»   » ಸೂತ್ರ ಹರಿದ ಕಲಾಸಾಮ್ರಾಟ್ ಚಿತ್ರವಿಮರ್ಶೆ

ಸೂತ್ರ ಹರಿದ ಕಲಾಸಾಮ್ರಾಟ್ ಚಿತ್ರವಿಮರ್ಶೆ

Subscribe to Filmibeat Kannada

ಕ್ರಿಕೆಟ್ ಕೋಚ್ ಒಬ್ಬ ನಾಯಕ ಪಂಕಜ್ ಅಪ್ಪನಿಗೆ ಹೇಳುತ್ತಾನೆ: ನಿನ್ನ ಮಗನಿಗೆ ಉತ್ತಮ ಭವಿಷ್ಯವಿದೆ.' ಸಿನಿಮಾ ಶುರುವಾದ ಕೆಲವೇ ನಿಮಿಷದಲ್ಲಿ ಈ ಡೈಲಾಗ್ ಕೇಳಿಬರುತ್ತದೆ. ಆಗ ಪ್ರೇಕ್ಷಕರಿಗೆ ಥ್ರಿಲ್ಲೋ ಥ್ರಿಲ್ಲು. ರೀಲು ಓಡತೊಡಗುತ್ತದೆ. ಥ್ರಿಲ್ಲು ಗುಲ್ಲಾಗುತ್ತದೆ. ಪಂಕಜ್ ಎಂಟ್ರಿಯಾಗುತ್ತದೆ. ಬರಬರುತ್ತಾ ಕುಣೀತಾನೆ. ಹಾರುತ್ತಾನೆ. ಮಾರುದ್ದದ ಬೈಕ್ ಏರಿ, ಎಗರುತ್ತಾನೆ. ಕೆಲವರ ಮೇಲೆ ರೇಗುತ್ತಾನೆ. ಇಡೀ ಪರದೆಯನ್ನೇ ಚಿಂದಿ ಉಡಾಯಿಸುತ್ತಾನೆ. ಆ ಬೈಕು, ಅವನ ಲುಕ್ಕು ಅಬ್ಬಬ್ಬಾ ನಾರಾಯಣ ನಾರಾಯಣ. ಅಷ್ಟೊತ್ತಿಗೆ ಬರುತ್ತಾಳೆ ಅಮೂಲ್ಯಾ ಎಂಬ ಅರಗಿಣಿ. ಬರಬರುತ್ತಿದ್ದಂತೇ ನಾಯಕನ ಜತೆ ಕೋಳಿಜಗಳ ಆಡುತ್ತಾಳೆ.

*ವಿನಾಯಕರಾಮ್ ಕಲಗಾರು

ಭೂಮಂಡಲವೇ ನಡುಗುವ ಹಾಗೆ ಡ್ಯಾನ್ಸ್ ಮಾಡುತ್ತಾಳೆ. ಕುಣಿದು ಸುಸ್ತಾಗುತ್ತಿದ್ದಂತೆ ಪಂಕಜ್ ಜತೆ ಕಿತ್ತಾಡಿ, ಏನು? ಯಾರು? ಯಾಕೆ?' ಎಂಬ ಸೇಮ್ ಡೈಲಾಗ್ ಹೇಳಿ ಹೇಳಿ; ಹಳೇ ... ಚಿತ್ತಾರ'ಕ್ಕೆ ಮತ್ತಷ್ಟು ಹೊಸ ಬಣ್ಣ ಬಳಿಯುತ್ತಾಳೆ. ಆಗ ನಿಮಗನ್ನಿಸಬಹುದು: ಈ ಸೀನ್‌ನಲ್ಲಿ ಬೇರೆ ಹೀರೊ ಇದ್ದಿದ್ದರೆ... ಹಾಗೆಂದುಕೊಂಡರೆ ಅದು ಕನಸಿಗಷ್ಟೇ ಸೀಮಿತ. ಏಕೆಂದರೆ ಇದು ಎಸ್. ನಾರಾಯಣ್ ಕನ್ನಡ ಚಿತ್ರರಂಗಕ್ಕೆ ಕೊಡಲೇಬೇಕೆಂದಿರುವ ಅಮೂಲ್ಯ ಪುತ್ರ ರತ್ನ ಪಂಕಜ್‌ನ ಚಿತ್ರ. ಅದಕ್ಕಾಗಿ ನೀವು ಇಂಥ ದೃಶ್ಯಗಳನ್ನೂ ಸಹಿಸಿಕೊಳ್ಳಬೇಕು. ಈ ಮಧ್ಯೆ ಶುರುವಾಗುತ್ತದೆ ಬಾಲು ಬ್ಯಾಟಿನ ಕ್ರಿಕೆಟ್ಟಾಟ'. ಅದರಲ್ಲೂ ಪಂಕಜ್‌ದೇ ಆಪತ್ಯ. ಅವ ಹೊಡೆದಿದ್ದೆಲ್ಲಾ ಫೋರು, ಸಿಕ್ಸು. ಆದರೂ ಆ ಆಟ ನೋಡಲು ಒಂಥರಾ ಬೊಂಬಾಟ್' ಆಗಿದೆ.

ಅಪ್ಪನಿಗೆ ಮಗ ಕ್ರಿಕೆಟ್‌ನಲ್ಲಿ ವಿಶ್ವಖ್ಯಾತಿ ಗಳಿಸಬೇಕೆಂಬ ಆಸೆ. ಆದರೆ ಮಗನಿಗೆ ಅಮೂಲ್ಯಳ ಮೇಲೆ ಆಸೆ. ಈ ಮಧ್ಯೆ ಒಂದಿಷ್ಟು ಪಸೆಪಸೆ. ಅಮೂಲ್ಯಳ ಅಸಹಾಯಕ ಸ್ಥಿತಿ ತಿಳಿದ ನಾಯಕ, ಆಕೆಯನ್ನು ಅವಳ ಅಪ್ಪನಿರುವ ಜಾಗಕ್ಕೆ ತಲುಪಿಸಲು ಮುಂದಾಗುತ್ತಾನೆ. ಕಾಶ್ಮೀರದ ರೈಲು ಹತ್ತುತ್ತಾನೆ. ಅಲ್ಲೊಂದಿಷ್ಟು ಕುಣಿತ ಹಾಗೂ ಓಹೋಹೋಹೋ... ಪುಕ್ಸಟೆ ಕಾಶ್ಮೀರ! ಕೈಲಿ ನಯಾಪೈಸೆ ಇಲ್ಲದಿದ್ದರೂ ಇಬ್ಬರೂ ಬೇಕಾಬಿಟ್ಟ ಎಂಜಾಯ್ ಮಾಡುತ್ತಾರೆ.

ಹೀಗೆ ಕತೆ ಲಂಗುಲಗಾಮಿಲ್ಲದೆ ಸಾಗಿದರೂ ಅಮೂಲ್ಯಾ ಅವೆಲ್ಲವನ್ನೂ ತೇಲಿಸಿಕೊಂಡು ಹೋಗುತ್ತಾಳೆ. ಆ ನಗು, ಕುಣಿಯುವ ಧಾಟಿ, ವಾರೆನೋಟದಲ್ಲೇ ಸೆಳೆಯುವ ಕಣ್ಣೋಟ... ಎಲ್ಲವನ್ನೂ ನೋಡಿ, ಪಂಕಜ್‌ನ ಮ್ಯಾರಥಾನ್' ಸಹಿಸಿಕೊಳ್ಳಬೇಕು. ಕೆಲವು ಕಡೆ ಅವನ ಕ್ಲೋಸಪ್ ಶಾಟ್‌ಗಳನ್ನು ಸಹಿಸಿಕೊಂಡರೆ ಲಾಂಗ್ ಶಾಟ್‌ನಲ್ಲಿ ಚೆನ್ನಾಗಿ ಕಾಣುತ್ತಾನೆ. ಬಹುಶಃ ಪಂಕಜ್ ಚೆನ್ನಾಗಿ ಕಾಣಬೇಕೆಂದು ಅವನ ಸ್ನೇಹಿತನ ಪಾತ್ರಧಾರಿಗಳನ್ನು ತುಂಬಾ ಖರಾಬ್ ಆಗಿ ತೋರಿಸಲಾಗಿದೆಯಾ? ಈ ಪ್ರಶ್ನೆಗೆ ಉತ್ತರ :ನಾರಾಯಣ ನಾರಾಯಣ...

ಹಾಡುಗಳ ಬಗ್ಗೆ ಕಾಮೆಂಟ್ ಮಾಡುವ ಬದಲು too good ಎನ್ನಬಹುದು. ನೂರಾರು ಜನ್ಮದ ಗೆಳತಿ..., ನನ್ನ ಚೆಲುವೆ... ಹಾಡುಗಳು ಇಷ್ಟವಾಗುತ್ತವೆ. ನೃತ್ಯ ಸಂಯೋಜನೆ ಮಾತ್ರ too muchಆಗಿದೆ. ಕಾಶ್ಮೀರದಲ್ಲಿ ಕುಣಿಯುವಾಗಲೂ ಗ್ರಾಫಿಕ್ ಬಳಸಿದ್ದು ಈ ಚಿತ್ರದ ವಿಶೇಷ.' ಎಡಿಟಿಂಗ್ ಎಡವಟ್ಟಾಗಿದೆ. ರೇಣುಕುಮಾರ್ ಛಾಯಾಗ್ರಹಣದಲ್ಲಿ ಲವಲವಿಕೆಯಿದೆ. ಅದ್ಧೂರಿತನದ ಬಗ್ಗೆ ಎರಡು ಮಾತಿಲ್ಲ.

ಪಲ್ಲಕ್ಕಿ ರಾಧಾಕೃಷ್ಣ ಹಾಗೂ ವೀಣಾ ಸುಂದರ್ ಪಾತ್ರ ಮಕ್ಕಳ ಮೇಲೆ ಬೆಟ್ಟದಷ್ಟು ಪ್ರೀತಿ ಹೊತ್ತ ಅಪ್ಪ ಅಮ್ಮಂದಿರನ್ನೇ ಪ್ರತಿನಿಸುತ್ತದೆ. ಶೋಭರಾಜ್ ಕೊನೆಗೆ ಬಂದು ಶೋಕಿ ಮಾಡುತ್ತಾರೆ. ಕೊನೆಯ ಕಾಲುಗಂಟೆ ಇಂಡಿಯಾ ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್ ನಡೆಯುತ್ತದೆ. ಅಷ್ಟೊತ್ತಿಗಾಗಲೇ ಪಂಕಜ್‌ನ ಫಾಸ್ಟ್ ಬಾಲ್ ಎದುರಿಸಿದ ಪ್ರೇಕ್ಷಕ ಸುಸ್ತು ಹೊಡೆದಿರುತ್ತಾನೆ.

ಮರೆತ ಮಾತು: ದೃಶ್ಯವೊಂದರಲ್ಲಿ ನಾಯಕಿ ನಾಯಕನಿಗೆ ಒಂದು ಮಾತು ಒಗಾಯಿಸುತ್ತಾಳೆ: ಏನೋ ನನ್ ಮುಂದೇ ಇಷ್ಟೊಂದ್ ಬಿಲ್ಡಪ್ಪಾ. ದೊಡ್ಡ ಹೀರೊನಾ ನೀನು...' ಇಡೀ ಚಿತ್ರದ ಹೈಕ್ಲಾಸ್ ಸಂಭಾಷಣೆ ಎಂದರೆ ಇದೊಂದೇ!

ನೆನಪಿರಲಿ ಇದು ಕಲಾಸಾಮ್ರಾಟ್ ನಿರ್ದೇಶನದ ಚಿತ್ರ. ಕತೆ, ಚಿತ್ರಕತೆ, ಸಂಗೀತ... ಎಲ್ಲಕ್ಕೂ ಒಬ್ಬ ಮಾತ್ರ ಸೂತ್ರಧಾರ. ಸಿನಿಮಾ ಮಾತ್ರ ಸೂತ್ರ ಹರಿದ...
ಎಸ್.ನಾರಾಯಣ್ ರ ಚೈತ್ರದ ಚಂದ್ರಮ

Please Wait while comments are loading...