For Quick Alerts
  ALLOW NOTIFICATIONS  
  For Daily Alerts

  ನಿನಗಾಗಿ ಕನ್ನಡ ಚಿತ್ರ ವಿಮರ್ಶೆ

  By Staff
  |

  'ಸ್ನೇಹ ಬರೀ ಜೊತೆಯಾಗಿ ಓಡಾಡಲಿಕ್ಕೆ, ಮದುವೆಯಾಗುವುದಕ್ಕಲ್ಲ" ಹಾಗಂತ ಕೆಲವು ಪಾತ್ರಗಳು ಹೇಳಿದರೂ ಅದನ್ನು ಸ್ವತಃ ನಿರ್ದೇಶಕರೇ ಒಪ್ಪುವುದಿಲ್ಲ . ಆಕಸ್ಮಾತ್‌ ಒಪ್ಪಿದರೆ ಪ್ರೇಮಕತೆ ಹುಟ್ಟುವುದಾದರೂ ಹೇಗೆ? ಹುಡುಗ, ಹುಡುಗಿಯರ ರೊಮಾನ್ಸ್‌ ನಡೆಯುವುದಾದರೂ ಹೇಗೆ? ಹೀಗಾಗಿಯೇ ಅವರು ಹೇಳುತ್ತಾರೆ- 'ಸ್ನೇಹದ ಬುನಾದಿಯಿಂದಲೇ ಪ್ರೇಮ ಹುಟ್ಟೋದು."

  ನಾಯಕ- ನಾಯಕಿ ಇಬ್ಬರೂ ಹುಟ್ಟಿದ್ದು ಒಂದೇ ದಿನ. ಹೀಗಾಗಿ ಇವರು ಒಂಥರಾ ಸರ್ವತಂತ್ರ ಸ್ವತಂತ್ರ ಜೀವಿಗಳು. ಆದರೆ ಸ್ನೇಹವನ್ನು ಪ್ರೇಮವಾಗಿ ಬದಲಾಯಿಸುವ ಸ್ವತಂತ್ರ ಮಾತ್ರ ಬೇಡವೆನ್ನುತ್ತಾರೆ. ನಮ್ಮಿಬ್ಬರದು ಬರೀ ಸ್ನೇಹವೆಂದು ಬಲವಂತವಾಗಿ ತಿಳಿಯುತ್ತಾರೆ. ಮನಸ್ಸಿನ ಪ್ರೇಮ ಭಾವನೆ ತಿಳಿಸಿದರೆ ಸ್ನೇಹವೆಲ್ಲಿ ಮುರಿಯುತ್ತೋ ಎಂದು ಆತಂಕದಿಂದ ಮುಚ್ಚಿಡುತ್ತಾರೆ. 'ಪ್ರೇಮದಲ್ಲಿ ಬಿದ್ದವರಿಗೆ ಅದು ಕಾಣುವುದಿಲ್ಲ . ಉಳಿದವರಿಗೆ ಅದು ತಿಳಿಯುತ್ತದೆ." ಕೊನೆಗೇನಾಗುತ್ತೆ ಅನ್ನೋದನ್ನು ನೀವೇ ನೋಡಿ ಸಂತಸ ಪಡಿ.

  ಕಥಾ ನಿರೂಪಣೆಯೇ ಇಲ್ಲಿಯ ನಿಜವಾದ ಹೀರೋ. ಅದನ್ನು ನವಿರು ಹಾಸ್ಯದ ಮೂಲಕ ಎಲ್ಲೂ ಹಾದಿತಪ್ಪದಂತೆ ನಿರ್ದೇಶಕ ಎಸ್‌.ಮಹೇಂದರ್‌ ನಿರೂಪಿಸಿದ್ದಾರೆ. ಪಂಚಿಂಗ್‌ ನೀಡುವ ಸಂಭಾಷಣೆಗಳೇ ಮೂಲ ಜೀವಾಳ. ಆದರಿದು ತೆಲುಗಿನ 'ನುವ್ವೇ ಕಾವಾಲಿ" ಚಿತ್ರದ ರೀಮೇಕು. ಹೀಗಾಗಿ ಸಂಭಾಷಣೆಯನ್ನು ಮಹೇಂದರ್‌ ಸ್ವಂತವಾಗಿ ಬರೆದಿದ್ದರೆ ಅದರ ಕ್ರೆಡಿಟ್‌ ಅವರಿಗೇ ಸಲ್ಲಬೇಕು. ಆದರೆ ಇಂಗ್ಲೀಷ್‌ ಸ್ವಲ್ಪ ಜಾಸ್ತಿಯಾಗಬೇಕು. ಮೊದಲ ಬಾರಿ ಹೀರೋ ಆಗಿರುವ ವಿಜಯ ರಾಘವೇಂದ್ರ ಭರವಸೆ ಹುಟ್ಟಿಸಿದ್ದಾರೆ. ವಿಜಯ್‌ ಕುಣಿತದಲ್ಲಿ ತೋರಿಸುವ ತಾದ್ಯಾತ್ಮತೆಯನ್ನು ನಟನೆಯಲ್ಲೂ ಮೈಗೂಡಿಸಿಕೊಂಡರೆ ಮತ್ತಷ್ಟು ಒಳ್ಳೆಯದು.

  ಕಟ್ಟುಮಸ್ತು ದೇಹದ ಈತನಿಗೆ ಸರಿಸಾಟಿಯಾಗಿ ನಟಿಸಿದ್ದು ರಾಧಿಕಾ. ತನ್ನ ಬಂಗಾರದ ಬಣ್ಣದ ಮೈ ಬಣ್ಣದಿಂದ, ಮಿಂಚಿನಂತಹ ನಗೆಯಿಂದ, ಬಿಂದಾಸ್‌ ನಟನೆಯಿಂದ ಈಕೆ ಪಡ್ಡೆ ಹೈಕಳ ತಲೆ ತಿನ್ನುವುದು ತಿಮ್ಮಪ್ಪನಾಣೆಯಾಗಿಯೂ ಸತ್ಯ. ಅಚ್ಚರಿ ಮತ್ತು ಮೆಚ್ಚುಗೆ ಮೂಡಿಸುವುದು ನಮ್ಮ ಕಾನೂರು ಸುಬ್ಬಮ್ಮ . ವಟವಟನೆ ಒದರುವ ಗಯ್ಯಾಳಿಯಾಗಿ, ಮಾವನನ್ನು ಮದುವೆಯಾಗುವ ಕನಸಿನಲ್ಲೇ ಬದುಕುವ ಹುಡುಗಿಯಾಗಿ ತಾರಾ ವಂಡರ್‌ಫುಲ್‌. ಅಭಿನಯಕ್ಕೆ ತಕ್ಕಂತೆ ಮಾತುಗಳನ್ನು ಹೇಳಿದ್ದು , ಅದನ್ನು ಜೋಡಿಸಲು ಪಟ್ಟ ಕಷ್ಟವೆಲ್ಲ ತೆರೆ ಮೇಲೆ ಕಾಣಿಸುತ್ತದೆ. ಇನ್ನೆಷ್ಟು ಪ್ರತಿಭೆ ಇಟ್ಟುಕೊಂಡಿದ್ದಾಳೆ ಈ ಹುಡುಗಿ?

  ಸದಾ ಬೀಳುವ ಚೈತ್ರಾ, ಹಾಡುವ ವಿಶಾಲ್‌ ಹೆಗಡೆ, ಮಗ ಓದುವುದನ್ನು ಕಂಡು ಕಣ್ಣೀರು ಸುರಿಸುವ ಅವಿನಾಶ್‌ ಎಲ್ಲರೂ ಇಷ್ಟವಾಗುತ್ತಾರೆ. ಗುರುಕಿರಣ್‌ ಸ್ವಂತವಾಗಿ ಟ್ಯೂನ್‌ ಮಾಡಿದ ಮೂರು ಹಾಡುಗಳಲ್ಲಿ ಎರಡು ಇಂಪಾಗಿವೆ. 'ಎಲ್ಲೆಲ್ಲಿ ನಾ ನೋಡಲಿ" ಹಾಡಂತೂ ಪ್ರೇಮಿಗಳಿಗೆ ಸುಪ್ರಭಾತವಾಗಬಹುದು. ಒಂದು ಹಾಡಿನಲ್ಲಿ ಕ್ಯಾಬರೆ ಡಾನ್ಸ್‌ ಮಾಡುವ ಭಾವನಾರನ್ನು ಮಹೇಂದರ್‌ ಈ ರೀತಿ ಬಳಸಿಕೊಂಡಿದ್ದನ್ನು ಕನ್ನಡಿಗರು ಕ್ಷಮಿಸುವುದಿಲ್ಲ . ಎರಡು ಹಾಡು ಕತ್ತರಿಸಿ, ಹದಿನೈದು ನಿಮಿಷ ಮೊಟಕುಗೊಳಿಸಿದ್ದರೆ ಚಿತ್ರ ಮತ್ತಷ್ಟು ಚೊಕ್ಕವಾಗುತ್ತಿತ್ತು . ಆದರೂ ಹೊಸಬರು ದಂಡೆತ್ತಿ ಬರುತ್ತಿರುವ ದಿನಗಳಲ್ಲಿ ಈ ಚಿತ್ರ ಅವರಿಗೆಲ್ಲಾ ಎನರ್ಜಿ ಟಾನಿಕ್‌ನಂತೆ ಕೆಲಸ ಮಾಡಿರುವುದು ಸುಳ್ಳಲ್ಲ . ಎಲ್ಲರಿಗೂ ಖುಷಿಕೊಡುವ 'ನಿನಗಾಗಿ" ಯನ್ನು ಮನೆ ಮಂದಿಯೆಲ್ಲಾ ಮುಜುಗರವಿಲ್ಲದೆ ನೋಡಬಹುದು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X