For Quick Alerts
  ALLOW NOTIFICATIONS  
  For Daily Alerts

  ಕರಿಯ ಸಿನಿಮಾದ ಬಗೆಗೆ ಒಂದು ಸಾಲಿನ ವಿಮರ್ಶೆ ಮಾಡುವುದಾದರೆ- ಆ ಚಿತ್ರ ಪ್ರೇಮ್‌ ಅವರ ಮುಂದಿನ ಚಿತ್ರದ ಕುರಿತು ಅಪಾರ ನಿರೀಕ್ಷೆ ಹುಟ್ಟಿಸುತ್ತದೆ!

  By Staff
  |

  ರೌಡಿ ಕರಿಯನನ್ನು ಮುಗಿಸಲು ಸಂಚು ಹೂಡುವ ರೌಡಿ ಪಡೆ ಒಂದೆಡೆ. ಇನ್ನೊಂದೆಡೆ ಬದುಕಿನ ವ್ಯಥೆಯಾದ ಕರಿಯನ ಪ್ರೇಮ ಕಥೆಯಿದೆ. ಮಚ್ಚು ಹಿಡಿದು ಹೋರಾಡಲು ಹೆದರದ ರೌಡಿಗಳು ಒಂದು ಹೂವು ಹಿಡಿದು ಹುಡುಗಿ ಎದುರು ನಿಲ್ಲುವುದಕ್ಕೆ ಹೆದರುತ್ತಾರೆ. ಇದು ಮುಖ್ಯ ಹಂದರ. ಕೇಳಲು ಇದೇನಿದು ಅಂತ ಅನಿಸಿದರೂ ಅದರಲ್ಲಿಯೇ ನಿರ್ದೇಶಕ ಏನೋ ಹೇಳಲು ಹೊರಟಿದ್ದಾರೆ.

  ಇವೆರಡು ಕಥೆಗಳನ್ನು ಎರಡಾಗದಂತೆ ಒಂದೇ ಹಳಿಯ ಮೇಲೆ ನಡೆಸಲಾಗಿದೆ. ಭೂಗತ ಲೋಕದವರ ನಿರ್ದಾಕ್ಷಿಣ್ಯ ಮತ್ತು ನಿಷ್ಕರುಣೆಯನ್ನು ನಿರ್ಲಿಪ್ತವಾಗಿ ತೋರಿಸುವ ನಿರ್ದೇಶಕನೇ ಪ್ರೇಮದ ನವಿರು, ಮೃದುತ್ವ ಹಾಗೂ ಆರ್ದ್ರತೆಯನ್ನು ಕಕ್ಕುಲತೆಯಿಂದ ಕುಸುರಿ ಮಾಡಿದ್ದಾರೆ. ರಸ್ತೆಯ ನೀರಿನಲ್ಲಿ ಚಂದ್ರನ ಬಿಂಬವನ್ನು ನೋಡಿ, ಅದರಿಂದ ತಪ್ಪಿಸಿಕೊಳ್ಳುವ ನಾಯಕನ ಮನಸ್ಥಿತಿ, ರೌಡಿಯಲ್ಲೊಬ್ಬ ಕವಿಯ ಸೃಷ್ಟಿಗೆ ಕಾರಣವಾಗುತ್ತಾನೆ. ಕೊನೆವರೆಗೂ ನಾಯಕ ನಾಯಕಿ ಮಾತನಾಡದಿರುವುದೇ ಒಂದು ರೂಪಕವಾಗುವ ವಿಸ್ಮಯವಿದೆ.

  ಪಾತ್ರಧಾರಿಗಳಾದ ನಿಜವಾದ ರೌಡಿಗಳು ತಡೆತಡೆದು ಮಾತಾಡುವ ರೀತಿ, ಮುಖದಲ್ಲಿನ ಒಂಥರಾ ಭಾವ ಕತೆಗೊಂದು ಪ್ಲಸ್‌ ಪಾಯಿಂಟು. ವಿಕಾರವೆನ್ನಿಸದ ಸಂಭಾಷಣೆ ಇದೆ. ಹದ ತಪ್ಪದ ಬಿಗಿಯಾದ ಚಿತ್ರಕಥೆ ಇದೆ. ನಾಯಕಿಗೆ ಪ್ರಪೋಸ್‌ ಮಾಡಬೇಕೆನ್ನುವ ನಾಯಕನಿಗೆ ಬಿಳಿ ಬೆಲ್‌ಬಾಟಮ್‌ ಪ್ಯಾಂಟು, ಮಾರುದ್ದ ಕಾಲರಿನ ಅಸಡ್ಡಾಳ ಕೆಂಪು ಅಂಗಿ ತೊಡಿಸುವ ಮೂಲಕ ‘ರೌಡಿ ಅಭಿರುಚಿ’ಯ ಚಿಕ್ಕ ವಿಷಯದಲ್ಲೂ ಮುತುವರ್ಜಿ ವಹಿಸಲಾಗಿದೆ.

  ಎಂ.ಆರ್‌.ಸೀನು ಎನ್ನುವ ಅದ್ಯಾರೊ ಹೊಸ ಹುಡುಗನ ಛಾಯಾಗ್ರಹಣ ಕೆಲಸದ ಶ್ರದ್ಧೆ ತೋರಿಸುತ್ತದೆ. ಸಂಕಲನ ಮಾಡಿದ ಶ್ರೀನಿವಾಸ ಪ್ರಭು ಕೂಡ ಇದೇ ಸಾಲಿಗೆ ಸೇರುತ್ತಾರೆ. ಗುರುಕಿರಣ್‌ ಹಿನ್ನೆಲೆ ಸಂಗೀತ ವಂಡರ್‌ಫುಲ್‌.

  ಬೆರಳಲ್ಲಿ ಎಣಿಸಲು ಬರುವಷ್ಟು ಮಾತುಗಳಿರುವ ಕರಿಯನ ಪಾತ್ರವನ್ನು ದರ್ಶನ್‌ ತೂಗುದೀಪ ಎಚ್ಚರಿಕೆಯಿಂದ ನಿರ್ವಹಿಸಿದ್ದಾರೆ. ಕೆಲವೊಮ್ಮೆ ನಾಟಕೀಯವೆನ್ನಿಸುವ ಮ್ಯಾನರಿಸಂನ ನಡುವೆಯೂ ಕ್ಲೈಮ್ಯಾಕ್ಸ್‌ ದೃಶ್ಯದಲ್ಲಿ ನೆನಪಿಡುವ ಅಭಿನಯ ನೀಡಿದ್ದಾರೆ. ಚರಂಡಿಯಲ್ಲಿ ಬಿದ್ದು ಒದ್ದಾಡುವಾಗ ಆಂಗಿಕ ನಟನೆಗೆ ಅವರು ಡಬ್ಬಿಂಗ್‌ ಮಾಡಿದ ರೀತಿ ಫೈನ್‌ ಸಾರ್‌ ಫೈನ್‌ ! ನಾಯಕಿ ಅಭಿನಯಶ್ರೀ ಕುರಿತು ಹೇಳುವುದೇನೂ ಇಲ್ಲ .

  ಎಲ್ಲ ಮಿತಿಗಳ ನಡುವೆ ಹೊಸಬರೇ ಸೇರಿ ವಿಲಕ್ಷಣ ಅನುಭವದ ಚಿತ್ರ ಕೊಟ್ಟಿರುವುದನ್ನು ನೋಡಿದಾಗ, ಇದುವರೆಗೆ ಈ ತಂಡದ ಹುಡುಗರೆಲ್ಲ ಎಲ್ಲಿ ಅಡಗಿದ್ದರೆಂದು ಅಚ್ಚರಿಯಾಗುತ್ತದೆ. ಕನ್ನಡದ್ದಷ್ಟೇ ಆಗದ ಕನ್ನಡ ಚಿತ್ರವೊಂದು ವರ್ಷದ ಆರಂಭದಲ್ಲಿ ಹೊಸಬರ ಬಗ್ಗೆ ಭರವಸೆ ಮೂಡಿಸಿದೆ. ಪ್ರೇಮ್‌ ಅವರ ಮುಂದಿನ ಚಿತ್ರದ ಕುರಿತು ಕುತೂಹಲ ಹುಟ್ಟಿಸಿದೆ. ಕಂಗ್ರಾಟ್ಸ್‌ ಪ್ರೇಮ್‌...

  (ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X