»   » ‘ಉಪ್ಪಿಯ ದಾದಾ’ಗಿರಿಯ ದಿನಗಳು

‘ಉಪ್ಪಿಯ ದಾದಾ’ಗಿರಿಯ ದಿನಗಳು

Posted By:
Subscribe to Filmibeat Kannada


‘ಉಪ್ಪಿದಾದಾ ಎಂ.ಬಿ.ಬಿ.ಎಸ್‌’ ಉರುಫ್‌ ‘ಮುನ್ನಾಭಾಯಿ ಎಂ.ಬಿ.ಬಿ.ಎಸ್‌’ ಕತೆ ಈಗಾಗಲೇ ಹಳತಾಗಿದೆ. ಅದರಲ್ಲೂ ಮೂಲ ಚಿತ್ರಗಳ ಎರಡು ರೀಮೇಕುಗಳು ನಾಡಿನಾದ್ಯಂತ ತೆರೆ ಕಂಡ ಮೇಲೂ ಮತ್ತೊಮ್ಮೆ ಅದೇ ಕತೆ ಹೇಳುವ ಅಗತ್ಯವಿರಲಿಲ್ಲವೇನೋ...

  • ಚೇತನ್‌ ನಾಡಿಗೇರ್‌
ಒಂದು ಒಳ್ಳೆಯ ಚಿತ್ರವನ್ನು ರಿಮೇಕ್‌ ಮಾಡಿ ಯಶಸ್ಸು ಗಳಿಸುವುದು ಸುಲಭ. ಇದು ಚಿತ್ರರಂಗದ ರಾಜಧಾನಿ ಗಾಂಧಿನಗರಕ್ಕೆ ಗೊತ್ತಿರುವ ಸತ್ಯ. ಆದರೆ ಒಂದು ಅತ್ಯುತ್ತಮ ಚಿತ್ರವನ್ನು ರಿಮೇಕ್‌ ಮಾಡುವುದು ಹೇಗೆ? ಇದು ಕಷ್ಟ ಕಷ್ಟ ಎನ್ನುತ್ತದೆ ಈ ವಾರ ತೆರೆ ಕಂಡ ‘ಉಪ್ಪಿದಾದ ಎಂ.ಬಿ.ಬಿ.ಎಸ್‌’. ಅದರಲ್ಲೂ ‘ರಿಮೇಕ್‌ ತಜ್ಞ’ ಡಿ.ರಾಜೇಂದ್ರಸಿಂಗ್‌ ಬಾಬುರಂಥ ಹಿರಿಯ ನಿರ್ದೇಶಕರಿಗೂ ‘ಮುನ್ನಾಭಾಯ್‌ ಎಂ.ಬಿ.ಬಿ.ಎಸ್‌’ ಸವಾಲೆನ್ನಿಸಬಹುದು ಎನ್ನುವುದಕ್ಕೆ ಈ ಚಿತ್ರ ಉತ್ತಮ ಉದಾಹರಣೆ.

‘ಉಪ್ಪಿದಾದಾ ಎಂ.ಬಿ.ಬಿ.ಎಸ್‌’ ಉರುಫ್‌ ಮುನ್ನಾಭಾಯ್‌... ಕತೆ ಈಗಾಗಲೇ ಹಳತಾಗಿದೆ. ಅದರಲ್ಲೂ ಮೂಲ ಚಿತ್ರಗಳ ಎರಡು ರೀಮೇಕುಗಳು ನಾಡಿನಾದ್ಯಂತ ತೆರೆ ಕಂಡ ಮೇಲೂ ಮತ್ತೊಮ್ಮೆ ಅದೇ ಕತೆ ಹೇಳುವ ಅಗತ್ಯವಿರಲಿಲ್ಲವೇನೋ. ರೌಡಿಯಾಬ್ಬ ಜಿದ್ದಿನ ಮೇಲೆ ವೈದ್ಯನಾಗಲು ಹೋಗಿ, ಕೊನೆಗೆ ವೈದ್ಯರನ್ನೂ ತನ್ನ ಮಾನವೀಯತೆಯಿಂದ ಆಕರ್ಷಿಸುವುದು ಚಿತ್ರದ ಒನ್‌ ಲೈನ್‌ ಸ್ಟೋರಿ.

ಉತ್ತಮ ಚಿತ್ರದ ರೀಮೇಕ್‌ ಸಂದರ್ಭದಲ್ಲಿ ಸಣ್ಣ ಪುಟ್ಟ ಎಡವಟ್ಟುಗಳೂ ಚಿತ್ರವನ್ನು ಮುಗ್ಗರಿಸುವಂತೆ ಮಾಡಬಲ್ಲದು. ಈ ಎಚ್ಚರಿಕೆಯ ನೆರಳಲ್ಲಿ ಬಾಬು ಬಹಳ ಹುಷಾರಾಗಿ ಮೂಲ ಚಿತ್ರಕ್ಕೆ ಎಲ್ಲೂ ಧಕ್ಕೆ ಬರದಂತೆ ಕನ್ನಡೀಕರಿಸಿದ್ದಾರೆ. ಇದಕ್ಕೆ ಸಂಭಾಷಣೆಯೂ ಹೊರತಾಗಿಲ್ಲ. ಆದರೆ, ನೋಡುಗರಿಗೆ ಮೂಲ ಚಿತ್ರದ ‘ಆತ್ಮೀಯತೆಯ ಹಿತಾನುಭವ’ ಇಲ್ಲಿ ಅನುಭವಿಸಲಾಗದು.

ಈ ಚಿತ್ರ ‘ಮುನ್ನಾಭಾಯಿ’...ಯ ಜೆರಾಕ್ಸ್‌ ಕಾಪಿ ನಿಜ. ಆದರೆ ಆ ಚಿತ್ರದಲ್ಲಿ ಎದ್ದು ಕಾಣುವ ಎಮೋಷನ್ಸ್‌, ಸೆಂಟಿಮೆಂಟ್‌ ಮಾತ್ರ ಜೆರಾಕ್ಸಾಗಿಲ್ಲ. ಆದರೂ ಚಿತ್ರವನ್ನು ಲೈವ್ಲಿಯನ್ನಾಗಿಸುವ ವಿಚಾರದಲ್ಲಿ ಬಾಬು ಪಾಸ್‌ ಆಗಿದ್ದಾರೆ.

ಚಿತ್ರದ ಪ್ಲಸ್‌ ಪಾಯಿಂಟು ಪಾತ್ರಧಾರಿಗಳು. ಇಲ್ಲಿ ಬಾಬು ರಾಜಿಯಾಗಿಲ್ಲ. ಪಾತ್ರಕ್ಕೆ ಸರಿಯಾದ ಕಲಾವಿದರನ್ನೇ ಹಾಕಿದ್ದರಿಂದ ಭೇಷ್‌ ಎನ್ನಿಸುತ್ತಾರೆ. ಅದರಲ್ಲೂ ಉಪೇಂದ್ರ ಸಾಕ್ಷಾತ್‌ ಕನ್ನಡದ ಮುನ್ನಾಭಾಯ್‌ ಎನ್ನಿಸುವಷ್ಟು ಆ ಪಾತ್ರಕ್ಕೆ ಹೊಂದಿಕೊಳ್ಳುತ್ತಾರೆ. ಕ್ಲೈಮಾಕ್ಸ್‌ನಲ್ಲಿ ಅವರ ಅಭಿನಯವನ್ನು ನೋಡೇ ಎಂಜಾಯ್‌ ಮಾಡಬೇಕು.

ನಾಯಕಿ ಉಮಾ ಕೂಡ ಪರ್ಫೆಕ್ಟ್‌ ಚಾಯ್ಸ್‌. ಅನಂತ್‌ನಾಗ್‌ ಪಾತ್ರದಲ್ಲಿ ಅಸಹಜತೆ ಢಾಳಾಗಿದೆ. ಬಹುಶಃ ಮೂಲ ಚಿತ್ರದ ಅನುಕರಣೆಯ ಪ್ರಭಾವವೇ ಇರಬಹುದು. ಅಂಥ ಪ್ರಬುದ್ಧ ನಟನಿಗೆ ಸ್ವಲ್ಪ ಅಭಿನಯ ಸ್ವಾತಂತ್ರ್ಯ ಕೊಟ್ಟಿದ್ದರೆ... ಅನಂತಲೋಕಕ್ಕೆ ಕೊಂಡೊಯ್ಯುತ್ತಿದ್ದರೇನೋ? ಇನ್ನುಳಿದಂತೆ ದತ್ತಾತ್ರೇಯ, ಶ್ರೀನಾಥ್‌, ಸುಮಿತ್ರ, ಗುರುದತ್‌ ಮುಂತಾದವರದು ಪಾತ್ರೋಚಿತ ಅಭಿನಯ.

ಬಾಬು ಅವರು, ಎಚ್‌.ಎಂ ರಾಮಚಂದ್ರರಂಥ ಪ್ರತಿಭಾವಂತ ಕ್ಯಾಮೆರಾಮನ್‌ರನ್ನು ಕರೆತಂದಿದ್ದಾರೆ. ರಾಮಚಂದ್ರ ನಂಬಿಕೆ ಉಳಿಸಿ ಕೊಂಡಿದ್ದಾರೆ. ಬ್ಯಾಂಕಾಕ್‌ ಹಾಡನ್ನು ಚೆಂದಗಾಣಿಸಿದ್ದಾರೆ. ಇನ್ನು ಆರ್‌.ಪಿ.ಪಟ್ನಾಯಕ್‌ ಹಾಡುಗಳೂ ಪರವಾಗಿಲ್ಲ.

‘ಉಪ್ಪಿದಾದಾ’ ಹಾಡು ಮಾತ್ರ ಮನಸ್ಸು ಮತ್ತೆ ಮತ್ತೆ ರಿಂಗಣಿಸುವಂತೆ ಮಾಡುತ್ತದೆ.

ಲಾಸ್ಟ್‌ ಕ್ಲಾಪ್‌ : ಪರ ಭಾಷೆಯಲ್ಲಿ ನೋಡದಿರುವವರಿಗೆ ಚಿತ್ರ ಖಂಡಿತಾ ಹಬ್ಬದೂಟ. ಆದರೆ, ಮುನ್ನಭಾಯ್‌... ಎಂಬ ಭೂರಿ ಭೋಜನ ಸವಿದವರಿಗೆ ‘ಉಪ್ಪಿದಾದಾ ಎಂ.ಬಿ.ಬಿ.ಎಸ್‌’ ಅಷ್ಟಾಗಿ ರುಚಿಸದೇ ಇರುವ ಸಾಧ್ಯಾಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

(ಸ್ನೇಹ ಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada