Just In
Don't Miss!
- Automobiles
2020ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡ ನ್ಯೂ ಜನರೇಷನ್ ಕ್ರೆಟಾ
- News
ಕೈ ತಪ್ಪಿದ ಸಚಿವ ಸ್ಥಾನ; ಅಪಚ್ಚು ರಂಜನ್ ಆಕ್ರೋಶ
- Sports
ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್ ಬ್ರಿಸ್ಬೇನ್, ದಿನ 3, Live ಸ್ಕೋರ್
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರ ವಿಮರ್ಶೆ: ಭೀಮಾ ತೀರದಲ್ಲಿ ಕಮರ್ಷಿಯಲಿ ಬೆಸ್ಟ್
ಚಂದ್ಯಾ ಎಂಬ ವ್ಯಾಘ್ರ! ಆತ ಮಡಿಕೆಗೆ ಮಣ್ಣು ಬಡಿದಂತಿರುವ ಮಹಾರಥ. ಆಕೆ ಅದಕ್ಕೆ ತದ್ವಿರುದ್ಧ-ಬಿಳೀ ಬೆಣ್ಣೆಗೆ ಸುಣ್ಣ ಬಳಿದಂದಿರುವ ಸುಂದರಿ. ಆದರೂ ಆಕೆಗೆ ಅವನೆಂದರೆ ಪ್ರಾಣ. ಆತ ಊರಿಗಾಗಿ ಮಾರಿಯಾಗುತ್ತಾನೆ, ಹೋರಿಯಾಗುತ್ತಾನೆ. ಅನ್ಯಾಯದ ವಿರುದ್ಧ ಕತ್ತಿ ಮಸೆಯುತ್ತಾನೆ. ಕೆಕ್ಕರಿಸಿ ಕೆಮ್ಮುತ್ತಾನೆ. ಹುಲಿಯಂತೇ ನುಗ್ಗಿ ಹೊಡೆಯುತ್ತಾನೆ. ಪೊಲೀಸರ ಪಾಲಿಗೆ ವಾಂಟೆಡ್ ಆದರೂ ಆತ ಭೀಮಾತೀರದ ಮಂದಿಯ ಕಣ್ಣಿಗೆ ಹುಟ್ಟು ಹೋರಾಟಗಾರ, ಮನದುಂಬಿದ ಚಂದ್ಯಾದಾರ!
ಇಂತಿಪ್ಪ ಚಂದ್ಯಾ ತನ್ನ ಸಾಕಿದ ಅಪ್ಪನ ಸಾವಿಗೆ, ತಂಗಿಯ ಮಾನಭಂಗಕ್ಕೆ ಕಾರಣವಾದವರ ವಿರುದ್ಧ ತಿರುಗಿಬೀಳುತ್ತಾನೆ. ಅವರ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಇನ್ನೊಬ್ಬ ಸಾಹುಕಾರನನ್ನು ಎಲೆಕ್ಷನ್ನಲ್ಲಿ ಗೆಲ್ಲಿಸುತ್ತಾನೆ. ಕೊನೆಗೆ ಆ ಸಾಹುಕಾರನೂ ಚಂದ್ಯಾ ಪಾಲಿಗೆ ಮೋಸಮಾಡುತ್ತಾನೆ. ಎಲೆಕ್ಷನ್ನಲ್ಲಿ ಗೆದ್ದ ನಂತರ ಊರಿಗೇ ಚಪ್ಪರ ಹಾಕಿಸಿ, ಸುಖದ ಸುಪ್ಪತ್ತಿಗೆ ಏರಿಸುತ್ತೇನೆ ಎಂದವ ಉಲ್ಟಾ ಹೊಡೆಯುತ್ತಾನೆ. ಅದಕ್ಕೆ ಚಂದ್ಯಾ ಹೊಡೆಯುತ್ತಾನೆ, ಬಡಿಯುತ್ತಾನೆ, ರಕ್ತದ ಓಕುಳಿ ಹರಿಸುತ್ತಾನೆ. ಅದೇ ಸಾಹುಕಾರನ ತಂಗಿ ಭೀಮಾತೀರದ ಸೋ ಕಾಲ್ಡ್ ಹಂತಕ ಎನಿಸಿಕೊಂಡ ಚಂದ್ಯಾ ಜೊತೆ ಜೂಟ್ ಎನ್ನುತ್ತಾಳೆ...
ಹೀಗೆ ನಡೆದ ನೈಜ ಘಟನೆ ಆಧರಿಸಿ ನಿರ್ದೇಶಕ ಓಂ ಪ್ರಕಾಶ್ ರಾವ್ ಆ ಭೀಮಾತೀರದಲ್ಲಿ ಹಂತಹಂತವಾಗಿ ಬಂದುಹೋಗುವ ಪಾತ್ರಗಳ ಪೈಕಿ ಚಂದ್ಯಾ ಎಂಬ ಕ್ಯಾರೆಕ್ಟರ್ ಇಟ್ಟುಕೊಂಡು ಇಡೀ ಸಿನಿಮಾ ಕ್ಯಾರಿ ಮಾಡಿಕೊಂಡು ಹೋಗಿದ್ದಾರೆ. ದುನಿಯಾ ವಿಜಿ ಈವರೆಗೆ ಮಾಡದೇ ಇರುವ ಮತ್ತು ಮಾಡಲೇ ಬೇಕಿದ್ದ ಪಾತ್ರವನ್ನು ಭೀಮಾ ತೀರದಲ್ಲಿ ಮಾಡಿದ್ದಾರೆ ಎನ್ನುವುದು ದಂಡುಪಾಳ್ಯದ ಹಂತಕರ ಆಣೆಗೂ ಸತ್ಯ!
ಓಂ ಪ್ರಕಾಶ್ ರಾವ್ ಸಿನಿಮಾಗಳೇ ಹಾಗೆ. ನಾಗಾಲೋಟದಲ್ಲಿ ಸಾಗುವ ಚಿತ್ರಕಥೆಯೇ ಇಡೀ ಚಿತ್ರದ ಜೀವಾಳ. ಇಲ್ಲಿಯೂ ಓಂ ಅದೇ ವೇಗ ಕಾಯ್ದುಕೊಂಡು ಹೋಗಿದ್ದಾರೆ. ಜೊತೆಗೆ ಅಲ್ಲಲ್ಲಿ ಹೊಡೆದಾಟಗಳು-ಬಡಿದಾಟಗಳು-ಅರಚಾಟಗಳು-ದೊಂಬರಾಟಗಳು ಇಲ್ಲದಿದ್ದರೆ ಅದು ಹೇಗೆ ಓಂ ಪ್ರಕಾಶ್ ಚಿತ್ರವಾದೀತು?! ಇಲ್ಲಿ ಸಣ್ಣ ವ್ಯತ್ಯಾಸವೆಂದರೆ ಹೆಚ್ಚಿನ ಕಡೆಗಳಲ್ಲಿ ಕುದುರೆಗಳನ್ನು ಬಳಸಿರುವುದು. ಕಾರು-ಲಾರಿ-ಬೈಕುಗಳನ್ನಷ್ಟೇ ಕೆಡವಿ ಅವುಗಳ ಅಮಾಯಕ ಸೊಂಟ ಮುರಿಯುತ್ತಿದ್ದ ಓಂ ಇಲ್ಲಿ ಕುದುರೆ ಬಾಲಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಬಯಲುಸೀಮೆಯ ಮಣ್ಣಿನ ಸೊಗಡಿಗೆ, ಧೂಳಿನ ದಾರಿಗೆ ಬೆಳಕು ಚೆಲ್ಲಿದ್ದಾರೆ.
ದುನಿಯಾ ವಿಜಯ್ ಅಪ್ಪಟ ಕಲಾವಿದ. ಗಂಟಲು ಕಟ್ಟಿಕೊಂಡು ಒಂದೊಂದು ಡೈಲಾಗ್ ಹೊಡೆಯುತ್ತದೆ ರೋಮ ನೆಟ್ಟಗಾಗುತ್ತದೆ. ವ್ಯಾಘ್ರತನದ ಆಕ್ರೋಶ, ಆಸ್ಫೋಟಕ ಆವೇಶ ಅವರ ಕಣ್ಣಲ್ಲಿ ಪ್ರತಿಧ್ವನಿಸುತ್ತದೆ. ಪಕ್ಕಾ ಉತ್ತರ ಕರ್ನಾಟಕದ ದೇಸೀ ಸೊಗಡಿನಲ್ಲಿ ವಿಜಿ ಸಂಭ್ರಮಿಸುತ್ತಾರೆ. ಬಹುಶಃ ಚಂದ್ಯಾ ಎಂಬ ಪಾತ್ರ ಇಂದು ಪೊಲೀಸ್ ಎನ್ಕೌಂಟರ್ ಆಗದೇ ಇದ್ದಿದ್ದರೆ ಖಂಡಿತ ವಿಜಿ ಪಾತ್ರ ನೋಡಿ ಮೂಕವಾಗಿಬಿಡುತ್ತಿತ್ತೇನೋ!? ಗೊತ್ತಿಲ್ಲ...
ಇಡೀ ಚಿತ್ರದಲ್ಲಿ ರಕ್ತಪಾತ ಒಂದು ಪಾತ್ರವೇ ಆಗಿ ಸಾಗುತ್ತದೆ. ಬಹುಶಃ ಪಿಸ್ತೂಲು-ಕೋವಿ-ಮಚ್ಚು-ಕುಡಗೋಲು ಇಲ್ಲದೇ ಇದ್ದಿದ್ದರೆ ಭೀಮಾತೀರದಲ್ಲಿ ಸಿನಿಮಾ ಅಪೂರ್ಣ ಎನಿಸುತ್ತೇನೋ...ಆ ಮಟ್ಟಿಗೆ ಅವುಗಳು ಕೆಲಸ ಮಾಡಿವೆ. ಜೊತೆಗೆ ನಿರ್ದೇಶಕ ಓಂ ಪ್ರಕಾಶ್ ಇಲ್ಲಿಯೂ ಪ್ರತೀ ಪಾತ್ರಗಳಿಗೂ ಹೆಚ್ಚು ಒತ್ತು ಕೊಟ್ಟಿದ್ದಾರೆ. ಬರುವ ಪ್ರತಿಯೊಂದು ಪಾತ್ರವೂ ಪ್ರೇಕ್ಷಕನ ಹಣೆ ಮೇಲೆ ಹನಿಯಷ್ಟಾದರೂ ಬೆವರು ಬರಿಸಿ ಹೋಗುತ್ತದೆ. ಆ ಮಟ್ಟಿಗೆ ಓಂ ನಿಜಕ್ಕೂ ಗೆದ್ದಿದ್ದಾರೆ!