ಚಿತ್ರವಿಮರ್ಶೆ: ಇದು ರಘುರಾಮನ ಅವತಾರ!
ಕಾಮಿಡಿ ನಟರು ಹೀರೋ ಆಗಲು ಹೋಗಿ ನಗೆ-ಪಾಟಲಿಗೆ ಗುರಿಯಾಗಿರುವುದರ ಉದಾಹರಣೆ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟಿದೆ. ಸಾಧುಕೋಕಿಲಾ, ಶರಣ್, ಕೋಮಲ್ ಮೊದಲಾದವರು ಏನೋ ಮಾಡಲು ಹೋಗಿ ಇನ್ನೇನೋ ಆಯಿತಲ್ಲೋ ಎನ್ನುವ ಹಾಗೆ ಜನ ಇವರುಗಳು ಹೀರೋ ಆಗಿದ್ದನ್ನು ನೋಡಿ, ಗಹಗಹಿಸಿ ನಕ್ಕಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ.
ಆದರೆ, ರಾಮರಾಮ ರಘುರಾಮ ಚಿತ್ರ ನೋಡಿದವರಿಗೆ ರಂಗಾಯಣ ರಘು ಈ ಮಾತಿಗೆ ಅಪವಾದ ಎನಿಸಿದರೆ ಆಶ್ಚರ್ಯವಿಲ್ಲ. ಹೌದು, ಇಡೀ ಚಿತ್ರ ರಘು ಮ್ಯಾನರಿಸಂ ಮೇಲೆ ನಿಂತಿದೆ. ಪೂರ್ಣಪ್ರಮಾಣದ ಕಾಮಿಡಿ ಚಿತ್ರಗಳು ಇತ್ತೀಚೆಗೆ ಸೋಲುತ್ತಿವೆ. ಅವರೇ ಅಭಿನಯಿಸಿರುವ ಐತಲಕ್ಕಡಿ ಚಿತ್ರ ಮೂರೇ ದಿನಕ್ಕೆ ಲಕಡಿ ಪಕಡಿ ಜುಮ್ಮಾ ಆಗಿದ್ದು ಕಹಿಯಾದರೂ ಸತ್ಯ!
ನಿರ್ದೇಶಕ ರಘುರಾಜ್ ಇಲ್ಲಿ ಒಂದು ಸಣ್ಣ ಎಳೆ ಇಟ್ಟುಕೊಂಡು, ಕಾಮಿಡಿ ಕಂಬಳ ಮಾಡಿದ್ದಾರೆ. ಒಬ್ಬ ಪೊಲೀಸ್ ಪೇದೆ ತನ್ನ ತಂಗಿ ಗಂಡನಿಗೆ ಕೊಡಬೇಕಾದ 25 ಲಕ್ಷಕ್ಕೆ ಹೇಗೆಲ್ಲಾ ಪರ ಪರ ಪರದಾಡುತ್ತಾರೆ ಎನ್ನುವುದು ಕತೆಯ ಎಳೆ. ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿ ಕೊನೆಗೆ ಕ್ಯಾನ್ಸರ್ ಭೂತಕ್ಕೆ ಸಿಕ್ಕಿ ಹೇಗೆ ಒದ್ದಾಡುತ್ತಾನೆ ಎನ್ನುವುದನ್ನು ರಘು ಪ್ಲಸ್ ರಘು ತುಂಬಾ ಅಚ್ಚುಕಟ್ಟಾಗಿ ತೋರಿಸುತ್ತಾ ಹೋಗುತ್ತಾರೆ.
ರಜನಿಕಾಂತ್, ಗಜನಿ, ಕನ್ವರ್‌ಲಾಲ್ ಮೊದಲಾದ ನಟರನ್ನು ಅನುಕರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಬುಲೆಟ್ ಪ್ರಕಾಶ್-ರಘು ಕಾಂಬಿನೇಷನ್ ವರ್ಕ್‌ಔಟ್ ಆಗಿದೆ. ಸಾಧುಕೋಕಿಲ ತಮಾಷೆಯನ್ನು ಟ್ಯ್ರಾಜಡಿ ಆಫ್ ಕಾಮಿಡಿ ಅನ್ನಬಹುದು!
ದೊಡ್ಡಣ್ಣ ಪಾತ್ರವನ್ನು ನೋಡಿಯೇ ಎಂಜಾಯ್ ಮಾಡಬೇಕು. ಹರಿಕೃಷ್ಣ ಕ್ಯಾಮೆರಾ ವರ್ಕ್ ಪರವಾಗಿಲ್ಲ. ಹರಿಕೃಷ್ಣ ಮ್ಯೂಜಿಕ್ಕು ತಕ್ಕ ಮಟ್ಟಿಗಿದೆ. ಕೆಲವೊಂದು ಕಡೆ ಹಾಸ್ಯಗಳು ಅತಿರೇಕ ಎನಿಸುತ್ತವೆ ಎನ್ನುವುದನ್ನು ಹೊರತಾಗಿ, ಒಮ್ಮೆ ನೋಡಿ, ಎಂಜಾಯ್ ಮಾಡಬಹುದು.
ರಂಗಾಯಣ ರಘು ಪಾತ್ರ ಮತ್ತು ಅಭಿನಯ ಇಷ್ಟವಾಗುತ್ತದೆ. ನಿರ್ದೇಶಕರ ಹಿಂದಿನ ಬಾಸ್ ಚಿತ್ರಕ್ಕೆ ಹೋಲಿಸಿದರೆ ಇದು ನೂರು ಪಾಲು ವಾಸಿ. ಸಾವಿರ ಪಾಲು ವಾಸಿಯಾಗಬೇಕು ಎನ್ನುವುದು ನಮ್ಮ ಸಲಹೆ ಮತ್ತು ವಿಮರ್ಶೆಯ ಕ್ಲೈಮ್ಯಾಕ್ಸ್!


Click it and Unblock the Notifications











