯಲ್ಲಿ ಹೆಂಡತಿ ವಿಲವಿಲ ಒದ್ದಾಡುತ್ತಿದ್ದರೆ, ಈ ಮಹಾಶಯ ಡೈವೋರ್ಸ್‌ ಪೇಪರ್‌ಗೆ ಆಕೆಯ ಸಹಿ ಪಡೆಯಲು ಹರಸಾಹಸ ಮಾಡುತ್ತಾನೆ. ವಿಚ್ಛೇದನ ಪಡೆದರೆ ಆಕೆ ತನ್ನ ಪತ್ನಿಯೇ ಅಲ್ಲ ಎನ್ನುವುದು ಆತನ ಬೊಂಬಾಟ್‌ ಐಡಿಯಾ!

  ಇಂಥ ಬುರ್ನಾಸ್‌ ಕತೆ ಬರೆದವರು ‘ಪರಮ ಕಥಾ ಚಕ್ರ’ ಮತ್ತು ಇಂಥ ನಾನ್‌ಸೆನ್ಸ್‌ ಕತೆಯ ಮೇಲೆ ಹತ್ತಿರ ಹತ್ತಿರ ಅರ್ಧ ಕೋಟಿ ರೂ. ಹೂಡಿದವರು ‘ಪರಮ ಶೌರ್ಯ ಚಕ್ರ’ ಪ್ರಶಸ್ತಿಗೆ ಅರ್ಹರು!

  ಚಿತ್ರವನ್ನು ಕೊಂಚ ಮಟ್ಟಿಗೆ ಜೀವಂತವಾಗಿರಿಸಿರುವುದು ಜಗ್ಗೇಶ್‌ರ ವಿಲಕ್ಷಣ ಮ್ಯಾನರಿಸಂ ಮತ್ತು ಎಂದಿನ ಲವಲವಿಕೆಯ ಅಭಿನಯ. ‘ಕಳ್ಳ-ಪೊಲೀಸ್‌’ ಚಿತ್ರದ ಹೀರೋ ರಾಜೇಂದ್ರ ಪ್ರಮುಖ ಪಾತ್ರದಲ್ಲಿದ್ದಾರೆ. ಅವರಿರುವ ಸನ್ನಿವೇಶಗಳಲ್ಲೆಲ್ಲ ಬರಿ ಕಳ್ಳ ಪೊಲೀಸ್‌ ಆಟ. ಈ ಚಿತ್ರದಲ್ಲಿ ‘ಕಳ್ಳ-ಪೊಲೀಸ್‌ ಭಾಗ 2’ ಸೇರಿಕೊಂಡಿದೆ ಎನ್ನಲಡ್ಡಿಯಿಲ್ಲ.

  ಗಂಧರ್ವ ಅವರ ಸಾಹಿತ್ಯ ಮತ್ತು ರಾಜ್‌ಭರತ್‌ ಅವರ ಸಂಗೀತ ಚಿತ್ರದ ಲೆವಲ್‌ಗೆ ತಕ್ಕುದಾಗಿದೆ. ಹೊಸ ಪರಿಚಯ ಅಭಿತಾ ನಟನೆ ಪರವಾಗಿಲ್ಲ.

  ಅಂದ ಹಾಗೆ ಚಿತ್ರದ ನಿರ್ದೇಶಕರು, ವಿನೂತನ ಗರ್ಭ ನಿರೋಧಕ ಮಾತ್ರೆ ಶೋಧಿಸಿದ್ದಾರೆ. ಒಂದೇ ಒಂದು ಮಾತ್ರೆ ಸೇವಿಸಿದರೆ ಸಾಕು. ಲೈಫ್‌ ಲಾಂಗ್‌ ಮಕ್ಕಳಾಗದು! ತಮಾಷೆ ಎಂದರೆ ಇದೇ ನಿರ್ದೇಶಕರಿಗೆ ಮಕ್ಕಳು ಬೇಡ ಎಂದಾದರೆ ‘ಫಸ್ಟ್‌ ನೈಟ್‌’ ನ್ನೇ ಮುಂದೂಡಬೇಕಿಲ್ಲ ಎಂಬ ‘ಕಾಮ’ನ್‌ಸೆನ್ಸೇ ಇಲ್ಲ !!

  ಏಪ್ರಿಲ್‌ ತಿಂಗಳಿನಲ್ಲೇ ಈ ಚಿತ್ರವನ್ನು ಬಿಡುಗಡೆ ಮಾಡಿ ಪ್ರೇಕ್ಷಕರನ್ನು ಫೂಲ್‌ ಮಾಡಲು ಹೊರಟಿರುವುದು ಮಾತ್ರ ನಿರ್ಮಾಪಕರ ಶಾಣ್ಯಾತನ.

  (ಸ್ನೇಹಸೇತು: ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X