For Quick Alerts
  ALLOW NOTIFICATIONS  
  For Daily Alerts

  ಚಿತ್ರ ವಿಮರ್ಶೆ: ಭೀಮಾ ತೀರದಲ್ಲಿ ಕಮರ್ಷಿಯಲಿ ಬೆಸ್ಟ್

  By * ವಿನಾಯಕರಾಮ್ ಕಲಗಾರು
  |
  <ul id="pagination-digg"><li class="next"><a href="/reviews/06-bheema-theeradalli-keeps-you-on-the-edge-of-seat-aid0052.html">Next »</a></li></ul>

  ಚಂದ್ಯಾ ಎಂಬ ವ್ಯಾಘ್ರ! ಆತ ಮಡಿಕೆಗೆ ಮಣ್ಣು ಬಡಿದಂತಿರುವ ಮಹಾರಥ. ಆಕೆ ಅದಕ್ಕೆ ತದ್ವಿರುದ್ಧ-ಬಿಳೀ ಬೆಣ್ಣೆಗೆ ಸುಣ್ಣ ಬಳಿದಂದಿರುವ ಸುಂದರಿ. ಆದರೂ ಆಕೆಗೆ ಅವನೆಂದರೆ ಪ್ರಾಣ. ಆತ ಊರಿಗಾಗಿ ಮಾರಿಯಾಗುತ್ತಾನೆ, ಹೋರಿಯಾಗುತ್ತಾನೆ. ಅನ್ಯಾಯದ ವಿರುದ್ಧ ಕತ್ತಿ ಮಸೆಯುತ್ತಾನೆ. ಕೆಕ್ಕರಿಸಿ ಕೆಮ್ಮುತ್ತಾನೆ. ಹುಲಿಯಂತೇ ನುಗ್ಗಿ ಹೊಡೆಯುತ್ತಾನೆ. ಪೊಲೀಸರ ಪಾಲಿಗೆ ವಾಂಟೆಡ್ ಆದರೂ ಆತ ಭೀಮಾತೀರದ ಮಂದಿಯ ಕಣ್ಣಿಗೆ ಹುಟ್ಟು ಹೋರಾಟಗಾರ, ಮನದುಂಬಿದ ಚಂದ್ಯಾದಾರ!

  ಇಂತಿಪ್ಪ ಚಂದ್ಯಾ ತನ್ನ ಸಾಕಿದ ಅಪ್ಪನ ಸಾವಿಗೆ, ತಂಗಿಯ ಮಾನಭಂಗಕ್ಕೆ ಕಾರಣವಾದವರ ವಿರುದ್ಧ ತಿರುಗಿಬೀಳುತ್ತಾನೆ. ಅವರ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಇನ್ನೊಬ್ಬ ಸಾಹುಕಾರನನ್ನು ಎಲೆಕ್ಷನ್‌ನಲ್ಲಿ ಗೆಲ್ಲಿಸುತ್ತಾನೆ. ಕೊನೆಗೆ ಆ ಸಾಹುಕಾರನೂ ಚಂದ್ಯಾ ಪಾಲಿಗೆ ಮೋಸಮಾಡುತ್ತಾನೆ. ಎಲೆಕ್ಷನ್‌ನಲ್ಲಿ ಗೆದ್ದ ನಂತರ ಊರಿಗೇ ಚಪ್ಪರ ಹಾಕಿಸಿ, ಸುಖದ ಸುಪ್ಪತ್ತಿಗೆ ಏರಿಸುತ್ತೇನೆ ಎಂದವ ಉಲ್ಟಾ ಹೊಡೆಯುತ್ತಾನೆ. ಅದಕ್ಕೆ ಚಂದ್ಯಾ ಹೊಡೆಯುತ್ತಾನೆ, ಬಡಿಯುತ್ತಾನೆ, ರಕ್ತದ ಓಕುಳಿ ಹರಿಸುತ್ತಾನೆ. ಅದೇ ಸಾಹುಕಾರನ ತಂಗಿ ಭೀಮಾತೀರದ ಸೋ ಕಾಲ್ಡ್ ಹಂತಕ ಎನಿಸಿಕೊಂಡ ಚಂದ್ಯಾ ಜೊತೆ ಜೂಟ್ ಎನ್ನುತ್ತಾಳೆ...

  ಹೀಗೆ ನಡೆದ ನೈಜ ಘಟನೆ ಆಧರಿಸಿ ನಿರ್ದೇಶಕ ಓಂ ಪ್ರಕಾಶ್ ರಾವ್ ಆ ಭೀಮಾತೀರದಲ್ಲಿ ಹಂತಹಂತವಾಗಿ ಬಂದುಹೋಗುವ ಪಾತ್ರಗಳ ಪೈಕಿ ಚಂದ್ಯಾ ಎಂಬ ಕ್ಯಾರೆಕ್ಟರ್ ಇಟ್ಟುಕೊಂಡು ಇಡೀ ಸಿನಿಮಾ ಕ್ಯಾರಿ ಮಾಡಿಕೊಂಡು ಹೋಗಿದ್ದಾರೆ. ದುನಿಯಾ ವಿಜಿ ಈವರೆಗೆ ಮಾಡದೇ ಇರುವ ಮತ್ತು ಮಾಡಲೇ ಬೇಕಿದ್ದ ಪಾತ್ರವನ್ನು ಭೀಮಾ ತೀರದಲ್ಲಿ ಮಾಡಿದ್ದಾರೆ ಎನ್ನುವುದು ದಂಡುಪಾಳ್ಯದ ಹಂತಕರ ಆಣೆಗೂ ಸತ್ಯ!

  ಓಂ ಪ್ರಕಾಶ್ ರಾವ್ ಸಿನಿಮಾಗಳೇ ಹಾಗೆ. ನಾಗಾಲೋಟದಲ್ಲಿ ಸಾಗುವ ಚಿತ್ರಕಥೆಯೇ ಇಡೀ ಚಿತ್ರದ ಜೀವಾಳ. ಇಲ್ಲಿಯೂ ಓಂ ಅದೇ ವೇಗ ಕಾಯ್ದುಕೊಂಡು ಹೋಗಿದ್ದಾರೆ. ಜೊತೆಗೆ ಅಲ್ಲಲ್ಲಿ ಹೊಡೆದಾಟಗಳು-ಬಡಿದಾಟಗಳು-ಅರಚಾಟಗಳು-ದೊಂಬರಾಟಗಳು ಇಲ್ಲದಿದ್ದರೆ ಅದು ಹೇಗೆ ಓಂ ಪ್ರಕಾಶ್ ಚಿತ್ರವಾದೀತು?! ಇಲ್ಲಿ ಸಣ್ಣ ವ್ಯತ್ಯಾಸವೆಂದರೆ ಹೆಚ್ಚಿನ ಕಡೆಗಳಲ್ಲಿ ಕುದುರೆಗಳನ್ನು ಬಳಸಿರುವುದು. ಕಾರು-ಲಾರಿ-ಬೈಕುಗಳನ್ನಷ್ಟೇ ಕೆಡವಿ ಅವುಗಳ ಅಮಾಯಕ ಸೊಂಟ ಮುರಿಯುತ್ತಿದ್ದ ಓಂ ಇಲ್ಲಿ ಕುದುರೆ ಬಾಲಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಬಯಲುಸೀಮೆಯ ಮಣ್ಣಿನ ಸೊಗಡಿಗೆ, ಧೂಳಿನ ದಾರಿಗೆ ಬೆಳಕು ಚೆಲ್ಲಿದ್ದಾರೆ.

  ದುನಿಯಾ ವಿಜಯ್ ಅಪ್ಪಟ ಕಲಾವಿದ. ಗಂಟಲು ಕಟ್ಟಿಕೊಂಡು ಒಂದೊಂದು ಡೈಲಾಗ್ ಹೊಡೆಯುತ್ತದೆ ರೋಮ ನೆಟ್ಟಗಾಗುತ್ತದೆ. ವ್ಯಾಘ್ರತನದ ಆಕ್ರೋಶ, ಆಸ್ಫೋಟಕ ಆವೇಶ ಅವರ ಕಣ್ಣಲ್ಲಿ ಪ್ರತಿಧ್ವನಿಸುತ್ತದೆ. ಪಕ್ಕಾ ಉತ್ತರ ಕರ್ನಾಟಕದ ದೇಸೀ ಸೊಗಡಿನಲ್ಲಿ ವಿಜಿ ಸಂಭ್ರಮಿಸುತ್ತಾರೆ. ಬಹುಶಃ ಚಂದ್ಯಾ ಎಂಬ ಪಾತ್ರ ಇಂದು ಪೊಲೀಸ್ ಎನ್‌ಕೌಂಟರ್ ಆಗದೇ ಇದ್ದಿದ್ದರೆ ಖಂಡಿತ ವಿಜಿ ಪಾತ್ರ ನೋಡಿ ಮೂಕವಾಗಿಬಿಡುತ್ತಿತ್ತೇನೋ!? ಗೊತ್ತಿಲ್ಲ...

  ಇಡೀ ಚಿತ್ರದಲ್ಲಿ ರಕ್ತಪಾತ ಒಂದು ಪಾತ್ರವೇ ಆಗಿ ಸಾಗುತ್ತದೆ. ಬಹುಶಃ ಪಿಸ್ತೂಲು-ಕೋವಿ-ಮಚ್ಚು-ಕುಡಗೋಲು ಇಲ್ಲದೇ ಇದ್ದಿದ್ದರೆ ಭೀಮಾತೀರದಲ್ಲಿ ಸಿನಿಮಾ ಅಪೂರ್ಣ ಎನಿಸುತ್ತೇನೋ...ಆ ಮಟ್ಟಿಗೆ ಅವುಗಳು ಕೆಲಸ ಮಾಡಿವೆ. ಜೊತೆಗೆ ನಿರ್ದೇಶಕ ಓಂ ಪ್ರಕಾಶ್ ಇಲ್ಲಿಯೂ ಪ್ರತೀ ಪಾತ್ರಗಳಿಗೂ ಹೆಚ್ಚು ಒತ್ತು ಕೊಟ್ಟಿದ್ದಾರೆ. ಬರುವ ಪ್ರತಿಯೊಂದು ಪಾತ್ರವೂ ಪ್ರೇಕ್ಷಕನ ಹಣೆ ಮೇಲೆ ಹನಿಯಷ್ಟಾದರೂ ಬೆವರು ಬರಿಸಿ ಹೋಗುತ್ತದೆ. ಆ ಮಟ್ಟಿಗೆ ಓಂ ನಿಜಕ್ಕೂ ಗೆದ್ದಿದ್ದಾರೆ!

  <ul id="pagination-digg"><li class="next"><a href="/reviews/06-bheema-theeradalli-keeps-you-on-the-edge-of-seat-aid0052.html">Next »</a></li></ul>

  English summary
  Read Kannada film Bheema Theradalli review by Vinayakaram Kalagaru. The movie is commercially best and keeps you on the edge of seat. The story revolves around Chandappa Harijana, dreaded criminal, died early in the age of 34 in a police encounter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X