For Quick Alerts
  ALLOW NOTIFICATIONS  
  For Daily Alerts

  ಇದು ಹೃದಯಗಳ ‘ವಿಷ’ ವಿಷಯ!

  By Staff
  |
  • ದೇವಶೆಟ್ಟಿ ಮಹೇಶ್‌
  ಇಲ್ಲಿ ಹುಡುಗಿ ಒಬ್ಬನನ್ನು ಪ್ರೀತಿಸುತ್ತಲೇ ಮತ್ತೊಬ್ಬನತ್ತ ಕಣ್ಣು ಹಾಕುತ್ತಾಳೆ. ಅದು ಹಾದರದ ನೋಟವಲ್ಲ, ಅಪ್ಪಟ ಪ್ರಾಮಾಣಿಕ ಅನಿಸಿಕೆ. ‘ಆತನಿಗಿಂತ ಮುನ್ನ ಈತ ಸಿಕ್ಕಿದ್ದರೆ ಎಷ್ಟು ಸೊಗಸಾಗಿರುತ್ತಿತ್ತಲ್ಲವೆ?’ ಅವಳ ಮನಸು ಪಾದರಸವಾಗುತ್ತದೆ.

  ನಿಜಜೀವನದಲ್ಲಿ ಕಾಡುವ ಗಳಿಗೆಗೆ ತೆರೆ ಮೇಲೆ ಮುಹೂರ್ತ ಮಾಡಿದ್ದಾರೆ ನಿರ್ದೇಶಕ ರತ್ನಜ. ಈತನಿಗೆ ಸಿನಿಮಾ ಗ್ರಾಮರ್‌ ಗೊತ್ತು. ಪ್ರತಿ ಫ್ರೇಮ್‌ ಒಂದು ವ್ಯಾನ್‌ಗೋನ ಪೆಂಟಿಂಗ್‌ನಂತೆ ಚಿತ್ರಿಸುವುದು ಗೊತ್ತು, ಸಂಗೀತದ ಮೂಲಕ ಕತೆಯನ್ನು ಕವಿತೆ ಮಾಡುವುದು ಗೊತ್ತು, ಕೊನೇವರೆಗೆ ಪ್ರೇಕ್ಷಕರನ್ನು ಹಿಡಿದಿಡುವ ಮ್ಯಾಜಿಕ್‌ ಗೊತ್ತು.... ಇದೆಲ್ಲ ಗೊತ್ತಿರುವ ನಿರ್ದೇಶಕನಿಗೆ ‘ನೆನಪಿರಲಿ ಮೊದಲ ಚಿತ್ರ ಎಂಬುದು ನಿಮಗೆ ನೆನಪಿರಲಿ !

  ಸಾಮಾನ್ಯವಾಗಿ ಮೊದಲ ಭಾಗ ತಮಾಷೆ , ಆಮೇಲೆ ಸೀರಿಯಸ್‌ ಆಗುತ್ತದೆ. ಇಲ್ಲಿ ಉಲ್ಟಾ. ಅದೇ ಒಂಥರಾ ಫ್ರೆಶ್ಶಾಗಿದೆ. ಮದುವೆಯಾದ ಮೇಲೆ ಲವ್‌ ಮಾಡಿದಂತೆ ! ಎರಡರಲ್ಲೂ ಒಂದೊಂದು ಬೇರೆ ಬೇರೆ ಕತೆ ಇದೆ. ಅದನ್ನು ಕೊನೆಯಲ್ಲಿ ಒಂದು ಮಾಡುವ ರೀತಿ ನಿರ್ದೇಶಕನ ಜಾಣ್ಮೆ ಮತ್ತು ಪ್ರತಿಭೆಗೆ ಸಾಕ್ಷಿ. ‘ಕಣ್ಣಿಂದ ನೋಡಿ ಬುದ್ದಿಯಿಂದ ಮಾಡುವ ಯಾವುದೇ ಕೆಲಸ ಕೆಟ್ಟದಾಗಿರುತ್ತದೆ. ಅದೆ ಮನಸಿಟ್ಟು ಮಾಡಿದರೆ ಸುಂದರವಾಗಿರುತ್ತದೆ. ನಾಯಕ ಹೇಳುವ ಈ ಮಾತು ಈ ಚಿತ್ರಕ್ಕೂ ಅನ್ವಯಿಸುತ್ತದೆ.

  ತೀರಾ ಆಪ್ತವೆನಿಸುವ ಸಂಭಾಷಣೆ, ಅಗತ್ಯಕ್ಕೆ ತಕ್ಕ ಹಾಸ್ಯ, ಒಂಚೂರು ಸೆಂಟಿಮೆಂಟು. ಅದಕ್ಕೆ ಸುವರ್ಣ ಚೌಕಟ್ಟು ಹಾಕಿರುವುದು ಹಂಸಲೇಖ ಸಂಗೀತ ಮತ್ತು ಸಾಹಿತ್ಯ. ಹಿನ್ನೆಲೆ ಸಂಗೀತವಂತೂ ಎಷ್ಟು ಪರ್‌ಫೆಕ್ಟಾಗಿದೆ ಅಂದರೆ ಯಾರೂ ಅದನ್ನು ಬದಲಿಸಲು ಸಾಧ್ಯವೇ ಇಲ್ಲ. ‘ಇದು ಹೃದಯಗಳ ವಿಷಯ...ವಿಷಯ..ವಿಷ...ವಿಷಯ..’ ಎಂಬ ಟೈಟಲ್‌ ಸಾಂಗ್‌, ಚಿತ್ರ ನೋಡಿ ಹೊರ ಬಂದಮೇಲೂ ನಾಲಿಗೆಯಲ್ಲಿ ಎಡವುತ್ತಿರುತ್ತದೆ. ಹಾಗೆಯೇ ವಿಷಯ ಅನ್ನುವುದನ್ನು ‘ವಿಷ’ ಮಾಡಿದ ಹಂಸ್‌ ಪನ್‌ ಕೂಡಾ..

  ಮೈಸೂರಿಗರೇ ಮೈಸೂರನ್ನು ಮತ್ತೊಮ್ಮೆ ನೋಡುವಂತೆ ಮಾಡಿರುವುದು ಎಸ್‌.ರಾಮಚಂದ್ರ ಕ್ಯಾಮೆರಾಕ್ಕೆ ಸಿಕ್ಕ ಕ್ರೆಡಿಟ್ಟು. ಇನ್ನು ಸ್ವಲ್ಪ ಹೊತ್ತು ಈ ಫ್ರೇಮ್‌ ಹೀಗೆ ಇರಲಿ ಅನ್ನುವಷ್ಟು ಕಣ್ತಣಿಸುವ ದೃಶ್ಯಗಳಿಗೆ ರಾಮಚಂದ್ರ ಕಣ್ಣಾಗಿದ್ದಾರೆ.

  ನಾಯಕ ಪ್ರೇಮ್‌ಗಿದು ಎರಡನೇ ಚಿತ್ರ. ಅಭಿನಯದಲ್ಲಿ ಅದು ಸ್ಪಷ್ಟ . ಮಾತುಗಳನ್ನು ಒಪ್ಪಿಸುವ ಬದಲು ಅನುಭವಿಸಿ ಹೇಳುವುದನ್ನು ರೂಢಿಸಿಕೊಂಡರೆ ಇನ್ನಷ್ಟು ಚೆನ್ನಾಗಿ ಮಾಡಬಲ್ಲ. ಹರೆಯದಲ್ಲೇ ಗಂಭೀರವಾಗಿದ್ದರೆ ಹೇಗಿರುತ್ತಾರೆ ಅನ್ನುವುದನ್ನು ವಿದ್ಯಾ ಅಷ್ಟೇ ಆಪ್ತವಾಗಿ ತೋರಿಸಿದ್ದಾಳೆ.

  ಮತ್ತೊಬ್ಬ ನಾಯಕಿ ವರ್ಷಾ ಒಂಥರಾ ಜಿಂಕೆಮರಿ. ಅಕ್ಷಯ್‌ಕೃಷ್ಣ ವಿಚಿತ್ರ ಸಿಂಪಥಿ ಗಿಟ್ಟಿಸುವ ಪಾತ್ರದಲ್ಲಿ ಮಿಂಚಿದ್ದಾರೆ. ಅನಂತ್‌, ಜೈಜಗದೀಶ್‌, ವಿಜಯಲಕ್ಷ್ಮಿಸಿಂಗ್‌, ವಿನಯಾ ಪ್ರಸಾದ್‌, ಶರಣ್‌ ಮತ್ತು ತಂಗಿ ಪಾತ್ರಗಳೂ ನಾನಿದ್ದೇನೆ ‘ನೆನಪಿರಲಿ’ ಅನ್ನುತ್ತವೆ. ಕೆಲವು ಮುಖ್ಯಪಾತ್ರಧಾರಿಗಳ ಆಯ್ಕೆ ಮಜಬೂತಾಗಿಲ್ಲ ಅನ್ನೋದೊಂದೇ ಕೊರತೆ. ಅದು ಸರಿಯಾಗಿದ್ದಿದ್ದರೆ ಚಿತ್ರದ ಫೋರ್ಸ್‌ ಇನ್ನಷ್ಟು ರೇಸ್‌ ಕುದುರೆ...

  ಒಟ್ಟಿನಲ್ಲಿ , ಇದು ಹೃದಯಗಳ ವಿಷಯ ಅನ್ನುತ್ತಲೇ ಮನಸು ಮನಸುಗಳ ಚಂಚಲತೆ-ನಿಯತ್ತಿನ ಕತೆ ಹೇಳಿರುವ ರತ್ನಜ ಮತ್ತು ಈ ಪ್ರಯೋಗಕ್ಕೆ ಕಾಸು ಸುರಿದ ಅಜೆಯ್‌ಗೌಡ ಜೋಡಿಯ ಮೊದಲ ಹೊಡೆತವೇ ಶಾಂದಾರ್‌ ಸಿಕ್ಸರ್‌...

  (ಸ್ನೇಹ ಸೇತು : ವಿಜಯ ಕರ್ನಾಟಕ )

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X