For Quick Alerts
  ALLOW NOTIFICATIONS  
  For Daily Alerts

  ‘ಗೋಪಿ’ಯ ಅವತಾರದಲ್ಲಿ ‘ಮುರಾರಿ’

  By Staff
  |


  ನಾಯಕನ ಚೇಷ್ಟೆ, ಖಳನಾಯಕನ ಕುಚೇಷ್ಟೆ. ಫೈಟಿಂಗು, ಹಾಡು, ಕಾಮಿಡಿ...ಇತ್ಯಾದಿ, ಇತ್ಯಾದಿ. ಒಟ್ಟಾರೆ ತೆಲುಗು ಚಿತ್ರಕ್ಕೆ ಹೇಳಿ ಮಾಡಿಸಿದ ಕತೆಯನ್ನು ಜಿ.ಕೆ. ಮುದ್ದುರಾಜ್‌ ಮುದ್ದಾಗಿ ಕನ್ನಡೀಕರಿಸಿದ್ದಾರೆ. ಮೊದಲಾರ್ಧ ಬೋರಾಗಿದೆ. ದ್ವಿತೀಯಾರ್ಧ ಸುಮಾರಾಗಿದೆ. ಒಟ್ಟಾರೆ ಡೆಡ್ಲಿಯಾಗಿದೆ.

  • ಚೇತನ್‌ ನಾಡಿಗೇರ್‌
  ಈ ಮನೆಯೋರು ಸಣ್ಣ ವಿಷಯಾನೂ ದೊಡ್ಡದಾಗಿ ಮಾಡ್ತಾರೆ!

  ದನ ಕಾಯುವವನ ಈ ಸ್ಟೇಟ್‌ಮೆಂಟಿಗೆ ಪ್ರೇಕ್ಷಕರು ಮೌನವಾಗಿ ತಮ್ಮ ಸಮ್ಮತಿ ಸೂಚಿಸುತ್ತಾರೆ. ಅವರಿಗೂ ಬೇರೆ ದಾರಿಯಿಲ್ಲ. ಏಕೆಂದರೆ ಗೋಪಿಯ ಕುಟುಂಬ ಇರೋದೇ ಹಾಗೆ. ಅಲ್ಲಿ ಎಲ್ಲ ವಿಷಯಗಳೂ ಅತಿ ಅತಿ. ಅಲ್ಲಿ ಪ್ರೀತಿ ಹರಿಯುತ್ತದೆ, ಮಮತೆ ಉಕ್ಕಿ ಹರಿಯುತ್ತದೆ.

  ಮೊಮ್ಮಗ, ತನ್ನ ಗಂಡನನ್ನೇ ಹೋಲುತ್ತಾನೆ ಎಂದು ಅಜ್ಜಿ ಅವನಿಗೆ ‘ಹೋಗಿ, ಬನ್ನಿ’ ಎನ್ನುತ್ತಾಳೆ. ಮೊಮ್ಮಗ ಕೂಡ ತನ್ನ ಅಜ್ಜಿಗೆ ಬೇಜಾರಾಗಬಾರದೆಂದು ಅವಳಿಗೆ ಹೆಂಡತಿಗೆ ಕರೆಯುವಂತೆ ಪ್ರೀತಿಯಿಂದ ‘ಏನೇ ಶಬರಿ’ ಎನ್ನುತ್ತಾನೆ. ಇನ್ನು ಅಪ್ಪ, ಮಗನಿಗೆ ಗೌರವದಿಂದ ಬಹುವಚನದಲ್ಲಿ ಕರೆಯುತ್ತಾನೆ.

  ತಂದೆ, ಅಜ್ಜಿಗೆ ಹೀಗೆ ಕರೆದವನು ಅತ್ತಿಗೆಗೆ ಬುಟ್ಟಾನಾ? ಆಕೆಯನ್ನೂ ಗೋಪಿ ತಾಯಿಯಷ್ಟೇ ಪ್ರೀತಿಸುತ್ತಾನೆ. ಇಂಥದೊಂದು ಏಕಮೇವಾದ್ವಿತೀಯ ಕುಟುಂಬದ ಜತೆಗೆ ಇನ್ನೊಂದು ಕುಟುಂಬವೂ ಇದೆ. ಅದು ಈ ಕುಟುಂಬದಷ್ಟು ಪರ್ಫೆಕ್ಟಲ್ಲದಿದ್ದರೂ ಅಲ್ಲೂ ಹೆಚ್ಚು ಕಡಿಮೆ ಹೀಗೆಯೇ ಇರುತ್ತದೆ. ಈ ಕುಟುಂಬದ ಗೋಪಿಕಾ ಸ್ತ್ರೀಗೆ ಆ ಕುಟುಂಬದ ಗೋಪಿಯ ಮೇಲೆ ಲವ್ವು. ಆದರೆ, ಎರಡು ಕುಟುಂಬಗಳ ಮಧ್ಯೆ ಒಂದಷ್ಟು ವಿರಸ, ಒಂದಿಷ್ಟು ಸರಸ, ಮುಂದಾ?

  ಏನಜ್ಜಿ ಚಂದಮಾಮ ಕತೆ ಹೇಳ್ತಾ ಇದ್ದೀಯಾ?

  ಗೋಪಿಯ ಮಾತುಗಳನ್ನು ಕೇಳುತ್ತಿದ್ದರೆ, ಹೌದು ಇದು ಖಂಡಿತ ಚಂದಮಾಮನ ಕತೆ ಎನ್ನಿಸದೇ ಇರುವುದಿಲ್ಲ. ಏಕೆಂದರೆ ಇಲ್ಲಿ ಭಕ್ತಿ ಇದೆ, ನಂಬಿಕೆಯೂ ಇದೆ. ಇವೆರಡನ್ನು ಮೀರಿಸುವಂಥ ಹೇರಳ ಮೂಢನಂಬಿಕೆಯೂ ಇದೆ. ಕುಡಿದ ಮತ್ತಿನಲ್ಲಿ ಜಮೀನ್ದಾರನೊಬ್ಬ ಬ್ರಿಟಿಷ್‌ ಅಧಿಕಾರಿಗಳ ಜತೆ ದೇವಸ್ಥಾನಕ್ಕೆ ನುಗ್ಗಿ ದೇವಿಯ ಮೇಲಿನ ಆಭರಣ ಕದಿಯಲು ಹೋಗುತ್ತಾನೆ.

  ಗ್ರಾಫಿಕ್ಸ್‌ ರೂಪದಲ್ಲಿ ದೇವಿ ಬಂದು ಆ ಮಹಿಷಾಸುರನನ್ನು ಸಾಯಿಸುತ್ತಾಳೆ. ಬೋನಸ್ಸೆಂಬಂತೆ ನಲವತ್ತೆಂಟು ವರ್ಷಗಳಿಗೆ ಸರಿಯಾಗಿ ಆ ವಂಶದ ಒಬ್ಬನನ್ನು ಎಂಗಾದರೂ ಬಲಿ ತೆಗೆದುಕೊಳ್ಳುತ್ತೇನೆಂದು ಅಶರೀರ ವಾಣಿಯ ಮೂಲಕ ಹೇಳಿ ಕಳುಹಿಸುತ್ತಾಳೆ. ಹಾಗಾಗಿ ಗೋಪಿಗೆ ಸಾವಿನ ಮನೆಯ ಕದ ತೆಗೆದಿದೆ. ಗೋಪಿ ಹಲೋ ಯಮ ಅನ್ನುತ್ತಾನಾ?

  ಒಂದು ಪಕ್ಕಾ ತೆಲುಗು ಚಿತ್ರವನ್ನು ಕನ್ನಡದಲ್ಲಿ ನೋಡಬೇಕಿದ್ದರೆ ‘ಗೋಪಿ’ ನೋಡಿ. ಇದು ‘ಮುರಾರಿ’ಚಿತ್ರದ ಬರಿ ರೀಮೇಕಾದರೂ ತೆಲುಗು ಚಿತ್ರದ ತರಹವೇ ಇಲ್ಲಿನ ಕ್ಯಾನ್ವಾಸು ತುಂಬ ರಂಗು ರಂಗು. ಸದಾ ಹಬ್ಬದ ವಾತಾವರಣ. ಹಬ್ಬವಿರಲಿ, ಪೂಜೆಯಿರಲಿ ಹೆಂಗಸರು ಜಿಗಿ ಜಿಗಿ ರೇಶ್ಮೆ ಸೀರೆ ತೊಟ್ಟು ಮಿರಿ ಮಿರಿ ಮಿಂಚುತ್ತಾರೆ. ಕೇಜಿಗಟ್ಟಲೆ ಆಭರಣ ಹೊತ್ತು ಕಂಗೊಳಿಸುತ್ತಾರೆ.

  ಗಂಡಸರೂ ಅಷ್ಟೇಯ. ಸೀರೆ ಬದಲು ಜರಿ ಪಂಚೆ ಅಂದ್ಕೊಂಬಿಡಿ ಅಷ್ಟೇ. ಮನೆ ತುಂಬ ಜನ. ಮನದ ತುಂಬ ಮಾತು. ಮಧ್ಯೆ ನಾಯಕನ ಚೇಷ್ಟೆ, ಖಳನಾಯಕನ ಕುಚೇಷ್ಟೆ. ಫೈಟಿಂಗು, ಹಾಡು, ಕಾಮಿಡಿ...ಇತ್ಯಾದಿ, ಇತ್ಯಾದಿ. ಒಟ್ಟಾರೆ ತೆಲುಗು ಚಿತ್ರಕ್ಕೆ ಹೇಳಿ ಮಾಡಿಸಿದ ಕತೆಯನ್ನು ಜಿ.ಕೆ. ಮುದ್ದುರಾಜ್‌ ಮುದ್ದಾಗಿ ಕನ್ನಡೀಕರಿಸಿದ್ದಾರೆ. ಹೆಚ್ಚು ಯೋಚಿಸದೆ ಫ್ರೇಮ್‌ ಟು ಫ್ರೇಮ್‌ ಇಳಿಸಿದ್ದಾರೆ. ಅದಕ್ಕೆ ಚಿತ್ರ ಬಹಳ ಉದ್ದವಾಗಿದೆ. ಮೊದಲಾರ್ಧ ಬೋರಾಗಿದೆ. ದ್ವಿತೀಯಾರ್ಧ ಸುಮಾರಾಗಿದೆ. ಒಟ್ಟಾರೆ ಡೆಡ್ಲಿಯಾಗಿದೆ.

  ಚಿತ್ರದ ತುಂಬ ಪಾತ್ರಗಳಿವೆ. ಆದರೆ ಯಾರು ಹೆಚ್ಚು, ಯಾರು ಕಡಿಮೆ ಎನ್ನುವುದು ಸ್ವಲ್ಪ ಕಷ್ಟ. ಮುರಳಿ, ದೊಡ್ಡಣ್ಣ, ಅಶೋಕ್‌, ಸುಮಿತ್ರಾ ಆ್ಯಕ್ಟಿಂಗ್‌ನಲ್ಲಿ ಗೆದ್ದರೆ, ಉಮಾಶ್ರೀ ಎಂದಿನಂತೆ ಓವರ್‌ ಆ್ಯಕ್ಟಿಂಗ್‌ನಲ್ಲಿ ಗೆಲ್ಲುತ್ತಾರೆ. ಗೌರಿ ಬಗ್ಗೆ ಏನೂ ಹೇಳದಿರುವುದೇ ವಾಸಿ.

  ಒಂದು ಹಾಡು ಬಿಟ್ಟರೆ ಮಣಿಶರ್ಮ ಸಂಗೀತ ಖುಷಿ ಕೊಡುವುದು ಡೌಟು. ಒಂದೆರೆಡು ಹಾಡುಗಳಿಗೆ ಬರೆದಿರುವುದು ಸಾಹಿತ್ಯವೋ ಸಂಭಾಷಣೆಯೋ ಎಂಬ ಸಂಶಯ ಬರದೇ ಇರದು. ಎಂ.ಆರ್‌. ಸೀನು ಕ್ಯಾಮೆರಾ ಕೆಲಸ ಖುಷಿ ಕೊಡುತ್ತದೆ.

  ಅಂದಹಾಗೆ ಇದು ಭವ್ಯ ಸಿನಿ ಕ್ರಿಯೇಷನ್ಸ್‌ರವರ ಎರಡನೆಯ ‘ಕುಣಿಕೆ’!

  (ಸ್ನೇಹ ಸೇತು : ವಿಜಯ ಕರ್ನಾಟಕ )

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X