For Quick Alerts
  ALLOW NOTIFICATIONS  
  For Daily Alerts

  ರೈಟ್ ರಾಂಗಾಯ್ತು! ಯಾರಾದ್ರೂ ಪ್ರೇಕ್ಷಕರನ್ನು ಕಾಪಾಡಿ!

  By Staff
  |

  ನಮ್ಮಲ್ಲಿನ ಕಲಾವಿದರನ್ನೇ ಬಳಸಿಕೊಂಡು ವಿಭಿನ್ನ ಕತೆಯ ಚಿತ್ರ ಮಾಡಬಹುದೆಂಬ ಪ್ರಯತ್ನಕ್ಕೆ ಬೆನ್ನುತಟ್ಟುವ ಹಾಗಿದ್ದರೆ ಸಿನಿಮಾ ನೋಡೋಕೆ ಬರೋದು ರೈಟು. ಆದ್ರೆ ಹೆಂಗಸರು ಮಕ್ಕಳನ್ನು ಕರೆತಂದು ಕತೆ ನಂ.3,4ನ್ನು ನೋಡಿ ಅವರು ರಾಂಗ್ ಆದರೆ ನಾವು ಜವಾಬ್ದಾರರಲ್ಲ.

  • ವಿನಾಯಕ ರಾಮ್ ಕಲಗಾರು

  ದಶಕದ ಹಿಂದೆ ಉಪೇಂದ್ರ 'ಎ'ಎಂಬ ವಿಭಿನ್ನ ಚಿತ್ರ ಕೊಟ್ಟು ಗೆದ್ದಿದ್ದರು. ಕಳೆದ ವಾರ ತೆರೆಕಂಡ 'ರೈಟ್ ಆದ್ರೆ'ಸಿನಿಮಾನೂ ಒಂಥರಾ ಹಾಗೇನೇ.(ಎಲ್ಲೆಡೆ ರಾರಾಜಿಸುತ್ತಿರುವ ಸಿನಿಮಾ ಪೋಸ್ಟರ್ ನೋಡಿ ಹಾಗಂತ ನಿಮಗೂ ಅನ್ನಿಸಿರಬಹುದು.)

  ಶರವಣ ನಿರ್ದೇಶನದ ಈ ಚಿತ್ರದ ಮೊದಲರ್ಧದ ತನಕ ರೈಟೋ ರಾಂಗೋ ಏನೂ ಗೊತ್ತಾಗೋದಿಲ್ಲ. ಕಾಕತಾಳೀಯ ನೋಡಿ, ಇದಕ್ಕೂ ಸೆನ್ಸಾರ್ ಬಳಗ ಎ ಸರ್ಟಿಫಿಕೇಟ್ ಕೊಟ್ಟಿದೆ. ಆದರೆ 'ಎ' ಚಿತ್ರದಲ್ಲಿ ಬುದ್ಧಿವಂತರಿಗೆ ಮಾತ್ರ ಅಂತಿತ್ತು. ಇದನ್ನು ಅತೀ ಬುದ್ಧಿವಂತರೂ ಅರಗಿಸಿಕೊಳ್ಳೋದು ಕಷ್ಟ. ಕಾರಣ ಸಿಂಪಲ್. ಇರುವ ಎರಡೂವರೆ ಗಂಟೆಯಲ್ಲಿ ಒಂದು ಕತೆ ಹೇಳೋದೇ ಕಷ್ಟ. ಅಂತದ್ದರಲ್ಲಿ ನಾಲ್ಕು 'ಭಯಂಕರ'ಕತೆಗಳನ್ನಾಧರಿಸಿ ಸಿನಿಮಾ ಮಾಡಿದ್ದೇ ಎಡವಟ್ಟಾಗಿದೆ. ಎಲ್ಲಾ ಅರ್ಥ ಆಗಬೇಕಾದರೆ ಮೊದಲು ಕತೆ ಸಾರಾಂಶ ಕೇಳಿ :

  ಕತೆ 1 : ಸ್ಲಮ್ ಹುಡುಗ ಸೂರಿ. ಮಾತು ಬಾರದ ತಾಯಿ. ಜತೆಗೆ ಓದೋ ಹುಡುಗಿ ಪೂರ್ಣಿಮಾ. ಕುಡುಕ, ತಲೆಹಿಡುಕ ಅಪ್ಪ. ಸೂರಿಗೆ ಪೂರ್ಣಿಯೆಂದರೆ ತಾಯಿಗಿಂತಲೂ ಹೆಚ್ಚು. ತಾಯಿಗೆ ಪ್ರಪಂಚಕ್ಕಿಂತಲೂ ಮಗ ಹೆಚ್ಚು. ತಾಯಿ ಬೆಂಕಿಗಾಹುತಿಯಾದಾಗ ಅವಳೇನು ಎನ್ನುವುದು ಸೂರಿಗೆ ಅರ್ಥವಾಗುತ್ತದೆ. ಈತ ದುಡಿಯೋದು ತುಡಿಯೋದು ಪೂರ್ಣಿಗಾಗಿ. ಆದ್ರೆ ತಂದೆ ಹಣಕ್ಕಾಗಿ ಹೆತ್ತವಳನ್ನೇ ಮಾರಲು ಮುಂದಾಗುತ್ತಾನೆ.. ರೈಟ್ ಮುಂದೆ?

  ಕತೆ 2 : ಧನ್ಯ ಮತ್ತು ಬ್ರಹಸ್ಪತಿ ಹೈಸ್ಕೂಲ್ ಪಿಳ್ಳೆಗಳು. ಜತೆಗೆ ಲವ್ ಬೇರೆ ಕೇಡು. ಕ್ಲಾಸಲ್ಲೂ ಅದೇ ಮಾಸಲ್ಲೂ ಅದೇ. ಮನೆ ಬಿಟ್ಟು ಓಡಿಹೋಗ್ತಾರೆ. ಆದ್ರೆ ರಾಜ್ ಕುಮಾರ್ ಶ್ರಾವಣಬಂತು ಸಿನಿಮಾ ನೋಡಿ ಬದುಕೇನು ಎಂದು ಮನಗಂಡು ಮತ್ತೆ ಮನೆ ಸೇರ್ತಾರೆ.. ರೈಟ್ ಮುಂದೆ?

  ಕತೆ 3 : ಸಿನಿಮಾತಾರೆ ಪಲ್ಲವಿ ಇನ್ನೂ ಕಾಲೇಜ್ ಹುಡುಗಿ. ಸಾಕಷ್ಟು ಬಿಎಫ್(ಬಾಯ್ ಫ್ರೆಂಡ್)ಗಳ ಸಹವಾಸ ಮಾಡಿರ್ತಾಳೆ. ಹುಡುಗರೆಂದರೆ ಅವಳಿಗೆ ಕಬ್ಬಿನ ಜಲ್ಲೆಯಂತೆ. ಅಲ್ಲದೇ 'ಶೂಟಿಂಗ್ 'ನಲ್ಲಿ ಸಾಕಷ್ಟು ಬ್ಯುಸಿ. ಮುಗ್ದ ಜಾನ್ ಅವಳನ್ನು ತನಗಿಂತ ಹೆಚ್ಚು ಪ್ರೀತಿಸ್ತಾನೆ. ಅವಳು ದುಡ್ಡನ್ನು ಪ್ರೀತಿಸ್ತಾಳೆ. ಅವಳ ಅಸಲಿ ಲೀಲೆಗಳು ಅವನಿಗೆ ಗೊತ್ತಾಗಿ ಕೊನೆಗೆ ರೈಲ್ವೆ ಟ್ರ್ಯಾಕ್ ಅಡಿಗೆ ಮಲಗುತ್ತಾನೆ. ಆದ್ರೆ ಪಲ್ಲವಿ ಪ್ರಣಯ ಪ್ರಸಂಗಗಳು ಕ್ಯಾಸೆಟ್ ರೂಪ ಪಡೆದು ಪ್ರಸಾರಗೊಳ್ಳುತ್ತವೆ. ರೈಟ್ ಮುಂದೆ?

  ಕತೆ 4 : ಕಾಲೇಜ್ ಹುಡುಗಿ ಉಮಾ ಎಲ್ಲಾ ಇದ್ರೂ ಅನಾಥೆ. ಶಂಕರ್ ನಾಗ್ ಕಟ್ಟಾ ಅಭಿಮಾನಿ. ಜತೆಯಲಿ ಜತೆಜತೆಯಲಿ ಇರುವೆನು ಎಂದೂ ಹೀಗೆ ಎನ್ನುವ ಜೀವಕ್ಕಾಗಿ ಹಪಹಪಿಸುತ್ತಿರುತ್ತಾಳೆ. ಆಗ ಜಾನ್ ಅಬ್ರಹಾಂ ತರ ಇರುವ ಅನಾಥ ಹುಡುಗ ಸಿಗುತ್ತಾನೆ.ಆದ್ರೆ ಅವ ಒಂಥರಾ ಒರಟ. ರೈಟ್ ಮುಂದೆ?

  ನಿರ್ದೇಶಕರು ಹೊಸತೇನನ್ನೋ ಹೇಳಲು ಹೋಗಿ ಪ್ರಣಯ ಪ್ರಸಂಗಗಳ ಕಡೆ ಹೆಚ್ಚು ಗಮನ ಹರಿಸಿದಂತಿದೆ. ಪಲ್ಲವಿ, ಉಮಾ ಪಾತ್ರಧಾರಿಣಿಯರಲ್ಲಿರುವ ಪ್ರತಿಭೆಯನ್ನು ಕಷ್ಟಪಟ್ಟು ಹೊರಹಾಕಿಸಿದ್ದಾರೆ. ಪೋಷಕ ಪಾತ್ರಗಳನ್ನು ಇನ್ನಷ್ಟು ಚೆನ್ನಾಗಿ ಬಳಿಸಿಕೊಳ್ಳಬಹುದಿತ್ತು. ರಮೇಶ್ ಭಟ್, ತಾರಾ, ಟೆನ್ನಿಸ್, ಆದಿತ್ಯ.. ಅಚ್ಚುಕಟ್ಟಾಗಿ ದುಡಿದಿದ್ದಾರೆ. ನಮ್ಮಲ್ಲಿನ ಕಲಾವಿದರನ್ನೇ ಬಳಸಿಕೊಂಡು ವಿಭಿನ್ನ ಕತೆಯ ಚಿತ್ರ ಮಾಡಬಹುದೆಂಬ ಪ್ರಯತ್ನಕ್ಕೆ ಬೆನ್ನುತಟ್ಟುವ ಹಾಗಿದ್ದರೆ ಸಿನಿಮಾ ನೋಡೋಕೆ ಬರೋದು ರೈಟು. ಆದ್ರೆ ಹೆಂಗಸರು ಮಕ್ಕಳನ್ನು ಕರೆತಂದು ಕತೆ ನಂ.3,4ನ್ನು ನೋಡಿ ಅವರು ರಾಂಗ್ ಆದರೆ ನಾವು ಜವಾಬ್ದಾರರಲ್ಲ.

  (ಸ್ನೇಹ ಸೇತು : ವಿಜಯ ಕರ್ನಾಟಕ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X