»   » ‘ಕ್ಷಣ ಕ್ಷಣ’ವೂ ಕೌತುಕ, ಕಾತರ!

‘ಕ್ಷಣ ಕ್ಷಣ’ವೂ ಕೌತುಕ, ಕಾತರ!

Posted By:
Subscribe to Filmibeat Kannada


ಡಾ. ವಿಷ್ಣುವರ್ಧನ್‌ ಪಾತ್ರದ ಅವಶ್ಯಕತೆಯೇ ಇರಲಿಲ್ಲ.. ಆದಿತ್ಯ ಇಂಗ್ಲಿಷ್‌ ಚಿತ್ರದ ಹೀರೊಗಳ ತರಹ ಕಾಣಿಸುತ್ತಾರೆ. ಪ್ರೇಮಾ ಸದಾ ನಿದ್ದೆಗಣ್ಣ ಹುಡುಗಿ.. ಕಿರಣ್‌ ರಾಥೋಡ್‌ ಮತ್ತು ಶ್ರೀದೇವಿಕಾ ಆಟಕ್ಕುಂಟು ಲೆಕ್ಕಕ್ಕಿಲ್ಲ...

ಚಿತ್ರ : ಕ್ಷಣ ಕ್ಷಣ
ನಿರ್ಮಾಣ : ತಿರುಮಲೈ
ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ : ಸುನೀಲ್‌ ಕುಮಾರ್‌ ದೇಸಾಯಿ
ಸಂಗೀತ : ಆರ್‌.ಪಿ.ಪಟ್ನಾಯಕ್‌
ತಾರಾಗಣ : ಡಾ.ವಿಷ್ಣುವರ್ಧನ್‌, ಆದಿತ್ಯ, ಪ್ರೇಮಾ, ಆಶುತೋಷ್‌ ರಾಣಾ, ಶ್ರೀದೇವಿಕಾ, ಕಿರಣ್‌ ರಾಥೋಡ್‌, ದಿಲೀಪ್‌ ರಾಜ್‌, ಉದಯ್‌ ಜಾದೂಗಾರ್‌, ಮ್ಯಾಜಿಕ್‌ ರಮೇಶ್‌ ಮತ್ತಿತರರು.

‘ಗೇಮ್‌ ಬಿಗಿನ್ಸ್‌ ನೌ...’

ಕ್ರೈಂ ಬ್ರಾಂಚ್‌ನ ಡಿ.ಸಿ.ಪಿ. ವಿಷ್ಣು ಗ್ರಾಂಡ್‌ ಎಂಟ್ರಿ ಕೊಟ್ಟು ಮೇಲ್ಕಂಡಂತೆ ಹೇಳುವ ಹೊತ್ತಿಗೆ ಆರ್ಧ ಚಿತ್ರ ಮುಗಿದಿರುತ್ತದೆ. ಅದಕ್ಕೂ ಮುನ್ನ ನಟಿ ಮಾಯಾಗೆ ಇದ್ದಕ್ಕಿದ್ದಂತೆ ಒಂದು ದಿನ ಬೆದರಿಕೆ ಕರೆಗಳು ಬರತೊಡಗುತ್ತವೆ. ‘ನೀನೇನೋ ತಪ್ಪು ಮಾಡಿದ್ದೀಯ. ನಾ ನಿನ್ನ ಬಿಡೋದಿಲ್ಲ... ’ ಎಂಬ ಬೆದರಿಕೆಗಳು ಅವಳನ್ನು ಹಿಂಡಿ ಹಿಪ್ಪೆ ಮಾಡುತ್ತವೆ.

ಇದೇ ಭಯದಲ್ಲಿ ಪೊಲೀಸರ ಕಾವಲು ತೆಗೆದು ಕೊಂಡರೆ ಅದೂ ಪ್ರಯೋಜನವಾಗುವುದಿಲ್ಲ. ಕೊನೆಗೆ ಅವಳ ಬಾಡಿಗಾರ್ಡ್‌ ಆಗಿ ಬರುತ್ತಾನೆ ಸಮರ್ಥ. ಹೆಸರು ಮಾತ್ರವಲ್ಲ, ನಿಜವಾಗಲೂ ಸಮರ್ಥ ಎಂದು ಬಾಂಬ್‌ ಬ್ಲಾಸ್ಟ್‌ನಿಂದ ಆಕೆಯನ್ನು ಪಾರು ಮಾಡುವ ಮೂಲಕ ತೋರಿಸುತ್ತಾನೆ. ಆಕೆಯ ದೃಷ್ಟಿಯಲ್ಲಿ ದೊಡ್ಡವನಾಗುತ್ತಾನೆ.

ಇನ್ನೇನು ಮಾಯಾ ಸೇಫ್‌ ಎಂದು ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ, ಏನೇನೋ ಘಟನೆಗಳು ನಡೆಯುತ್ತವೆ. (ಸ್ವಲ್ಪ ಸಸ್ಪೆನ್ಸ್‌ ಇರಲಿ ಸ್ವಾಮಿ. ಅದನ್ನೂ ಹೇಳಿ ಬಿಟ್ಟರೆ ಹೇಗೆ?). ಇದಕ್ಕಿದ್ದಂತೆ ಅವಳನ್ನು ಕಿಡ್ನಾಪ್‌ ಮಾಡುವುದಕ್ಕೆ ರಾಣಾ ಬರುತ್ತಾನೆ. ಅವನಿಂದ ರಕ್ಷಿಸಲು ಸಮರ್ಥ ಮುಂದಾಗುತ್ತಾನೆ. ಅಷ್ಟರಲ್ಲಿ ‘ದಿ ಗೇಮ್‌ ಬಿಗಿನ್ಸ್‌ ನೌ...’, ಎಂದು ಇವರಿಬ್ಬರಿಂದ ಮಾಯಾಳನ್ನು ಪಾರು ಮಾಡಬೇಕೆಂದು ಡಿ.ಸಿ.ಪಿ. ವಿಷ್ಣು ಪಣತೊಡುತ್ತಾನೆ. ಇದ್ದಕ್ಕಿದ್ದಂತೆ ಮಯಾ ನಿಗೂಢವಾಗಿ ಕಣ್ಮರೆಯಾಗಿರುತ್ತಾಳೆ. ಇಷ್ಟಕ್ಕೂ ಮಾಯಾ ಎಲ್ಲಿ? ‘ಕ್ಷಣ ಕ್ಷಣ’ ...

ನಿಮಗೆ ಅಗಾಥಾ ಕ್ರಿಸ್ತೀ ಕಾದಂಬರಿಗಳು ಓದಿದ ನೆನಪಿರಬೇಕಲ್ಲಾ? ಒಂದು ಕತೆ ಸರಳವಾಗಿ ಶುರುವಾಗುತ್ತದೆ. ಕ್ರಮೇಣ ಪಾತ್ರಧಾರಿಗಳು, ಘಟನೆಗಳು ಹೆಚ್ಚುತ್ತಾ ಹೋಗುತ್ತವೆ. ಹೆಚ್ಚಿದಂತೆಲ್ಲಾ ಥ್ರಿಲ್‌, ಚಿಲ್ಸ್‌, ಟೆನ್ಷನ್‌... ಈ ತರಹದ್ದೊಂದು ಪ್ರಯತ್ನವನ್ನು ದೇಸಾಯಿ ಎಷ್ಟೋ ಹಿಂದೆಯೇ ‘ತರ್ಕ’ ಮೂಲಕ ಮಾಡಿದ್ದರು. ಈಗ ಮತ್ತೆ ಈ ಚಿತ್ರದ ಮೂಲಕ ಅಂಥದ್ದೊಂದು ಪ್ರಯತ್ನವನ್ನು ಮಾಡಿದ್ದಾರೆ. ಆ ರೀತಿಯ ಥ್ರಿಲ್‌, ಚಿಲ್ಸ್‌, ಟೆನ್ಷನ್‌ ... ಕಾಪಾಡಿಕೊಳ್ಳುವಲ್ಲಿ ದೇಸಾಯಿ ಅಲ್ಲಿ ಗೆದ್ದಿದ್ದರು. ಇಲ್ಲಿ ಅದು ಪೂರ್ಣವಾಗಿಲ್ಲ ಅಷ್ಟೇ.

ಚಿತ್ರದ ಮೊದಲಾರ್ಧದಲ್ಲಿ ಕತೆ ಬಿಚ್ಚಿಕೊಳ್ಳುವ ರೀತಿ ಸೂಪರ್‌. ಅದೇ ದ್ವಿತೀಯಾರ್ಧದಲ್ಲಿ ಅವರು ಎಡವಿದ್ದಾರೆ. ಪಾತ್ರ ಹೆಚ್ಚಿದಂತೆಲ್ಲಾ ಕಳೆದು ಹೋಗಿದ್ದಾರೆ. ಚಿತ್ರ ಹೇಗೆ ಮುಗಿಸಬೇಕೆಂದು ಗೊಂದಲಕ್ಕೀಡಾಗಿದ್ದಾರೆ. ಹಾಗಾಗಿ ಹೇಗೋ ಶುರುವಾಗುವ ಕತೆ, ಇನ್ನೆಲ್ಲಿಗೋ ಹೋಗಿ, ಮತ್ತೆಲ್ಲೋ ಮುಗಿಯುತ್ತದೆ. ನಿಮಗೆ ಕಳ್ಳ ಯಾರು ಎಂದು ಗೊತ್ತಾಗಿದ್ದರೆ ಆಶ್ಚರ್ಯವೇನಿಲ್ಲ.

ಇನ್ನೊಂದು ಮೈನಸ್‌ ಪಾಯಿಂಟ್‌ ಚಿತ್ರದ ಉದ್ದ. ಸಸ್ಪೆನ್ಸ್‌ ಯಾವಾಗಲೂ ಚಿಕ್ಕದಾಗಿದ್ದರೆ ಚೆನ್ನ. ಇಲ್ಲಿ ಒಂದು ಚೌಕಟ್ಟಿಲ್ಲದೆ ಚಿತ್ರ ಅಷ್ಟು ದೊಡ್ಡದಾಗಿದೆಯೋ? ಅಥವಾ ಬೇಕೆಂದೆ ಹಾಗೆ ಮಾಡಲಾಗಿದೆಯೋ ಗೊತ್ತಿಲ್ಲ. ಒಂದೆರಡು ಹಾಡುಗಳು, ಒಂದಿಷ್ಟು ದೃಶ್ಯಗಳನ್ನು ಕತ್ತರಿಸಿದರೆ ಚಿತ್ರಕ್ಕೆ ಮೋಸವೇನು ಆಗುವುದಿಲ್ಲ.

ಅದರಲ್ಲೂ ಡಾ. ವಿಷ್ಣುವರ್ಧನ್‌ ಪಾತ್ರದ ಅವಶ್ಯಕತೆಯೇ ಇರಲಿಲ್ಲ. ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮ್ಯಾನರಿಸಂನಿಂದ ನೆನಪಿನಲ್ಲಿ ಉಳಿಯುತ್ತಾರೆ. ಆದಿತ್ಯ ಇಂಗ್ಲಿಷ್‌ ಚಿತ್ರದ ಹೀರೊಗಳ ತರಹ ಕಾಣಿಸುತ್ತಾರೆ. ಪ್ರೇಮಾ ಸದಾ ನಿದ್ದೆಗಣ್ಣ ಹುಡುಗಿಯಾಗಿದ್ದಾರೆ. ಕಿರಣ್‌ ರಾಥೋಡ್‌, ಶ್ರೀದೇವಿಕಾ ಆಟಕ್ಕುಂಟು ಲೆಕ್ಕಕ್ಕಿಲ್ಲ. ದಿಲೀಪ್‌ರಾಜ್‌, ಕಿಶೋರ್‌, ಅಶುತೋಷ್‌ ರಾಣಾ ತಮ್ಮ ಪಾತ್ರಗಳಲ್ಲಿ ಮಿಂಚುತ್ತಾರೆ.

ತಾಂತ್ರಿಕವಾಗಿ ಚಿತ್ರ ಶ್ರೀಮಂತವಾಗಿದೆ. ಪ್ರತಿಯಾಂದು ದೃಶ್ಯವೂ ರಿಚ್ಚಾಗಿರುವುದಕ್ಕೆ ದೇಸಾಯಿ ವಹಿಸಿದ ಶ್ರಮ ಕಡಿಮೆಯೇನಲ್ಲ. ಛಾಯಾಗ್ರಾಹಕ ಪ್ರಭಾಕರ್‌ ಪಾತ್ರ ಕಡಿಮೆಯೇನಲ್ಲ.

ಸಸ್ಪೆನ್ಸ್‌ ಚಿತ್ರಗಳಿಗೆ ಹಿನ್ನೆಲೆ ಸಂಗೀತ ಮುಖ್ಯ. ಆರ್‌.ಪಿ. ಪಟ್ನಾಯಕ್‌ ಇಲ್ಲಿ ಇನ್ನಷ್ಟು ಶ್ರಮವಹಿಸಬೇಕಿತ್ತು. ಅಂತಿಮವಾಗಿ ಚಿತ್ರ ಒಂದು ರೂಪಕ್ಕೆ ಬರಬೇಕಾದರೆ ಅದರ ಹಿಂದೆ ಸಂಕಲನಕಾರ ಬಿ.ಎಸ್‌. ಕೆಂಪರಾಜು ಕೆಲಸ ದೊಡ್ಡದಿದೆ. ಸಾಧ್ಯವಾದಷ್ಟು ಸೊಗಸಾಗಿ ನಿರ್ವಹಿಸಿದ್ದಾರೆ.

ಈ ಚಿತ್ರದ ಮೊದಲ ದಿನವೇ ಹೌಸ್‌ಫುಲ್‌ ಮಾಡುತ್ತೇನೆ ಎಂದು ದೇಸಾಯಿ ಪ್ರತಿಜ್ಞೆ ಮಾಡಿದ್ದರು. ಅದಂತೂ ನಿಜವಾಗಿದೆ. ಮುಂದೆ ಹೇಗೋ ಗೊತ್ತಿಲ್ಲ?

‘ಕ್ಷಣ ಕ್ಷಣ’ ಚಿತ್ರದ ಗ್ಯಾಲರಿ ನೋಡಲು ಇಲ್ಲಿ ಕ್ಲಿಕ್ಕಿಸಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada