twitter
    For Quick Alerts
    ALLOW NOTIFICATIONS  
    For Daily Alerts

    ಪ್ರೀತಿಯಾ ಪ್ರೇಮವೊ ಪ್ರಣಯವೊ !

    By Staff
    |

    *ರಘುನಾಥ ಚ.ಹ.

    ಕವಿತಾ ಲಂಕೇಶ್‌ ನಿರ್ದೇಶನದ ‘ಪ್ರೀತಿ ಪ್ರೇಮ ಪ್ರಣಯ’ ಮೂರು ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿದ್ದ ಚಿತ್ರ. ಮೊದಲನೆಯದಾಗಿ ‘ದೇವೀರಿ’ ಖ್ಯಾತಿಯ ಕವಿತಾ ಲಂಕೇಶ್‌ ನಿರ್ದೇಶನ. ಎರಡನೆಯದು, ಗಾಂಧಿನಗರದಿಂದ ದೂರವುಳಿದ ಉತ್ಸಾಹಿ ಅಮರಿಕನ್ನಡಿಗರ ನಿರ್ಮಾಣ. ಮೂರನೆಯದಾಗಿ- ಅನಂತನಾಗ್‌ ಹಾಗೂ ಭಾರತಿ ಜೋಡಿಯ ಅಭಿನಯ.

    ಕವಿತಾ ಲಂಕೇಶ್‌ರ ಈ ಮುಂಚಿನ ಚಿತ್ರಗಳು ಸಾಕಷ್ಟು ಸುದ್ದಿ ಮಾಡಿದ್ದವು. ಲಂಕೇಶರ ಕಾದಂಬರಿ ಆಧಾರಿತ ಮೊದಲ ಚಿತ್ರ ‘ದೇವೀರಿ’ ಹಲವಾರು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಸುದ್ದಿ ಮಾಡಿತ್ತು. ಫಿಲಂ ಡಿವಿಜನ್‌ ಸಹಯೋಗದಲ್ಲಿ ತಯಾರಾದ ಎರಡನೆಯ ಚಿತ್ರ ‘ಅಲೆಮಾರಿ’ ಚಿತ್ರಮಂದಿರಗಳಲ್ಲಿ ಬಿಡುಗಡೆಯ ಭಾಗ್ಯ ಕಾಣದಿದ್ದರೂ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗಿದೆ. ತಳ ಸಮುದಾಯವೊಂದರ ನೋವು ನಲಿವುಗಳು ಹಾಗೂ ಉಳ್ಳವರ ದೌರ್ಜನ್ಯಗಳನ್ನು ಚಿತ್ರಿಸಿದ್ದ ‘ಅಲೆಮಾರಿ’ ರಾಜಕೀಯ ಒಳನೋಟಗಳು ಹಾಗೂ ಸಮಕಾಲೀನ ಸಮಸ್ಯೆಗಳನ್ನು ಧ್ಯಾನಿಸುವ ಗಂಭೀರ ಚಿತ್ರ. ಭಾವನಾ ಹಾಗೂ ಅನು ಪ್ರಭಾಕರ್‌ರಂಥ ಕಮರ್ಷಿಯಲ್‌ ತಾರೆಗಳ ಪ್ರತಿಭೆಯನ್ನು ಕವಿತಾ ಕಲಾತ್ಮಕವಾಗಿಸಿದ್ದರು. ಕವಿತಾ ನಿರ್ದೇಶನದ ಮೂರನೇ ಚಿತ್ರ‘ಬಿಂಬ’ ಕೂಡಾ ಬಿಡುಗಡೆಯಾಗಿಲ್ಲ . ಆದರೆ ‘ಬಿಂಬ’ ವಿಮರ್ಶಕ ವಲಯದಲ್ಲಿ ಚರ್ಚಿತವಾದ ಚಿತ್ರ. ಬಾಲನಟಿಯಾಬ್ಬಳು ಚಿತ್ರದಲ್ಲಿ ಶೋಷಣೆಗೆ ಒಳಗಾಗುವ ಕಥಾವಸ್ತುವಿನ ‘ಬಿಂಬ’ ಕಲಾತ್ಮಕತೆಯ ಸೋಕಿನ ಕಮರ್ಷಿಯಲ್‌ ಚಿತ್ರ.

    ಹಾಗೆ ನೋಡಿದರೆ ಕಮರ್ಷಿಯಲ್‌ ಹಾಗೂ ಕಲಾತ್ಮಕ ಎನ್ನುವ ವಿಂಗಡಣೆಯ ಬಗ್ಗೆ ಕವಿತಾಗೆ ಒಲವಿಲ್ಲ . ಆದರೂ, ಚಲನಚಿತ್ರದ ಗುಣಮಟ್ಟ ಹಾಗೂ ಪ್ರಯೋಗ- ಪರಿಣಾಮಗಳ ದೃಷ್ಟಿಯಿಂದ ಕಲಾತ್ಮಕ ಮತ್ತು ವಾಣಿಜ್ಯ ಎನ್ನುವ ವಿಂಗಡಣೆ ಅಗತ್ಯ. ಈ ವಿಂಗಡಣೆಯಲ್ಲಿಯೇ ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರವನ್ನು ನೋಡಬೇಕಾಗುತ್ತದೆ.

    ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರವನ್ನು ಕವಿತಾ ಒಳ್ಳೆಯ ಚಿತ್ರ ಎಂದು ಕರೆದುಕೊಳ್ಳುತ್ತಾರೆ. ಈ ‘ಒಳ್ಳೆಯ ಚಿತ್ರ’ ಪರಿಕಲ್ಪನೆ ಗಾಂಧಿನಗರ ಹೇಳುವಂತೆ ಕ್ಲಾಸ್‌ ಹಾಗೂ ಮಾಸ್‌ ಎರಡಕ್ಕೂ ತಲುಪುವಂಥ ಚಿತ್ರ. ‘ಪ್ರೀತಿ ಪ್ರೇಮ ಪ್ರಣಯ’ ಅಂಥಾದ್ದೊಂದು ಪ್ರಯತ್ನ ಅನ್ನುವುದರಲ್ಲಿ ಅನುಮಾನವಿಲ್ಲ .

    ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರದ ಕಥಾವಸ್ತು ಸರಳವಾದದ್ದು . ಒಂದು ಸಾಲಿನಲ್ಲಿ ಹೇಳುವುದಾದರೆ- ಸಾಂಗತ್ಯದ ಅಗತ್ಯದ ಪ್ರತಿಪಾದನೆ ಚಿತ್ರದ ಕಥಾವಸ್ತು. ಸ್ವತಃ ಕವಿತಾ ಹೇಳಿಕೊಂಡಿರುವಂತೆ- ಸಾಂಗತ್ಯದ ಅಗತ್ಯವನ್ನು ವಿಭಿನ್ನ ವಯೋಮಾನಗಳ ಹಿನ್ನೆಲೆಯಲ್ಲಿ ನಿರೂಪಿಸುವುದು ಚಿತ್ರದ ಉದ್ದೇಶ. ಯುವ ಪ್ರೇಮಿಗಳು, ಮದುವೆಯಾದ ದಂಪತಿಗಳ ಕಾವು ಕಳಕೊಂಡ ಪ್ರೇಮ (ಪ್ರೌಢ ಪ್ರೇಮ ?) ಹಾಗೂ ಹಿರಿಯ ನಾಗರಿಕರ ಮಾಗಿದ ಪ್ರೇಮ- ಈ ಮೂರು ನೆಲೆಯಲ್ಲಿ ಕವಿತಾ ತಮ್ಮ ಚಿತ್ರವನ್ನು ವಿಶ್ಲೇಷಿಸುತ್ತಾರೆ. ಆದರೆ, ಕವಿತಾರ ವಿಶ್ಲೇಷಣೆಗೆ ಚಿತ್ರದಲ್ಲಿ ಸಮರ್ಥನೆ ಒದಗುವುದು ಕಷ್ಟ .

    ಚಿತ್ರದಲ್ಲಿ ನಾಲ್ಕು ಜೋಡಿಗಳಿವೆ. ಪ್ರಕಾಶ್‌ರೈ ಹಾಗೂ ಸುಧಾರಾಣಿ. ಅರುಣ್‌ ಸಾಗರ್‌ ಮತ್ತು ಭಾವನಾ. ಭಾರತಿ- ಅನಂತನಾಗ್‌. ಕೊನೆಯದಾಗಿ ಸುನಿಲ್‌- ಅನು ಪ್ರಭಾಕರ್‌. ಮೊದಲೆರಡು ಜೋಡಿಗಳು ವಿವಾಹಿತ ದಂಪತಿಗಳು. ಅನಂತ್‌ ಹಾಗೂ ಭಾರತಿ- ಸಂಗಾತಿಯನ್ನು ಕಳಕೊಂಡು, ಇಳಿ ವಯಸ್ಸಿನಲ್ಲಿ ಮತ್ತೆ ಸಾಂಗತ್ಯದ ಕನಸು ಕಾಣುವ ಜೋಡಿ. ಕೊನೆಯ ಜೋಡಿ ನಗರದ ಯುವ ಪ್ರೇಮಿಗಳು! ‘ಪ್ರೀತಿ ಪ್ರೇಮ ಪ್ರಣಯ’ ಶೀರ್ಷಿಕೆಯ ಚೌಕಟ್ಟಿನಲ್ಲಿ ಈ ಮೂರು ಬಗೆಯ ಜೋಡಿಗಳನ್ನು ಸಾಂಕೇತಿಕವಾಗಿ ಬಳಸಿಕೊಳ್ಳುವ ನಿರ್ದೇಶಕಿಯ ಪ್ರಯತ್ನ ಯಶಸ್ವಿಯಾಗಿಲ್ಲ. ಇದು ಕವಿತಾ ಲಂಕೇಶರ ಸೋಲು. ಅನಂತ್‌ ಹಾಗೂ ಭಾರತಿ ಜೋಡಿಯ ಹೊರತು ಉಳಿದ ಜೋಡಿಗಳು ರೂಪಕದ ಮಟ್ಟಕ್ಕೆ ಏರುವುದೇ ಇಲ್ಲ . ‘ಪ್ರೀತಿ ಪ್ರೇಮ ಪ್ರಣಯ’ ಮೂರನ್ನ್ನೂ ಅನಂತ್‌-ಭಾರತಿ ಪಾತ್ರಗಳು ಆವಾಹಿಸಿಕೊಳ್ಳುತ್ತವೆ. ಅದು ಕವಿತಾ ಗೆಲುವು.

    ನಿರ್ದೇಶಕಿಯ ಉದ್ದೇಶವನ್ನು ಮೀರಿ ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರಕಥೆ ಬೆಳೆದಿರುವುದು ಅನೇಕ ಸಂದರ್ಭಗಳಲ್ಲಿ ಎದ್ದು ಕಾಣುತ್ತದೆ. ಕೆಲವೊಮ್ಮೆ ವೃದ್ಧರ ಸಮಸ್ಯೆಗಳ ಕುರಿತು ಚಿತ್ರ ಹೇಳುತ್ತಿದೆ ಎನ್ನಿಸುತ್ತದೆ. ಅಂಥ ಸನ್ನಿವೇಶಗಳಲ್ಲಿ ಚಿತ್ರ ಆಪ್ತವಾಗುತ್ತದೆ ಕೂಡ. ಆದರೆ, ಅದು ತಮ್ಮ ಉದ್ದೇಶ ಅಲ್ಲವೆನ್ನುವಂತೆ ಕವಿತಾ ಬಲವಂತವಾಗಿ ರೂಟ್‌ ಬದಲಿಸುತ್ತಾರೆ.

    ಚಿತ್ರದ ಕಥೆ ಇಷ್ಟು : ಅನಂತನಾಗ್‌ ಓರ್ವ ಜನಪ್ರಿಯ ವೈದ್ಯ. ಮಕ್ಕಳ ಬಲವಂತದಿಂದ ಆತನಿಗೆ ವೃತ್ತಿಯಿಂದ ಬಲವಂತದ ವಿಶ್ರಾಂತಿ. ತೀರಾ ಕಾಳಜಿಯಿಂದ ನೋಡಿಕೊಳ್ಳುವ ಮಕ್ಕಳು- ಸೊಸೆಯರು. ಜೊತೆಗೊಬ್ಬ ಕಾಲೇಜಿಗೆ ಹೋಗುವ ತುಂಟ ಮೊಮ್ಮಗ. ನಂದಗೋಕುಲದಂಥ ತುಂಬು ಸಂಸಾರದ ವೃದ್ಧ ಯಜಮಾನನಿಗೆ ಪಾರ್ಕಿನಲ್ಲಿ ದಿನಾ ಎದುರಾಗುವ ಹರೆಯ ಮಾಸಿದ ಸಂಗೀತ ಕಲಾವಿದೆಯ ಪರಿಚಯವಾಗುತ್ತದೆ. ಆಕೆ ಒಂಟಿ, ವಿಧವೆ. ಆಕೆಯ ಒಬ್ಬನೇ ಮಗ ಅಮೆರಿಕಾ ವಾಸಿ. ಆನಂತರದ ಭೇಟಿಗಳಲ್ಲಿ ಅವರ ಪರಿಚಯ ಗಾಢವಾಗುತ್ತಾ ಒಬ್ಬರನ್ನೊಬ್ಬರು ಗಾಢವಾಗಿ ಹಚ್ಚಿಕೊಳ್ಳುತ್ತಾರೆ. ಇದೇ ಸಮಯದಲ್ಲಿ ಸಂಗೀತ ಕಲಾವಿದೆಯ ಮೊಮ್ಮಗಳು ಅಮೆರಿಕಾದಿಂದ ಅಜ್ಜಿಮನೆಗೆ ಬರುತ್ತಾಳೆ. ಅಜ್ಜಿ ಮೊಮ್ಮಗಳು, ಅಜ್ಜನ ಮೊಮ್ಮಗನ ನಡುವೆ ಲವ್ವು ಶುರು. ಈ ಎಳೆಯರ ಲವ್ವಿಗೆ ಹುಡುಗಿ ಅಪ್ಪಅಮ್ಮನಿಂದ ವಿರೋಧ. ಅಜ್ಜ ಅಜ್ಜಿಯ ಬಯಕೆಗೆ ಎರಡೂ ಕಡೆಯಿಂದ ಪ್ರತಿರೋಧ. ಈ ತಾಕಲಾಟಗಳ ನಡುವೆ ಸಾಗುವ ಸಿನಿಮಾ- ಅಜ್ಜ ಅಜ್ಜಿ ಒಂದಾಗುವುದರೊಂದಿಗೆ ಶುಭಂ.

    ಕಥೆಯನ್ನು ಮೂರು ನೆಲೆಗಳಲ್ಲಿ ಹೇಳಲು ಪ್ರಯತ್ನಿಸಿದ್ದೇನೆ ಎಂದು ಕವಿತಾ ಹೇಳಿದರೂ, ಇಡೀ ಸಿನಿಮಾ ಸುತ್ತುವುದು ಅಜ್ಜ ಅಜ್ಜಿಯ ಪ್ರೇಮದ ಸುತ್ತ . ಹಾಗಾಗಿ ಚಿತ್ರದ ಟೈಟಲ್‌ ಜನರನ್ನು ಸೆಳೆಯುವ ಟೈಟಲ್‌ ಆಗಿ ಪರಿಣಮಿಸಿದೆಯೇ ಹೊರತು, ರೂಪಕವಾಗಿ ಅಲ್ಲ . ಅಜ್ಜ ಅಜ್ಜಿಯ ಬಯಕೆಗೆ ಸಮರ್ಥನೆಗಳನ್ನು ಒದಗಿಸುವಲ್ಲಿ ಕೂಡ ಕವಿತಾ ಸಂಪೂರ್ಣವಾಗಿ ಯಶಸ್ಸು ಸಾಧಿಸಿಲ್ಲ . ಕೆಲವೊಮ್ಮೆ ಅನಂತನಾಗ್‌ ಬಯಕೆಗಳು ಚಪಲದಂತೆಯೂ ಕಾಣುತ್ತವೆ. ನಾಯಕಿಯ ಭೇಟಿಯ ನಂತರ ಒಂಟಿತನದ ಅನುಭವ ಕಾಣುವ ನಾಯಕನ ಆಸೆ ಕೇವಲ ಸಾಂಗತ್ಯವಾಗಿಯಷ್ಟೇ ಕಾಣದೆ ಹೆಣ್ಣುಗಂಡಿನ ಸಹಜ ಆಕರ್ಷಣೆಯಾಗಿಯೂ ಕಾಣುತ್ತದೆ.

    ನಾಗತಿಹಳ್ಳಿ ಚಂದ್ರಶೇಖರ್‌ ಹಾಕಿಕೊಟ್ಟ ಪಥ- ಅನಿವಾಸಿ ಭಾರತೀಯರನ್ನು ಲಘುವಾಗಿ ಚಿತ್ರಿಸುವುದನ್ನು ಟೀಕಿಸುವುದನ್ನು ಕವಿತಾ ಕೂಡ ಮುಂದುವರಿಸಿದ್ದಾರೆ. ಹೆಂಡತಿಯಿದ್ದರೂ ಇನ್ನೊಂದು ಸಂಬಂಧ ಇರಿಸಿಕೊಳ್ಳುವುದು, ಭಾರತೀಯರನ್ನು ಕೀಳಾಗಿ ಕಂಡು ಅಮೆರಿಕನ್ನನೆಂದು ಬೀಗುವುದು, ಉದಾರಿಗಳೆಂದು ಹೇಳುತ್ತಾ ಮಕ್ಕಳನ್ನು ನಿಯಂತ್ರಿಸಲು ಪ್ರಯತ್ನಿಸುವುದು ಹಾಗೂ ಹಾವು ಮುಂಗಸಿಗಳಂತೆ ಗಂಡ ಹೆಂಡತಿ ಜಗಳವಾಡುವುದು- ಇಂಥ ದೃಶ್ಯಗಳು ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರದಲ್ಲೂ ಇವೆ. ‘ಜನರೇಷನ್‌ ಗ್ಯಾಪ್‌’ ಎನ್ನುವ ವಿಶ್ಲೇಷಣೆಯಲ್ಲಿ- ಹೊಸ ಪೀಳಿಗೆಯನ್ನು ದುಡುಕಿನ ಮಂದಿಯನ್ನಾಗಿ, ಹಳೆಯ ಪೀಳಿಗೆಯನ್ನು ತಾಳ್ಮೆಯ ಹಾಗೂ ಬುದ್ಧಿವಂತರನ್ನಾಗಿ ಚಿತ್ರಿಸುವ ನಿರ್ದೇಶಕಿಯ ಧೋರಣೆಗೂ ತಕರಾರು ಸಲ್ಲುತ್ತದೆ.

    ಎಲ್ಲ ಟೀಕೆಗಳನ್ನು ಹೊರತುಪಡಿಸಿಯೂ ‘ಪ್ರೀತಿ ಪ್ರೇಮ ಪ್ರಣಯ’ ಒಂದು ಒಳ್ಳೆಯ ಲವಲವಿಕೆಯ ಚಿತ್ರ. ಅನಂತ್‌ನಾಗ್‌ ಅವರ ಮಾಗಿದ ಅಭಿನಯ ಹಾಗೂ ಅನು ಪ್ರಭಾಕರ್‌ ಅವರ ಹುಮ್ಮಸ್ಸನ್ನು ಕಣ್ತುಂಬಿಕೊಳ್ಳಲಾದರೂ ಚಿತ್ರ ನೋಡಬೇಕು. ಉಳಿದ ಪಾತ್ರಗಳು ಗಮನ ಸೆಳೆಯುವುದಿಲ್ಲ . ಎರಡು ಹಾಡು ಗಮನ ಸೆಳೆಯುತ್ತವೆ. ಕೆಲವು ಹಾಡುಗಳು ಬಲವಂತವಾಗಿ ತುರುಕಲಾಗಿದೆ. ಕಾರ್‌ ಕಾರ್‌ ಖ್ಯಾತಿಯ ಮನೋಮೂರ್ತಿ ಹೊಸ ಸಾಧ್ಯತೆಗಳಿಗೆ ತೆರೆದುಕೊಂಡಿಲ್ಲ .

    ‘ಪ್ರೀತಿ ಪ್ರೇಮ ಪ್ರಣಯ’ ಕವಿತಾ ಲಂಕೇಶ್‌ರ ಮುಂದಿನ ಕಮರ್ಷಿಯಲ್‌ ಚಿತ್ರಗಳ ಕುರಿತು ಕುತೂಹಲ ಹುಟ್ಟಿಸುತ್ತದೆ.

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Friday, March 29, 2024, 11:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X