»   » ರಕ್ಷಕ : ಪೊಲೀಸ್‌ ಡೈರಿುುಂ ಇನ್ನೊಂದು ಹಾಳೆ!

ರಕ್ಷಕ : ಪೊಲೀಸ್‌ ಡೈರಿುುಂ ಇನ್ನೊಂದು ಹಾಳೆ!

Subscribe to Filmibeat Kannada


ಮೊದಲ ಹತ್ತು ನಿಮಿಷ ಸಾಯಿಕುಮಾರ್‌ರಿಂದ ನಾಡು, ನುಡಿ, ಜಲ, ನೆಲ ಬಗ್ಗೆ ಒಂದು ಭಾಷಣ, ಕರ್ನಾಟಕ ಪೊಲೀಸ್‌ ಹಾಗೂ ಡಾ. ರಾಜ್‌ಗೆ ಸಿಕ್ಕಿರುವ ಬಿರುದು ಬಾವಲಿಗಳ ಬಗ್ಗೆ ಒಂದು ಸಣ್ಣ ಥೀಸಿಸ್‌ ಬಿಟ್ಟರೆ ಇಡೀ ಚಿತ್ರದಲ್ಲಿ ಅವರಿಗೆ ಮಾತು ಕಡಿಮೆ!

ಚಿತ್ರ : ರಕ್ಷಕ
ನಿರ್ಮಾಣ : ಭಾನುಪ್ರಕಾಶ್‌
ನಿರ್ದೇಶನ : ಮಂಡ್ಯ ನಾಗರಾಜ್‌
ಸಂಗೀತ : ರವಿಚಂದ್ರ
ತಾರಾಗಣ : ಸಾಯಿಕುಮಾರ್‌, ಸಂಜನಾ, ಭಾನುಪ್ರಕಾಶ್‌ ಮತ್ತಿತರರು.

ಇತ್ತೀಚೆಗಷ್ಟೇ ‘ಪೊಲೀಸ್‌ ಸ್ಟೋರಿ’ಯಲ್ಲಿ ಬ್ಲ್ಯಾಕ್‌ ಟೈಗರ್‌ನನ್ನು ಹಿಡಿದಿದ್ದ ಐ.ಪಿ.ಎಸ್‌. ಅಗ್ನಿ, ಈ ಬಾರಿ ಎ.ಸಿ.ಪಿ. ಪಾರ್ಥರಾಗಿದ್ದಾರೆ. ಇನ್ನೊಬ್ಬ ಭಯಂಕರ ಅಪಹರಣಕಾರನನ್ನು ಹಿಡಿದಿದ್ದಾರೆ. ಮತ್ತೊಮ್ಮೆ ಕರ್ನಾಟಕ ಪೊಲೀಸ್‌ ಎಂದು ಮೀಸೆ ತಿರುವಿದ್ದಾರೆ ಎನ್ನುವಲ್ಲಿಗೆ ‘ರಕ್ಷಕ’ ಚಿತ್ರದ ಒನ್‌ಲೈನರ್‌ ಮುಗಿಯುತ್ತದೆ.

ಕನ್ನಡದಲ್ಲಿ ಕಿಡ್ನಾಪ್‌ ಕತೆಗಳು ಹೊಸದಲ್ಲ. ಈಗಾಗಲೇ ಬಂದು ಹೋಗಿರುವ ಅಂಥ ಹತ್ತಾರು ಚಿತ್ರಗಳ ಪಟ್ಟಿಗೆ ‘ರಕ್ಷಕ’ ಹೊಸ ಸೇರ್ಪಡೆ. ಬಿಳಿಗಿರಿರಂಗನ ಬೆಟ್ಟಕ್ಕೆ ಆನೆ ನೋಡಲು ಹೋಗುವ ಸಚಿವರ ಮಗನನ್ನು ಮಾರನ್‌ ತಂಡ ಕಿಡ್ನಾಪ್‌ ಮಾಡುವುದರೊಂದಿಗೆ ಕತೆ ಒಂದು ಬೆಳಗ್ಗೆ ಪ್ರಾರಂಭವಾಗುತ್ತದೆ. ಸಾಯಂಕಾಲದ ಹೊತ್ತಿಗೆ ಎ.ಸಿ.ಪಿ. ಪಾರ್ಥ ಆ ಹುಡುಗನನ್ನು ಬಿಡಿಸಿ, ಮಾರನ್‌ನನ್ನು ಹಿಡಿಯುವುದರೊಂದಿಗೆ ಮುಗಿಯುತ್ತದೆ.

ಈ ಮಧ್ಯೆ ಒಂದಿಷ್ಟು ಕಣ್ಣಾಮುಚ್ಚಾಲೆ, ಹಾಡುಗಳು, ಫೈಟುಗಳು, ಹೆಣಗಳು, ಸಂದೇಶಗಳು, ಚೇಸಿಂಗ್‌ಗಳು ಇತ್ಯಾದಿ ಇತ್ಯಾದಿ.

ಸಿನಿಮಾ ನೋಡಿ ಅನುಭವವಿರುವವರು ರಕ್ಷಕ ನೋಡುತ್ತಿದ್ದಂತೆ ಇಷ್ಟೇ ಹೊತ್ತಿನಲ್ಲಿ, ಇಂಥದೇ ಘಟನೆ ನಡೆಯುತ್ತದೆ ಎಂದು ಹೇಳಿದರೆ ಆಶ್ಚರ್ಯವಿಲ್ಲ. ಕತೆ ಅಷ್ಟೊಂದು ಸವಕಲಾಗಿದೆ, ನಿಧಾನವಾಗಿದೆ.

ಬರೀ ದಟ್ಟ ಕಾಡು, ಕಿಡ್ನಾಪ್‌ ಇಟ್ಟುಕೊಂಡು ಇನ್ನಷ್ಟು ಟೆನ್ಷನ್‌ ಕೊಡಬಹುದಾಗಿತ್ತು, ಚಿತ್ರಕತೆಯನ್ನು ಇನ್ನಷ್ಟು ಗಟ್ಟಿಗೊಳಿಸಬಹುದಾಗಿತ್ತು. ಆದರೆ, ನಿರ್ದೇಶಕ ಮಂಡ್ಯ ನಾಗರಾಜ್‌ ಆ ಪ್ರಯತ್ನ ಮಾಡಿಲ್ಲ. ಹಾಗಾಗಿ ಅಲ್ಲಲ್ಲಿ ಬೋರ್‌ ಹೊಡೆಯುತ್ತದೆ. ಇದರ ಜತೆಗೆ ಅಸಂಖ್ಯಾತ ಪಾತ್ರಗಳು ಬೇರೆ ಇವೆ. ಅವುಗಳಿಗೆಲ್ಲ ಹಾಡು, ಫೈಟುಗಳಲ್ಲಿ ಅವಕಾಶ ಕೊಡುವುದಕ್ಕೆ ಹೋಗಿ ಮತ್ತಷ್ಟು ಎಳೆದ ಹಾಗಾಗಿದೆ. ಆ ದಟ್ಟ ಕಾಡಿನಿಂದ ತಪ್ಪಿಸಿಕೊಂಡು ಬರುವುದು, ಎಳೆ ದಾಟದಿಂದ ಪಾರಾಗುವುದು ಎರಡೂ ಹಿಂಸೆಯೇ.

ಸಾಯಿಕುಮಾರ್‌ ಇಲ್ಲಿದ್ದರೂ ಅವರ ಅಭಿಮಾನಿಗಳು ಖುಷಿಪಡುವ ಬಹಳಷ್ಟು ಅಂಶಗಳು ಇಲ್ಲಿಲ್ಲ. ಮೊದಲನೆಯದು ಮಾತು. ಮೊದಲ ಹತ್ತು ನಿಮಿಷ ಅವರು ನಾಡು, ನುಡಿ, ಜಲ, ನೆಲ ಬಗ್ಗೆ ಒಂದು ಭಾಷಣ, ಕರ್ನಾಟಕ ಪೊಲೀಸ್‌ ಹಾಗೂ ಡಾ. ರಾಜ್‌ಗೆ ಸಿಕ್ಕಿರುವ ಬಿರುದು ಬಾವಲಿಗಳ ಬಗ್ಗೆ ಒಂದು ಸಣ್ಣ ಥೀಸಿಸ್‌ ಬಿಟ್ಟರೆ ಇಡೀ ಚಿತ್ರದಲ್ಲಿ ಅವರಿಗೆ ಮಾತು ಕಡಿಮೆ. ಜನ ಹೆಚ್ಚಾಗಿ ಅವಕಾಶ ಹಂಚಿ ಹೋಗಿರುವುದು ಇದಕ್ಕೆ ಕಾರಣವಿರಬಹುದು.

ಹಾಗೆಯೇ ಆ್ಯಕ್ಷನ್‌ ಸಹ ಕಡಿಮೆಯಿದೆ. ಆರ್ಭಟ ಇನ್ನೂ ಕಡಿಮೆಯಿದೆ. ನಿರ್ಮಾಪಕ ಭಾನುಪ್ರಕಾಶ್‌ ಸಚಿವರಾಗಿ ಅಭಿನಯಿಸಿದ್ದಾರೆ. ಮೊದಲ ಚಿತ್ರವಾದ್ದರಿಂದಲೋ ಪ್ರತಿ ದೃಶ್ಯದಲ್ಲೂ ಗಾಬರಿ, ಗಾಬರಿ. ಮಾರನ್‌ ಪಾತ್ರ ಮಾಡಿರುವ ಫೀಲ್ಡ್‌ ಮಂಜು, ಹಳೆಯ ವಿಲನ್‌ ನಾಗಪ್ಪ ಅವರನ್ನು ನೆನಪಿಸುತ್ತಾರೆ.

ಸಂಜನಾ ಫುಟ್‌ರಗ್‌ ಡ್ರೆಸ್ಸಿನಲ್ಲಿ ಹೆಚ್ಚು ಗಮನಸೆಳೆಯುತ್ತಾರೆ. ಕೊಳ್ಳೇಗಾಲ ಶಾಸಕ ಬಾಲರಾಜ್‌, ಸ್ವಸ್ತಿಕ್‌ ಶಂಕರ್‌, ಕಿಲ್ಲರ್‌ ವೆಂಕಟೇಶ್‌ ಹಾಗೂ ಒಂದಿಷ್ಟು ಹೊಸಬರಿದ್ದಾರೆ! ತಂತ್ರಜ್ಞರಲ್ಲಿ ಗೆಲ್ಲುವುದು ಛಾಯಾಗ್ರಾಹಕ ಮನೋಹರ್‌. ಬಿಳಿಗಿರಿರಂಗನ ಬೆಟ್ಟವನ್ನು ಅವರು ಸುಂದರವಾಗಿ ಸೆರೆಹಿಡಿದಿದ್ದಾರೆ.

ರವಿಚಂದ್ರ ಅವರ ಸಂಗೀತದಲ್ಲಿ, ‘ಅಮ್ಮ ಎಂದರೆ ಏನೋ ಹರುಷವೋ’ ಹಾಡು ಬೇರೆ ಸಾಹಿತ್ಯದೊಂದಿಗೆ ಪುನರಾವರ್ತನೆಯಾಗಿದೆ. ಇನ್ನಷ್ಟು ಹಾಡುಗಳಿವೆ, ಅವು ಮರೆತಂತಾಗಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada