For Quick Alerts
  ALLOW NOTIFICATIONS  
  For Daily Alerts

  ‘ಸರ್ದಾರ’ನ ತುಂಬ ಶ್ರೀನಿವಾಸ ಬಿಂಬ !

  By Staff
  |
  • ಮಹಾಂತೇಶ ಬಹಾದುಲೆ
  ಪ್ರೇಕ್ಷಕ ಅಂದುಕೊಂಡಂತೆ ಇಲ್ಲಿ ಯಾವುದೂ ನಡೆಯುವುದಿಲ್ಲ. ಆರಂಭದಿಂದ ಕೊನೆಯವರೆಗೂ ಪ್ರತಿ ಸನ್ನಿವೇಶಗಳಲ್ಲೂ ಸತ್ಯಾಂಶವನ್ನು ಮರೆಮಾಚಿ, ನಂತರ ನಿಜವನ್ನು ಹೇಳುವುದಿದೆಯಲ್ಲ , ಅದು ನೋಡುಗರನ್ನು ಮೆಚ್ಚಿಸದೇ ಬಿಡುವುದಿಲ್ಲ. ಇದರೊಂದಿಗೆ ಕನ್ನಡದ ಇತ್ತೀಚೆನ ಚಿತ್ರಗಳಲ್ಲೇ ‘ಸರ್ದಾರ’ ಭಿನ್ನವಾಗಿ ನಿಲ್ಲುತ್ತದೆ. ಅಪರೂಪದ್ದೆನಿಸುತ್ತದೆ. ವಿಶೇಷವೆಂದರೆ ಇದು ರೀಮೇಕಲ್ಲ .

  ಹಳ್ಳಿಗಾಡಿನ ಸೊಗಡು,ಆ ಊರಿಗೊಬ್ಬ ಗೌಡ, ಅವನ ಮಗಳು, ಗೌಡನ ಮನೆಯಲ್ಲೊಬ್ಬ ಕೆಲಸದಾಳು,ಗೌಡನ ಮಗಳು ಹಾಗೂ ಅಳಿಯ ನಡುವೆ ಪ್ರೇಮ, ಅದಕ್ಕೆ ವಿಘ್ನಗಳು ಬರುವ ಅನೇಕ ಕಥೆಗಳು ಕನ್ನಡದಲ್ಲಿ ತೆರೆಯ ಮೇಲೆ ಕಂಡಿವೆ. ಸರ್ದಾರ ಕೂಡ ಇಂಥದೇ ಎಳೆ ಇರುವ ಚಿತ್ರವಾದರೂ, ಅಂತಿಮ ಘಟ್ಟದವರೆಗೂ ವಿಭಿನ್ನವಾಗಿ ಹೇಳುತ್ತ , ಪ್ರೇಕ್ಷಕನನ್ನು ಹಿಡಿದು ಕೂಡಿಸುವ ನಿರ್ದೇಶಕ ಪಿ. ಎನ್‌. ಸತ್ಯ ಅವರ ಯೋಚನಾ ಲಹರಿ ಅದ್ಬುತ.

  ಮಾಜ (ದರ್ಶನ್‌) ಅನಾಥ. ಪೂಜಾರಿಯಾಬ್ಬನ ಆಶ್ರಯದಲ್ಲಿ ಬೆಳೆದು, ಗೌಡನ (ಶ್ರೀನಿವಾಸ ಮೂರ್ತಿ) ಮನೆಯಲ್ಲಿ ಕೆಲಸಕ್ಕಿದ್ದು ಆತನ ನಂಬಿಕೆಗೆ ಪಾತ್ರನಾಗುವ ‘ ಸಾಕಿದ ಹುಲಿ’.

  ಇಂಥ ಗೌಡನ ಮಗಳು ಪ್ರಿಯಾ (ಗುರ್ಲಿನ್‌ ಛೋಪ್ರಾ). ದೂರದ ಊರಿನಲ್ಲಿ ಕಾಲೇಜು ಕಲಿತು ತನ್ನೂರಿಗೆ ಬರುತ್ತಾಳೆ. ಮಾದನ ಮುಗ್ಧತೆ, ಪ್ರಾಯಾಣಿಕತೆ ಅವಳನ್ನು ಸೆಳೆಯುತ್ತದೆ. ಆತನಿಗೆ ‘ ಐ ಲವ್‌ ಯೂ’ ಎಂದು ಹೇಳಿಯೇ ಬಿಡುತ್ತಾಳೆ.

  ಬೇರೆ ಚಿತ್ರಗಳಂತೆ ಇಲ್ಲಿ ಗೌಡ ಇದನ್ನು ಪ್ರತಿಭಟಸುವುದಿಲ್ಲ. ಒಪ್ಪುತ್ತಾನೆ (?).

  ಇನ್ನೇನು ಮದುವೆಯಾಗುತ್ತದೆ ಎನ್ನುವಷ್ಟರಲ್ಲೇ ಮಾದನ ಸಾಕು ತಂದೆ ಪೂಜಾರಪ್ಪ (ಲೋಕನಾಥ) ಬಂದು ಮಾದನ ಹಾಗೂ ಪ್ರಿಯಾ ಅಣ್ಣ-ತಂಗಿ ಎಂದು ಹೇಳಿ ‘ಬಾಂಬ್‌’ ಸಿಡಿಸುತ್ತಾನೆ.

  ಪ್ರಿಯಾಳ ಮದುವೆ ಬೇರೆಯವನ ಜತೆ ನೆರವೇರುತ್ತದೆ. ಇತ್ತ ಗೌಡನ ನಿಜರೂಪ ಬಯಲಾಗುತ್ತದೆ.ತನ್ನ ಪತಿಯಾಂದಿಗೆ ಬೆರೆಯಲು ಪ್ರಿಯಾ ಸುತಾರಾಂ ಒಪ್ಪದ ಹಿನ್ನೆಲೆಯಲ್ಲಿ ಆಕೆಯ ಗಂಡನೇ, ಮಾದನಿಗೆ ಪ್ರಿಯಾಳನ್ನು ಮದುವೆಯಾಗಲು ಕೇಳಿಕೊಳ್ಳುತ್ತಾನೆ.

  ಆದರೆ ಪ್ರೀತಿ,ಪ್ರೇಮದ ಒತ್ತಾಸೆಗೆ ಮಣಿದು ಮಾದ ಅವಳನ್ನು ಮದುವೆಯಾಗುತ್ತಾನೋ, ಇಲ್ಲವೊ ಎಂಬುದನ್ನು ತೆರೆಯ ಮೇಲೆಯೇ ನೋಡಬೇಕು.

  ನಾಯಕ ದರ್ಶನ್‌ ಕೂಡ ಸಂದರ್ಭಗಳಿಗೆ ತಕ್ಕಂತೆಯೇ ಮಿಂಚಿದ್ದಾರೆ. ನಾಯಕಿ ಗುರ್ಲಿನ್‌ ಅಭಿನಯ ಪರವಾಗಿಲ್ಲ. ಹಾಡುಗಳಲ್ಲಿ ಮಾಧುರ್ಯದ ಕೊರತೆ ಎದ್ದುಕಾಣುತ್ತದೆ. ಎರಡು ಪ್ರೇಮಗೀತೆಗಳನ್ನು ಬಿಟ್ಟರೆ ಉಳಿದೆಲ್ಲವೂ ಜಾತ್ರೆಯಲ್ಲಿ ಕಾಣುವ ‘ಹುಲಿ ಕುಣಿತ’ ದಂಥ ಹಾಡುಗಳೇ.

  ದ್ವಂದ್ವರ್ಥ, ಅಶ್ಲೀಲತೆ ಇಲ್ಲದೇ ಇರುವ ಹಾಸ್ಯ ಚಿತ್ರದ ಪ್ಲಸ್‌ ಪಾಯಿಂಟ್‌.ಬಿಗಿಯಾದ ನಿರೂಪಣೆ, ಎಡಿಟಿಂಗ್‌ನಿಂದಾಗಿ ಚಿತ್ರ ಎಲ್ಲಿಯೂ ಬೋರ್‌ ಎನಿಸುವುದಿಲ್ಲ.

  ಎಚ್‌.ಆರ್‌.ರಾಜಶೇಖರ್‌ ಚಿತ್ರದ ನಿರ್ಮಾಪಕರು. ಪಿ.ಎನ್‌. ಸತ್ಯ ಚಿತ್ರದ ನಿರ್ದೇಶನದೊಂದಿಗೆ ಕಥೆ,ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಬರೆದಿದ್ದಾರೆ.

  (ಸ್ನೇಹ ಸೇತು ವಿಜಯಕರ್ನಾಟಕ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X