For Quick Alerts
  ALLOW NOTIFICATIONS  
  For Daily Alerts

  ಕಾಶಿಯಲ್ಲಿ ಸಾಯಿ ಪ್ರಕಾಶಿಸುತ್ತಿದೆ !

  By Staff
  |
  • ಚೇತನ್‌ ನಾಡಿಗೇರ್‌
  ಸಾಯಿ ಪ್ರಕಾಶ್‌ ಬದಲಾಗಿಲ್ಲ ! ಹಾಗಂತ ಅವರ ಹೊಸ ಚಿತ್ರ ‘ಕಾಶಿ ಫ್ರಮ್‌ ವಿಲೇಜ್‌’ ನೋಡಿದರೆ ಗೊತ್ತಾಗುತ್ತದೆ. ಏಕೆಂದರೆ ಚಿತ್ರದ ಶೀರ್ಷಿಕೆಯಾಂದು, ಹಿಂದಿನ ಸಾಯಿ ಮಹಿಮೆಯಿಂದ ಡಿಫರೆಂಟಾಗಿದೆ ಎಂದು ಭಾಸವಾದರೂ ಚಿತ್ರ ಮಾತ್ರ ಅವರ ಸುಮಾರು ಚಿತ್ರಗಳನ್ನೇ ಹೋಲುತ್ತದೆ. ಚಿತ್ರನಾಯಕ ಪ್ರಧಾನವಾದರೂ ಕೊನೆಗೆ ಗೆಲ್ಲುವುದು ಸಾಯಿ ಸೆಂಟಿಮೆಂಟೇ.

  ಚಿತ್ರ ಪ್ರಾರಂಭವಾಗುವುದೇ ಹಳ್ಳಿಯಲ್ಲಿ. ಅಲ್ಲಿನ ಮಹಿಳೆಯಾಬ್ಬಳಿಗೆ(ಭವ್ಯ) ಏನೋ ರೋಗ. ಹಳ್ಳಿಯ ನಾಟಿ ವೈದ್ಯರೊಬ್ಬರು ಆಕೆಯನ್ನು ದೊಡ್ಡೂರಿನ ದೊಡ್ಡಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆಕೆಯ ಮಕ್ಕಳಿಗೆ ಸಲಹೆ ಕೊಡುತ್ತಾರೆ. ಊರಿಗೆ ಹೋಗುವ ಮಾರ್ಗ ಮಧ್ಯೆ ಆ ಮಹಿಳೆಗೆ ಸ್ವಲ್ಪ ಸೀರಿಯಸ್‌ ಆಗುತ್ತದೆ. ತಾನು ಇನ್ನು ಬದುಕುವುದಿಲ್ಲ ಎಂದು ಖಾತ್ರಿಯಾಗುತ್ತಿದ್ದಂತೆಯೇ ತಾಯಿ ತನ್ನ ದೊಡ್ಡ ಮಗ ಕಾಶಿ(ದೊಡ್ಡವನಾದ ಮೇಲೆ ಸುದೀಪ್‌) ಬಳಿ ಇನ್ನೊಬ್ಬ ಮಗ ವಿಶ್ವ (ಮುಂದೊಮ್ಮೆ ಹರ್ಷ)ನನ್ನು ಡಾಕ್ಟರ್‌ ಮಾಡಬೇಕೆಂದು ಭಾಷೆ ತೆಗೆದುಕೊಂಡು ಪ್ರಾಣ ಬಿಡುತ್ತಾಳೆ. ಹೀಗೆ ಘನ ಉದ್ದೇಶವೊಂದನ್ನು ಈಡೇರಿಸಲು ಕಾಶಿ ಫ್ರಮ್‌ ವಿಲೇಜ್‌ ನಗರಕ್ಕೆ ಬರುತ್ತಾನೆ. ಅಲ್ಲಿಗೆ ಚಿತ್ರಕ್ಕೂ ಅದರ ಶೀರ್ಷಿಕೆಗೂ ಸಂಬಂಧವಿದೆ ಎಂದು ಸಂತೋಷ ಪಡಬಹುದು.

  ಹೀಗೆ ವಿಲೇಜ್‌ನಿಂದ ದೂರಾಗಿ ಊರು ಪಾಲಾಗುವ ಕಾಶಿ ತನ್ನ ತಮ್ಮ ವಿಶ್ವನನ್ನು ಡಾಕ್ಟರ್‌ ಮಾಡಲು ಶ್ರಮಿಸುತ್ತಾನೆ. ಅದಕ್ಕೆಂದು ಪೈಸೆಪೈಸೆ ಕೂಡಿಸುತ್ತಾನೆ. ವಿಶ್ವ ಕೂಡಾ ತನ್ನ ಅಣ್ಣನನ್ನೇ ತಾಯಿ, ತಂದೆ, ಗುರು, ಅಣ್ಣ, ದೇವರ ಸ್ಥಾನಕ್ಕೆ ಏರಿಸಿರುತ್ತಾನೆ. ಅಣ್ಣನ ಮೇಲೆ ಪ್ರೀತಿ, ಭಕ್ತಿ ಪ್ರದರ್ಶಿಸುತ್ತಲೇ ತನ್ನ ಸಹಪಾಠಿಯಾಬ್ಬಳನ್ನು ಪ್ರೀತಿಸುತ್ತಾನೆ. ಇದನ್ನು ಸಹಿಸದ ಆಕೆಯ ದುಷ್ಟ ಅಪ್ಪ ಪಿವಿಆರ್‌(ಮಲ್ಟಿಪ್ಲೆಕ್ಸ್‌ ಅಲ್ಲ ಸತ್ಯಪ್ರಕಾಶ್‌) ವಿರೋಧ ವ್ಯಕ್ತಪಡಿಸುತ್ತಾನೆ. ಈ ವಿಷಯ ನಾಯಕನಿಗೂ ಗೊತ್ತಾಗುತ್ತದೆ. ಅವನೂ ಹೋಗಿ ಪಿವಿಆರ್‌ಗೆ ಮದುವೆ ಮಾಡಿಕೊಡುವಂತೆ ದಮ್ಮಯ್ಯ ಗುಡ್ಡೆ ಹಾಕುತ್ತಾನೆ. ಇದೂ ಸಾಲದೆಂಬಂತೆ ವಿಶ್ವನನ್ನು ಕೊಲ್ಲಿಸುತ್ತಾನೆ. ಹಾಗೂ ತನ್ನ ಮಗಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಅವನ ಮಗುವನ್ನು ಕೊಲ್ಲಬೇಕೆಂದು ಮುಂದಾಗುತ್ತಾನೆ. ಆದರೆ ಕಾಶಿ ಪ್ರತಿಭಟಿಸುತ್ತಾನೆ. ಗರ್ಭದಲ್ಲಿರುವ ಮಗು ಗರ್ಭಗುಡಿಯಲ್ಲಿರುವ ದೇವರ ಹಾಗೆ ಎನ್ನುತ್ತಾನೆ. ಯಾವುದೇ ಕಾರಣಕ್ಕೂ ಆ ಮಗುವನ್ನು ಉಳಿಸಬೇಕೆಂದು ಪಣ ತೊಡುತ್ತಾನೆ. ಆ ಮಗು ಹುಟ್ಟಿದ ದಿನದಂದೇ ಪಿವಿಆರ್‌ನನ್ನು ಸಂಹಾರ ಮಾಡುವುದಾಗಿ ಘೋಷಿಸುತ್ತಾನೆ. ಕಾಶಿ ತನ್ನ ಸೇಡು ತೀರಿಸಿಕೊಳ್ಳುವನೇ ಎಂಬುದೇ ಚಿತ್ರದ ಮುಂದಿನ ಕಥೆ.

  ನಾಯಕ ಸುದೀಪ್‌ ತಮ್ಮ ಎಂದಿನ ಶೈಲಿಯಲ್ಲಿ ಅಭಿನಯಿಸಿದ್ದಾರೆ. ಆ್ಯಕ್ಷನ್‌ ದೃಶ್ಯಗಳಲ್ಲಿ ಮಾತ್ರ ಚಪ್ಪಾಳೆ ಗಿಟ್ಟಿಸುತ್ತಾರೆ. ಚಿತ್ರದಲ್ಲಿ ರಕ್ಷಿತಾ ನಾಯಕಿಯಾಗಿದ್ದಾರೆ. ಮೊದಲಾರ್ಧದ ಬಹಳಷ್ಟು ಭಾಗದಲ್ಲಿ ಅವರು ತಮ್ಮ ಲವಲವಿಕೆಯ ಅಭಿನಯದಿಂದ, ತುಂಡುಡುಗೆಯಿಂದ ಗಮನ ಸೆಳೆಯುತ್ತಾರೆ. ಅದೇ ರೀತಿ ದ್ವಿತೀಯಾರ್ಧದಲ್ಲೂ ಅವರು ಬಹಳಷ್ಟು ದೃಶ್ಯಗಳಲ್ಲಿ ನಟಿಸಿದ್ದಾರೆ. ಆದರೆ ಆಕೆ ಆಗ ಮೈತುಂಬಾ ಬಟ್ಟೆಯಲ್ಲಿ ಕಾಣಿಸಿಕೊಳ್ಳುವುದರಿಂದ ಅಷ್ಟೊಂದು ಗಮನಕ್ಕೆ ಬರುವುದಿಲ್ಲ. ನೃತ್ಯ ನಿರ್ದೇಶಕ ಹರ್ಷ ಈ ಚಿತ್ರದಲ್ಲಿ ಕಾಶಿ ತಮ್ಮ ವಿಶ್ವನಾಗಿ ಅಭಿನಯಿಸಿದ್ದಾರೆ. ಇಲ್ಲೂ ಅವರು ನೃತ್ಯ ನಿರ್ದೇಶಕನಾಗಿಯೇ ಮಿಂಚುತ್ತಾರೆ ಎಂಬುದು ಅವರಿಗೆ ಸಲ್ಲುವ ಕಾಂಪ್ಲಿಮೆಂಟು.

  ಸತ್ಯಪ್ರಕಾಶ್‌ ಆರ್ಭಟವೇ ಅಭಿನಯ ಎಂದು ಬಲವಾಗಿ ನಂಬಿರುವಂತಿದೆ. ಅಲ್ಲದೆ ಪ್ರಮಿಳಾ ಜೋಷಾಯ್‌, ಧರ್ಮ, ಹರೀಶ್‌ ರಾಯ್‌, ಭವ್ಯ ಮುಂತಾದ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಒಂದು ಕಡೆ ಕನ್ನಡ ಕಲಾವಿದರಿಗೆ ಕನ್ನಡ ಚಿತ್ರಗಳಲ್ಲಿ ಪಾತ್ರ ಸಿಗುತ್ತಿದೆಯೆಲ್ಲಾ ಎಂಬ ಸಂತೋಷವಾದರೂ, ಅವರ ಒಂದೇ ರೀತಿಯ ಪಾತ್ರ ನೋಡಿದರೆ ಬೇಸರವಾಗದೇ ಇರುವುದಿಲ್ಲ. ಚಿತ್ರದಲ್ಲಿ ಹಲವು ಸಂದೇಶಗಳೂ ಇವೆ. ಪ್ರತಿ ಹಳ್ಳಿಯಲ್ಲೂ ಒಂದು ಆಸ್ಪತ್ರೆ ಕಡ್ಡಾಯವಾಗಿ ಇರಲೇ ಬೇಕೆಂಬುದು ಅದರಲ್ಲಿ ಪ್ರಮುಖವಾದುದು.

  ‘ಕಾಶಿ ಫ್ರಮ್‌ ವಿಲೇಜ್‌’ ಯಾವುದೇ ಚಿತ್ರದ ರೀಮೇಕಲ್ಲದಿದ್ದರೂ ಈ ಚಿತ್ರ ನೋಡುವಾಗ ಇಲ್ಲಿಯವರೆಗೂ ಬಂದಿರುವ ಬಹಳಷ್ಟು ಅಣ್ಣ-ತಮ್ಮ ಸೆಂಟಿಮೆಂಟಿನ ಚಿತ್ರಗಳು ನೆನಪಿಗೆ ಬರುತ್ತದೆ. ಅಲ್ಲದೆ, ರೌಡಿಗಳಿಗೆ ಮುಂಚೆಯೇ ಎಚ್ಚರಿಕೆ ಕೊಟ್ಟು ಹೊಡೆಯುವ ದೃಶ್ಯವನ್ನು ಅಮಿತಾಬ್‌ ಬಚ್ಚನ್‌ ಅಭಿನಯದ ಹಿಂದಿ ಚಿತ್ರ ‘ ತ್ರಿಶೂಲ್‌’ನಿಂದ ಅಪಹರಿಸಿದಂತೆ ಕಾಣುತ್ತದೆ. ಚಿತ್ರವನ್ನು ಕಡಿಮೆ ಸಮಯದಲ್ಲಿ ಮುಗಿಸಿದ್ದು ಪ್ರತಿ ದೃಶ್ಯದಲ್ಲೂ ಎದ್ದು ಕಾಣುತ್ತದೆ. ಏಕೆಂದರೆ ಬಹಳಷ್ಟು ದೃಶ್ಯಗಳಿಗೆ ಕಂಟಿನ್ಯುಟಿ ಎಂಬುದಿಲ್ಲ. ಯಾವುದ್ಯಾವುದೋ ದೃಶ್ಯಗಳು ಎಲ್ಲಿಂದಲೋ ಧುತ್ತೆಂದು ಪ್ರತ್ಯಕ್ಷವಾಗುತ್ತದೆ. ಕಾಮಿಡಿ, ಸೆಂಟಿಮೆಂಟ್‌, ಸಾಹಸ, ಹಾಡುಗಳು... ಹೀಗೆ ಎಲ್ಲಾ ವಿಭಾಗಗಳಿಗೂ ನ್ಯಾಯ ಸಲ್ಲಿಸಬೇಕೆಂಬ ನಿರ್ದೇಶಕರ ಹಪಹಪಿಯಿಂದಲೋ ಏನೋ ಅವಿಷ್ಟು ದೃಶ್ಯಗಳು ಕೊಂಚ ಅತಿಯಾಯಿತೆಂನಿಸಿದರೆ ಆಶ್ಚರ್ಯವಿಲ್ಲ. ಅದರಲ್ಲೂ ಗ್ರಾಫಿಕ್ಸ್‌ ಮಿಶ್ರಿತ ಸಾಹಸ ದೃಶ್ಯಗಳಂತೂ ಬಹಳ ಬೇಸರ ತರಿಸುತ್ತದೆ.

  ಕೋಟಿ ಸಂಗೀತ ನಿರ್ದೇಶನದಲ್ಲಿ ಮೂರು ತೆಲುಗು ಹಾಡುಗಳ ಟ್ಯೂನ್‌ಗಳು ಯಥಾವತ್ತಾಗಿ ನೇರ ಪ್ರಸಾರವಾಗಿವೆ. ಒಟ್ಟಾರೆ ಎರಡು ಹಾಡುಗಳನ್ನು ಕೇಳಲಡ್ಡಿಯಿಲ್ಲ. ಜೆ.ಜಿ. ಕೃಷ್ಣರ ಛಾಯಾಗ್ರಹಣದಲ್ಲಿ ಅಂಥ ವಿಶೇಷವೇನಿಲ್ಲ.

  (ಸ್ನೇಹ ಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X