»   » ಸಾಂಸ್ಕೃತಿಕ ಘರ್ಷಣೆಗಳ ಮಿಸ್‌ ಕ್ಯಾಲಿಫೋರ್ನಿಯಾ

ಸಾಂಸ್ಕೃತಿಕ ಘರ್ಷಣೆಗಳ ಮಿಸ್‌ ಕ್ಯಾಲಿಫೋರ್ನಿಯಾ

Subscribe to Filmibeat Kannada


ಒಂದು ಪಕ್ಕಾ ಎನ್‌ಆರ್‌ಐ ಚಿತ್ರ ಹೇಗಿರಬೇಕೋ, ಮಿಸ್‌ ಕ್ಯಾಲಿಫೋರ್ನಿಯಾ ಕೂಡ ಹಾಗೆಯೇ ಇದೆ. ಇಲ್ಲಿ ಪೂರ್ವ-ಪಶ್ಚಿಮ ಸಂಸ್ಕೃತಿಗಳ ಹೋರಾಟವಿದೆ, ನಾಗರಿಕತೆ-ವೈಚಾರಿಕತೆಗಳ ಘರ್ಷಣೆಯಿದೆ, ಸರಿತಪ್ಪುಗಳ ತಾಕಲಾಟವಿದೆ. ಆದರೆ ಇಲ್ಲದಿರುವುದು ಆ ಫೀಲ್‌ ಮಾತ್ರ.

  • ಚೇತನ್‌ ನಾಡಿಗೇರ್‌
‘ನಮ್ಮ ಕುಟುಂಬಕ್ಕೆ ನೀನೇ ಅಪರಿಚಿತ. ಅಂಥದ್ರಲ್ಲಿ ನಿನ್ನ ಮಗಳಿಗೆ ನಮ್ಮ ಕುಟುಂಬ, ನಮ್ಮ ಸಂಪ್ರದಾಯ ಸಂಸ್ಕೃತಿಯ ಬಗ್ಗೆ ಏನು ಗೊತ್ತಿರತ್ತೋ? ಅಂತ ಕಣ್ಣೀರು ಸುರಿಸುತ್ತಾನೆ ಆ ಮನೆಯ ಹಿರಿಯ.

ಪಾಪ ಎನ್‌ಆರ್‌ಐ. ರಿಟರ್ನ್ಡ್‌ ಜಾನುಗೆ ನಮ್ಮ ಸಂಸ್ಕೃತಿ ಬಗ್ಗೆ ಏನು ಗೊತ್ತಿರಲ್ಲ. ಏಕೆಂದರೆ ಈಗ್ಬರ್ತೀನಿ ಅಂತ ತೀರ್ಥಹಳ್ಳಿ ಬಿಟ್ಟು ಅಮೆರಿಕ ಸೇರುವ ಅವಳ ತಂದೆ ಇಪ್ಪತ್ತು ವರ್ಷಗಳಾದರೂ ಈ ಕಡೆ ತಲೆ ಹಾಕಿ ಮಲಗುವುದಿಲ್ಲ. ಹಾಗಾಗಿ ಅವಳು ಹುಟ್ಟಿದ್ದು, ಬೆಳೆದಿದ್ದು ಎಲ್ಲ ಅಮೆರಿಕದಲ್ಲೇ. ಅದಕ್ಕೇ ಅಲ್ಲಿನ ಸಂಸ್ಕೃತಿ ಆಕೆಗೆ ಪ್ರಿಯ. ಇಂಗ್ಲಿಷ್‌ ಎಂದರೆ ಅಗ್ರಗಣ್ಯ. ಕನ್ನಡ ನಗಣ್ಯ ಮಿಸ್‌ ಕ್ಯಾಲಿಫೋರ್ನಿಯ ಪಟ್ಟ ಅಲಂಕರಿಸಬೇಕು ಎಂಬುದು ಆಕೆಯ ಒಂದಂಶದ ಆ್ಯಂಬಿಷನ್‌.

ಇಂಥ ಎನ್‌ಆರ್‌ಐ ಜನ್ಮದಲ್ಲೇ ಮೊದಲ ಬಾರಿಗೆ ತನ್ನ ಅಪ್ಪ-ಅಮ್ಮನ ಜತೆ ತೀರ್ಥಹಳ್ಳಿಯ ತಾತನ ಮನೆಗೆ ಬರುತ್ತಾಳೆ. ಬಂದವಳೇ ಇಲ್ಲಿನ ಆಚಾರ ವಿಚಾರ ನೋಡಿ ದಂಗಾಗುತ್ತಾಳೆ. ಅಪ್ಪ ಬಿಸ್ಲೆರಿ ಬಿಟ್ಟು ಹರಿಯುವ ನೀರು ಕುಡಿಯುವುದನ್ನು ನೋಡಿ, ಅದು ಗಲೀಜು ನೀರು ಅಂಥ ಹೌಹಾರುತ್ತಾಳೆ. ತಾತ ಪ್ರೀತಿಯಿಂದ ತಬ್ಬಿಕೊಳ್ಳುವುದಕ್ಕೆ ಬಂದರೆ ಗಲೀಜು ಅಂತ ದೂರ ಸರಿಯುತ್ತಾಳೆ.

ಎಲೆಗೆ ನೀರು ದೋಸೆ ಹಾಕಿದರೆ, ಪಿಜ್ಜಾ ಬೇಕು ಅನ್ನುತ್ತಾಳೆ. ಒಲ್ಲದ ಗಂಡಿನೊಂದಿಗೆ ಮದುವೆಗೆ ಒಪ್ಪಿದವಳಿಗೆ ಓಡಿ ಹೋಗುವುದಕ್ಕೆ ಪ್ರೇರೇಪಿಸುತ್ತಾಳೆ. ಮೊದಲೇ ದೂರವಾಗಿದ್ದ ಆಕೆ ಇದೆಲ್ಲದರ ಮೂಲಕ ತನ್ನ ಕುಟುಂಬದವರಿಗೆ ಇನ್ನಷ್ಟು ದೂರವಾಗುತ್ತಾ ಹೋಗುತ್ತಾಳೆ.

ಆದರೆ ದ್ವಿತೀಯಾರ್ಧದಲ್ಲಿ ಅವಳು ಆಶ್ಚರ್ಯಕರ ರೀತಿಯಲ್ಲಿ ಬದಲಾಗುತ್ತಾಳೆ. ಹಿಂದೊಮ್ಮೆ ಏನೆಲ್ಲ ಆಕ್ಷೇಪಣೆ ಮಾಡಿರುತ್ತಾಳೋ, ಈಗ ಅದೆಲ್ಲ ತಪ್ಪು ಎನ್ನುತ್ತಾಳೆ. ಪ್ರೀತಿ, ವಿಶ್ವಾಸ, ತ್ಯಾಗ ಎಂದರೇನು ಎಂದು ಅರಿಯುತ್ತಾಳೆ. ಇವೆಲ್ಲ ಭಾರತದಲ್ಲಿ ಹೆಚ್ಚಿರುವುದರಿಂದಲೇ ನಮ್ಮ ಸಂಸ್ಕೃತಿ ಗ್ರೇಟ್‌ ಎನ್ನುತ್ತಾಳೆ. ಭಾರತೀಯ ಸಂಸ್ಕೃತಿಯೇ ನಿಜವಾದ ಸಂಸ್ಕೃತಿ ಎಂದು ಅಮೆರಿಕದಲ್ಲೂ ಹೇಳುತ್ತಾಳೆ. ಕೊನೆಗೆ ಮಿಸ್‌ ಕ್ಯಾಲಿಫೋರ್ನಿಯ ಪಟ್ಟ ಅಲಂಕರಿಸುತ್ತಾಳೆ.

ಇದು ಮಿಸ್‌ ಕ್ಯಾಲಿಫೋರ್ನಿಯ ಚಿತ್ರದ ಸಂಕ್ಷಿಪ್ತ ಕತೆ. ಇಲ್ಲಿ ಮಿಸ್‌ ಕ್ಯಾಲಿಫೋರ್ನಿಯ ಒಬ್ಬಳೇ ಅಲ್ಲ, ಅಸಂಖ್ಯ ಪಾತ್ರಧಾರಿಗಳಿದ್ದಾರೆ. ಅವರೆಲ್ಲ ಈ ಸಣ್ಣ ಕತೆಗೆ ಮತ್ತಷ್ಟು ರಕ್ತ-ಮಾಂಸ ತುಂಬಿದ್ದಾರೆ. ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುತ್ತಾರೆ. ಒಂದು ಸಣ್ಣ ಕತೆ ಎರಡೂವರೆ ಗಂಟೆ ಬೆಳೆಯುವುದಕ್ಕೆ ಸಹಕರಿಸುತ್ತಾರೆ. ಒಂದು ಪಕ್ಕಾ ಎನ್‌ಆರ್‌ಐ ಚಿತ್ರ ಹೇಗಿರಬೇಕೋ, ಮಿಸ್‌ ಕ್ಯಾಲಿಫೋರ್ನಿಯಾ ಕೂಡ ಹಾಗೆಯೇ ಇದೆ.

ಇಲ್ಲಿ ಪೂರ್ವ-ಪಶ್ಚಿಮ ಸಂಸ್ಕೃತಿಗಳ ಹೋರಾಟವಿದೆ, ನಾಗರಿಕತೆ-ವೈಚಾರಿಕತೆಗಳ ಘರ್ಷಣೆಯಿದೆ, ಸರಿತಪ್ಪುಗಳ ತಾಕಲಾಟವಿದೆ. ಆದರೆ ಇಲ್ಲದಿರುವುದು ಆ ಫೀಲ್‌ ಮಾತ್ರ. ಹೌದು. ಮಿಸ್‌ ಕ್ಯಾಲಿಫೋರ್ನಿಯದಲ್ಲಿ ಹಲವು ಉತ್ತಮ ದೃಶ್ಯಗಳಿವೆ. ಆದರೆ, ಅವು ಮನಸ್ಸಿಗೆ ಸರಿಯಾಗಿ ನಾಟುವುದಿಲ್ಲ. ಅದಕ್ಕೆ ಕಾರಣ ನಿರೂಪಣೆ. ಮೊದಲಾರ್ಧದಲ್ಲಿ ಚಿತ್ರ ವಿಭಿನ್ನವೆನಿಸಬಹುದು. ಆದರೆ, ದ್ವಿತೀಯಾರ್ಧ ಮಾತ್ರ ಮಾಮೂಲಿ ಜಾಡೇ ಹಿಡಿದಿದೆ.

ನಿರೂಪಣೆಯ ಜತೆಜತೆಗೆ ಅಭಿನಯ ಕೂಡ ಚೆನ್ನಾಗಿದ್ದಿದ್ದರೆ ಚಿತ್ರ ಸ್ವಲ್ಪ ಚುರುಕಾಗಿರುತ್ತಿತ್ತೋ ಏನೋ? ಆದರೆ ದತ್ತಣ್ಣ, ಜಯಂತಿ, ಶರತ್‌ಬಾಬು ಹಾಗೂ ಗೀತಾರನ್ನು ಬಿಟ್ಟರೆ ಇನ್ಯಾರಲ್ಲೂ ಹೆಚ್ಚು ನಿರೀಕ್ಷಿಸುವ ಹಾಗಿಲ್ಲ. ಆದರಲ್ಲೂ ದಿಗಂತ್‌ ಹಾಗೂ ಸೌಮ್ಯ ಮಾಡಲಿಂಗ್‌ಗೆ ಹೇಳಿ ಮಾಡಿಸಿದಂತಿದ್ದಾರೆ. ಎನ್‌ಆರ್‌ಐ ಜಾನು ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾನು ಕೊಂಚ ಅಭಿನಯಿಸಲು ಪ್ರಯತ್ನಪಟ್ಟಿದ್ದಾರೆ. ಚಿತ್ರದಲ್ಲಿ ಇನ್ನೂ ಅಸಂಖ್ಯ ಪಾತ್ರಗಳಿವೆ. ಅವ್ಯಾವುವೂ ಹೆಚ್ಚು ಕಾಲ ನೆನಪಿನಲ್ಲುಳಿಯುವಂತಿಲ್ಲ.

ಚಿತ್ರದ ನಿಜವಾದ ನಾಯಕ ಎ.ಸಿ. ಮಹೇಂದ್ರನ್‌. ಅವರು ಈ ಚಿತ್ರದ ಕ್ಯಾಮೆರಾಮನ್‌. ತೀರ್ಥಹಳ್ಳಿಯಾಗಲಿ, ಕ್ಯಾಲಿಫೋರ್ನಿಯ ಆಗಲಿ, ಎಲ್ಲವನ್ನೂ ಚೆಂದಗಾಣಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ರವಿ ದತ್ತಾತ್ರೇಯರ ಸಂಗೀತ ನಿರ್ದೇಶನದಲ್ಲಿ ಎರಡು ಹಾಡುಗಳು ಕೇಳುವಂತಿವೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada