»   » ಕೊಳೆತ ಕನಕಾಂಬರಿ ಡಾಟ್‌ ಕಾಮ್‌..!

ಕೊಳೆತ ಕನಕಾಂಬರಿ ಡಾಟ್‌ ಕಾಮ್‌..!

Posted By:
Subscribe to Filmibeat Kannada
  • ಮಹೇಶ್‌ ದೇವಶೆಟ್ಟಿ
ವಿಕಾರವಾಗಿ ಒಬ್ಬ ಸತ್ತು ಬಿದ್ದಿರುತ್ತಾನೆ. ಆಗ ಬರುವ ಪೊಲೀಸರಿಬ್ಬರು ಅವರ ಮುಂದೆ ನಿಂತು ಜೋಕ್‌ ಫಾಲ್ಸ್‌ ಹರಿಸುತ್ತಾರೆ. ಹಿಂದೆ ಮುಂದೆ ಗೊತ್ತಿಲ್ಲದೆ ಇದು ದೆವ್ವದ ಕೈವಾಡ ಅಂತಾನೆ. ಇನ್ನೊಂದು ಬಾರಿ ಅದೇ ಪೊಲೀಸು ಛೋಟಾನಾಯಕ ಆರ್ಯನ್‌ಗೆ ನಿನ್ನ ಗರ್ಲ್‌ಫ್ರೆಂಡ್‌ಗೆ ದೆವ್ವ ಹಿಡಿದಿದೆ ಅಂತಾನೆ. ಮತ್ತೊಬ್ಬ ಏಣಗಿ ನಟರಾಜ್‌ ದೆವ್ವದ ಬಗ್ಗೆ ಭಾಷಣ ಬಿಗಿದಾಗ ಆತನ ಕಣ್ಣಿಗೆ ಮೋಹಿನಿ ಕಾಣಿಸಿಕೊಳ್ಳುತ್ತಾಳೆ.

ಹೀಗೆ ಕತೆ ಯಾವುದೋ ಗೂಡ್ಸ್‌ ಗಾಡಿಯಂತೆ ಅಲ್ಲಲ್ಲಿ ನಿಂತು ನಡೆಯುತ್ತದೆ. ಘಟನೆ ನಡೆವ ಸ್ಥಳ ಒಂದೇ ಊರಾ ಅಥವಾ ಅದು ಈ ಭೂಮಿಯ ಮೇಲೆ ಇದೆಯಾ ಅನ್ನೋದು ಬಾಬುಮಯ. ಯಾವ ಪಾತ್ರಕ್ಕೂ ಆರಂಭವಿಲ್ಲ. ಬೇಕೆಂದೊಡೆ ಅವರನ್ನು ಕರೆತರತ್ತಾರೆ ನಿರ್ದೇಶಕ ದಿನೇಶ್‌ ಬಾಬು. ಎಷ್ಟೋ ಪಾತ್ರಗಳು ಅಲ್ಲಲ್ಲಿಯೇ ಕೊನೆಗೊಳ್ಳುತ್ತವೆ. ಹೆಸರಿಗೆ ಹಾರರ್‌ ಚಿತ್ರವಾದರೂ ಒಂದು ಬಾರಿಯೂ ಭಯ ಬಾರದಿರುವುದು ಬಾಬು ಹಾಸ್ಯ ಪ್ರಜ್ಞೆಗೆ ಸಾಕ್ಷಿ.

ವಿರಾಮದವರೆಗೆ ಏನಾಗುತ್ತಿದೆ ಎಂಬುದೇ ಗೊತ್ತಾಗುವುದಿಲ್ಲ. ಚಾರುಲತಾ ಒಂದು ಹಾಡಿನಲ್ಲಿ ಬಂದು ಮಾಯವಾಗುತ್ತಾಳೆ. ಆಮೇಲೆ ಓಂಪ್ರಕಾಶ್‌ ಮತ್ತು ಮನ್‌ದೀಪ್‌ರಾಯ್‌ ವಕ್ಕರಿಸುತ್ತಾರೆ. ಜೀಪಿಗೆ ಬ್ರೇಕ್‌ ಹಾಕಿದರೆ ಅವರು ಗಾಡಿಯಿಂದ ಹೊರಗೆ ಬೀಳುತ್ತಾರೆ. ಅದನ್ನು ನೋಡಿ ಜನರು ಹಲ್ಲು ಕಿಸಿಯಬೇಕು ಅನ್ನೋದು ನಿರ್ದೇಶಕನ ಮಹಾಬಯಕೆ.

ಎಲ್ಲ ಹಾರರ್‌ ಚಿತ್ರಗಳಲ್ಲಿ ಇರುವಂತೆ ಇಲ್ಲೂ ಸತ್ತವಳೊಬ್ಬಳ ಆತ್ಮ ಇನ್ನೊಂದು ದೇಹದಲ್ಲಿ ಪ್ರವೇಶ ಮಾಡುವುದೇ ಮೂಲ ಕತೆ. ವಿಜಯಲಕ್ಷ್ಮಿಗೆ ಹೆಣ್ಣು ಮಗುವಾಗುತ್ತದೆ. ಅವಳ ಅತ್ತೆಗೆ ಗಂಡು ಮಗುವಿನಾಸೆ. ಅದಕ್ಕೆ ಅಪಶಕುನವೆಂದು ಹುಟ್ಟಿದ ಹೆಣ್ಣನ್ನು ಕೊಲ್ಲಲು ಹೇಳುತ್ತಾಳೆ. ಅದನ್ನ ವಿರೋಧಿಸುವಾಗ ಆಕೆ ಸಾಯುತ್ತಾಳೆ. ತನ್ನ ಮಗನಿಗೆ ಮತ್ತೊಂದು ಮದುವೆ ಮಾಡುತ್ತಾಳೆ ಅತ್ತೆ. ಅವಳಿಗೆ ಮಕ್ಕಳಾಗುವ ಯೋಗವಿಲ್ಲ. ಅದಕ್ಕೆ ಇನ್ನೊಂದು ಮದುವೆ ಮಾಡಲು ಆಕೆ ಹೊಂಚು ಹಾಕುತ್ತಾಳೆ. ಆಗ ವಿಜಯಲಕ್ಷ್ಮಿ ಆತ್ಮ ಅವಳ ದೇಹದಲ್ಲಿ ಹೊಕ್ಕುತ್ತದೆ. ಎಲ್ಲರನ್ನು ಆಟವಾಡಿಸುತ್ತದೆ.

ಬಾಲ ಎಲ್ಲಿದೆಯೆಂದು ಹುಡುಕುವಷ್ಟರಲ್ಲಿ ತಲೆ ಮರೆತಿರುತ್ತದೆ. ಒಂದೇ ಸಾಲಿನಲ್ಲಿ ಹೀಗೆ ಚಿತ್ರವನ್ನು ವಿಮರ್ಶಿಸಬಹುದು. ಜಾಳುಜಾಳಾದ ನಿರೂಪಣೆ, ಕುತೂಹಲ ಹುಟ್ಟಿಸದ ಸಂಕಲನ, ಜೀವವಿಲ್ಲದ ಘಟನೆಗಳು- ಎಲ್ಲವೂ ಸೇರಿ ‘ಕನಕಾಂಬರಿ’ಯನ್ನು ಹಳಸಿದ ಕೋಸಂಬರಿ ಮಾಡಿಬಿಟ್ಟಿವೆ. ಸತ್ತ ಮೇಲೆಯೇ ದೇಹ ಹೆಣವಾಗುತ್ತದೆ ಎಂದು ಗೊತ್ತಿಲ್ಲದ ಬಾಬು ‘ಸತ್ತ ಹೆಣ’ ಎನ್ನುವ ಶಬ್ದ ಬಳಸಿ ತಮ್ಮ ಕನ್ನಡ ಪ್ರೇಮವನ್ನು ಸಮೃದ್ಧಿಗೊಳಿಸಿದ್ದಾರೆ.

ಮುದ್ದು ಮುಖದ ಚೆಲುವೆ ಜ್ಯೋತಿಕೃಷ್ಣ ಕನ್ನಡಕ್ಕೆ ಬಂದ ತಾಜಾ ಬೆಡಗಿ. ಅನುಪ್ರಭಾಕರ್‌, ವಿಜಯಲಕ್ಷ್ಮಿಗೆ ರೋಬೊಟ್‌ ಥರಾ ನಿಂತು ಕಣ್ಣು ತಿರುಗಿಸುವುದಷ್ಟೆ ಕೆಲಸ. ಅಚ್ಚರಿ ಹುಟ್ಟಿಸುವುದು ಕುಮಾರ್‌ಗೋವಿಂದ್‌. ಚಿತ್ರದುದ್ದಕ್ಕೂ ಕೆಲವೇ ಮಾತುಗಳನ್ನು ಆಡಿದರೂ ಮೌನದಿಂದಲೇ ಭರ್ಜರಿ ಅಭಿನಯ ನೀಡಿದ್ದಾರೆ.

ತಮ್ಮ ಭಯದ ಸ್ವಭಾವವನ್ನು ಪ್ರೇಕ್ಷಕರು ಅನುಭವಿಸುವಂತೆ ನಟಿಸಿದ್ದಾರೆ. ಓಂಪ್ರಕಾಶ್‌ರಾವ್‌ ಕಾಮಿಡಿಯನ್‌ ಪಾತ್ರದಲ್ಲಿ ತಂದೆ ಎನ್‌. ಎಸ್‌. ರಾವ್‌ರನ್ನು ನೆನಪಿಸುತ್ತಾರೆ. ಅವರಿಗಿಂತ ಸಂಯಮ ವಹಿಸಿದ್ದಾರೆ ಮತ್ತು ಸಹ್ಯವಾಗುತ್ತಾರೆ.

ಉಳಿದಂತೆ ಹೇಳೋದೇನಿದೆ? ತಾಂತ್ರಿಕವಾಗಿ ಹೈ ಡೆಫಿನಿಷನ್‌ ಕ್ಯಾಮರಾ ಬರಿ ಡೆಫಿನಿಷನ್‌ಗೆ ಮಾತ್ರ ಲಾಯಕ್ಕಾದಂತಿದೆ .

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada