For Quick Alerts
  ALLOW NOTIFICATIONS  
  For Daily Alerts

  ‘ಹೃದಯವಂತ’ನೆಂಬ ಭಗವಂತನ ಕಥೆಯಿದು

  By Staff
  |

  *ಮಹೇಶ್‌ ದೇವಶೆಟ್ಟಿ

  ‘ನಿಮ್ಮ ದುಡ್ಡನ್ನು ನಮಗೆ ಕೊಟ್ಟು ಹೊಟ್ಟೆಗೆ ಅನ್ನ ಹಾಕಿದ್ದೀರಿ. ನೀವೇ ನಮ್ಮ ಪಾಲಿನ ದೇವರು’. ಜನರು ಎರಡೂ ಕೈ ಎತ್ತಿ ಸಂಭವಾಮಿ ಯುಗೇ ಯುಗೇ ಅಂತಾರೆ. ವಿಷ್ಣು ಕೈ ಜೋಡಿಸಿ ನಮಸ್ಕರಿಸುತ್ತಾರೆ.

  ‘ಪತ್ನಿಯಷ್ಟೇ ಪತಿಯನ್ನು ಗೌರವಿಸಬೇಕೆಂಬುದನ್ನು ಒಪ್ಪುವುದಿಲ್ಲ . ಪತಿ ಕೂಡ ಪತ್ನಿಯನ್ನು ನೀವು, ತಾವು ಎಂದು ಕರೆಯಬೇಕು. ಅದು ಗೌರವ’ ವಿಷ್ಣು ಮಾತನ್ನು ಕೇಳಿ ನಗ್ಮಾ ಕಣ್ಣಲ್ಲಿ ನೀರಿನ ಮಹಾಪೂರ. ದೇವರಂತಹ ಗಂಡನನ್ನು ಪಡೆದಿದ್ದು ನನ್ನ ಪುಣ್ಯ ಎನ್ನುತ್ತಾ ಕೈ ಎತ್ತಿ ನಮಸ್ಕಾರ. ವಿಷ್ಣು ಪ್ರತಿ ನಮಸ್ಕಾರ.

  ‘ದೇವಸ್ಥಾನದ ಕಳಸ ಎಷ್ಟು ಎತ್ತರವಿದ್ದರೇನು? ದೇವರಗುಡಿ ಮಾತ್ರ ಚಿಕ್ಕದಾಗಿಯೇ ಇರುತ್ತೆ. ಅಣ್ಣನಿರುವ ಮನೆಯೇ ನನಗೆ ದೇವಸ್ಥಾನ. ಆತನೇ ನನಗೆ ದೇವರು’ ಎಂದು ಅನು ಪ್ರಭಾಕರ್‌ ಅಣ್ಣನನ್ನು ಅಪ್ಪಿಕೊಂಡು 8 ಡ್ರಾಪ್‌ ಕಣ್ಣೀರು ಸುರಿಸುತ್ತಾಳೆ. ವಿಷ್ಣು ಎರಡೂ ಕೈ ಎತ್ತಿ ...

  ಜನರ ಪಾಲಿಗೆ ಯಜಮಾನರೇ ದೇವರು. ಪತ್ನಿಗೆ ಆತನೇ ಪರದೈವ. ತಂಗಿಗೆ ಸಾಕ್ಷಾತ್‌ ವಿಷ್ಣು ಪರಮಾತ್ಮ. ನಾಯಕನಿಗೆ ಜನರೇ ದೇವಾನುದೇವತೆಗಳು. ಎಲ್ಲಿ ನೋಡಿದರೂ ಆ ದೇವರ ಭಕ್ತಾದಿಗಳು, ಪೂಜಾರಿಗಳು. ಹಾಗಂತ ಇದನ್ನು ಭಕ್ತಿ ಪ್ರಧಾನ ಸಿನಿಮಾ ಎಂದು ಅಪಾರ್ಥ ಮಾಡಿಕೊಳ್ಳಬೇಡಿ. ಇದು ದಾನವ ಮಾನವನಾಗುವ ಕತೆ. ಈ ನಡುವೆ ನಾಯಕನ ದಾದಾಗಿರಿಯ ದಿನಗಳು, ಪ್ರೇಮದ ಆಲಾಪ, ತಂಗಿಯಾಂದಿಗಿನ ಅನ್ಯೋನ್ಯತೆ, ರೈತರ ವ್ಯಥೆಗೆ ಸಂಕಟಪಡುವ ಪಕ್ಕಾ ಜವಾರಿ ಉಪಕತೆಗಳು ಇವೆ.

  ಏಕಾಏಕಿ ಭಗವಂತನೇ ಭೂಮಿ ಮೇಲೆ ಬಂದರೆ ಏನಾಗಬಹುದು? ಅಂಥದ್ದೊಂದು ಸಾಕ್ಷಾತ್ಕಾರ ಮಾಡಿಕೊಂಡು ನಿರ್ದೇಶಕ ಪಿ.ವಾಸು ಕಥೆ ಹೆಣೆದಿದ್ದಾರೆ. ಸಂಭಾಷಣೆ ಹೊಸೆದಿದ್ದಾರೆ. ವಿಷ್ಣು ಅಭಿಮಾನಿಗಳಿಗೆ ಏನು ಬೇಕೆಂಬುದು ಅವರಿಗೆ ಗೊತ್ತಾಗಿದೆ. ಅದೆಲ್ಲವನ್ನೂ ಹೃದಯದಲ್ಲಿ ತುಂಬಿಕೊಂಡು ‘ಹೃದಯವಂತ’ಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.

  ಅಭಿನವ ಭಗವಂತನಂತೆ ಕಾಣಿಸಿಕೊಂಡಿರುವ ವಿಷ್ಣು ಅಧಕ್ಕೆ ತಕ್ಕಂತೆ ಸಹಜಾಭಿನಯ ಚಾತುರ್ಯ ತೋರಿಸಿದ್ದಾರೆ. ಆದರೆ ಅವರು ‘ತಂಗಿಯೇ... ತಂಗಿಯೇ...’ ಹಾಡಿನಲ್ಲಿ ಥೇಟ್‌ ಅಣ್ಣನಾದಾಗ, ತಂಗಿಯ ಪಾದವನ್ನು ಕಕ್ಕುಲತೆಯಿಂದ ಮುಟ್ಟುವಲ್ಲಿ ನಿಜವಾದ ಕಲಾವಿದರಾಗಿದ್ದಾರೆ. ಅಮ್ಮ ಸತ್ತಿದ್ದನ್ನು ಬಟ್ಲರ್‌ ಇಂಗ್ಲಿಷಿನಲ್ಲಿ ಹೇಳುವಾಗ ಅರ್ಥಪೂರ್ಣ ಕಣ್ಣೀರಿಗೆ ಕಾರಣವಾಗಿದ್ದಾರೆ.

  ಅವರ ಸಮನಾಗಿ ನಿಂತದ್ದು ಅನು ಪ್ರಭಾಕರ್‌. ಚಿಕ್ಕದಾದರೂ ಪ್ರೀತಿ ಮೂಡಿಸುವ ಪಾತ್ರವದು. ಶಿವರಾಂ, ರೇಣುಕಾ ಪ್ರಸಾದ್‌ ಮತ್ತು ನಗ್ಮಾ ಪೂಜಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಶೋಭರಾಜ್‌ ಅದೇ ರಫ್‌ ಅಂಡ್‌ ಟಫ್‌. ಮೂರು ಹಾಡುಗಳಲ್ಲಿ ಹಂಸಲೇಖ ಮನಸ್ಸು ತುಂಬುತ್ತಾರೆ.

  ಅಂದಹಾಗೆ, ವಿಷ್ಣು ಆಗಾಗ ಹೇಳುತ್ತಿರುತ್ತಾರೆ. ‘ನಮ್ಮಲ್ಲಿರೋದು ಕೇವಲ ನಲವತ್ತೇ ಕತೆ. ಅವುಗಳನ್ನೇ ಅದಲುಬದಲು ಮಾಡಿ ಸಿನಿಮಾ ಮಾಡಬೇಕು’. ಬಹುಶಃ ಅದೇ ಕಾರಣದಿಂದ ಚಿತ್ರದ ಮೂಲ ಹಂದರ 2 ವರ್ಷಗಳ ಹಿಂದೆ ಅವರೇ ನಟಿಸಿದ ‘ಕೋಟಿಗೊಬ್ಬ’ದಂತಿದ್ದರೂ ತಲೆ ಕೆಡಿಸಿಕೊಂಡಿಲ್ಲವೇನೋ... ಭಕ್ತಾದಿಗಳು ಕ್ಷಮಿಸಿ ಹರಸಬೇಕು......

  (ಸ್ನೇಹಸೇತು : ವಿಜಯ ಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X